Friday, September 4, 2009

ಶಿಕ್ಷಕರ ದಿನಾಚರಣೆಯಂದು ನನ್ನ ಶಿಕ್ಷಕರನ್ನು ಸ್ಮರಿಸುತ್ತಾ....



ಶಿಕ್ಷಕರ ದಿನಾಚರಣೆಯಂದು ನನ್ನ ಶಿಕ್ಷಕರನ್ನು ಸ್ಮರಿಸುತ್ತಾ....


ಬದುಕಿನ ಅರ್ಧಶತಮಾನ ಪೂರೈಸಿದ ಸಂದರ್ಭದಲ್ಲಿ ನನ್ನ ಬಾಲ್ಯದ ದಿನಗಳನ್ನು ಒಮ್ಮೆ ಹಿಂದಿರುಗಿನೋಡಿದರೆ ಅಲ್ಲಿ ನನಗೆ ಸಂತೋಷ ಕೊಡುವುದು ನನ್ನ ಶಾಲಾದಿನಗಳೆ. ನನ್ನ ಮಾಧ್ಯಮಿಕ ಹಾಗೂ ಪ್ರೌಢಶಾಲಾದಿನಗಳು ಮತ್ತೆ ಮರಳಿ ಬಾರವೇ ಎಂಬ ವಿಷಾದವೂ ಮನಸ್ಸನ್ನು ತುಂಬುತ್ತದೆ. ಸಾಮಾನ್ಯವಾಗಿ ಎಲ್ಲರೂ ಕಾಲೇಜಿನ ದಿನಗಳನ್ನು ಬಂಗಾರದ ದಿನಗಳು ಎನ್ನುತ್ತಾರೆ. ನನಗೆ ಮಾತ್ರ ನನ್ನ ಹೈಸ್ಕೂಲ್ ದಿನಗಳೆ ಬಂಗಾರದ ದಿನಗಳು. ಒಬ್ಬ ಶಿಕ್ಷಕಿಯ ಮಾತಿನಿಂದ ಟೀಚರ್ ಅಗಲೇ ಬಾರದೆಂದು ನಿರ್ಧರಿಸಿದ್ದ ನಾನು ಅದೇ ಶಾಲೆಯ ಮತ್ತೊಬ್ಬ ಶಿಕ್ಷಕರ ಪಾಠದಿಂದ ಶಿಕ್ಷಕ ವೃತ್ತಿಯನ್ನು ಮನದಾಳದಲ್ಲೇ ಇಷ್ಟಪಟ್ಟಿದ್ದೆನೇನೋ. ಆದರೆ ಅದು ನನಗೆ ಅರ್ಥವಾಗಿದ್ದು ಎಷ್ಟೋ ವರ್ಷಗಳ ನಂತರ.

ನನ್ನ ಶಿಕ್ಷಕರನ್ನು ನೆನೆದುಕೊಳ್ಳುವಾಗ ಮೊದಲು ಹೇಳಬೇಕಾದ ಹೆಸರು ದಾವಣಗೆರೆಯ ಸೆಂಟ್ ಪಾಲ್ಸ್ ಕಾನ್ವೆಂಟಿನ ಕನ್ನಡ ಪಾಠ ಮಾಡುತ್ತಿದ್ದ ಕನ್ನಡ ಪಂಡಿತರು. ಅವರ ಹೆಸರು ನಂಜಪ್ಪ ಮಾಸ್ತರು. ನಾನು ಕನ್ನಡ ಆನರ್ಸ್ ಓದಿ ಎಂ.ಎ. ಮುಗಿಸಿ ಕನ್ನಡ ಉಪನ್ಯಾಸಕಿ ಆಗಲು ಅವರೇ ಪರೋಕ್ಷ ಕಾರಣ ಎಂದು ಈಗ ಅನಿಸುತ್ತದೆ. ಅವರು ಪಾಠ ಮಾಡುತ್ತಿದ್ದ ರೀತಿ ಅನನ್ಯ.ಅವರು ಪಾಠ ಮಾಡಿದ " ಜಾಬಾಲಿ ಋಷಿ ಹೇಳಿದ ಕತೆ " ಮತ್ತು " ಚಂದನದಾಸನ ಕತೆ "ಈಗಲೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಹಾಗೆ ಉಳಿದಿರುವುದಕ್ಕೆ ಕಾರಣ ಆ ಮಾಸ್ತರೇ.

ನಾಗವರ್ಮನ ಕಾದಂಬರಿ ಕಾವ್ಯದಿಂದ ಆರಿಸಿದ " ಜಾಬಾಲಿ ಋಷಿ ಹೇಳಿದ ಕತೆ" ನಮ್ಮ ಪಠ್ಯಪುಸ್ತಕದಲ್ಲಿತ್ತು. ಜಾಬಾಲಿ ಋಷಿಗಳ ಆಶ್ರಮಕ್ಕೆ ಅವರ ಶಿಷ್ಯರಿಬ್ಬರು ಒಮ್ಮೆ ಒಂದು ಪುಟ್ಟಗಿಳಿಯನ್ನು ತರುತ್ತಾರೆ. ಆಗ ಜಾಬಾಲಿ ಹೇಳಿದ್ದು " ಈ ಗಿಳಿ ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದೆ". ಶಿಷ್ಯರು " ಗುರುಗಳೇ ಈ ಗಿಳಿಯ ಕತೆ ಹೇಳಿ ? ಎನ್ನುತ್ತಾರೆ. ಆಗ ಆ ಋಷಿ "ನಾಳೆ ಕತೆ ಹೇಳುತ್ತೇನೆ."ಎನ್ನುತ್ತಾನೆ. ಕುತೂಹಲದಿಂದ ಪಾಠ ಕೇಳುತ್ತಿದ್ದ ನಮಗೆ ಪಾತಾಳಕ್ಕೆ ತಳ್ಳಿದಂತಾಯಿತು. ಕಾರಣ ನಮ್ಮ ಪಾಠದಲ್ಲಿ ಅದೇ ಕಡೆಯ ವಾಕ್ಯವಾಗಿತ್ತು!! ನಾವೆಲ್ಲಾ ನಮ್ಮ ಮಾಸ್ತರರನ್ನು ಆ ಗಿಳಿಯ ಕತೆ ಏನು? ಎಂದು ಪೀಡಿಸಿದಾಗ ಅವರು ನಮಗೆ ಇಡೀ ಕಾದಂಬರಿ ಕಾವ್ಯದ ಕತೆಯನ್ನು ಸರಳವಾಗಿ ಸಂಕ್ಷಿಪ್ತವಾಗಿ ಹೇಳಿ ಮನತಣಿಸಿದ್ದರು.

ಅದೇ ರೀತಿ " ಚಂದನದಾಸನ ಕತೆ" ಹೇಳುವಾಗ ಚಾಣಕ್ಯ ಮತ್ತು ಚಂದ್ರಗುಪ್ತರ ಇಡೀ ಕತೆಯನ್ನು ಹೇಳಿ ಸ್ನೇಹಿತರೆಂದರೆ ಹೀಗಿರಬೇಕು ಎಂದಿದ್ದರು. ಇರುವಷ್ಟು ಮಾತ್ರ ಹೇಳದೆ ನಾಗವರ್ಮನ ಕಾದಂಬರಿ ಕಾವ್ಯದ ಕತೆಯನ್ನು, ಮತ್ತು " ಮುದ್ರಾರಾಕ್ಷಸ "ನ ಕತೆಯನ್ನು ಸರಳವಾಗಿ ಆದರೆ ಮನಮುಟ್ಟುವಂತೆ ಹೇಳಿದ್ದು ಆಗ ವಿಶೇಷ ಅನ್ನಿಸಲಿಲ್ಲ. ಆದರೆ ದೊಡ್ಡವರಾಗುತ್ತಾ ಅವರ ಪಾಠದ ವಿಶೇಷತೆಯ ಅರಿವು ನನಗಾಯಿತು.

ಈ ಮಾಸ್ತರರ ಜೊತೆ ಸ್ಮರಿಸಲೇ ಬೇಕಾದವರು ನಮ್ಮ ಲೆಕ್ಕದ ಸುಶೀಲಾ ಮೇಡಮ್ ಮತ್ತು ಇತಿಹಾಸ ಬೋಧಿಸುತ್ತಿದ್ದ ಬಾಲಾಮಣಿ ಮೇಡಮ್.ಆದರೆ ಬೇರೆ ಬೇರೆ ಕಾರಣಗಳಿಗಾಗಿ. ಸುಶೀಲಾ ಮೇಡಮ್ ದಾವಣಗೆರೆಯಲ್ಲಿ ಬಹುಮಟ್ಟಿಗೆ ಎಲ್ಲರಿಗೂ ಅತ್ಯಂತ ಮೃದು ಹೃದಯಿ ಎಂದೇ ಚಿರಪರಿಚಿತರು.ಕೇವಲ ಪಾಠ ಮಾಡುವುದಲ್ಲದೆ ಎಲ್ಲ ವಿದ್ಯಾರ್ಥಿಗಳಿಗೂ ತಾಯಿಯ ಸ್ಥಾನದಲ್ಲಿ ಇದ್ದವರು.ಆದರೆ ಬಾಲಾಮಣಿ ಮೇಡಮ್ ಬಗ್ಗೆ ಹಾಗೆ ಹೇಳಲಾಗದು.ಶಾಲೆಯ ಎಲ್ಲ ವಿದ್ಯಾರ್ಥಿಗಳೂ ಅವರ ಹೆಸರು ಕೇಳಿದರೂ ಹೆದರುತ್ತಿದ್ದರು.ಆ ಹೆದರಿಕೆಯನ್ನು ಮೀರಿ ಕೆಲವೊಮ್ಮೆ ಗಲಾಟೆ ಮಾಡಿದರೆ ಅವರ ಕೆಂಗಣ್ಣಿಗೆ ಗುರಿಯಾಗಬೇಕಿತ್ತು. ಒಮ್ಮೆ ಅವರು ತರಗತಿಯಿಂದ ಹೊರಗೆ ಹೋಗಿದ್ದಾಗ ಯಥಾಪ್ರಕಾರ ಮಕ್ಕಳೆಲ್ಲಾ ಬಾಲವಿಲ್ಲದ ಕಪಿಗಳಂತಾಗಿದ್ದರು.ನನ್ನ ಗ್ರಹಚಾರಕ್ಕೆ ಅವರು ಕೋಣೆಯೊಳಗೆ ಬಂದಾಗ ಗಟ್ಟಿಯಾಗಿ ಮಾತನಾಡುತ್ತಿದ್ದ ನಾನು ಅವರ ಕಣ್ಣಿಗೆ ಬಿದ್ದೆ. ಸರಿ ಎಣಿಸಿದ್ದಂತೇ ಸಹಸ್ರ ನಾಮಾರ್ಚನೆಯಾಯಿತು. ಆಗ ಅವರು ಹೇಳಿದ ಒಂದು ಮಾತು ನನ್ನನ್ನು ಅನೇಕ ದಿನಗಳವರೆಗೆ ಕಾಡಿದ್ದುಂಟು.

"ನೀನು ದೊಡ್ಡವಳಾದ ಮೇಲೆ ಟೀಚರ್ ಆಗ್ತೀಯಲ್ಲ, ಆಗ ನನ್ನನ್ನು ನೆನಸಿಕೊಳ್ಳದಿದ್ದರೆ ಕೇಳು " ಎಂದು ಗುಡುಗಿದರು.

ಕೆಲವು ದಿನಗಳ ಹಿಂದೆ ನಡೆದ ಭಾಷಣ ಸ್ಪರ್ಧೆಗೆ ಬಾಲಾಮಣಿ ಮೇಡಮ್ ಜಡ್ಜ್ ಆಗಿದ್ದರು ಹಾಗು ನಾನೆ ಪ್ರಥಮ ಬಹುಮಾನ ಪಡೆದಿದ್ದೆ. ಆ ದಿನದ ಭಾಷಣದ ವಿಷಯ "ನಾನು ಶಿಕ್ಷಕಿಯಾಗಲು ಏಕೆ ಬಯಸುವೆ? " . ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಸ್ಪರ್ಧೆ ಅದಾಗಿತ್ತು ! ಆ ಬಾಲ್ಯದ ದಿನಗಳಲ್ಲಿ ಅವರ ಬಯ್ಗಳಿಂದ ನನಗೆಷ್ಟು ಭಯವಾಗಿತ್ತೆಂದರೆ ಮುಂದೆ ಶಿಕ್ಷಕಿಯಾಗಲೇಬಾರದೆಂದು ಅಂದೇ ಗುಟ್ಟಾಗಿ ನಿರ್ಧರಿಸಿದ್ದೆ. ಆಶ್ಚರ್ಯವೆಂದರೆ ಮುಂದೆ ನಾನು ಅಧ್ಯಾಪಕಿಯಾಗಬೇಕಾಯಿತು. ಅದು ನನ್ನ ಮೆಚ್ಚಿನ ವೃತ್ತಿಯೂ ಹೌದು. ಅವರನ್ನು ಅನೇಕ ಬಾರಿ ನೆನಪಿಸಿಕೊಳ್ಳುತ್ತೇನೆ. ಅವರ ಶಾಪ ವರವಾದ ಬಗೆಯನ್ನು ಅಚ್ಚರಿಯಿಂದ ಮೆಲುಕುಹಾಕುತ್ತೇನೆ.

ಈ ಅಧ್ಯಾಪಕರೊಂದಿಗೆ ಇತರ ವಿಷಯಗಳನ್ನು ಬೋಧಿಸುತ್ತಿದ್ದ ಲೀಲಾ ಮೇಡಮ್, ಸಿಸ್ಟರ್ ಮೇರಿ ,ಸಿಸ್ಟರ್ Anne, ಸಿಸ್ಟರ್ ಜೆಸ್ಸಿಕ ಇವರೆಲ್ಲರೂ ಸ್ಮರಣೀಯರು.ನನ್ನ ತಂದೆ ಸರಕಾರಿ ನೌಕರರಾಗಿದ್ದರಿಂದ ಮುಂದೆ ಪದವಿಪೂರ್ವ ತರಗತಿ ತುಮಕೂರಿನಲ್ಲಾಯಿತು.ಕೇವಲ ಬಾಲಕಿಯರ ಪ್ರೌಢಶಾಲೆಯಲ್ಲಿ ಓದಿದ್ದ ನನಗೆ ತುಮಕೂರಿನ ಸರಕಾರಿ ಕಾಲೇಜು ಬಹಳ ಭಯ ಉಂಟುಮಾಡಿತು. ಆಗ ಅದು ಪದವಿ,ಪದವಿಪೂರ್ವ ,ವಿಜ್ಞಾನ, ಕಲಾವಿಭಾಗ ಎಲ್ಲವನ್ನೂ ಒಳಗೊಂಡ ಬಹು ದೊಡ್ಡ ಕಾಲೇಜಾಗಿತ್ತು.ಆ ಕಾಲೇಜನ್ನು ನೋಡಿಯೇ ನಾನು ಭಯ ಪಟ್ಟಿದ್ದೆ. ಅದಕ್ಕೆ ಸರಿಯಾಗಿ ನಾನು ಓದುತ್ತಿದ್ದ ವಿಜ್ಞಾನದ ವಿಭಾಗದಲ್ಲಿ ಅರವತ್ತು ಜನ ಬಾಲಕರ ತರಗತಿಯಲ್ಲಿ ನಾವು ಕೇವಲ ನಾಲ್ಕು ಹುಡುಗಿಯರಿದ್ದೆವು. ಹೆದರಿಕೆಯಿಂದ ಗುಬ್ಬಚ್ಚಿಗಳಂತೆ ಮುದುರಿಕೊಂಡಿರುತ್ತಿದ್ದ ನಮಗೆ ಇಂಗ್ಲೀಷ್ ಮತ್ತು ಕನ್ನಡ ಅಧ್ಯಾಪಕರ ಪಾಠ ಹೊಸ ಚೇತನ ಕೊಡುತ್ತಿತ್ತು. ಇಂಗ್ಲೀಷ್ ಅಧ್ಯಾಪಕರಾದ ಸುಭಾನ್ ಸರ್ ಅದೆಷ್ಟು ಚೆನ್ನಾಗಿ ಪಾಠ ಮಾಡುತ್ತಿದ್ದರೆಂದರೆ ಇದ್ದಕ್ಕಿದ್ದಂತೆ ನನಗೆ ಇಂಗ್ಲೀಷ್ ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ ಮೂಡಿತು. ರವೀಂದ್ರನಾಥ ಟಾಗೋರ್ ನನ್ನ ಮೆಚ್ಚಿನ ಲೇಖಕರಾಗಿದ್ದಕ್ಕೆ ಪರೋಕ್ಷ ಕಾರಣ ಆ ಮಾಸ್ತರೇ. ನಮ್ಮ ಪಠ್ಯದಲ್ಲಿದ್ದ " ಸುಭಾ" ಎಂಬ ಪಾಠವನ್ನು ಅದೆಷ್ಟು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದರೆಂದರೆ ನಾವೆಲ್ಲಾ ಆ ಸುಭಾಳ ದುಃಖದಲ್ಲಿ ಪಾಲುದಾರರಾಗಿದ್ದೆವು. ಮುಂದೆ ಪದವಿ ತರಗತಿಯಲ್ಲಿದ್ದಾಗ ಅಹೋಬಲ ಶಂಕರರ ರವೀಂದ್ರಕಥಾಮಂಜರಿಯ ಮೂರು ಭಾಗಗಳನ್ನೂ ಓದಿ ಮುಗಿಸಿದೆ. ಬಂಗಾಳ ಭಾಷೆಗೆ ಬಹು ಹತ್ತಿರವಾದ ಅನುವಾದಗಳಿವು. ಅದರಲ್ಲಿ ಸುಭಾಷಿಣಿಯ ಕತೆ ಓದಿದಾಗ ತಿಳಿಯಿತು , ಇದರ ಮುಂದೆ ಇಂಗ್ಲೀಷ್ ಅನುವಾದದ ಆ ಕಥೆ ಎಷ್ಟು ಸಪ್ಪೆಯಾಗಿತ್ತೆಂದು. ಅಂತಹ ಸಪ್ಪೆ ಪಾಠವನ್ನೇ ಆ ಮಾಸ್ತರು ರಸಭರಿತ ಕಥೆಯನ್ನಾಗಿಸಿದ್ದರು.ಅದೇ ರೀತಿ ಕನ್ನಡ ವಿಭಾಗದ ಮಾಸ್ತರುಗಳೂ ಮರೆಯಲಾಗದ ಪಾಠಗಳನ್ನು ಮಾಡಿದ್ದರು.

