Sunday, May 10, 2009

ಪ್ರೀತಿಯ ಅಮ್ಮನಿಗೊಂದು ಮಮತೆಯ ಓಲೆ





ನಾನು ಪುಟ್ಟಬಾಲಕಿಯಾಗಿಯಾಗಿದ್ದಾಗ ನೀನು ನನಗೆ ಹೇಗೆ ಕಂಡಿದ್ದೆ ?ನಪಿಸಿಕೊಳ್ಳಲು ಪ್ರಯತ್ನಿಸುವೆ. ಪ್ರತಿದಿನ ನಮಗೆ ಹಗಲಾಗುತ್ತಿದ್ದುದೇ ನಿನ್ನ ಮಧುರ ಮಂಜುಳ ಗಾನ ಕಿವಿಯ ಮೇಲೆ ಬಿದ್ದಾಗ. ಮುಂಜಾನೆ ನಾಲ್ಕು ಗಂಟೆಗೇ ಎದ್ದು ಸ್ನಾನ ಮಾಡಿ ಸರಳವಾಗಿ ಜಡೆ ಹೆಣೆದು, ಹೂ ಮುಡಿದು ( ಅದಂತೂ ಕಡ್ಡಾಯ. ಹೂವಿಲ್ಲದ ನಿನ್ನನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ) ಹಾಡಿಕೊಳ್ಳುತ್ತಾ ದೇವರಪೂಜೆ ಮಾಡುವಾಗ ಪಂಚೇಂದ್ರಿಯಗಳಲ್ಲಿ ಮೊದಲು ಎಚ್ಚರಗೊಳ್ಳುತ್ತಿದ್ದುದು ಕಿವಿ ( ಶ್ರವಣೇಂದ್ರಿಯ!) ನಂತರ ದೇವರಮನೆಯಲ್ಲಿ ನೀನು ಹಚ್ಚಿದ ಊದಿನಕಡ್ಡಿಯ ಪರಿಮಳವು ,ಅಡಿಗೆಮನೆಯ ಡಿಕಾಕ್ಷನ್ನಿನ್ನ ಸುವಾಸನೆಯೊಂದಿಗೆ ಬೆರೆತು ಪೂರ್ಣ ಎಚ್ಚರವಾಗುತ್ತಿತ್ತು. ಮನೆ ತುಂಬಾ ಜನರಿದ್ದುದರಿಂದ ಬೆಳಗಾದ ನಂತರ ನಿನ್ನೊಡನೆ ಕಾಲಕಳೆದಿದ್ದೇ ನೆನಪಿಲ್ಲ. ನೀನು ಯಾರಮೇಲೂ ಕೋಪಮಾಡಿಕೊಂಡಿದ್ದು ನೆನಪಿಲ್ಲ. ಆದರೂ ಒಂದು ಪ್ರಸಂಗ ಮಾತ್ರ ಹಸಿರಾಗಿದೆ.