ಬಹುಶಃ ನನಗೇ ಅರಿವಿಲ್ಲದಂತೆ ಬಾಲ್ಯದಿಂದ ನನಗೆ ಸಾಹಿತ್ಯ ಮೆಚ್ಚುಗೆಯ ವಿಷಯವಾಗಿತ್ತೆನಿಸುತ್ತದೆ. ಹತ್ತನೆಯ ತರಗತಿಯಲ್ಲಿ ಒಳ್ಳೆಯ ಅಂಕಗಳು ಬಂದಿತ್ತೆಂದು ಮುಂದೆ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡೆ. ಆದರೆ ಈಗ ಅದರ ಒಂದು ಪಾಠವೂ ನೆನಪಿಲ್ಲ. ಮುಂದೆ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳನ್ನು ಓದುವಾಗ ರಂ.ಶ್ರೀ. ಮುಗಳಿ, ಡಾ. ಜಿ.ಎಸ್.ಶಿವರುದ್ರಪ್ಪ , ಚಂದ್ರಶೇಖರ ಕಂಬಾರ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು, ಚಿದಾನಂದಮೂರ್ತಿ, ಮುಂತಾದವರ ಪಾಠ ಕೇಳುವ ಅವಕಾಶ ಒದಗಿತು.

ನನ್ನ ಎಲ್ಲ ಶಿಕ್ಷಕರಿಗೂ ಈ ಮೂಲಕ ಕೃತಜ್ಞತೆಗಳನ್ನು ಮತ್ತು ಶಿಕ್ಷಕರ ದಿನದ ಶುಭಾಶಯಗಳನ್ನು ಅರ್ಪಿಸುವೆ. ಇವರೆಲ್ಲರ ಜೊತೆ ಮತ್ತೊಬ್ಬರನ್ನು ನಾನು ನೆನೆಯಲೇ ಬೇಕು. ಕವನ ಓದುವುದು ಹೇಗೆ? ಅದನ್ನು ವಿಶ್ಲೇಷಿಸುವುದು ಹೇಗೆ? ಮುಂತಾದ ಅನೇಕ ಸೂಕ್ಷ್ಮಗಳನ್ನು ನನಗೆ ಮನದಟ್ಟು ಮಾಡಿ ನಾನು ಅಧ್ಯಾಪಕಿಯಾಗಲೊಲ್ಲೆ ಎಂದಾಗ ಅದು ನನ್ನಿಂದ ಸಾಧ್ಯ ಎಂಬ ಆತ್ಮವಿಶ್ವಾಸ ಮೂಡಿಸಿದ , ಕನ್ನಡ ಪ್ರಾಧ್ಯಾಪಕರಾದ ನನ್ನವರಿಗೆ ಈ ಶಿಕ್ಷಕರ ದಿನದಂದು ಶುಭ ಹಾರೈಕೆ.






Sunday, August 9, 2009

ರಕ್ಷಾಬಂಧನ

ರಕ್ಷಾಬಂಧನ - ಒಂದು ನೆನಪು

ಶ್ರಾವಣ ಮಾಸದ ಹುಣ್ಣಿಮೆಯನ್ನು ಉಪಾಕರ್ಮ ಎಂದು ಹಿಂದಿನಿಂದ ಆಚರಿಸುತ್ತಿರುವುದು ಸರಿಯಷ್ಟೆ.ಈ ದಿನಕ್ಕೆ ಮತ್ತೊಂದು ವಿಶೇಷವಿದೆ.. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ 'ರಕ್ಷಾಬಂಧನ' ಅಥವಾ 'ರಾಖಿ' ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಾರೆ.ಆ ರೀತಿ ಆಚರಿಸುವುದರ ಹಿಂದೆ ವಾಣಿಜ್ಯ ಕಾರಣಗಳೂ ಇವೆ! ಆದರೆ ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ನನ್ನ ಮನದಲ್ಲಿ ಮೂಡಿಸುತ್ತದೆ.

ನಾವು ಏಳು ಜನ ಅಣ್ಣ ತಂಗಿಯರಲ್ಲಿ ಶ್ರಾವಣಮಾಸದ ಪೌರ್ಣಮಿಗೆ ಒಂದೆರಡು ದಿನ ಮೊದಲು ಹುಟ್ಟಿದವನು ನನ್ನ ಮೂರನೆಯ ಅಣ್ಣ. ಅವನು ಯಾವಾಗಲೂ "ನಾನು ಹುಟ್ಟಿದ ತಿಂಗಳಲ್ಲಿ ಹಬ್ಬಗಳು ಜಾಸ್ತಿ. ಸಿಹಿ ತಿಂಡಿಗಳೂ ಹೆಚ್ಚು, ಆಗಲೇ ನನ್ನ ಹುಟ್ಟುಹಬ್ಬ ಬರುತ್ತದೆ " ಎಂದು ಹೆಮ್ಮೆ ಪಡುತ್ತಿದ್ದ. ಬಾಲ್ಯದಿಂದಲೂ ಮಕ್ಕಳಿಗೆಲ್ಲಾ ಲೀಡರ್ ಆಗಿದ್ದವನು ಈ ಅಣ್ಣ. ಪ್ರತಿಯೊಂದು ಕೆಲಸದಲ್ಲೂ ಅಚ್ಚುಕಟ್ಟು. ಅವನಿಗಿದ್ದ ಹವ್ಯಾಸಗಳು ಲೆಕ್ಕವಿಲ್ಲದಷ್ಟು. ಆ ಕಾಲದಲ್ಲಿಯೇ ಸ್ಟ್ಯಾಂಪ್ ಗಳನ್ನು ಸಂಗ್ರಹಿಸುವ ಅವನ ಬಳಿ ಅತ್ಯಂತ ಅಪರೂಪದ ಸ್ಟ್ಯಾಂಪುಗಳಿದ್ದವು. ಸಿನಿಮಾ ಪ್ರಿಯನಾದ ಅವನ ಬಳಿ ಸಿನಿಮಾಚಿತ್ರಗೀತೆಗಳ ಹಾಡುಗಳ ಪುಸ್ತಕಗಳು ಹೇರಳವಾಗಿದ್ದವು. ನಮ್ಮ ಬಾಲ್ಯದಲ್ಲಿ ಸಿನಿಮಾ ನೋಡಲು ಹೋದಾಗ ಹತ್ತು ಪೈಸೆಗೆ ಹಾಡಿನ ಪುಸ್ತಕ ಟಾಕೀಸಿನಲ್ಲಿ ಸಿಗುತ್ತಿತ್ತು. ಕಡೆ ಕಡೆಗೆ ಅದರ ಬೆಲೆ ಇಪ್ಪತ್ತೈದು ಪೈಸೆಯಾಯಿತು! ತನ್ನ ವಸ್ತುಗಳನ್ನು- ಪುಸ್ತಕ ಬಟ್ಟೆ ಇತ್ಯಾದಿಗಳನ್ನು. ನೀಟಾಗಿ ಜೋಡಿಸಿಟ್ಟುಕೊಳ್ಳುವುದಲ್ಲದೆ ಇತರರೂ ಅಷ್ಟೆ ಚೆನ್ನಾಗಿ ಜೋಡಿಸಿಟ್ಟುಕೊಳ್ಳಬೇಕೆಂದು ಅವನು ಬಯಸುತ್ತಿದ್ದ ಅಲ್ಲಲ್ಲ ಕಡ್ಡಾಯ ಮಾಡುತ್ತಿದ್ದ. ಇಲ್ಲದಿದ್ದರೆ ಅವನ ಕಣ್ಣೋಟಕ್ಕೇ ನಾವು ಹೆದರಬೇಕಿತ್ತು.

ಒಮ್ಮೆ ನನ್ನ ಲೆಕ್ಕದ ನೋಟ್ ಪುಸ್ತಕ ಕಾಣೆಯಾಯಿತು. ಒಂದೇ ಒಂದು ಪುಸ್ತಕ ಕಾಣೆಯಾದರೂ ಅವನ ಕಣ್ತಪ್ಪಿಸಲಾಗುತ್ತಿರಲಿಲ್ಲ. ಕಾರಣ ಅವನು ಆ ಚಿಕ್ಕ ವಯಸ್ಸಿಗೇ( ಹೈಸ್ಕೂಲ್‍ನಲ್ಲಿದ್ದಾಗಲೇ )ಬಹಳ ಸೊಗಸಾಗಿ ಎಲ್ಲರ ಎಲ್ಲ ಪುಸ್ತಕಗಳಿಗೆ ಸೊಗಸಾಗಿ ಬೈಂಡ್ ಮಾಡಿಕೊಡುತ್ತಿದ್ದ.ಆ ಬೈಂಡಿನ ಮೇಲೆ ಚೆನ್ನಾಗಿ ಕಾಣುವಂತೆ ಕ್ಯಾಲೆಂಡರ್‍ನಲ್ಲಿ ಕತ್ತರಿಸಿದ ಸಂಖ್ಯೆಗಳನ್ನು ಪೇಸ್ಟ್ ಮಾಡಿರುತ್ತಿದ್ದ. ಬೇರೆ ಎಲ್ಲಾ ಮಕ್ಕಳಿಗಿಂತ ಭಿನ್ನವಾದ ರೀತಿಯಲ್ಲಿ ನಮ್ಮ ಪುಸ್ತಕಗಳಿರಬೇಕೆಂಬುದು ಅವನಿಚ್ಚೆಯಾಗಿತ್ತು. ಆದ್ದರಿಂದ ನಮಗೆ ಯಾವತ್ತೂ ಅಂಗಡಿಯಲ್ಲಿ ಸಿಕ್ಕುವ ನೋಟ್ ಪುಸ್ತಕಗಳನ್ನು ನಮ್ಮ ಅಪ್ಪ ನಮಗೆ ಕೊಡಿಸುತ್ತಿರಲಿಲ್ಲ.ನಮ್ಮ ಅಣ್ಣನೇ ಅಂಗಡಿಯಿಂದ ಹಾಳೆಗಳನ್ನು ತಂದು ಇತರ ನೋಟ್ ಪುಸ್ತಕಕ್ಕಿಂತ ದೊಡ್ಡ ಸೈಝಿನ ಪುಸ್ತಕ ಸಿದ್ಧಗೊಳಿಸುತ್ತಿದ್ದ. ಪುಸ್ತಕವನ್ನು ಸೊಗಸಾಗಿ ಬೈಂಡ್ ಮಾಡುವುದೆಂದರೆ ಅವನಿಗೆ ಒಂದು ಪ್ಯಾಷನ್ ಆಗಿತ್ತು. ಪ್ರತಿ ದಿನ ಶಾಲೆಯಿಂದ ಬಂದ ಮೇಲೆ ಬ್ಯಾಗ್‍ನಿಂದ ಎಲ್ಲಾ ಪುಸ್ತಕಗಳನ್ನೂ ಕಡ್ಡಾಯವಾಗಿ ಹೊರ ತೆಗೆದು , ನಮಗಾಗಿ ನಿಗದಿಯಾಗಿದ್ದ ಪುಸ್ತಕಗಳ ರ್‍ಯಾಕ್‍‍ನಲ್ಲಿ ಪುಸ್ತಕದ ಮೇಲಿನ ಸಂಖ್ಯೆಗನುಗುಣವಾಗಿ ನೀಟಾಗಿ ಜೋಡಿಸಿಟ್ಟುಕೊಳ್ಳಬೇಕಿತ್ತು. ಯಾವುದೇ ಒಂದು ನಂಬರ್ ಕಾಣೆಯಾಗಿದ್ದರೂ ಅವನಿಗೆ ತಕ್ಷಣ ತಿಳಿದುಬಿಡುತ್ತಿತ್ತು. ನಾವು ಪುಸ್ತಕ ಕಳೆದಕೊಂಡರೆ ಅಪ್ಪ ಬೈಯುತ್ತಾರೆ ಎಂಬ ಭಯಕ್ಕಿಂತ ಅಣ್ಣ ನ ಭಯವೇ ಹೆಚ್ಚಾಗಿತ್ತು. ನನ್ನ ಲೆಕ್ಕದ ನೋಟ್ ಪುಸ್ತಕ ಕಾಣೆಯಾಗಿದ್ದರಿಂದ ಆ ಪುಸ್ತಕದ ಬಗ್ಗೆ ವಿಚಾರಿಸಿದ ಅಣ್ಣನಿಗೆ ಮೂರು ನಾಲ್ಕು ದಿನ ಅದೂ ಇದೂ ಕಾರಣ ಹೇಳಿ ತಪ್ಪಿಸಿಕೊಂಡೆ.ಆದರೂ ಕಡೆಗೊಮ್ಮೆ ನಿಜ ಹೇಳಲೇ ಬೇಕಾಯಿತು.ನನ್ನ ಪುಸ್ತಕ ಕಳೆದರೆ ಅವನಿಗೇಕೆ ಸಿಟ್ಟು ? ಎಂಬ ಧೂರ್ತ ಪ್ರಶ್ನೆ ಸಿಡಿಮಿಡಿಗೊಂಡ ಮನದಲ್ಲಿ ಮೂಡುತ್ತಿತ್ತು " ಅಷ್ಟು ಚೆನ್ನಾಗಿ ಬೈಂಡ್ ಹಾಕಿದ ಪುಸ್ತಕ ಕಳೆದುಕೊಂಡೆಯಲ್ಲಾ? ನಾನೆಷ್ಟು ಕಷ್ಟಪಟ್ಟು ಅದನ್ನು ಸಿದ್ಧಗೊಳಿಸಿದ್ದೆ ಗೊತ್ತಾ ? "ಎಂದು ಬೈಯುತ್ತಿದ್ದುದರ ಅರ್ಥ ಈಗ ಹೊಳೆಯುತ್ತದೆ!!.ಅವನಿಗೆ ತಾನೇ ಕೈಯ್ಯಾರೆ ಸುಂದರಗೊಳಿಸಿದ ಪುಸ್ತಕಗಳನ್ನು ಯಾರಾದರೂ ಹಾಳು ಮಾಡಿದರೆ ಪ್ರಚಂಡ ಕೋಪ ಬರುತ್ತಿತ್ತು.