ನನ್ನ ಹಿರಿಯ ಅಣ್ಣಂದಿರಿಗೆ ಆ ಕಾಲದಲ್ಲಿಯೇ ಟ್ರೇಡ್ ಆಟ ಬಹಳ ಇಷ್ಟ.ರಜೆಯಲ್ಲಿ ಮಾವನ ಮನೆಗೆ ಹೋಗಿದ್ದಾಗ ಅವರ ಮಕ್ಕಳು ಆಡುತ್ತಿದ್ದ ಆಟ ನೋಡಿ ಅಣ್ಣಂದಿರು ಮನೆಯಲ್ಲಿರುವ ಪೇಪರ್ ಮತ್ತು ದಪ್ಪ ಕಾರ್ಡ್ಗಳಿಂದ ಅದೆಷ್ಟು ಚೆನ್ನಾಗಿ ಇಡೀ ಸೆಟ್ ಸಿದ್ಧಪಡಿಸಿದ್ದರು.ಅಪ್ಪ ಆಫೀಸಿಗೆ ಹೋದ ಕೂಡಲೇ ಆಟಕ್ಕೆ ಕುಳಿತರೆ ನೀನೆಷ್ಟು ಕರೆದರೂ ಜಪ್ಪಯ್ಯ ಎನ್ನುತ್ತಿರಲಿಲ್ಲ. ಆಗಲೂ ನೀನು ಜೋರಾಗಿ ಬೈದದ್ದನ್ನು ನಾ ಕಾಣೆ! ಆದರೂ ಒಂದು ದಿನ ನಿನಗೇಕೆ ಸಹನೆ ಮೀರಿತ್ತೋ ತಿಳಿಯೆ , ಅವರು ಆಡುತ್ತಿರುವಲ್ಲಿಗೆ ಹೋಗಿ ಆಟದ ಎಲ್ಲಾ ಸಾಮಗ್ರಿಗಳನ್ನು ಕಿತ್ತುಕೊಂಡು ಹೋಗಿ ಉರಿಯುತ್ತಿರುವ ಬಚ್ಚಲೊಲೆಗೆ ಹಾಕಿ ಬಿಟ್ಟೆಯಲ್ಲ! ಆ ಒಂದು ಘಟನೆ ಬಿಟ್ಟರೆ ನೀನು ಕೋಪಿಸಿಕೊಂಡದ್ದನ್ನೇ ನಾ ಕಾಣೆ. ಸಾಮಾನ್ಯವಾಗಿ ಮಕ್ಕಳಲ್ಲಿ ಯಾರಾದರೂ ಓದದೆ ಕಾಲಕಳೆಯುತ್ತಿದ್ದರೆ ನೀನು ನೇರವಾಗಿ ಬೈಯದೆ ನಿನ್ನ ಪಾಡಿಗೆ ಅಡುಗೆ ಮಾಡುತ್ತಾ " ಕಾಲ ಕಳೆದೆನಲ್ಲಾ ಜ್ಞಾನ ಬರಲಿಲ್ಲಾ ಕಾಲನವರು ಬಂದು ಕೇಳಿದರೇನು ಹೇಳಲಿ ಸೊಲ್ಲಾ..." ಎಂದು ದಾಸರ ಪದ ಹಾಡುತ್ತಿದ್ದೆ. ಪ್ರತಿಯೊಂದಕ್ಕೂ ಹಾಡಿನ ಮೂಲಕವೇ ಉತ್ತರಿಸುತ್ತಿದ್ದ ನಿನ್ನಲ್ಲಿ ಹಾಡಿನ ಭಂಡಾರವೇ ಇತ್ತು.ಈಗಲೂ ಇದೆ.

ಶಾಲೆಗೆ ಹೋಗುವಾಗ ಇತರ ಮಕ್ಕಳಂತೆ ನಮಗೂ ಎರಡು ಡಬ್ಬಿಗಳಿರುವ ಕ್ಯಾರಿಯರ್ ಬೇಕೆಂದು ಹಠ ಮಾಡಿದಾಗ ನೀನು ಒಂದೇ ಉದ್ದ ಕ್ಯಾರಿಯರ್ನಲ್ಲಿ ಕೆಳಗೆ ಮೊಸರನ್ನ ಹಾಕಿ. ಮೇಲೆ ಸಾರನ್ನ ಹಾಕಿಕೊಡುತ್ತಿದ್ದೆ. ಗೆಳತಿಯರಿಗೆಲ್ಲಾ ಇದೊಂದು ಅದ್ಭುತ!. ಸಾರನ್ನ ಮುಗಿದು ಮೊಸರನ್ನ ಪ್ರಾರಂಭವಾಗುವುದನ್ನು ಕುತೂಹಲದಿಂದ ಎದುರು ನೋಡುತ್ತಿದ್ದರು.ಅವೆರಡೂ ಯಾವತ್ತೂ ಕಲಸುಮೇಲೋಗರವಾಗಿರಲಿಲ್ಲ.

ಬಾಲ್ಯದಲ್ಲಿ ನೀನಿಲ್ಲದಿದ್ದರೆ ಆಗುವುದೇ ಇಲ್ಲ ಎಂದು ನಾನು ಹಠ ಮಾಡಿದ ಸಂದರ್ಭ ಯಾವುದಾದರೂ ಇದೆಯೇ ? ಎಂದು ಯೋಚಿಸಿದರೆ ಉಹೂ ಇಲ್ಲವೇ ಇಲ್ಲ. ಮನೆ ತುಂಬಾ ಜನರಿದ್ದುದರಿಂದ, ನಮ್ಮ ಅಗತ್ಯಗಳನ್ನು ಯಾರಾದರೊಬ್ಬರು ಪೂರೈಸುತ್ತಿದ್ದುದರಿಂದ , ಎರಡು ಮೂರು ವರ್ಷ ವ್ಯತ್ಯಾಸದ ಅಕ್ಕ, ಅಣ್ಣ ತಂಗಿ ಇದ್ದುದರಿಂದ ಹೀಗಾಗಿರಬಹುದೇ? ನೀನು ಬೇಕೇ ಬೇಕು, ನಿನ್ನೊಡನೆ ಹೆಚ್ಚಿಗೆ ಮಾತನಾಡಿ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳಬೇಕೆನಿಸಿದ್ದು ನನ್ನ ಮದುವೆಯ ನಂತರವೇ.ನಾನು ಬೇರೆ ಊರಿನಲ್ಲಿದ್ದುದರಿಂದ ಪುಟ್ಟ ಮಗನೊಂದಿಗೆ ವರ್ಷಕ್ಕೊಮ್ಮೆ ತವರಿಗೆ ಬಂದಾಗ ನೀನು ಅಪ್ಪ ನಮ್ಮನ್ನು ನೋಡಿಕೊಳ್ಳುತ್ತಿದ್ದ ರೀತಿ ಈಗಲೂ ಕಣ್ತುಂಬುವಂತೆ ಮಾಡುತ್ತದೆ. ಮದುವೆಯಾದ ಹೊಸತರಲ್ಲಿ ತವರುಮನೆಯ ಗೀಳು ಅಪಾರವಿತ್ತು. ಪುಟ್ಟ ಮಕ್ಕಳಿರುವ ಹೆಣ್ಣುಮಕ್ಕಳಿಗೆ ಅಮ್ಮನ ಅಗತ್ಯ, ಅನಿವಾರ್ಯತೆ ಎಷ್ಟೆಂಬುದು ಕ್ರಮೇಣ ಅರ್ಥವಾಗುತ್ತಾ ಹೋಯಿತು. ದಿನ ಕಳೆದಂತೆ ನಮ್ಮ ಮಕ್ಕಳು ದೊಡ್ಡವರಾದಂತೆ ಅವರ ಓದು. ಮನೆಯ ಕೆಲಸ , ನೌಕರಿಯ ಜವಾಬ್ದಾರಿ ಇವೆಲ್ಲದರ ನಡುವೆ ನಿನ್ನನ್ನು ಭೇಟಿಯಾಗುವುದೇ ಅಪರೂಪವಾಗುತ್ತಾ ಬಂತು. ಎಂತಹ ವಿಪರ್ಯಾಸ! ಮೊದಲು ನೂರಾರು ಮೈಲು ದೂರವಿರುವ ತವರು ಮನೆಗೆ ಓಡಿ ಬರುತ್ತಿದ್ದ ನಾನು, ಈಗ ಇಬ್ಬರೂ ಒಂದೇ ಊರಲ್ಲಿದ್ದರೂ ಭೇಟಿಯಾಗುವುದು ಬೆರಳೆಣಿಕೆಯಷ್ಟು ಬಾರಿಯಾಗಿತ್ತು. ಆದರೆ ಕಾಲಚಕ್ರ ಹಾಗೇ ನಿಲ್ಲಲಿಲ್ಲ ನೋಡು.ನನ್ನ ಮಗ ಬೆಳೆದು ತನ್ನ ಕಾಲ ಮೇಲೆ ನಿಂತು ಸದಾಕಾಲ ಅಮೆರಿಕ, ಆಸ್ಟ್ರೇಲಿಯಾ ಎಂದು ಸುತ್ತುತ್ತಾ ಇರುವಾಗ , ಸಹಜವಾಗಿಯೇ ನನ್ನ ಅಗತ್ಯ ಅವನಿಗೆ ಕಡಿಮೆಯಾಯಿತು.ಆಗ ಶುರುವಾಯಿತು ನೋಡು, ಹೆಣ್ಣುಮಕ್ಕಳಿಲ್ಲದಿದ್ದ ನನಗೆ ನನ್ನ ಮನದ ಭಾವನೆಗಳನ್ನು ನಿನ್ನೊಡನೆ ಹಂಚಿಕೊಳ್ಳಬೇಕೆಂಬ ತುಡಿತ..ಸದಾ ಹಸನ್ಮುಖಿಯಾಗಿರುತ್ತಾ ನಮ್ಮ ಎಲ್ಲಾ ಮಾತುಗಳನ್ನೂ ಬೇಸರವಿಲ್ಲದೆ ಕೇಳಿಸಿಕೊಳ್ಳುತ್ತಾ ನೀನೂ ಅಪ್ಪಾ ನನ್ನ ದೈನಂದಿನ ಬೇಸರಗಳನ್ನು ಹೋಗಲಾಡಿಸುತ್ತಾ ಹುರಿದುಂಬಿಸುವ ಮಾತನ್ನಾಡುತ್ತಿದ್ದರೆ ಅದೆಷ್ಟು ನೆಮ್ಮದಿ ಮನಸ್ಸಿಗೆ. ಆದರೆ ವಿಧಿ ಎಂಬುದೊಂದಿದೆಯಲ್ಲಾ. ಸದಾಕಾಲ ಚಟುವಟಿಕೆಯಿಂದಿರುತ್ತಿದ್ದ ನಿನ್ನ ಬಲಗೈ ಬಲಗಾಲು ನಿಷ್ಕ್ರಿಯವಾದಾಗ ನೀನು ಬದುಕನ್ನು ಎದುರಿಸಿದ ರೀತಿ ಸ್ತುತ್ಯಾರ್ಹ. ನಿನಗಿಂತ ನಿನ್ನ ಸ್ಥಿತಿಗೆ ಹೆಚ್ಚಾಗಿ ನೋವನುಭವಿಸಿದವರು ಅಪ್ಪ.