ನಾವು ದೊಡ್ಡವರಾಗುತ್ತಾಹೋದಂತೆ ಏಳು ಜನ ಮಕ್ಕಳೂ ತಮತಮಗೆ ಇಷ್ಟವಾದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಓದಲು ಅಪ್ಪ ನೆರವಾದರು. ಅದರಂತೆ ನನ್ನಣ್ಣ ಪ್ರಿಂಟಿಂಗ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಪಡೆದು ಬಹು ಬೇಗ ಅದರಲ್ಲಿ ಪ್ರಾವೀಣ್ಯತೆ ಸಾಧಿಸಿದ.ಮುಂದೆ ವರುಷಗಳು ಉರುಳಿದವು. ಒಬ್ಬೊಬ್ಬರೂ ಒಂದೊಂದು ಊರಿನಲ್ಲಿ ಹಂಚಿಹೋದೆವು. ಮುಂಬಯ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದ ನನ್ನಣ್ಣ ಇತ್ತೀಚೆಗಷ್ಟೆ ಬೆಂಗಳೂರಿಗೆ ಬಂದಾಗ ರಕ್ಷಾಬಂಧನದ ದಿನ ಎಲ್ಲಾ ಅಣ್ಣಂದಿರೂ ( ನನಗೆ ನಾಲ್ಕು ಜನ ಅಣ್ಣಂದಿರು ) ಈ ತಂಗಿಯ ಮನೆಯಲ್ಲಿ ಸೇರಿ ಹಿಂದಿನ ದಿನಗಳನ್ನು ನೆನೆದು ಖುಷಿ ಪಟ್ಟೆವು.ಆ ದಿನ ಮರೆಯಲಾಗದ ದಿನ. ಹೀಗೆ ಪ್ರತಿವರ್ಷ ಈ ದಿನದಂದು ಎಲ್ಲರೂ ಒಟ್ಟಾಗಿ ಸೇರಿ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ ಕಾಲಕಳೆಯಬೇಕೆಂದು ಒಮ್ಮನಸ್ಸಿನಿಂದ ನಿರ್ಧರಿಸಿದೆವು.ಆದರೆ ಅದೇ ಮೊದಲ ಹಾಗೂ ಕಡೆಯ ವರ್ಷವಾಗುತ್ತದೆಂದು ಯಾರೂ ಭಾವಿಸಿರಲಿಲ್ಲ. ಮರುವರ್ಷ ಅದೇ ದಿನ ನನ್ನಣ್ಣನ ಬದುಕಿನ ಕಡೆಯ ದಿನವಾಯಿತು.... ಇದೆಲ್ಲಾ ನಡೆದು ಆಗಲೇ ದಶಕ ಸಮೀಪಿಸುತ್ತಿದೆ. ಆದರೂ ಆ ದಿನಗಳನ್ನು ಮರೆಯಲು ಸಾಧ್ಯವಿಲ್ಲ.ನನ್ನಣ್ಣ ದೂರನಿಂತು " ನೋಡಿದಿರಾ !! ನನ್ನ ಸ್ಪೆಷಾಲಿಟಿ. ನನ್ನ ಹುಟ್ಟು ಸಾವು ಒಂದೇ ತಿಂಗಳು ಬಂದಿದೆ " ಎಂದು ನಗುತ್ತಾ ಹೇಳುತ್ತಿರುವಂತೆ ಭಾಸವಾಗುತ್ತದೆ.


{ಪ್ರತಿ ಶ್ರಾವಣ ಮಾಸ ಸಮೀಪಿಸಿದಾಗಲೂ ಈ ನೆನಪುಗಳು ನನ್ನನ್ನು ಕಾಡುತ್ತವೆ. ಹೀಗಾಗಿ ಈ ರಕ್ಷಾಬಂಧನದಂದು ನನ್ನ ಈ ನೆನಪುಗಳಿಗೆ ಭಾಷೆಯ ರೂಪ ಕೊಡುವುದೆಂದು ಕುಳಿತಾಗ ಅದು ಸುಲಭದ ಕೆಲಸವಲ್ಲವೆನಿಸಿತು. ಆದರೂ ತಡವಾಗಿಯಾದರೂ ಅದನ್ನಿಲ್ಲಿ ಪ್ರಕಟಿಸುತ್ತಿರುವೆ.}


Sunday, June 21, 2009

ಅಪ್ಪನಿಗೊಂದು ನೆನಪಿನ ಶ್ರದ್ಧಾಂಜಲಿ

ನನ್ನ ತಂದೆ ರೈಲ್ವೆ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದರು. ಮನೆಯಲ್ಲಿ ಹದಿನೈದು ಜನ. (ಅಜ್ಜಿ, ತಾತ, ಅಮ್ಮ, ಚಿಕ್ಕಪ್ಪ, ಅತ್ತೆ, ಅಣ್ಣಂದಿರು,ಅಕ್ಕ, ತಂಗಿ ಇತ್ಯಾದಿ...) ದುಡಿವ ಕೈ ಅಪ್ಪನದೊಂದೆ.ಅಪ್ಪನ ಕೈಕೆಳಗೆ ಸುಮಾರು ಮುನ್ನೂರು ಜನ ಗ್ಯಾಂಗ್ಮನ್ ಗಳು. ತಂಗಿಯನ್ನು ಬಿಟ್ಟರೆ ನಾನೇ ಮನೆಯಲ್ಲಿ ಚಿಕ್ಕವಳು.ಈಗ ನೆನೆಸಿಕೊಂಡರೆ ಇಷ್ಟು ದೊಡ್ಡ ಸಂಸಾರದಲ್ಲಿ ನನ್ನ ಅಪ್ಪನ ಜೊತೆ ಬಾಲ್ಯದಲ್ಲಿ ನನಗಿದ್ದ ನೇರ ಸಂಪರ್ಕ ತುಂಬಾ ಕಡಿಮೆ ಎಂಬುದು ಗಮನಕ್ಕೆ ಬರುತ್ತದೆ.. ಶಿಸ್ತು, ಸದಾ ಚಟುವಟಿಕೆ, ಕೋಪ, ಸ್ವಾಭಿಮಾನ ಅಪ್ಪನ ವ್ಯಕ್ತಿತ್ವದ ಕೆಲವು ಎಳೆಗಳು. ಆದರೂ ಅವರು ಮಕ್ಕಳನ್ನು ಹುರಿದುಂಬಿಸುತ್ತಿದ್ದ ರೀತಿ ವಿಶಿಷ್ಟವಾಗಿತ್ತು. . ಮಕ್ಕಳಿಗೆಲ್ಲಾ ( ನಾವು 7 ಜನ )ಸಂಗೀತ, ಹಿಂದಿ, ಟೈಲರಿಂಗ್, ಟೈಪಿಂಗ್ .. ಎಲ್ಲವನ್ನೂ ಕಲಿಸಿದ್ದರು. " ವಿದ್ಯೆಯೇ ನಾನು ನಿಮಗೆ ಕೊಡುವ ಆಸ್ತಿ " ಎಂದು ಹೇಳಿ ಎಲ್ಲರಿಗೂ ಒಳ್ಲೆಯ ವಿದ್ಯಾಭ್ಯಾಸ ಕೊಡಿಸಿದ ಅಪ್ಪ , ಕಡೆಯವರೆಗೂ ಅವರು ಒಂದು ಮನೆಯನ್ನೂ ಮಾಡಿಕೊಳ್ಳಲಿಲ್ಲ. ಅಪ್ಪನಿಗೆ ಎಲ್ಲ ಕೆಲಸಗಳೂ ಅಚ್ಚುಕಟ್ಟಾಗಿ ಆಗಬೇಕಿತ್ತು.ಕಾಟಾಚಾರದ ಕೆಲಸವೆಂದರೆ ಅವರಿಗಾಗುತ್ತಿರಲಿಲ್ಲ..ಅದಕ್ಕೆ ನಮಗೆ ಸೈಕಲ್ ಕಲಿಸಿದ ಪ್ರಸಂಗ ಒಂದು ನಿದರ್ಶನ. ಈ ಕೆಲಸಕ್ಕಾಗಿಯೇ ಸುಬ್ಬಣ್ಣ ಎಂಬುವವನನ್ನು ನೇಮಿಸಿದ್ದರು.ಅವನಿಗೆ ಸೈಕಲ್ ಸುಬ್ಬಣ್ಣ ಎಂಬುದೇ ಅಡ್ಡ ಹೆಸರಾಗಿತ್ತು. ಸೈಕಲ್ ಕಲಿಯುವುದು ಒಂದು ರೀತಿಯ ಕೋರ್ಸ್ ತರಹ ಇತ್ತು.ಅನೇಕರು ಕಲಿಯುವ ಹಾಗೆ ಸೈಕಲ್ ಬಾರ್ ನಿಂದ ಅತ್ತೊಂದು ಕಾಲು, ಇತ್ತೊಂದು ಕಾಲು ಹಾಕಿ ಕಲಿಯುವುದು ಅವರ ಪ್ರಕಾರ ಅಡ್ಡನಾಡಿ ವಿದ್ಯೆ. ಬರೀ ಪೆಡಲ್ ಮಾಡುವುದಕ್ಕೇ ನಾವು ಅಂದರೆ ನನ್ನ ಅಣ್ಣ , ನಾನು, ನನ್ನ ತಂಗಿ ತೆಗೆದುಕೊಂಡ ಸಮಯ ಒಂದು ತಿಂಗಳು !

ಪ್ರತಿದಿನ ಬೆಳಿಗ್ಗೆ ಏಳು ಗಂಟೆಗೆ ಬಾಡಿಗೆ ಸೈಕಲ್ ಅಂಗಡಿಗೆ ಹೋಗಿ ಹೊಚ್ಚ ಹೊಸ ಮೂರು ಸೈಕಲ್ ಗಳನ್ನು ಬಾಡಿಗೆಗೆ ತೆಗೆದುಕೊಂಡು ಮೈದಾನದ ಬಳಿ ಹೋಗಿ ಒಂದು ಗಂಟೆ ಅಭ್ಯಾಸ ಮಾಡುತ್ತಿದ್ದೆವು.ವಾರಕ್ಕೊಮ್ಮೆ ನಮ್ಮ ಪಾಠದ ಪ್ರಗತಿಯನ್ನು ಸುಬ್ಬಣ್ಣನ ಬಳಿ ವಿಚಾರಿಸುತ್ತಿದ್ದರು. ಅಂತೂ ಎರಡು ತಿಂಗಳಿಗೆ ನಮಗೆ ಈ ಸೈಕಲ್ ಸವಾರಿ ವಿದ್ಯೆ ಪೂರ್ಣ ಕರಗತವಾಗಿದೆಯೆಂದು ಸುಬ್ಬಣ್ಣ ರಿಪೋರ್ಟ್ ಕೊಟ್ಟ ಮೇಲೆ ಒಂದು ಶುಭ ಭಾನುವಾರ ನಮಗೆ ಪರೀಕ್ಷೆ ಇತ್ತು.! ನಮ್ಮ ಮನೆಯ ಹಿರಿಯರೆಲ್ಲಾ ಅಪ್ಪನ ನೇತೃತ್ವದಲ್ಲಿ ಮೈದಾನಕ್ಕೆ ಬಂದರು. ಅಲ್ಲಿ ಒಂದು ಕಲ್ಲು ಬೆಂಚಿನ ಮೇಲೆ ಅವರೆಲ್ಲಾ ಸುಖಾಸೀನರಾದಮೇಲೆ ನಮ್ಮ ಪರೀಕ್ಷೆ ಪ್ರಾರಂಭವಾಯಿತು. ಅಪ್ಪ ಹೇಳಿದ್ದನ್ನು ನಾವು ಮಾಡಿ ತೋರಿಸಬೇಕಿತ್ತು. ಪೆಡ್ಲಿಂಗ್ ಎಂದರೆ ಅವರು ಹೇಳುವಷ್ಟು ಹೊತ್ತೂ ನಿಧಾನವಾಗಿ ಪೆಡಲ್ ಮಾಡುವುದು, ಎಡಕ್ಕೆ ತಿರುಗಿ ಎಂದರೆ ಎಡಕ್ಕೆ, ಬಲಕ್ಕೆ ಎಂದರೆ ಬಲಕ್ಕೆ, ಹೀಗೆ ಅವರು ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೆ ಮಾಡಿದೆವು. ನಮಗಿಂತ ಸುಬ್ಬಣ್ಣನಿಗೇ ಟೆನ್ಶನ್ ಜಾಸ್ತಿ ಇತ್ತು. ಅಂತೂ ಒಂದು, ಒಂದೂವರೆ ಗಂಟೆಯಲ್ಲಿ ಪರೀಕ್ಷಿಸಿ, ಕಾತರದಿಂದ ನೋಡುತ್ತಿದ್ದ ಸುಬ್ಬಣ್ಣನಿಗೆ ಅಪ್ಪ ಒಳ್ಳೆಯ ಮೇಷ್ಟ್ರು ಎಂದು ಶಹಬ್ಬಾಸ್ಗಿರಿ ಕೊಟ್ಟರು.ಅದು ಅವನ ಪಾಲಿಗೆ ಚಿನ್ನದ ಪದಕ ಪಡೆದ ಸಂಭ್ರಮ ಕೊಟ್ಟಿತು. ಮಹಾಭಾರತದಲ್ಲಿ ಪಾಂಡವ ಕೌರವರ ಶಸ್ತ್ರಾಭ್ಯಾಸ ಕೌಶಲವನ್ನು ಭೀಷ್ಮರು ಹೀಗೇ ಪರೀಕ್ಷಿಸಿದ್ದರೇನೋ? ಆಗ ದ್ರೋಣರಿಗೂ ಇಂತಹುದೇ ಸಂತೋಷ ಸಿಕ್ಕಿರಬಹುದು.!!

ಶಿಸ್ತಿನ ಸಾಕಾರಮೂರ್ತಿಯಾಗಿದ್ದ ನಮ್ಮ ಅಪ್ಪ ಅತ್ಯಂತ ಸ್ವಾಭಿಮಾನಿ.ಅವರು ಕೆಲಸದಿಂದ ನಿವೃತ್ತಿ ಆದ ಮೇಲೆ ಯಾವ ಮಕ್ಕಳ ಮನೆಯಲ್ಲಿಯೂ ಇರಲು ಅವರು ಇಚ್ಛಿಸಲಿಲ್ಲ.ನನ್ನ ಅಪ್ಪ ಅವರು ನಿವೃತ್ತಿಯಾಗುವಷ್ಟರಲ್ಲಿ ಏಳು ಮಕ್ಕಳ ವಿವಾಹವನ್ನೂ ಮಾಡಿ ಮುಗಿಸಿದ್ದರು. ಮಕ್ಕಳಿಗೆ ತೊಂದರೆ ಕೊಡಬಾರದೆಂಬುದೇ ಅವರ ಮುಖ್ಯ ಉದ್ದೇಶವಾಗಿತ್ತು. ಹೀಗಾಗಿ ನಮ್ಮ ಅಪ್ಪ ಅಮ್ಮ ಇಬ್ಬರೇ ಒಂದು ಬಾಡಿಗೆ ಮನೆಯಲ್ಲಿದ್ದರು. ಹೆಣ್ಣುಮಕ್ಕಳು ಮನೆಗೆ ಬಂದಾಗ ಅವರಿಗೆ ಪೂರ್ಣ ಸ್ವಾತಂತ್ರ್ಯವಿರಬೇಕೆಂಬ ಭಾವನೆಯೂ ಇದರ ಹಿಂದೆ ಅಡಗಿತ್ತು. ಅಂತೂ ಅರವತ್ತನೆಯ ವಯಸ್ಸಿನಿಂದ ಸುಮಾರುಎಪ್ಪತ್ತೈದನೆಯ ವಯಸ್ಸಿನವರೆಗೂ ಅಪ್ಪ ಅಮ್ಮ ಇಬ್ಬರೇ ಮನೆ ಮಾಡಿಕೊಂಡಿದ್ದರು.ನಂತರ ಎಲ್ಲ ಮಕ್ಕಳ ಒತ್ತಾಯದ ಮೇರೆಗೆ ಮಕ್ಕಳ ಮನೆಯಲ್ಲಿ ಇರಲಾರಂಭಿಸಿದರು.