ವಯಸ್ಸಿನ ಪರಿವೆ ಇಲ್ಲದೆ ಸದಾಕಾಲ ಚಿಟುವಟಿಕೆಯಿಂದಿದ್ದ ನಿನಗೆ ಇಳಿವಯಸ್ಸಿನಲ್ಲಿ ಹೀಗಾದದ್ದು ಅವರ ನೋವಿಗೆ ಮೂಲ ಕಾರಣ!. ನಿಮ್ಮಿಬ್ಬರಿಗೆ ದೈಹಿಕವಾಗಿ ವಯಸ್ಸಾಗಿದ್ದರೂ ಮಾನಸಿಕವಾಗಿ ಇನ್ನೂ ಯುವಕರೇ ಆಗಿದ್ದಿರಿ. ಪ್ರತಿಯೊಂದರಲ್ಲೂ ಅದೇ ಮೊದಲಿನ ಉತ್ಸಾಹ, ಕುತೂಹಲ.ಬದಲಾದ ಕಾಲಕ್ಕನುಗುಣವಾಗಿ ಎಲ್ಲವನ್ನೂ ಬೆರಗುಗಣ್ಣುಗಳಿಂದ ನೋಡುತ್ತಾ- ಆದರೆ ಅನೇಕ ವೃದ್ಧರಂತೆ ಗೊಣಗದೆ, ಹೊಸ ಹೊಸ ವಿಷಯಗಳನ್ನು ಅರಿಯುತ್ತಾ ಪತ್ರಿಕೆಗಳನ್ನು ಓದುತ್ತಾ ನಮ್ಮೊಡನೆ ಚರ್ಚೆಯಲ್ಲಿ ಭಾಗಿಯಾಗುತ್ತಿದ್ದ ನಿಮ್ಮ ಸಾನ್ನಿಧ್ಯ ಯಾವತ್ತೂ ಆಹ್ಲಾದಕರವೇ. ಯಾವಾಗ ನಿನ್ನ ಆರೋಗ್ಯ ತಪ್ಪಿತೋ ಆಗ ಅಪ್ಪ ಮಾನಸಿಕವಾಗಿ ಕುಸಿದುಹೋಗಿ ಮೂರು ವರ್ಷಗಳ ಹಿಂದೆ ನಮ್ಮನ್ನು ಶಾಶ್ವತವಾಗಿ ಅಗಲಿದಾಗ ನಿನ್ನ ಸ್ಥಿತಿ! ಆದರೂ ನೀನು ನಿನ್ನಿಂದ ಯಾರಿಗೂ ತೊಂದರೆಯಾಗಬಾರದೆಂದು ನಿನ್ನ ದುಃಖವನ್ನು ಯಾರಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ.ಈ ಸಂದರ್ಭದಲ್ಲಿ ನೀನು ಹೆಚ್ಚಾಗಿ ಬಯಸುತ್ತಿದ್ದುದು ಯಾರಾದರೂ ನಿನ್ನೊಡನೆ ಕೊಂಚಕಾಲ ಪ್ರೀತಿಯಿಂದ ಮಾತನಾಡಲಿ ಎಂದು. ಆದರೆ ಇಂದಿನ ವೇಗದ ಯುಗದಲ್ಲಿ ಯಾರಿಗೆ ತಾನೇ ಸಮಯವಿರುತ್ತದೆ ಹೇಳು ? ಅಣ್ಣ ಸಾಧ್ಯವಾದಷ್ಟು ಹೊತ್ತು ನಿನ್ನೊಡನೆ ಮಾತನಾಡುತ್ತಾ ಕಾಲ ಕಳೆದರೂ ನಿನಗೆ ಹೆಣ್ಣುಮಕ್ಕಳೊಂದಿಗೆ ಹೆಚ್ಚು ಕಾಲಕಳೆಯಲು ಇಷ್ಟವಾಗುತ್ತಿತ್ತು. ಒಂದು ಕಾಲದಲ್ಲಿ ನಾನು ನಿನ್ನ ಜೊತೆಗಾಗಿ ಹಂಬಲಿಸಿದ ಹಾಗೆ ನೀನು ನನಗಾಗಿ ಕಾಯುತ್ತಿದ್ದೆ. ನನಗೇ ಆಶ್ಚರ್ಯವಾಗುವಂತೆ ನಾನು ನಿನ್ನಲ್ಲಿ ಒಬ್ಬ ಮಗಳನ್ನು ಕಾಣುತ್ತಿದ್ದೆ. ಅದು ನನಗೆ ಸ್ಪಷ್ಟವಾದದ್ದು " ನಿನ್ನೊಡನೆ ಮಾತನಾಡುತ್ತಿದ್ದರೆ ನನ್ನ ಅಮ್ಮನೊಡನೆ ಮಾತನಾಡಿದಂತಾಗುತ್ತದೆ" ಎಂದು ನೀನು ಹೇಳಿದಾಗ.. ಹೆಣ್ಣು ಮಕ್ಕಳಿಲ್ಲದ ನಾನು ನಿನ್ನಲ್ಲಿ ಮಗಳನ್ನು ಕಾಣುತ್ತಿದ್ದೆ. ಪ್ರತಿ ಹೆಣ್ಣಿಗೂ ಒಂದಾದರೂ ಹೆಣ್ಣುಮಗು ಇರಲೇ ಬೇಕಾದ ಅವಶ್ಯಕತೆ ಆಗ ನನಗೆ ಅರ್ಥವಾಯಿತು. ನೀನು ಆ ಕೊರತೆ ನೀಗಿಸಿರುವೆ. ಕೈ ಕಾಲು,ಕೈ ಸ್ವಾಧೀನದಲ್ಲಿಲ್ಲದಿದ್ದರೂ ನಿನ್ನ ಅನೇಕ ಕೆಲಸಗಳನ್ನು ಒಂದೇ ಕೈಯಲ್ಲಿ ಮಾಡಿಕೊಳ್ಳುವ ನಿನ್ನ ಆತ್ಮಾಭಿಮಾನ ನನಗೆ ಸ್ಫೂರ್ತಿಯ ಸೆಲೆ. ಅಂತೂ ನೀನು ನನಗೆ ಮಾತೃ ವಾತ್ಸಲ್ಯವನ್ನೂ ಮತ್ತು ಮಗಳ ಮಮತೆಯನ್ನೂ ಏಕಕಾಲದಲ್ಲಿಯೇ ಕೊಟ್ಟಿರುವೆ. ಈ ಮದರ್ಸ್ ಡೇ ಸಂದರ್ಭದಲ್ಲಿ ನನ್ನದೊಂದು ಪ್ರೀತಿಯ ನಮನ.

ನಿನ್ನ ಮಗಳು

13 comments:

  1. ಮದರ್ಸ್ ಡೇ ಸ೦ದರ್ಭಕ್ಕೊ೦ದು ಒಪ್ಪುವ ಲೇಖನ. ಚೆನ್ನಾಗಿದೆ.

    ReplyDelete
  2. [ಸಾರನ್ನ ಮುಗಿದು ಮೊಸರನ್ನ ಪ್ರಾರಂಭವಾಗುವುದನ್ನು ಕುತೂಹಲದಿಂದ ಎದುರು ನೋಡುತ್ತಿದ್ದರು.ಅವೆರಡೂ ಯಾವತ್ತೂ ಕಲಸುಮೇಲೋಗರವಾಗಿರಲಿಲ್ಲ.]
    ಯಾವ ತಂತ್ರಜ್ಞಾನ ಉಪಯೋಗಿಸ್ತಾ ಇದ್ರು (ಸುಮ್ನೆ ಕೇಳ್ದೆ :))

    [ಪ್ರತಿ ಹೆಣ್ಣಿಗೂ ಒಂದಾದರೂ ಹೆಣ್ಣುಮಗು ಇರಲೇ ಬೇಕಾದ ಅವಶ್ಯಕತೆ ಆಗ ನನಗೆ ಅರ್ಥವಾಯಿತು. ]
    ಹಾಗೇ ಪ್ರತೀ ಗಂಡಿಗೂ, ನನ್ನ ತಂದೆ ಯಾವಾಗ್ಲೂ ಇದನ್ನೇ ಹೇಳ್ತಾ ಇರ್ತಾರೆ. ನನ್ನ ಮೊದಲನೇ ಅಕ್ಕನ ಜೊತೆ ಮಾತನಾಡೋದು ಅವ್ರಿಗೆ ಯಾಕೋ ಹಿತ.