ಇಂತಹ ಅಪ್ಪ ಸಹ ಬದಲಾದ ಕಾಲಕ್ಕನುಗುಣವಾಗಿ ತಮ್ಮ ಆಲೋಚನೆಗಳನ್ನೂ ಬದಲಿಸಿಕೊಂಡಿದ್ದರು.ಹೆಣ್ಣು ಮಕ್ಕಳೂ ಗಂಡುಮಕ್ಕಳಂತೆ ದುಡಿಯಬೇಕು, ಕಲಿತ ವಿದ್ಯೆ ವ್ಯರ್ಥವಾಗಬಾರದೆಂದು ಬಾಲ್ಯದಿಂದಲೂ ನಮಗೆ ತಿಳಿಹೇಳಿದವರು.ವರದಕ್ಷಿಣೆಯ ಬಗ್ಗೆ ಅವರ ನಿಲುವು ವಿಶಿಷ್ಟವಾದದ್ದು. ಗಂಡುಮಕ್ಕಳಿಗೆ ವರದಕ್ಷಿಣೆ ತೆಗೆದುಕೊಳ್ಳದೆ, ಹೆಣ್ಣುಮಕ್ಕಳಿಗೆ ಕೊಡದೆ ಏಳು ಜನರ ಮದುವೆ ಮಾಡಿ ಇತರರು ಬೆರಗಾಗುವಂತೆ ಮಾಡಿದವರು. ಎಂಬತ್ತನೆಯ ವಯಸ್ಸಿನಲ್ಲಿಯೂ ' ವಯಸ್ಸಾದವರು' ಎಂದು ಯಾರಾದರೂ ಹೇಳಿದರೆ ರೇಗುತ್ತಿದ್ದರು.ಅವರು ವಯಸ್ಸಾದವರ ಹಾಗಿರಲಿಲ್ಲ ಬಿಡಿ.ಬಾಲ್ಯದಲ್ಲಿ ಅವರೊಡನಾಟ ಅಷ್ಟಾಗಿ ಇಲ್ಲದಿದ್ದರೂ ಅವರು ನಿವೃತ್ತಿ ಹೊಂದಿದ ಮೇಲೆ, ನಾವು ವಿವಾಹವಾದ ಮೇಲೆ ನಮ್ಮ ನಡುವೆ ಅತ್ಯಂತ ಅನ್ಯೋನ್ಯತಾ ಭಾವವಿತ್ತು.ಅವರಿಗೆ ಆಸಕ್ತಿ ಇಲ್ಲದ ಕ್ಷೇತ್ರವೇ ಇರಲಿಲ್ಲ. ಇನ್ನೊಬ್ಬರಿಗೆ ತೊಂದರೆ ಕೊಡಬಾರದೆಂಬುದು ಅವರ ಮೂಲ ಮಂತ್ರವಾಗಿತ್ತು. ಅದಕ್ಕಾಗಿಯೇ ಮಕ್ಕಳ ಮನೆಯಲ್ಲಿ ಇರಲಾರಂಭಿಸಿದ ಮೇಲೆ ಸಾಕಷ್ಟು compromise ಮಾಡಿಕೊಂಡರು.

ಮೊಮ್ಮಕ್ಕಳು ಅಂತರ್ಜಾತಿ ವಿವಾಹವಾದಾಗ ವಿರೋಧಿಸಿದ ಆ ಮಕ್ಕಳ ಅಮ್ಮ ಅಪ್ಪಂದಿರಿಗೆ ಬುದ್ಧಿ ಹೇಳಿದವರು ನಮ್ಮ ಅಪ್ಪನೇ. ಕಡೆಗೆ ಸಾವಿನ ಸಂದರ್ಭದಲ್ಲಿಯೂ ಅಪ್ಪ ತಮ್ಮ ಕ್ರಾಂತಿಕಾರಿ ಸ್ವಭಾವ ಮೆರೆದವರು. ಇದ್ದಕ್ಕಿದ್ದಂತೆ ಒಂದು ದಿನ ಎಲ್ಲ ಮಕ್ಕಳನ್ನೂ ಕರೆದು ತಾವು ಸತ್ತ ನಂತರ ಕಣ್ಣುಗಳನ್ನು ಮಾತ್ರವಲ್ಲದೆ ಇಡೀ ದೇಹವನ್ನೇ -ತಮಗೆ ಅನೇಕ ದಶಕಗಳ ಕಾಲ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಗೆ - ದಾನನೀಡುವುದಾಗಿ ತಿಳಿಸಿ ಎಲ್ಲ ಸಿದ್ಧತೆಗಳನ್ನೂ ಮಾಡಿ ಪತ್ರ ಬರೆದು ಅದು ಎಲ್ಲರಿಗೂ ಸಿಗುವಂತೆ ಇಟ್ಟಿದ್ದರು!! ಅದು ಕಳೆದು ಹೋದರೆ ಹುಡುಕಲು ಅವರಿರುವುದಿಲ್ಲವಲ್ಲ! . ಇದಾದ ವರ್ಷದಲ್ಲಿ ನಮ್ಮನ್ನಗಲಿದರು. ನನ್ನ ಅಮ್ಮ ಅತ್ಯಂತ ಮುಗ್ಧೆ . ಸರಳತೆ ಅವಳ ಪ್ರಧಾನ ಗುಣ. ಅವರಿಬ್ಬರ ಸ್ವಭಾವ ಅಜಗಜಾಂತರವಾಗಿದ್ದರೂ ಅವರಿಬ್ಬರಲ್ಲಿ ಅಪಾರ ಹೊಂದಾಣಿಕೆ. ತಂದೆಯ ಎಲ್ಲ ಗುಣಗಳಿಗೂ ಅಮ್ಮನ ಒಪ್ಪಿಗೆ. ಸದಾಕಾಲ ಇಬ್ಬರೂ ಜೊತೆಯಾಗಿರುತ್ತಿದ್ದುದು ಕೆಲವರಿಗಾದರೂ ಅಸಹನೆಯ ಭಾವ ಮೂಡಿಸುತ್ತಿತ್ತು. ಈಗ ಅಪ್ಪ ನಮ್ಮನ್ನಗಲಿ ಮೂರು ವರ್ಷಗಳಾಗಿವೆ.ಅವರು ನಮ್ಮನ್ನಗಲಿದಾಗ ನಮ್ಮ ಸಂಬಂಧಿಗಳು ಅಷ್ಟೇಕೆ ನನ್ನ ಅಣ್ಣ ಅಕ್ಕ ಚಿಕ್ಕಪ್ಪಂದಿರೇ ಅವರ ದೇಹವನ್ನು ಆಸ್ಪತ್ರೆಗೆ ದಾನ ನೀಡುವುದನ್ನು ವಿರೋಧಿಸಿದಾಗ ಅತ್ಯಂತ ಸೌಮ್ಯ ಸ್ವಭಾವದ ನಮ್ಮಮ್ಮ ಧೃಡವಾಗಿ ನಿಂತು ಅಪ್ಪನ ಕಡೆಯ ಆಸೆಯನ್ನು ನೆರವೇರಿಸಿದರು. ಸುಮಾರು ಐವತ್ತು ವರ್ಷಗಳ ಕಾಲ ಅವರೊಡನೆ ಇದ್ದ ನಾನು ಅವರಿಂದ ಅನೇಕ ಗುಣಗಳನ್ನು ಕಲಿತಿದ್ದೇನೆ. ಅಂತಹ ಅಪ್ಪನಿಗೆ ಒಂದು ಈ ಅಪ್ಪಂದಿರ ದಿನದಂದು ಒಂದು ಶ್ರದ್ಧಾಂಜಲಿ. ಅಪ್ಪನಿಗೊಂದು ನೆನಪಿನ ಶ್ರದ್ಧಾಂಜಲಿ

Thursday, June 18, 2009

ರಾಮಾಯಣ - ಒಂದು ಪ್ರವೇಶ

ನಮ್ಮ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯಗಳಲ್ಲೊಂದಾದ ರಾಮಾಯಣ ವಾಲ್ಮೀಕಿಯಿಂದ ರಚಿತವಾದದ್ದು. ವಾಲ್ಮೀಕಿ ಈ ಕಾವ್ಯದ ಒಂದು ಪಾತ್ರವೂ ಹೌದು.ರಾಮಾಯಣ ನಡೆದದ್ದು ಹಿಂದೂ ಕಾಲಗಣನೆಯ ನಾಲ್ಕುಯುಗಗಳಲ್ಲಿ ಎರಡನೆಯದಾದ ತ್ರೇತಾಯುಗದಲ್ಲಿ.ವಾಲ್ಮಿಕಿಯಿಂದ ರಚಿತವಾದ ಈ ಮಹಾಕಾವ್ಯ ಮುಂದೆ ಲವ-ಕುಶರಿಂದ ಪ್ರಚಲಿತವಾಯಿತು. ಈ ಕಾವ್ಯದ ಎಲ್ಲ ಪಾತ್ರಗಳೂ ಭಾರತದ ಸಾಂಸ್ಕೃತಿಕ ಪ್ರಜ್ಞೆಯ ಭಾಗವಾಗಿವೆ ಎಂದು ನಿರ್ವಿವಾದವಾಗಿ ಹೇಳಬಹುದು.

ರಾಮಾಯಣದ ಕಥೆಯನ್ನು ಅತ್ಯಂತ ಸರಳವಾಗಿ ಹೇಳುವುದಾದರೆ ಇದು ಒಳಿತು ಕೆಡುಕಿನ ನಡುವಿನ ಸಂಘರ್ಷದ ಕಥೆ. ಈ ಸಂಘರ್ಷದಲ್ಲಿ ಒಳಿತಿಗೇ ಕಡೆಯಲ್ಲಿ ಜಯ ಎಂಬುದನ್ನು ಈ ಕಾವ್ಯ ಸಾರುತ್ತದೆ. ಅದಕ್ಕೆ ಹೊಂದುವಂತೆ ಇಲ್ಲಿಯ ಪಾತ್ರಗಳೂ ಅತ್ಯಂತ ನೇರ , ಸರಳ ಸ್ವಭಾವದ ಪಾತ್ರಗಳು. ಒಳಿತನ್ನು ಪ್ರತಿನಿಧಿಸುವ ರಾಮ ಈ ಕಾವ್ಯದ ನಾಯಕನಾದರೆ ಅವನ ಒಡನಾಡಿ ಸೀತೆ ಈ ಕಾವ್ಯದ ನಾಯಕಿ. ಕೆಡುಕಿನ ಸಂಕೇತವಾದ ರಾವಣ ಇಲ್ಲಿನ ಖಳನಾಯಕ. ರಾಮ ರಾವಣರ ಯುದ್ಧದಲ್ಲಿ ಅಂತಿಮವಾಗಿ ರಾಮನಿಗೇ ಜಯ.ಇದು ಅತ್ಯಂತ ಸರಳವಾಗಿ ಹೇಳಬಹುದಾದ ಕಥೆ. ಆದರೆ ಈ ಕಾವ್ಯ ಮುಂದೆ ಬಂದ ಹಲವಾರು ಭಾಷೆಯ ಅನೇಕ ಕವಿಗಳಿಗೆ ಸ್ಫೂರ್ತಿಯ ಸೆಲೆಯಾಗಿದೆ.ಹೀಗಾಗಿ ವಾಲ್ಮೀಕಿಯ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗೂ ಅನೇಕ ಕವಿಗಳು ಈ ಕಾವ್ಯವನ್ನು ಬೇರೆ ಬೇರೆ ರೀತಿಯಲ್ಲಿ ರಚಿಸಿದ್ದಾರೆ.

ಭಾರತದ ವಿವಿಧ ಭಾಷೆಗಳ ರಾಮಾಯಣಗಳ ಕಿರು ಪರಿಚಯ:

೧.ವಾಲ್ಮೀಕಿ ರಾಮಾಯಣದ ನಂತರ ನಮಗೆ ಸಿಗುವ ಮೊದಲ ರಾಮಾಯಣ " ಭಟ್ಟಿಕಾವ್ಯ" . ಏಳನೆಯ ಶತಮಾನದ ಭಟ್ಟಿಕವಿ ರಚಿಸಿರುವ ಈ ಕೃತಿ ಅತ್ಯಂತ ವಿಶಿಷ್ಟವಾದದ್ದು. ಇದನ್ನು ಶಾಸ್ತ್ರಕಾವ್ಯ ಎಂದೂ ಕರೆಯಬಹುದು. ಈ ಕೃತಿ ಪ್ರಾಚೀನ ಕಾಲದ ಎರಡು ಮಹಾ ಕೃತಿಗಳನ್ನು ಹೆಣೆದು ರಚಿಸಿದ ಕಾವ್ಯ. ರಾಮಾಯಣ ಮತ್ತು ಪಾಣಿನಿಯ " ಅಷ್ಟಾಧ್ಯಾಯಿ" ಕೃತಿಗಳನ್ನು ಬೆರೆಸಿ ಮಾಡಿದ ಒಂದು ನೂತನ ಪ್ರಯೋಗ. ಪಾಣಿನಿಯ ವ್ಯಾಕರಣದ ನಿಯಮಗಳನ್ನು ರಾಮಾಯಣದ ಕಥೆಯ ಪ್ರಯೋಗಗಳ ಮೂಲಕ ಹೇಳುತ್ತಾ ಹೋಗುತ್ತಾನೆ.ಈ ಕೃತಿಗೆ " ರಾವಣವಧ" ಎಂಬ ಹೆಸರೂ ಇದೆ.

೨. ಹನ್ನೆರಡನೆಯ ಶತಮಾನದ ತಮಿಳು ಕವಿ ಕಂಬನ್ ರಚಿಸಿದ " ರಾಮಾವತಾರಮ್" ಕಾವ್ಯ ಕಂಬರಾಮಾಯಣ ಎಂದೇ ಪ್ರಖ್ಯಾತವಾಗಿದೆ. ವಾಲ್ಮೀಕಿ ರಾಮಾಯಣಕ್ಕಿಂತ ಭಿನ್ನವಾದ ಕಥಾಹಂದರ ಇದರಲ್ಲಿದೆ. ಇದೊಂದು ಭಕ್ತಿಪ್ರಧಾನ ಕಾವ್ಯ.

೩.ಹದಿನಾಲ್ಕನೆಯ ಶತಮಾನದಲ್ಲಿ ಬಂಗಾಳ ಭಾಷೆಯಲ್ಲಿ ರಚಿತವಾದ " ಕೃತ್ತಿವಾಸಿ"ಕಾವ್ಯವನ್ನು " ಶ್ರೀರಾಮಪಾಂಚಾಲಿ" ಎಂದೂ ಕರೆಯುತ್ತಾರೆ.ಈ ಕೃತಿಯನ್ನು ಬರೆದ ಕವಿ ಕೃತ್ತಿಬಾಸ್ ಓಜ್. ಕನ್ನಡದ ಕುಮಾರವ್ಯಾಸನ ಕಾವ್ಯದಂತೆ ಭಕ್ತಿಪ್ರಧಾನವಾದ ಕಾವ್ಯವಿದು. ರಾಮಾಯಣದ ಕಥೆಯನ್ನು ಬಂಗಾಳ ಭಾಷೆಯಲ್ಲಿ ಹೇಳುವುದಷ್ಟೆ ಈ ಕಾವ್ಯದ ಉದ್ದೇಶವಲ್ಲ. ಉತ್ತರ ಭಾರತದ ಅನೇಕ ರಾಮಾಯಣ ಪರಂಪರೆಗಳಲ್ಲಿ ಅತಿ ಪ್ರಾಚೀನವಾದದ್ದು ಈ ಕಾವ್ಯ. ಮಧ್ಯಕಾಲೀನ ಬಂಗಾಳ ಸಮಾಜದ ಚಿತ್ರಣ , ಅಲ್ಲಿಯ ಜನರ ಸಂಸ್ಕೃತಿ, ಅವರು ಎತ್ತಿ ಹಿಡಿಯುವ ಮೌಲ್ಯಗಳು ಇವೆಲ್ಲವನ್ನೂ ಈ ಕಾವ್ಯಬಿಂಬಿಸುತ್ತದೆ ಮತ್ತು ಸುತ್ತಮುತ್ತಲ ಪ್ರಾಂತ್ಯಗಳಲ್ಲಿ ವೈಷ್ಣವಮತ ನೆಲೆಕಂಡುಕೊಳ್ಳುವಲ್ಲಿ ಈ ಕಾವ್ಯದ ಪಾತ್ರ ಮಹತ್ತರವಾದದ್ದು. ಮುಂದೆ ಬಂದ ಬಂಗಾಲಿ ಸಾಹಿತ್ಯದ ಮೇಲೆ ಈ ಕಾವ್ಯದ ದಟ್ಟ ಪ್ರಭಾವವನ್ನು ಗುರುತಿಸಬಹುದು. ರವೀಂದ್ರನಾಥ ಠಾಗೋರರ ಮೇಲೂ ಈ ಕಾವ್ಯ ಸಾಕಷ್ಟು ಪ್ರಭಾವ ಬೀರಿದೆ.