    [ಅಂತೂ ನೀನು ನನಗೆ ಮಾತೃ ವಾತ್ಸಲ್ಯವನ್ನೂ ಮತ್ತು ಮಗಳ ಮಮತೆಯನ್ನೂ ಏಕಕಾಲದಲ್ಲಿಯೇ ಕೊಟ್ಟಿರುವೆ]
    ವಿಶಿಷ್ಟ ಅನುಭವ

    ನಿಮ್ಮ ತಾಯಿ ಇದಾರ?

    ಹಾಗೆಯೇ ನಿಮಗೆ ಬೇಸರವಿಲ್ಲದಿದ್ದರೆ ... ನಿಮ್ಮ ಹೊಸ ಲೇ ಔಟ್ ಚೆನ್ನಾಗಿಲ್ಲ. ಅಕ್ಷರಗಳು ತುಂಬಾ ಚಿಕ್ಕದಿವೆ, ಕಣ್ಣಿಗೆ ತುಂಬಾ ತ್ರಾಸ. ಕೊನೇಯ ಉದ್ದದ ಪ್ಯಾರ ಓದುವಾಗ ತುಂಬಾ ಕಷ್ಟ ಆಯ್ತು. ಲಿಂಕಿನ ಕಲರ್ ಕೂಡ ಚೆನ್ನಾಗಿಲ್ಲ.

    ತುಂಬಾ ದಿನ ಆಗಿತ್ತು ನಿಮ್ಮ ಬರಹ ಓದದೆ, ಕಾಲೇಜಿನ ಬಿಡುವಿನ ದಿನಗಳಲ್ಲಿ ಸುತ್ತಾಡೋಕೆ ಹೋಗಿರಬಹುದು ಅಂದುಕೊಂಡೆ.

    ReplyDelete
  3. ಪರಾಂಜಪೆಯವರೆ
    ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

    ReplyDelete
  4. ಪಾಲ ಅವರೆ

    ನಿಮ್ಮ ಪ್ರತಿಕ್ರಿಯೆ ಯಾವಾಗಲೂ ಚೆನ್ನಾಗಿರುತ್ತದೆ.

    ನಮ್ಮ ಅಮ್ಮ ಸಾರನ್ನ ಮೊಸರನ್ನ ಬೆರೆತುಕೊಳ್ಳದಂತೆ ಒಂದು ಹದದಲ್ಲಿ ಅದನ್ನು ಕಲಸುತ್ತಿದ್ದರು :)

    ನೀವು ಇನ್ನೊಂದು ಸತ್ಯದ ಕಡೆ ನನ್ನ ಕಣ್ಣು ಹೊರಳಿಸಿದಿರಿ! ನಾನಂದುಕೊಂಡಿದ್ದೆ ಕೇವಲ ಹೇಣ್ಣಿಗೆ ಮಾತ್ರ ಹೆಣ್ಣು ಮಗು ಬೇಕೆನಿಸುತ್ತೆ ಎಂದು.

    ಮಗಳೇ ತಾಯಿಯಾಗವ ಅನುಭವ ವಿಶಿಷ್ಟ ಅನುಭವ. ಹಾಗೆಯೇ ಎಲ್ಲಾ ಹೆಣ್ಣುಮಕ್ಕಳಲ್ಲೂ ತಾಯ್ತನದ ಗುಣ ಇರುತ್ತದಲ್ಲ!

    ನನ್ನ ಅಮ್ಮ ಇದ್ದಾರೆ. ಈಗವರಿಗೆ ಎಂಬತ್ಮೂರು ವರ್ಷ. ಆದರೂ ಜೀವನೋತ್ಸಾಹ ಬೇಕಾದಷ್ಟಿದೆ!

    ಲೇ ಔಟ್ ಬಗ್ಗೆ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಆದಷ್ಟು ಬೇಗ ಬದಲಿಸುವೆ.

    ತುಂಬಾ ದಿನ ಆಗಿದ್ದು ನಿಜ. ಆದರೆ ನೀವು ಹೇಳಿದ ಕಾರಣಕ್ಕಲ್ಲ. ನಮಗಿನ್ನೂ ರಜೆ ಬಂದಿಲ್ಲ.ಸೆಮಿಸ್ಟರ್ ನ ಕಡೆಯ ದಿನಗಳು. ಕೈತುಂಬಾ ಕೆಲಸ. ಬಿಡುವೇ ಇಲ್ಲ.

    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  5. ಹಾಗೆಯೇ ಬ್ಲಾಗರಿನ Settings --> Site Feed ಪುಟದಲ್ಲಿ "Allow Blog Feeds" ಅಂತ ಇದೆ. ಅದನ್ನ Short ಅಥವಾ Full (ಇವಾಗ None ಇರಬಹುದು) ಆಯ್ದುಕೊಂಡು, ಸೇವ್ ಮಾಡಿಕೊಳ್ತೀರ. ನಿಮ್ಮ ಬರಹ ಅಪ್ಡೇಟ್ ಆಗಿದ್ದು ನಮ್ಮ ಗೂಗಲ್ ರೀಡರಿನಲ್ಲಿ ಅಥವಾ ಇತರರು ನಿಮ್ಮ ಬ್ಲಾಗನ್ನು ಅವರ ಬ್ಲಾಗಿನಲ್ಲಿ ರೆಫೆರೆನ್ಸ್ ಕೊಟ್ಟಿದ್ದು, ನೀವು ಹೊಸ ಪೋಸ್ಟ್ ಹಾಕಿದಲ್ಲಿ ಅಪ್ಡೇಡ್ ಕಾಣಿಸುತ್ತೆ.

    ReplyDelete
  6. [ನನ್ನ ಅಮ್ಮ ಇದ್ದಾರೆ. ಈಗವರಿಗೆ ಎಂಬತ್ಮೂರು ವರ್ಷ. ಆದರೂ ಜೀವನೋತ್ಸಾಹ ಬೇಕಾದಷ್ಟಿದೆ!]
    ನಲಿವಾಯ್ತು ಕೇಳಿ, ಅದರಲ್ಲೂ ಜೀವನೋತ್ಸಾಹ ಇರುವುದು ಕೇಳಿ ಇನ್ನೂ:)

    [ತುಂಬಾ ದಿನ ಆಗಿದ್ದು ನಿಜ. ಆದರೆ ನೀವು ಹೇಳಿದ ಕಾರಣಕ್ಕಲ್ಲ. ನಮಗಿನ್ನೂ ರಜೆ ಬಂದಿಲ್ಲ.ಸೆಮಿಸ್ಟರ್ ನ ಕಡೆಯ ದಿನಗಳು. ಕೈತುಂಬಾ ಕೆಲಸ. ಬಿಡುವೇ ಇಲ್ಲ.]
    ಇದರ ಮಧ್ಯೆಯೂ ಬಿಡುವು ಮಾಡಿಕೊಂಡು ಬರೆದಿರಿಲ್ಲ ತುಂಬಾ ಸಂತೋಷ

    ReplyDelete
  7. ಪಾಲ ಅವರೆ

    ನೀವು ಹೇಳಿದಂತೆ ಚೆಕ್ ಮಾಡಿ ನೋಡಿದೆ. ಆದರೂ ಯಾಕೋ ಬೇರೆಯವರಲ್ಲಿ update ಆಗಿಲ್ಲ. ಈ ಬರಹ ನಾನು ಈಗ ಬರೆದದ್ದಲ್ಲ:} ೨೦೦೮ ರ ಮದರ್ಸ್ ಡೇ ಸಂದರ್ಭದಲ್ಲಿ ಈ ಲೇಖನ ಕನ್ನಡಪ್ರಭ ಪತ್ರಿಕ್ರ್ಯ ಸಾಪ್ತಾಹಿಕದಲ್ಲಿ ಪ್ರಕಟವಾಗಿತ್ತು. ಮೊದಲೇ ನಾನು ಈ ವಿಚಾರ ಹೇಳಬಹುದಿತ್ತೇನೋ?

    ಬರೆಯಲು ಬೇಕಾದಷ್ಟು ವಿಚಾರಗಳಿವೆ. ನೋಡೋಣ ಯಾವಾಗ ನನ್ನ ಲೇಖಣಿಯಿಂದ ಮೂಡುವುದೋ?

    ReplyDelete
  8. madam,

    nijvaaglu...I was speechless after reading this. nimma taayiya bagge odi nanage abhimana ukki haritu. Neeveshtu lucky anstu :)

    sorry madam, tumbaa late aagi comment maadtidini. nimma blog update aagiddu reader nallu barlilla..ashcharya aaytu. settings change aagirbeku, check maadkoLLi madam ondh sarti..

    english nalli kannada type maadtirodakke kshame irli, baraha kai kottide :(

    ReplyDelete
  9. ಒಂದುವೇಳೆ ಮೇಲೆ ಹೇಳಿದ ಸೆಟ್ಟಿಂಗ್ ಬದಲಾಯಿಸಿ ಕೂಡ ಅಪ್ಡೇಟ್ ಆಗಿಲ್ಲಾ ಅಂದ್ರೆ..