ಇವುಗಳಲ್ಲದೆ ಹದಿನೈದನೆಯ ಶತಮಾನದ ರಂಗನಾಥ ಕವಿ ರಚಿಸಿದ ತೆಲುಗು ರಾಮಾಯಣ, ಹದಿನಾರನೆಯ ಶತಮಾನದಲ್ಲಿ ಬಲರಾಮದಾಸ ಕವಿ ರಚಿಸಿದ ಒರಿಯಾ ರಾಮಾಯಣ, 17ನೆ ಶತಮಾನದಲ್ಲಿ ಪ್ರೇಮಾನಂದ ಕವಿ ರಚಿಸಿದ ಗುಜರಾತಿ ರಾಮಾಯಣ , 18ನೆ ಶತಮಾನದಲ್ಲಿ ಕವಿ ಶ್ರೀಧರ ರಚಿಸಿದ ಮರಾಠಿ ರಾಮಾಯಣಗಳು ಭಾರತದ ಬಹುಮಟ್ಟಿಗೆ ಎಲ್ಲ ಭಾಷೆಗಳಲ್ಲೂ ರಾಮಾಯಣ ಕಾವ್ಯಗಳು ಬಂದಿರುವುದನ್ನು ಸೂಚಿಸುತ್ತವೆ.

ಈ ಎಲ್ಲ ಕಾವ್ಯಗಳಿಗಿಂತ ಕುತೂಹಲ ಮೂಡಿಸುವ ಮತ್ತೊಂದು ಕಾವ್ಯ ಕೇರಳ ಮತ್ತು ಲಕ್ಷದ್ವೀಪದ ಭಾಗಗಳಲ್ಲಿ ಮಾಪಿಳ್ಳೆಗಳು ಹಾಡುವ ಮಾಪಿಳ್ಳೆಪಟ್ಟು ಹಾಡಿನಲ್ಲಿ ರಾಮಾಯಣದ ಕಥೆಯ ಕೆಲವು ಭಾಗಗಳು ಸೇರಿವೆ. ಈ ಭಾಗವನ್ನು ‘ ಮಾಪಿಳ್ಳೆರಾಮಾಯಣ’ ಎಂದೂ ಕರೆಯುತ್ತಾರೆ. ಇವು ಜಾನಪದ ಹಾಡುಗಳಾಗಿದ್ದು ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿದೆ.ಈ ರಾಮಾಯಣದ ನಾಯಕ ಒಬ್ಬ ಮುಸ್ಲಿಮ್ ಸುಲ್ತಾನ. ಇಲ್ಲಿ ರಾಮನ ಹೆಸರನ್ನು " ಲಾಮನ್" ಎಂದು ಬದಲಾಯಿಸಿರುವುದನ್ನು ಬಿಟ್ಟರೆ ಉಳಿದಂತೆ ಇತರ ಪಾತ್ರಗಳು ರಾಮಾಯಣದ ಕಾವ್ಯದಲ್ಲಿರುವಂತೆಯೇ ಇವೆ. ಮುಸ್ಲಿಮ್ ಸಾಮಾಜಿಕ ರೀತಿ ನೀತಿಗಳಿಗೆ ಹೊಂದುವಂತೆ ಕಥೆಯಲ್ಲಿ ಕೆಲವು ಮಾರ್ಪಾಟುಗಳಾಗಿವೆ.


( ಸ್ಫೂರ್ತಿ, ಆಕರ ವಿಕಿಪೀಡಿಯ. ಮುಂದಿನ ಭಾಗದಲ್ಲಿ ಕನ್ನಡದ ರಾಮಾಯಣದ ಪರಿಚಯ)

Thursday, May 28, 2009

ಮೊಟ್ಟೆಗಿಣ್ಣು ತಿಂದು ಸಿಟ್ಟು ಮಾಡಿದವಳೇ !

ಗೆಳತಿ ನೆನಪಿದೆಯೇ ನಿನಗೆ? ಮೂರು ದಶಕಗಳ ಹಿಂದೆ ನಾವೆಲ್ಲಾ ಒಟ್ಟಿಗೆ ಹಾಸ್ಟೆಲ್ ನಲ್ಲಿ ಒಡನಾಡಿದ ದಿನಗಳು.ನನ್ನನ್ನು ನೆನಸಿಕೊಂಡರೆ ನಿನಗೆ ಈಗಲೂ ಸಿಟ್ಟುಬರುತ್ತದೆಯೇ ?ಬಂದರೆ ತಪ್ಪೇನಿಲ್ಲ ಬಿಡು. ಅದೇ ತಾನೆ ಕಾಲೇಜ್ ಮೆಟ್ಟಿಲು ಹತ್ತಲು ಸಿದ್ಧಳಾಗಿದ್ದ ನಾನು ಒಂದು ಪುಟ್ಟ ಹಳ್ಳಿಯಿಂದ ಬೆಂಗಳೂರಿಗೆ ಬಂದಿಳಿದಾಗ ನೂರಾರು ಕನಸುಗಳು. ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ಅಪ್ಪ ನನ್ನನ್ನು ಹಾಸ್ಟೆಲ್ ಗೆ ಸೇರಿಸಿದರು. ಸಂಭ್ರಮ, ಆತಂಕ ,ಕುತೂಹಲ ಎಲ್ಲ ಭಾವನೆಗಳೊಂದಿಗೆ ಬಂದ ನನಗೆ ಹಾಸ್ಟೆಲ್ ನೋಡಿ ಮನಸ್ಸು ಪಿಚ್ಚೆಂದಿತು. ಕತೆ ಕಾದಂಬರಿಗಳಲ್ಲಿ ಹಾಸ್ಟೆಲ್ ಬಗ್ಗೆ ಓದಿ ಏನೇನೋ ಊಹಿಸಿಕೊಂಡಿದ್ದ ನನಗೆ ಕಟ್ಟಡ ನೋಡಿದ ಕೂಡಲೇ ನಿರಾಸೆಯಾಯಿತು.ಒಂದು ಸಾಮಾನ್ಯ ಮನೆಯೇ ಹಾಸ್ಟೆಲ್ ಆಗಿ ಪರಿವರ್ತನೆಗೊಂಡಿತ್ತು. ಅಲ್ಲಿದ್ದ ಮೂರು ರೂಮುಗಳ ಜೊತೆಗೆ ಹಾಲ್ ಗೆ ಒಂದು ಸ್ಕ್ರೀನ್ ಅಡ್ಡ ಇಟ್ಟು ನಾಲ್ಕು ರೂಮುಗಳಾಗಿ ವಿಂಗಡಿಸಿದ್ದರು ಕೋಣೆಗಳಲ್ಲಿ ಕಾಟ್ ಗಳಿಲ್ಲ, ವಾರ್ಡ್ ರೋಬ್ ಅಂತೂ ಈ ಕಾಲದ ಕೂಸು. ಉಚಿತ ಹಾಸ್ಟೆಲ್ ಗಳು ಇನ್ನು ಹೇಗಿರಲು ಸಾಧ್ಯ. ಅದಿರಲಿ. ಹೆದರಿದ ಗುಬ್ಬಚ್ಚಿಯಂತೆ ಕೋಣೆಗೆ ಬಂದ ನನ್ನನ್ನು ನೀವು ಮೂರು ಜನ ಪರಿಚಯಮಾಡಿಕೊಂಡಿರಿ ನಮ್ಮೆಲ್ಲರಿಗಿಂತ ಮಾಡ್ ಹುಡುಗಿಯ ಹಾಗೆ ಕಂಡ ವಿಜಿ, ನನಗಿಂತ ಹಳ್ಳಿಗುಗ್ಗುವಿನ ಹಾಗೆ ಕಾಣಿಸಿದ ನೀನು ( ಕ್ಷಮಿಸು, ಅದೇ ವಾಸ್ತವ )ನನ್ನ ಮನಸ್ಸನ್ನು ಬೇರೆ ಬೇರೆ ಕಾರಣಗಳಿಗಾಗಿ ಸೆಳೆದಿರಿ. ನಿನ್ನ ಅತಿರೇಕದ ವರ್ತನೆಯಿಂದ ಇಡೀ ಹಾಸ್ಟೆಲ್ ನಲ್ಲಿ ಎಲ್ಲರ ಕೀಟಲೆಗೆ ನೀನು ಗುರಿಯಾಗುತ್ತಿದ್ದೆ.ನಿನ್ನ ಮಡಿ ಸಮಾಚಾರ ಎಲ್ಲರಿಗೂ ಸಮಯ ಕಳೆಯಲು ಒಂದು ಹರಟೆಯ ವಸ್ತುವಾಗಿತ್ತುಆ ವಿಚಾರಗಳು ತೀರ ಕ್ಷುಲ್ಲಕ ಎನಿಸಿ ಯಾರಿಗೇ ಆಗಲಿ ನಗೆ ಉಕ್ಕಿಸುತ್ತಿತ್ತು

ಉದಾಹರಣೆಗೆ ಯಾರಾದರೂ ಬಾಳೆಹಣ್ಣು ಕಚ್ಚಿ ತಿನ್ನುತ್ತಿದ್ದರೆ ನಿನಗಾಗುತ್ತಿರಲಿಲ್ಲ. ವಿಜಿ ಒಮ್ಮೆ ಚಕ್ಕುಲಿಯನ್ನು ಕುರುಂ ಕುರುಮ್ ಎಂದು ಕಚ್ಚಿ ತಿನ್ನುತ್ತಿದ್ದಾಗಲೂ ನೀನು ಮುಖ ಸಿಂಡರಿಸಿಕೊಂಡು ಮಡಿ ಹಾಳಾಯ್ತೆಂದು ಹಾರಾಡಿದ್ದೆ. ಇದರಿಂದ ಇತರರು ನಿನ್ನನ್ನು ರೇಗಿಸಲೆಂದೇ ನಿನ್ನೆದುರು ಬೇಕೆಂದೇ ಕಚ್ಚಿ ತಿನ್ನುವುದು ಬೆರಳು ಚೀಪುವುದು ಮಾದಿ ನಿನ್ನಷ್ಟು ಕೆರಳಿಸುತ್ತಿದ್ದರು. ಒಮ್ಮೆ ವಿಜಿಗೆ ಒಂದು ಭಯಂಕರ ಐಡಿಯಾ ತಲೆಗೆ ಹೊಳೆಯಿತು.ಹೇಗಾದರೂ ಮಾಡಿ ನಿನ್ನ ಮಡಿಯನ್ನು ಮುರಿಯಬೇಕೆಂಬ ಪ್ಲ್ಯಾನ್ ಹಾಕಿದಳು. ಎಂದೋ ಒಮ್ಮೆ ಮಾತಿನ ನಡುವೆ ನೀನು ಗಿಣ್ಣು ಹಾಲು ನಿನಗಿಷ್ಟ ಎಂದಿದ್ದು ಅವಳ ನೆನಪಿನಲ್ಲಿತ್ತು.ಕೂಡಲೇ ಅವಳು ನಮ್ಮೆಲ್ಲರನ್ನೂ ಸೇರಿಸಿಕೊಂಡು ಕಾರ್ಯಪ್ರವೃತ್ತಳಾದಳು.ಅವಳು ಹೇಳಿದ ವಿಷಯ ಕೇಳಿ ನನಗೇ ಗಾಬರಿಯಾಯಿತು. ಇನ್ನು ಬಾಯ್ತೆರೆದರೆ ನನ್ನನ್ನೂ ನಿನ್ನ ಲಿಸ್ಟ್ ಗೆ ಸೇರಿಸುತ್ತಾಳೆಂದು ಸುಮ್ಮನಾದೆ.ವಿಜಿಯ ಮನೆಯಲ್ಲಿ ಅವರೆಲ್ಲರಿಗೂ ಮೊಟ್ಟೆ ತಿನ್ನುವ ಅಭ್ಯಾಸವಿತ್ತು.ಆದರೆ ಈ ಹಾಸ್ಟೆಲ್ ನಡೆಸುವವರಾಗಲಿ ಇಲ್ಲಿ ಬರುವ ವಿದ್ಯಾರ್ಥಿಗಳಾಗಲಿ ಪಕ್ಕಾ ಸಸ್ಯಾಹಾರಿಗಳು. ನೀನು ಕಾಲೇಜಿನಿಂದ ಲೇಟಾಗಿ ಬರುವ ಆ ಗುರುವಾರ , ಅಡಿಗೆ ಪಾಪಮ್ಮಳಿಗೆ ಪೂಸಿಹೊಡೆದು ಕುಕ್ಕರಿನಲ್ಲಿ ಮೊಟ್ಟೆ , ಹಾಲು, ಸಕ್ಕರೆ ಎಲ್ಲಾ ಬೆರಸಿ ಬೇಯಿಸಿದಳು. ಅದು ಪೂರ್ತಿ ಸಿದ್ಧವಾದಮೇಲೆ ನೋಡಿದರೆ ಗಿಣ್ಣುಹಾಲಿನಲ್ಲಿ ಮಾಡಿದ ಸಿಹಿತಿನಿಸಿನ ಹಾಗೇ ಕಾಣುತ್ತಿತ್ತು.(ನನಗೆ ಈ ವಿಷಯ ತಿಳಿಯದೇ ಇದ್ದಿದ್ದರೆ ನಾನು ಬಾಯಿ ಚಪ್ಪರಿಸಿ ತಿಂದು ಬಿಡುತ್ತಿದ್ದೆನೇನೋ ?) ನೀನು ಬಂದ ಕೂಡಲೇ ಹಾಸ್ಟೆಲ್ ಓನರ್ ಗಿಣ್ಣು ಹಾಲು ಕಳಿಸಿದ್ದರೆಂದೂ ತಿನ್ನಲು ಬಿಸಿಬಿಸಿ ತಿನಿಸು ಸಿದ್ಧವಾಗಿದೆಯೆಂದು ಹೇಳಿ ಅದನ್ನು ತಟ್ಟೆಯಲ್ಲಿ ಹಾಕಿ ಕೊಟ್ಟಾಗ ನೀನು ಅದೆಷ್ಟು ಸಂತಸ ಪಟ್ಟೆ! ಎಲ್ಲವನ್ನೂ ತಿಂದು , ಬಹುಶಃ ಮೊಟ್ಟಮೊದಲ ಬಾರಿಗೆ ಇಷ್ಟು ಸೊಗಸಾದ ಗಿಣ್ಣಿನ ಪದಾರ್ಥ ತಿಂದಿದ್ದೆಂದು ಮೆಚ್ಚುಗೆ ಸೂಚಿಸಿದೆ...ಎಲ್ಲರೂ ಉಕ್ಕಿ ಬರುತ್ತಿದ್ದ ನಗುವನ್ನು ತಡೆ ಹಿಡಿಯಲು ಪ್ರಯತ್ನಿಸುತ್ತಿದ್ದರು. ಕೈ ತೊಳೆಯಲು ಹಿತ್ತಿಲಿಗೆ ಹೋದ ನೀನು ಡಸ್ಟ್ ಬಿನ್ನಿನಲ್ಲಿದ್ದ ಮೊಟ್ಟೆಯ ಸಿಪ್ಪೆಯನ್ನು ನೋಡಿ " ಅಯ್ಯಯ್ಯೋ ಯಾರ್ರೇ ಅದು ಮೊಟ್ಟೆ ತಿನ್ನುವವರು, ನಾನು ಈಗಲೇ ವಾರ್ಡನ್ನಿಗೆ ಹೇಳ್ತೀನಿ " ಎಂದು ಕಿರುಚುತ್ತಾ ಒಳಬಂದೆ. ನಾನು ಸುಮ್ಮನಿರಬೇಕೋ ಬೇಡವೋ, ಕಿಸಕ್ಕನೆ ನಕ್ಕು " ಯಾಕೆ ಗಿಣ್ಣು ಚೆನ್ನಾಗಿರಲಿಲ್ಲವೇನೇ ? " ಎಂದು ಕೇಳಿದಾಗ ಎಲ್ಲಾ ಅರ್ಥವಾದ ನೀನು " ಸಿಂಕ್ ಬಳಿ ಓಡಿ ವಾಂತಿ ಮಾಡಲು ಯತ್ನಿಸಿದೆ. ಆದರೆ ನಮ್ಮಪ್ಪನಾಣೆ ನಿನ್ನ ಬಾಯಿಂದ ಸ್ವಲ್ಪವೂ ವಾಂತಿ ಬರಲಿಲ್ಲ.!!ವಿಜಿ ಸುಮ್ಮನಿರದೆ " ಅಯ್ಯೋ ಅದು ಜೀರ್ಣವಾಗಿ ಬಿಟ್ಟಿದೆ ಕಣೆ . ಯಾಕೆ ಸುಮ್ಮನೆ ಇಲ್ಲದ ವಾಂತಿ ಬರಿಸಿಕೊಳ್ಳಲು ಪ್ರಯತ್ನಿಸುವೆ" ಎಂದಾಗ ಮುಖಭಂಗಿತಳಾದ ನೀನು ಒಂದು ವಾರ ನಮ್ಮೊಡನೆ ಮಾತು ಬಿಟ್ಟಿದ್ದೆ.