    ೧. http://www.blogger.com/home ಲಿಂಕಿಗೆ ಹೋಗಿ.
    ೨. Layout ಲಿಂಕಿನ ಮೇಲೆ ಕ್ಲಿಕ್ ಮಾಡಿ
    ೩. Add a Gadget ಮೇಲೆ ಕ್ಲಿಕ್ ಮಾಡಿ
    ೪. "Subscription Links" ಅಂತ ಒಂದು Gadget ಇದೆ, ಅದನ್ನ Add ಮಾಡಿ
    ೫. save ಮಾಡಿ

    ಇವಾಗ ಬರಬಹುದು, ಬರದಿದ್ದರೆ ಹೇಳಿ ನೋಡೋಣ, ಬೇರೆ ಏನು ತೊಂದರೆ ಇರಬಹುದು ಅಂತ.

    ReplyDelete
  10. ಲಕ್ಷ್ಮೀ,
    ಬರಹ ಕೈಕೊಟ್ರೆ ಇದರಿಂದ: http://www.google.com/transliterate/indic/Kannada

    ಅಥವಾ
    ಇದರಿಂದ
    http://sampada.net/converter

    ಟೈಪಿಸಬಹುದು,, ಕಂಗ್ಲೀಷು ಓದೋಕೆ ಕಷ್ಟ :)

    ReplyDelete
  11. ಪಾಲ ಅವರೆ

    ನಿಮ್ಮ ಕಳಕಳಿಗೆ ಧನ್ಯವಾದಗಳು. ನೀವು ಹೇಳಿದಂತೆ ಮಾಡಿದೆ. ಅದನ್ನು ಎಲ್ಲಿ add ಮಾಡಬೇಕೆಂಬ option ಬಂತು google reader ಅದರಲ್ಲೂ ಹೊಸ ಪೋಸ್ಟ್ ಬಗ್ಗೆ ಬಂದಿಲ್ಲ.

    ReplyDelete
  12. ಚಂದ್ರಕಾಂತ ಮೇಡಮ್,

    ತಡವಾಗಿದ್ದಕ್ಕೆ ಕ್ಷಮೆಯಿರಲಿ....

    ಅಮ್ಮನ ಬಗೆಗೆ ಸೊಗಸಾದ ಮನಸ್ಪರ್ಶಿ ಲೇಖನ.

    "ಕ್ಯಾರಿಯರ್ನಲ್ಲಿ ಕೆಳಗೆ ಮೊಸರನ್ನ ಹಾಕಿ. ಮೇಲೆ ಸಾರನ್ನ ಹಾಕಿಕೊಡುತ್ತಿದ್ದೆ. ಗೆಳತಿಯರಿಗೆಲ್ಲಾ ಇದೊಂದು ಅದ್ಭುತ!. ಸಾರನ್ನ ಮುಗಿದು ಮೊಸರನ್ನ ಪ್ರಾರಂಭವಾಗುವುದನ್ನು ಕುತೂಹಲದಿಂದ ಎದುರು ನೋಡುತ್ತಿದ್ದರು.ಅವೆರಡೂ ಯಾವತ್ತೂ ಕಲಸುಮೇಲೋಗರವಾಗಿರಲಿಲ್ಲ."

    ಇದು ಪ್ರತಿಯೊಬ್ಬ ಅಮ್ಮನ ಟ್ಯಾಲೆಂಟು.

    ಅಮ್ಮನಲ್ಲಿ ಮಗಳನ್ನು ಕಾಣುವುದು..ಮಗಳಲ್ಲಿ ಅಮ್ಮನನ್ನು ಕಾಣುವುದು ಒಂದು ಅದ್ಬುತ ಅನುಭವ....

    ಧನ್ಯವಾದಗಳು.

    ReplyDelete
  13. ಶಿವು

    ಬರಹ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.

    ಪ್ರತಿ ಅಮ್ಮನಿಗೂ ತನ್ನ ಮಗುವಿಗೆ ಏನು ಬೇಕೋ, ಯಾವ ಮಿತಿಯಲ್ಲಿರಬೇಕೋ ಅದನ್ನು ಕೊಡುವ Talent ಇದ್ದೇ ಇರುತ್ತದೆ, ನಿಜ. ಬಹುಶಃ ಇದು ಭಾರತೀಯ ಅಮ್ಮನ ವಿಶಿಷ್ಟ ಗುಣ.

    ReplyDelete