ಈಗ ನೆನಸಿಕೊಂಡರೆ ನನಗೇ ನಾಚಿಕೆಯಾಗುತ್ತದೆ. ಹಾಸ್ಟೆಲ್ ತೊರೆದ ಮೇಲೆ ಮತ್ತೆ ನೀನು ಭೇಟಿಯಾಗಲೇ ಇಲ್ಲ.ನಿನಗೆ ಮದುವೆ ಆಯಿತೆಂದೂ ಒಳ್ಳೆ ಕೆಲಸದಲ್ಲಿರುವೆಯೆಂದೂ ವಿಜಿ ಒಮ್ಮೆ ಸಿಕ್ಕಾಗ ಹೇಳಿದ್ದಳು. ಆದರೆ ನೀನು ಕ್ರಿಶ್ಚಿಯನ್ ಹುಡುಗನನ್ನು ಪ್ರೀತಿಸಿ ಮದುವೆ ಮಾಡಿಕೊಂಡೆ ಎಂದು ಕೇಳಿದಾಗ ಮಾತ್ರ ದಿಗ್ಭ್ರಮೆಯಾಯಿತು. ನಿನ್ನನ್ನೊಮ್ಮೆ ಮಾತನಾಡಿಸಬೇಕೆಂದು ಹಂಬಲವಾಗುತ್ತಿದೆ. ನಿನ್ನ ವಿಳಾಸ ನಮಗಾರಿಗೂ ಗೊತ್ತಿಲ್ಲ. ಈ ಬರಹವನ್ನೇನಾದರೂ ಓದಿದರೆ ಮರೆಯದೆ ಒಮ್ಮೆ ಭೆಟ್ಟಿಮಾಡು ಅಥವಾ ಮಿಸ್ ಕಾಲ್ ಕೊಟ್ಟರೂ ಸರಿಯೇ.

Sunday, May 10, 2009

ಪ್ರೀತಿಯ ಅಮ್ಮನಿಗೊಂದು ಮಮತೆಯ ಓಲೆ





ನಾನು ಪುಟ್ಟಬಾಲಕಿಯಾಗಿಯಾಗಿದ್ದಾಗ ನೀನು ನನಗೆ ಹೇಗೆ ಕಂಡಿದ್ದೆ ?ನಪಿಸಿಕೊಳ್ಳಲು ಪ್ರಯತ್ನಿಸುವೆ. ಪ್ರತಿದಿನ ನಮಗೆ ಹಗಲಾಗುತ್ತಿದ್ದುದೇ ನಿನ್ನ ಮಧುರ ಮಂಜುಳ ಗಾನ ಕಿವಿಯ ಮೇಲೆ ಬಿದ್ದಾಗ. ಮುಂಜಾನೆ ನಾಲ್ಕು ಗಂಟೆಗೇ ಎದ್ದು ಸ್ನಾನ ಮಾಡಿ ಸರಳವಾಗಿ ಜಡೆ ಹೆಣೆದು, ಹೂ ಮುಡಿದು ( ಅದಂತೂ ಕಡ್ಡಾಯ. ಹೂವಿಲ್ಲದ ನಿನ್ನನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ) ಹಾಡಿಕೊಳ್ಳುತ್ತಾ ದೇವರಪೂಜೆ ಮಾಡುವಾಗ ಪಂಚೇಂದ್ರಿಯಗಳಲ್ಲಿ ಮೊದಲು ಎಚ್ಚರಗೊಳ್ಳುತ್ತಿದ್ದುದು ಕಿವಿ ( ಶ್ರವಣೇಂದ್ರಿಯ!) ನಂತರ ದೇವರಮನೆಯಲ್ಲಿ ನೀನು ಹಚ್ಚಿದ ಊದಿನಕಡ್ಡಿಯ ಪರಿಮಳವು ,ಅಡಿಗೆಮನೆಯ ಡಿಕಾಕ್ಷನ್ನಿನ್ನ ಸುವಾಸನೆಯೊಂದಿಗೆ ಬೆರೆತು ಪೂರ್ಣ ಎಚ್ಚರವಾಗುತ್ತಿತ್ತು. ಮನೆ ತುಂಬಾ ಜನರಿದ್ದುದರಿಂದ ಬೆಳಗಾದ ನಂತರ ನಿನ್ನೊಡನೆ ಕಾಲಕಳೆದಿದ್ದೇ ನೆನಪಿಲ್ಲ. ನೀನು ಯಾರಮೇಲೂ ಕೋಪಮಾಡಿಕೊಂಡಿದ್ದು ನೆನಪಿಲ್ಲ. ಆದರೂ ಒಂದು ಪ್ರಸಂಗ ಮಾತ್ರ ಹಸಿರಾಗಿದೆ.

ನನ್ನ ಹಿರಿಯ ಅಣ್ಣಂದಿರಿಗೆ ಆ ಕಾಲದಲ್ಲಿಯೇ ಟ್ರೇಡ್ ಆಟ ಬಹಳ ಇಷ್ಟ.ರಜೆಯಲ್ಲಿ ಮಾವನ ಮನೆಗೆ ಹೋಗಿದ್ದಾಗ ಅವರ ಮಕ್ಕಳು ಆಡುತ್ತಿದ್ದ ಆಟ ನೋಡಿ ಅಣ್ಣಂದಿರು ಮನೆಯಲ್ಲಿರುವ ಪೇಪರ್ ಮತ್ತು ದಪ್ಪ ಕಾರ್ಡ್ಗಳಿಂದ ಅದೆಷ್ಟು ಚೆನ್ನಾಗಿ ಇಡೀ ಸೆಟ್ ಸಿದ್ಧಪಡಿಸಿದ್ದರು.ಅಪ್ಪ ಆಫೀಸಿಗೆ ಹೋದ ಕೂಡಲೇ ಆಟಕ್ಕೆ ಕುಳಿತರೆ ನೀನೆಷ್ಟು ಕರೆದರೂ ಜಪ್ಪಯ್ಯ ಎನ್ನುತ್ತಿರಲಿಲ್ಲ. ಆಗಲೂ ನೀನು ಜೋರಾಗಿ ಬೈದದ್ದನ್ನು ನಾ ಕಾಣೆ! ಆದರೂ ಒಂದು ದಿನ ನಿನಗೇಕೆ ಸಹನೆ ಮೀರಿತ್ತೋ ತಿಳಿಯೆ , ಅವರು ಆಡುತ್ತಿರುವಲ್ಲಿಗೆ ಹೋಗಿ ಆಟದ ಎಲ್ಲಾ ಸಾಮಗ್ರಿಗಳನ್ನು ಕಿತ್ತುಕೊಂಡು ಹೋಗಿ ಉರಿಯುತ್ತಿರುವ ಬಚ್ಚಲೊಲೆಗೆ ಹಾಕಿ ಬಿಟ್ಟೆಯಲ್ಲ! ಆ ಒಂದು ಘಟನೆ ಬಿಟ್ಟರೆ ನೀನು ಕೋಪಿಸಿಕೊಂಡದ್ದನ್ನೇ ನಾ ಕಾಣೆ. ಸಾಮಾನ್ಯವಾಗಿ ಮಕ್ಕಳಲ್ಲಿ ಯಾರಾದರೂ ಓದದೆ ಕಾಲಕಳೆಯುತ್ತಿದ್ದರೆ ನೀನು ನೇರವಾಗಿ ಬೈಯದೆ ನಿನ್ನ ಪಾಡಿಗೆ ಅಡುಗೆ ಮಾಡುತ್ತಾ " ಕಾಲ ಕಳೆದೆನಲ್ಲಾ ಜ್ಞಾನ ಬರಲಿಲ್ಲಾ ಕಾಲನವರು ಬಂದು ಕೇಳಿದರೇನು ಹೇಳಲಿ ಸೊಲ್ಲಾ..." ಎಂದು ದಾಸರ ಪದ ಹಾಡುತ್ತಿದ್ದೆ. ಪ್ರತಿಯೊಂದಕ್ಕೂ ಹಾಡಿನ ಮೂಲಕವೇ ಉತ್ತರಿಸುತ್ತಿದ್ದ ನಿನ್ನಲ್ಲಿ ಹಾಡಿನ ಭಂಡಾರವೇ ಇತ್ತು.ಈಗಲೂ ಇದೆ.

ಶಾಲೆಗೆ ಹೋಗುವಾಗ ಇತರ ಮಕ್ಕಳಂತೆ ನಮಗೂ ಎರಡು ಡಬ್ಬಿಗಳಿರುವ ಕ್ಯಾರಿಯರ್ ಬೇಕೆಂದು ಹಠ ಮಾಡಿದಾಗ ನೀನು ಒಂದೇ ಉದ್ದ ಕ್ಯಾರಿಯರ್ನಲ್ಲಿ ಕೆಳಗೆ ಮೊಸರನ್ನ ಹಾಕಿ. ಮೇಲೆ ಸಾರನ್ನ ಹಾಕಿಕೊಡುತ್ತಿದ್ದೆ. ಗೆಳತಿಯರಿಗೆಲ್ಲಾ ಇದೊಂದು ಅದ್ಭುತ!. ಸಾರನ್ನ ಮುಗಿದು ಮೊಸರನ್ನ ಪ್ರಾರಂಭವಾಗುವುದನ್ನು ಕುತೂಹಲದಿಂದ ಎದುರು ನೋಡುತ್ತಿದ್ದರು.ಅವೆರಡೂ ಯಾವತ್ತೂ ಕಲಸುಮೇಲೋಗರವಾಗಿರಲಿಲ್ಲ.

ಬಾಲ್ಯದಲ್ಲಿ ನೀನಿಲ್ಲದಿದ್ದರೆ ಆಗುವುದೇ ಇಲ್ಲ ಎಂದು ನಾನು ಹಠ ಮಾಡಿದ ಸಂದರ್ಭ ಯಾವುದಾದರೂ ಇದೆಯೇ ? ಎಂದು ಯೋಚಿಸಿದರೆ ಉಹೂ ಇಲ್ಲವೇ ಇಲ್ಲ. ಮನೆ ತುಂಬಾ ಜನರಿದ್ದುದರಿಂದ, ನಮ್ಮ ಅಗತ್ಯಗಳನ್ನು ಯಾರಾದರೊಬ್ಬರು ಪೂರೈಸುತ್ತಿದ್ದುದರಿಂದ , ಎರಡು ಮೂರು ವರ್ಷ ವ್ಯತ್ಯಾಸದ ಅಕ್ಕ, ಅಣ್ಣ ತಂಗಿ ಇದ್ದುದರಿಂದ ಹೀಗಾಗಿರಬಹುದೇ? ನೀನು ಬೇಕೇ ಬೇಕು, ನಿನ್ನೊಡನೆ ಹೆಚ್ಚಿಗೆ ಮಾತನಾಡಿ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಬೇಕೆನಿಸಿದ್ದು ನನ್ನ ಮದುವೆಯ ನಂತರವೇ.ನಾನು ಬೇರೆ ಊರಿನಲ್ಲಿದ್ದುದರಿಂದ ಪುಟ್ಟ ಮಗನೊಂದಿಗೆ ವರ್ಷಕ್ಕೊಮ್ಮೆ ತವರಿಗೆ ಬಂದಾಗ ನೀನು ಅಪ್ಪ ನಮ್ಮನ್ನು ನೋಡಿಕೊಳ್ಳುತ್ತಿದ್ದ ರೀತಿ ಈಗಲೂ ಕಣ್ತುಂಬುವಂತೆ ಮಾಡುತ್ತದೆ. ಮದುವೆಯಾದ ಹೊಸತರಲ್ಲಿ ತವರುಮನೆಯ ಗೀಳು ಅಪಾರವಿತ್ತು. ಪುಟ್ಟ ಮಕ್ಕಳಿರುವ ಹೆಣ್ಣುಮಕ್ಕಳಿಗೆ ಅಮ್ಮನ ಅಗತ್ಯ, ಅನಿವಾರ್ಯತೆ ಎಷ್ಟೆಂಬುದು ಕ್ರಮೇಣ ಅರ್ಥವಾಗುತ್ತಾ ಹೋಯಿತು. ದಿನ ಕಳೆದಂತೆ ನಮ್ಮ ಮಕ್ಕಳು ದೊಡ್ಡವರಾದಂತೆ ಅವರ ಓದು. ಮನೆಯ ಕೆಲಸ , ನೌಕರಿಯ ಜವಾಬ್ದಾರಿ ಇವೆಲ್ಲದರ ನಡುವೆ ನಿನ್ನನ್ನು ಭೇಟಿಯಾಗುವುದೇ ಅಪರೂಪವಾಗುತ್ತಾ ಬಂತು. ಎಂತಹ ವಿಪರ್ಯಾಸ! ಮೊದಲು ನೂರಾರು ಮೈಲು ದೂರವಿರುವ ತವರು ಮನೆಗೆ ಓಡಿ ಬರುತ್ತಿದ್ದ ನಾನು, ಈಗ ಇಬ್ಬರೂ ಒಂದೇ ಊರಲ್ಲಿದ್ದರೂ ಭೇಟಿಯಾಗುವುದು ಬೆರಳೆಣಿಕೆಯಷ್ಟು ಬಾರಿಯಾಗಿತ್ತು. ಆದರೆ ಕಾಲಚಕ್ರ ಹಾಗೇ ನಿಲ್ಲಲಿಲ್ಲ ನೋಡು.ನನ್ನ ಮಗ ಬೆಳೆದು ತನ್ನ ಕಾಲ ಮೇಲೆ ನಿಂತು ಸದಾಕಾಲ ಅಮೆರಿಕ, ಆಸ್ಟ್ರೇಲಿಯಾ ಎಂದು ಸುತ್ತುತ್ತಾ ಇರುವಾಗ , ಸಹಜವಾಗಿಯೇ ನನ್ನ ಅಗತ್ಯ ಅವನಿಗೆ ಕಡಿಮೆಯಾಯಿತು.ಆಗ ಶುರುವಾಯಿತು ನೋಡು, ಹೆಣ್ಣುಮಕ್ಕಳಿಲ್ಲದಿದ್ದ ನನಗೆ ನನ್ನ ಮನದ ಭಾವನೆಗಳನ್ನು ನಿನ್ನೊಡನೆ ಹಂಚಿಕೊಳ್ಳಬೇಕೆಂಬ ತುಡಿತ..ಸದಾ ಹಸನ್ಮುಖಿಯಾಗಿರುತ್ತಾ ನಮ್ಮ ಎಲ್ಲಾ ಮಾತುಗಳನ್ನೂ ಬೇಸರವಿಲ್ಲದೆ ಕೇಳಿಸಿಕೊಳ್ಳುತ್ತಾ ನೀನೂ ಅಪ್ಪಾ ನನ್ನ ದೈನಂದಿನ ಬೇಸರಗಳನ್ನು ಹೋಗಲಾಡಿಸುತ್ತಾ ಹುರಿದುಂಬಿಸುವ ಮಾತನ್ನಾಡುತ್ತಿದ್ದರೆ ಅದೆಷ್ಟು ನೆಮ್ಮದಿ ಮನಸ್ಸಿಗೆ. ಆದರೆ ವಿಧಿ ಎಂಬುದೊಂದಿದೆಯಲ್ಲಾ. ಸದಾಕಾಲ ಚಟುವಟಿಕೆಯಿಂದಿರುತ್ತಿದ್ದ ನಿನ್ನ ಬಲಗೈ ಬಲಗಾಲು ನಿಷ್ಕ್ರಿಯವಾದಾಗ ನೀನು ಬದುಕನ್ನು ಎದುರಿಸಿದ ರೀತಿ ಸ್ತುತ್ಯಾರ್ಹ. ನಿನಗಿಂತ ನಿನ್ನ ಸ್ಥಿತಿಗೆ ಹೆಚ್ಚಾಗಿ ನೋವನುಭವಿಸಿದವರು ಅಪ್ಪ.ವಯಸ್ಸಿನ ಪರಿವೆ ಇಲ್ಲದೆ ಸದಾಕಾಲ ಚಿಟುವಟಿಕೆಯಿಂದಿದ್ದ ನಿನಗೆ ಇಳಿವಯಸ್ಸಿನಲ್ಲಿ ಹೀಗಾದದ್ದು ಅವರ ನೋವಿಗೆ ಮೂಲ ಕಾರಣ!. ನಿಮ್ಮಿಬ್ಬರಿಗೆ ದೈಹಿಕವಾಗಿ ವಯಸ್ಸಾಗಿದ್ದರೂ ಮಾನಸಿಕವಾಗಿ ಇನ್ನೂ ಯುವಕರೇ ಆಗಿದ್ದಿರಿ. ಪ್ರತಿಯೊಂದರಲ್ಲೂ ಅದೇ ಮೊದಲಿನ ಉತ್ಸಾಹ, ಕುತೂಹಲ.ಬದಲಾದ ಕಾಲಕ್ಕನುಗುಣವಾಗಿ ಎಲ್ಲವನ್ನೂ ಬೆರಗುಗಣ್ಣುಗಳಿಂದ ನೋಡುತ್ತಾ- ಆದರೆ ಅನೇಕ ವೃದ್ಧರಂತೆ ಗೊಣಗದೆ, ಹೊಸ ಹೊಸ ವಿಷಯಗಳನ್ನು ಅರಿಯುತ್ತಾ ಪತ್ರಿಕೆಗಳನ್ನು ಓದುತ್ತಾ ನಮ್ಮೊಡನೆ ಚರ್ಚೆಯಲ್ಲಿ ಭಾಗಿಯಾಗುತ್ತಿದ್ದ ನಿಮ್ಮ ಸಾನ್ನಿಧ್ಯ ಯಾವತ್ತೂ ಆಹ್ಲಾದಕರವೇ. ಯಾವಾಗ ನಿನ್ನ ಆರೋಗ್ಯ ತಪ್ಪಿತೋ ಆಗ ಅಪ್ಪ ಮಾನಸಿಕವಾಗಿ ಕುಸಿದುಹೋಗಿ ಮೂರು ವರ್ಷಗಳ ಹಿಂದೆ ನಮ್ಮನ್ನು ಶಾಶ್ವತವಾಗಿ ಅಗಲಿದಾಗ ನಿನ್ನ ಸ್ಥಿತಿ! ಆದರೂ ನೀನು ನಿನ್ನಿಂದ ಯಾರಿಗೂ ತೊಂದರೆಯಾಗಬಾರದೆಂದು ನಿನ್ನ ದುಃಖವನ್ನು ಯಾರಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ.ಈ ಸಂದರ್ಭದಲ್ಲಿ ನೀನು ಹೆಚ್ಚಾಗಿ ಬಯಸುತ್ತಿದ್ದುದು ಯಾರಾದರೂ ನಿನ್ನೊಡನೆ ಕೊಂಚಕಾಲ ಪ್ರೀತಿಯಿಂದ ಮಾತನಾಡಲಿ ಎಂದು. ಆದರೆ ಇಂದಿನ ವೇಗದ ಯುಗದಲ್ಲಿ ಯಾರಿಗೆ ತಾನೇ ಸಮಯವಿರುತ್ತದೆ ಹೇಳು ? ಅಣ್ಣ ಸಾಧ್ಯವಾದಷ್ಟು ಹೊತ್ತು ನಿನ್ನೊಡನೆ ಮಾತನಾಡುತ್ತಾ ಕಾಲ ಕಳೆದರೂ ನಿನಗೆ ಹೆಣ್ಣುಮಕ್ಕಳೊಂದಿಗೆ ಹೆಚ್ಚು ಕಾಲಕಳೆಯಲು ಇಷ್ಟವಾಗುತ್ತಿತ್ತು. ಒಂದು ಕಾಲದಲ್ಲಿ ನಾನು ನಿನ್ನ ಜೊತೆಗಾಗಿ ಹಂಬಲಿಸಿದ ಹಾಗೆ ನೀನು ನನಗಾಗಿ ಕಾಯುತ್ತಿದ್ದೆ. ನನಗೇ ಆಶ್ಚರ್ಯವಾಗುವಂತೆ ನಾನು ನಿನ್ನಲ್ಲಿ ಒಬ್ಬ ಮಗಳನ್ನು ಕಾಣುತ್ತಿದ್ದೆ. ಅದು ನನಗೆ ಸ್ಪಷ್ಟವಾದದ್ದು " ನಿನ್ನೊಡನೆ ಮಾತನಾಡುತ್ತಿದ್ದರೆ ನನ್ನ ಅಮ್ಮನೊಡನೆ ಮಾತನಾಡಿದಂತಾಗುತ್ತದೆ" ಎಂದು ನೀನು ಹೇಳಿದಾಗ.. ಹೆಣ್ಣು ಮಕ್ಕಳಿಲ್ಲದ ನಾನು ನಿನ್ನಲ್ಲಿ ಮಗಳನ್ನು ಕಾಣುತ್ತಿದ್ದೆ. ಪ್ರತಿ ಹೆಣ್ಣಿಗೂ ಒಂದಾದರೂ ಹೆಣ್ಣುಮಗು ಇರಲೇ ಬೇಕಾದ ಅವಶ್ಯಕತೆ ಆಗ ನನಗೆ ಅರ್ಥವಾಯಿತು. ನೀನು ಆ ಕೊರತೆ ನೀಗಿಸಿರುವೆ. ಕೈ ಕಾಲು,ಕೈ ಸ್ವಾಧೀನದಲ್ಲಿಲ್ಲದಿದ್ದರೂ ನಿನ್ನ ಅನೇಕ ಕೆಲಸಗಳನ್ನು ಒಂದೇ ಕೈಯಲ್ಲಿ ಮಾಡಿಕೊಳ್ಳುವ ನಿನ್ನ ಆತ್ಮಾಭಿಮಾನ ನನಗೆ ಸ್ಫೂರ್ತಿಯ ಸೆಲೆ. ಅಂತೂ ನೀನು ನನಗೆ ಮಾತೃ ವಾತ್ಸಲ್ಯವನ್ನೂ ಮತ್ತು ಮಗಳ ಮಮತೆಯನ್ನೂ ಏಕಕಾಲದಲ್ಲಿಯೇ ಕೊಟ್ಟಿರುವೆ. ಈ ಮದರ್ಸ್ ಡೇ ಸಂದರ್ಭದಲ್ಲಿ ನನ್ನದೊಂದು ಪ್ರೀತಿಯ ನಮನ.

ನಿನ್ನ ಮಗಳು

Wednesday, April 8, 2009

ಸಹಸ್ರಶಿರರಾವಣನ ಸಂಹಾರ

ರಾವಣನನ್ನು ಕೊಂದು ಸೀತಾ ಲಕ್ಷ್ಮಣರೊಡನೆ ಅಯೋಧ್ಯೆಗೆ ಹಿಂತಿರುಗಿದ ರಾಮನನ್ನು ಪ್ರತಿಯೊಬ್ಬರೂ - ಮುನಿಗಳು, ಸಾಮಂತ ರಾಜರೂ, ಪ್ರಜೆಗಳೂ ಬಾಯಿತುಂಬಾ ಹೊಗಳಲಾರಂಬಿಸಿದರು. ಒಮ್ಮೆ ಕೆಲವು ಮುನಿಗಳು ತಮ್ಮ ಶಿಷ್ಯರೊಡನೆ ರಾಮನ ಆಸ್ಠಾನಕ್ಕೆ ಬಂದು ಅವನನ್ನು ಹೊಗಳುತ್ತಾ

" ರಾಮ ಅತ್ಯಂತ ಪರಾಕ್ರಮಶಾಲಿಯಾದ ದಶಕಂಠ ರಾವಣನನ್ನು ಕೊಂದ ನಿನ್ನಂತಹ ವೀರರೂ ಶೂರರೂ ಈ ಲೋಕದಲ್ಲಿಯೇ ಇಲ್ಲ. ನಿನ್ನಿಂದಲೇ ನರರೂ ಸುರರೂ ನಿಶ್ಚಿಂತರಾಗಿರುವುದು"

ಎನ್ನುತ್ತಿದ್ದಂತೆಯೇ ,ಸೀತೆ

" ಮುನಿಗಳೇ ನೀವು ಹೊಗಳಿದ್ದರಲ್ಲಿ ಅತಿಶಯೋಕ್ತಿ ಇಲ್ಲ. ಆದರೆ ನೀವೆಲ್ಲ ತಿಳಿದಂತೆ ಅತ್ಯಂತ ಪರಾಕ್ರಮಶಾಲಿಯಾದ ರಾವಣನಿಗಿಂತಲೂ ಶೂರನಾದ ಮತ್ತೊಬ್ಬ ರಾವಣನಿದ್ದಾನೆ. ಅವನೇ ಸಹಸ್ರಶಿರ ರಾವಣ. ಹೆಸರಿಗೆ ತಕ್ಕಂತೆ ಅವನಿಗೆ ಸಹಸ್ರ ತಲೆಗಳಿವೆ. "

ಎನ್ನುತ್ತಿದ್ದಂತೆಯೇ ಎಲ್ಲರೂ ಸೀತೆಯನ್ನು ಸ್ವಲ್ಪ ಅನುಮಾನದ ದೃಷ್ಟಿಯಿಂದ ನೋಡಲಾರಂಬಿಸಿದರು.

ಕೂಡಲೆ ಸೀತೆ " ನಾನು ಸುಳ್ಳು ಹೇಳುತ್ತಿರುವೆನೆಂದು ಭಾವಿಸದಿರಿ. ನಾನು ಹೇಳುತ್ತಿರುವುದೆಲ್ಲಾ ಸತ್ಯ. ನನ್ನ ಬಾಲ್ಯದಲ್ಲಿ ಮುನಿಗಳಿಂದ ದಶಕಂಠ ರಾವಣ ಹಾಗೂ ಸಹಸ್ರಶಿರರಾವಣರ ಬಗ್ಗೆ ಕೇಳಿದ್ದೆ. ಆಗ ಅದನ್ನು ನಾನು ನಂಬಿರಲಿಲ್ಲ. ಆದರೆ ದಶಕಂಠ ರಾವಣನನ್ನು ನೋಡಿದ ಮೇಲೆ ಇನ್ನೊಬ್ಬ ರಾವಣ ಇರಬಹುದೆಂಬ ನಂಬಿಕೆ ಮೂಡಿದೆ.ಜೊತೆಗೆ ಆ ಮುನಿ ತಾನು ಸ್ವತಃ ಅವನನ್ನು ನೋಡಿದ್ದಾಗಿ ಹೇಳಿದ್ದ. ಪುಷ್ಕರ ಎಂಬ ದ್ವೀಪದಲ್ಲಿರುವ ಅವನು ದೇವಾನುದೇವತೆಗಳನ್ನು ತನ್ನ ದಾಸರನ್ನಾಗಿಸಿಕೊಂಡಿದ್ದಾನೆ. ಅವನ ಶೌರ್ಯ ಅಪರಿಮಿತವಾದದ್ದು. ದಶಕಂಠ ರಾವಣನನ್ನು ಕೊಲ್ಲಲೇ ನನ್ನ ಅರಸ ರಾಮ ಎಷ್ಟೊಂದು ಕಷ್ಟ ಎದುರಿಸಬೇಕಾಯಿತು. ಇನ್ನು ಈ ರಾವಣನನ್ನು ಸಂಹರಿಸಲು ಹೇಗೆ ತಾನೇ ಸಾಧ್ಯ?: ಎಂದಳು.

ಅವಳ ಮಾತುಗಳನ್ನು ಕೇಳಿ ಮುನಿಗಳು ನಿಜವಿರಬಹುದೆಂದು ಭಾವಿಸಿದರು. ಆದರೆ ರಾಮನಿಗೆ ಮಾತ್ರ ಅಪಾರ ಕೋಪ ಬಂದಿತು. ಕಣ್ಣುಗಳು ಕೆಂಡದುಂಡೆಗಳಾದುವು. ರೋಷದಿಂದ ಎದ್ದು ನಿಂತು

" ಇಂತಹ ಭೀಕರ ರಾಕ್ಷಸನನ್ನು ಕೊಲ್ಲಲು ಸಾಧ್ಯವಿದೆಯೋ ಇಲ್ಲವೋ ತೋರಿಸುವೆನು. ಯುಧ್ಧಕ್ಕೆ ಸಿದ್ದರಾಗಿ" ಎಂದನು.

ಅತಿ ಶೀಘ್ರದಲ್ಲಿಯೇ ರಾಮನು ಸೀತೆ ಹಾಗೂ ತನ್ನ ಸೈನ್ಯದೊಡನೆ ಪುಷ್ಕರ ದ್ವೀಪಕ್ಕೆ ಹೊರಟನು.ಆ ದ್ವೀಪದ ಬಳಿ ಬಂದು ಇವರು ಸಿಂಹನಾದ ಮಾಡಿದಾಗ ಅಲ್ಲಿಯ ರಾಜ ಸಹಸ್ರಶಿರರಾವಣನಿಗೆ ಈ ನರವಾನರರು ಯಾರೆಂಬುದೇ ಅರ್ಥವಾಗಲಿಲ್ಲ. ತಮ್ಮ ದ್ವೀಪವನ್ನು ನೋಡಲು ಬಂದವರಿರಬಹುದೆಂದುಕೊಂಡ. ಹಾಗೆ ಬಂದವರಾದರೆ ಇಷ್ಟೊಂದು ದೊಡ್ದ ಸೈನ್ಯವೇಕೆ? ಎಂದು ಚಿಂತಿಸುತ್ತಿರುವಾಗಲೇ ಅಶರೀರವಾಣಿಯೊಂದು,

"ಬಂದವರು ನಿನ್ನ ವೈಭವ ನೋಡಲು ಬಂದಿಲ್ಲ. ದಶಕಂಠ ರಾವಣನನ್ನು ಕೊಂದ ಸಾಕ್ಷಾತ್ ಶ್ರೀರಾಮನೇ ನಿನ್ನ ಸಂಹಾರಕ್ಕಾಗಿ ಬಾರಿ ಸೈನ್ಯದೊಡನೆ ಬಂದಿದ್ದಾನೆ. ಮರೆಯ ಬೇಡ ಅವನು ದೈವಾಂಶಸಂಭೂತನು "

ಎಂದು ಹೇಳಿತು.ಈ ಮಾತುಗಳನ್ನು ಕೇಳಿ ಆ ರಾವಣನ ಕೋಪ ಮುಗಿಲಿಗೇರಿತು.ಕೂಡಲೇ ತನ್ನ ಸೈನ್ಯಕ್ಕೆ ಯುದ್ಧ ಮಾಡಲು ಆಜ್ಞೆ ಮಾಡಿದನು. ವಿಭೀಷನ ಕಡೆಯ ರಾಕ್ಷಸರೂ, ನರರೂ ಉತ್ಸಾಹದಿಂದ ಯುದ್ಧ ಪ್ರಾರಂಬಿಸಿದರು.ಅತ್ತ ಆ ರಾವಣನ ಸೈನ್ಯವೂ ಅಷ್ಟೇ ಉತ್ಸಾಹದಿಂದ ಯುದ್ಧ ಮುಂದುವರಿಸಿತು. ಎರಡೂ ಕಡೆಯ ಸೈನಿಕರೂ ಪ್ರಾಣದ ಹಂಗು ತೊರೆದು ಹೋರಾಡತೊಡಗಿದರು. ಸರಿಸಮಾನ ಹೋರಾಟದಿಂದ ಜಯಲಕ್ಷ್ಮಿ ಯಾರಕಡೆಗೂ ಬಾಗಲಿಲ್ಲ. ಆದರೆ ರಕ್ತಪಾತ ಮಾತ್ರ ಮಿತಿಮೀರಿತು. ಯಾವುದೇ ಏರಿಳಿತವಿಲ್ಲದ ಈ ಯುದ್ಧ ಎರಡೂ ಕಡೆಯ ಸೈನಿಕರಲ್ಲಿ ಮತ್ತಷ್ಟು ರೋಷ ಕೆರಳಿಸಿತು. ಕ್ರಮೇಣ ರಾವಣನ ಸೈನ್ಯ ಮೇಲುಗೈ ಸಾಧಿಸುತ್ತಾ ರಾಮನ ಕಡೆಯ ನರಸೇನೆ ಹಾಗೂ ರಾಕ್ಷಸ ಸೇನೆಯನ್ನು ಸೋಲಿಸಿತು. ರಾವಣನ ಸೈನಿಕರು ವಿಜಯೋತ್ಸಾಹದಿಂದ ಉನ್ಮತ್ತರಾಗಿ ಶತ್ರುಪಾಳಯದತ್ತ ಮತ್ತಷ್ಟು ಮುನ್ನುಗ್ಗಿದರು. ಈ ಹಂತದಲ್ಲಿ ಅವರಿಗೆ ಆಶ್ಚರ್ಯವಾಗುವ ರೀತಿಯಲ್ಲಿ ಕಪಿಸೈನ್ಯ ಎದುರಾಯಿತು. ನಿರೀಕ್ಷೆಗೂ ಮೀರಿ ಆ ಸೈನ್ಯ ರಾಕ್ಷಸರ ಮೇಲೆ ದಾಳಿ ಮಾಡಿತು. ದೀರ್ಘ ಹೋರಾಟದನಂತರ ಸಹಸ್ರಶಿರರಾವಣನ ಸೈನ್ಯ ಸಂಪೂರ್ಣ ನೆಲಕಚ್ಚಿತು. ಈ ಅನಿರೀಕ್ಷಿತ ವಿಜಯವನ್ನು ನೋಡಿ ಆಕಾಶದಲ್ಲಿ ನೆರೆದಿದ್ದ ದೇವತೆಗಳು ಸಂತೋಷದಿಂದ ಮೂಕವಿಸ್ಮಿತರಾದರು.

ಯಃಕಶ್ಚಿತ್ ಕೋತಿಗಳಿಂದ ತಮ್ಮ ಸೈನ್ಯ ಸೋತ ವಿಷಯ ಕೇಳಿ ರಾವಣನು ಕೆರಳಿ ಕೆಂಡವಾಗಿ ತಾನೇ ರಣಭೂಮಿಗೆ ಬಂದನು. ಅಲ್ಲಿಯ ದೃಶ್ಯ ನೋಡಿ ಅವನ ಕೋಪ ತಣ್ಣಗಾಯಿತು. ನರ ವಾನರರ ಬಗ್ಗೆ ಕೇವಲ ಕಿವಿಯಿಂದ ಕೇಳಿದ್ದ ಅವನು ಈಗ ಸ್ವತಃ ಕಣ್ಣಾರೆ ಕಪಿಗಳನ್ನು , ನರ ಸೈನ್ಯವನ್ನುನೋಡಿ

" ಇವರು ನನಗೆ ಸರಿಸಮಾನರೆ? ಇವರ ಮೇಲೆ ಕೈಮಾಡಿದರೆ ಜನರು ನನ್ನನ್ನು ನೋಡಿ ಜರೆಯುತ್ತಾರೆ. ಸುಮ್ಮನಿದ್ದು ಹಿಂತಿರುಗಿದರೆ ಆಡಿಕೊಂಡು ನಗುತ್ತಾರೆ. ಏನು ಮಾಡಲಿ ? "

ಎಂದು ಚಿಂತಿಸಿ ಒಂದು ನಿರ್ಧಾರಕ್ಕೆ ಬಂದನು.ಇವರನ್ನು ಯುದ್ಧದಲ್ಲಿ ಗಾಸಿಗೊಳಿಸಿದರೆ ನನಗೇನು ಲಾಭ ? ಇವರಿಗೆ ಸರಿಯಾದ ಶಾಸ್ತಿ ಮಾಡುವೆನು , ಎಂದು ರಾಮನ ಸೈನ್ಯದ ಮೇಲೆ ವಾಯುವ್ಯಾಸ್ಟ್ರ ಪ್ರಯೋಗಿಸಿದನು. ನೋಡನೋಡುತ್ತಿದ್ದಂತೆಯೇ ಆ ಅಸ್ತ್ರದ ಪ್ರಭಾವದಿಂದ ರಾಮನ ಸೈನ್ಯವಿಡೀ ಬಿರುಗಾಳಿಗೆ ಸಿಕ್ಕ ತರಗೆಲೆಗಳಂತೆ ಹಾರಿ ಸಮುದ್ರದಾಚೆ ತಮ್ಮ ಸ್ವಸ್ಥಾನದಲ್ಲಿ ಬಿದ್ದಿತು. ಅವರೆಲ್ಲರೂ ಯುದ್ಧದಲ್ಲಿ ಸೋತು ಸುಸ್ತಾಗಿ ಪುಷ್ಕರ ದ್ವೀಪದಿಂದಾಚೆಗೆ ಈಜಿಕೊಂಡು ಹೋಗುವ ಶ್ರಮವನ್ನು ರಾವಣ ತಪ್ಪಿಸಿದನೋ ಎಂಬಂತೆ ಆ ದೃಶ್ಯವಿತ್ತು. ಈಗ ರಾವಣನ ಎದುರಿಗೆ ಕೇವಲ ರಾಮ,ಸೀತೆಮತ್ತು ಋಷಿಗಳು ಮಾತ್ರ ಉಳಿದರು . ಈ ವಿಚಿತ್ರ ಬೆಳವಣಿಗೆಯಿಂದ ಅಚ್ಚರಿಗೊಂಡ ರಾಮನು ಸೀತೆಯ ಕಡೆ ನೋಡಿದರೆ ಅವಳು ಮುಗುಳ್ನಗುತ್ತಿದ್ದಾಳೆ!!.ಮುನಿಗಳು ಹೆದರುತ್ತಿದ್ದಾರೆ.

ಬಹುಬೇಗ ರಾಮನು ತನ್ನ ಅಚ್ಚರಿಯನ್ನು ಬದಿಗೊತ್ತಿ ತನ್ನ ಬಿಲ್ಲನ್ನು ಹೆದೆಗೇರಿಸಿ ಒಮ್ಮೆ ಧನುಷ್ಟಂಕಾರ ಮಾಡಿದನು.ಆ ದ್ವನಿಗೆ ರಾಕ್ಷಸರು ಹೆದರಿದರೂ ಸಹಸ್ರಮುಖನು ಮಾತ್ರ ಹೆದರದೆ ತನ್ನವರನ್ನು ಹುರಿದುಂಬಿಸಿ ಯುದ್ಧ ಪ್ರಾರಂಬಿಸಿದನು.ಅವನ ಮತ್ತು ರಾವಣನ ನಡುವೆ ಸಮಬಲದ ಹೋರಾಟ ಸಾಗಿತು.ರಾಮನು ಬಿಟ್ಟ ಬಾಣಗಳಿಗೆ ಅವನ ಬಳಿ ಒಂದು ಪ್ರತ್ಯಸ್ತ್ರ ಇದ್ದೇ ಇರುತ್ತಿತ್ತು. ಕಡೆಗೆ ರಾಮನು ಇವನನ್ನು ಹೇಗಾದರೂ ಸೋಲಿಸಲೇಬೇಕೆಂದು ರಾವಣನನ್ನು ಕೊಂದ ದಿವ್ಯಾಸ್ತ್ರ(ರಾಮಬಾಣ) ಪ್ರಯೋಗಿಸಿದನು. ಅದು ವೇಗವಾಗಿ ಬೆಂಕಿಯುಗುಳುತ್ತಾ ರಾವಣನ ಬಳಿ ಬಂತು. ಇನ್ನೇನು ಅವನ ಶಿರಗಳು ನೆಲಕ್ಕುದುರಿದುವು ಎನ್ನುವಷ್ಟರಲ್ಲಿ ಸಹಸ್ರಶಿರನು ಮಿಂಚಿನಂತೆ ಆ ಬಾಣವನ್ನು ಮುರಿದು ಮತ್ತೊಂದು ತೀಕ್ಷ್ಣ ಬಾಣವನ್ನು ಪ್ರಯೋಗಿಸಿದನು. ಆ ಬಾಣವು ವೇಗವಾಗಿ ಬಂದು ರಾಮನ ಎದೆಗೆ ತಾಗಿ ಅವನು ನೆಲಕ್ಕುರುಳಿದನು. ದೇವತೆಗಳ ಹಾಹಾಕಾರ ಹೇಳತೀರದು. ಮುನಿಗಳಂತೂ ರಾಕ್ಷಸನ ಬಾಯಿಗೆ ಬಿದ್ದೆವೆಂದು ಮರುಗಿದರು. ಯಾರಮುಖದಲ್ಲಿಯೂ ನಗುವಿಲ್ಲದಿದ್ದರೂ ಸೀತೆ ಮಾತ್ರ ಮುಗುಳ್ನಗುತ್ತಿದ್ದಳು.ಆ ತಪಸ್ವಿಗಳು ಸೀತೆಯ ಮುಖ ನೋಡಿ

"ಅಮ್ಮ, ನೀನು ಹೇಳಿದ್ದು ನಿಜ. ಈ ರಕ್ಕಸ ಮಹಾನ್ ಶೂರ. ಅವನನ್ನು ಯಾರು ಗೆಲ್ಲಲೂ ಸಾಧ್ಯವಿಲ್ಲ. ರಾಮನಿಗೇ ಆಗಲಿಲ್ಲ. ಇನ್ನು ನಮಗೆ ನೀನೇ ಗತಿ. ನಿನ್ನನ್ನು ಎಲ್ಲರೂ ಆದಿಶಕ್ತಿ ಎನ್ನುತ್ತಾರೆ. ಬಹುಶಃ ನೀನೇ ನಮ್ಮರಕ್ಷಕಿ. ಯಾವವಿಧದಲ್ಲಾದರೂ ನಮ್ಮನ್ನು ಕಾಪಾಡು"

ಎಂದು ಬೇಡಿಕೊಂಡರು.

ಅವರು ಸೀತೆಯನ್ನು ಹೊಗಳಿ ಬೇಡಿಕೊಳ್ಳುತ್ತಿರುವಂತೆಯೇ ಸೀತೆಯ ರೂಪ ಬದಲಾಯಿತು.

ತಲೆ ಕೂದಲು ಕೆದರಿತು, ಕಣ್ಣು ಕೆಂಪಾಯಿತು, ಸೌಮ್ಯ ಮುಖ ಉರಿಮುಖವಾಯಿತು.ಕೋರೆಹಲ್ಲು ಮೂಡಿ ನಾಲಗೆ ನೀಳವಾಯಿತು.ನಾಲ್ಕು ತೋಳುಗಳು,ಕೊರಳಲ್ಲಿ ರುಂಡಮಾಲೆ, ಕೈಯಲ್ಲಿ ಎಲುಬಿನ ಒಡವೆ - ಒಟ್ಟಿನಲ್ಲಿ ಮಹಾಕಾಳಿಯಂತೆ ಕಾಣುತ್ತಿದ್ದ ಅವಳು ಹಾರಿ ರಾವಣನೊಡನೆ ಹೋರಾಡಿದಳು.ಆದರೆ ಅವಳ ಯುದ್ಧವನ್ನು ಯಾರೂ ನೋಡಲಾಗಲಿಲ್ಲ.ಕಣ್ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ ರಾವಣನ ಸಾವಿರ ತಲೆಗಳೂ ನೆಲಕ್ಕುದುರಿದ್ದವು.ಆದರೆ ಸೀತೆಯ ಮಹಾಕಾಳಿಯ ರೋಷ ಕಡಿಮೆಯಾಗಿರಲಿಲ್ಲ. ಕೂಡಲೇ ಬ್ರಹ್ಮಾದಿ ದೇವತೆಗಳು ಮತ್ತು ಮುನಿಗಳು ಅವಳನ್ನು ಸ್ತುತಿಸಿ ಶಾಂತಗೊಳಿಸಿದರು. ನಂತರ ಸೀತೆಯ ಇಚ್ಚೆಯಂತೆ ರಾಮನನ್ನು ಎಬ್ಬಿಸಿದರು. ಎಚ್ಚೆತ್ತ ರಾಮನು

" ಎಲ್ಲಿ ಆ ದುಷ್ಟ ರಾವಣ? ನನ್ನ ಬಾಣ ಮುರಿಯುವಷ್ಟು ಧೈರ್ಯವೇ ಅವನಿಗೆ? "

ಎಂದು ಹೇಳುತ್ತಾ ಹುಬ್ಬು ಗಂಟಿಕ್ಕಿ ಬಿಲ್ಲನ್ನು ಎತ್ತಿಕೊಂಡು.ಎದುರಿಗೆ ನೋಡಿದರೆ ಸೀತೆಯ ಮಹಾಕಾಳಿ ಅವತಾರ. ಕೂಡಲೇ ಅವನ ಕೈಯಲ್ಲಿದ್ದ ಬಿಲ್ಲು ತಾನೇತಾನಾಗಿ ಜಾರಿ ಕೆಳಗೆ ಬಿತ್ತು. ಮುನಿಗಳು ಅವನಿಗೆ ಎಲ್ಲಾ ವಿವರಗಳನ್ನು ತಿಳಿಸಿದರು.ಆಗ ರಾಮನಿಗೆ ಸೀತೆಯ ಶಕ್ತಿಯ ಆಳ ತಿಳಿಯಿತು.ಆದರೆ ಪ್ರಜೆಗಳಿಗೆ, ಸೈನಿಕರಿಗೆ, ಇನ್ಯಾರಿಗೂ ರಾವಣನನ್ನು ಕೊಂದವಳು ಸೀತೆ ಎಂದು ತಿಳಿಯಲಿಲ್ಲ.

ಎಲ್ಲರೂ ಯುದ್ಧಭೂಮಿಯಿಂದ ಹಿಂತಿರುಗಿದರು

ಹಿಂದಿರುಗಿ ಅಯೋಧ್ಯೆಗೆ ಮರಳಿದಾಗ ಅವನ ಶೌರ್ಯವನ್ನು ಜನರು ಹಾಡಿಹೊಗಳುತ್ತಿದ್ದರೆ , ರಾಮನು ನಾಚಿಕೆಯಿಂದ ಸೀತೆಯ ಮುಖ ನೋಡಿದ. ಅವಳು ಮಾತ್ರ ಎಂದಿನಂತೆ ಸೌಮ್ಯವಾಗಿ ಮುಗುಳ್ನಗುತ್ತಿದ್ದಳು.ರಾಮನ ಅಹಂಕಾರ ಮರೆಯಾಯಿತು. ಅಂದಿನಿಂದ ರಾಮನು ಯಾರ ಮುಂದೂ ದಶಕಂಠ ರಾವಣನನ್ನು ಕೊಂದ ಪ್ರತಾಪವನ್ನು ಕೊಚ್ಚಿ ಕೊಳ್ಳುತ್ತಿರಲಿಲ್ಲ.!!

(ಅದ್ಭುತ ರಾಮಾಯಣದಿಂದ ಆಯ್ದ ಭಾಗ)