Saturday, October 25, 2008

ಪ್ರೇಮ ಕುರುಡಾದದ್ದು ಏಕೆ !!!


ಪ್ರೇಮ ಕುರುಡಾದದ್ದು ಏಕೆ !!!


ಬಹಳ ಹಿಂದೆ, ಈ ಭೂಮಿ ಮನುಷ್ಯ,, ಸೃಷ್ಟಿಯಾಗುವ ಮುಂಚೆ ನಡೆದ ಘಟನೆ ಇದು. ಮಾನವನನ್ನು ಸೃಷ್ಟಿ ಮಾಡುವ ಮುಂಚೆ ದೇವರು ಅವನಲ್ಲಿ ಸೇರಿಸಬೇಕಾದ ಗುಣಗಳನ್ನು- ಅಸೂಯೆ, ಆಲಸ್ಯ, ಕೋಪ, ಸುಳ್ಳು , ಫ್ರೀತಿ, ಚಾಡಿ,ಹುಚ್ಚು... ಮುಂತಾದ ಎಲ್ಲಾ ಗುಣಗಳನ್ನು ಬೇರೆ, ಬೇರೆ ಇರಿಸಿದ್ದ. ಒಮ್ಮೆ ಅವನು ತನ್ನ ಯಾವುದೋ ಕೆಲಸದಲ್ಲಿ ಮುಳುಗಿದ್ದಾಗ , ಸುಮ್ಮನೆ ತಮ್ಮಷ್ಟಕ್ಕೆ ಕುಳಿತು ಬೇಸರಗೊಂಡಿದ್ದ ಆ ಗುಣಗಳೆಲ್ಲಾ ಒಟ್ಟಾಗಿ ಸೇರಿ ಆಟ ಆಡಿ ಬೇಸರ ಕಳೆಯೋಣವೆಂದು ನಿರ್ಧರಿಸಿದವು. ಎಲ್ಲ ಗುಣಗಳೂ ಒಟ್ಟಾಗಿ ಸೇರಿ " ಕಣ್ಣಾಮುಚ್ಚಾಲೆ " ಆಡೋಣವೆಂದು ನಿರ್ಧರಿಸಿದವು.ಕೂಡಲೇ " ಹುಚ್ಚು " ಉನ್ಮಾದದಿಂದ " ಹುಡುಕುವ ಕೆಲಸ ನನಗೇ ಮೊದಲು" ಎಂದಿತು. ಅದರ ಅಬ್ಬರ, ಆರ್ಭಟ, ಮಿತಿಮೀರಿದ ಉತ್ಸಾಹ ನೋಡಿ ಇತರ ಗುಣಗಳೆಲ್ಲಾ ವಾದ ಮಾಡದೆ ಅದಕ್ಕೆ ಒಪ್ಪಿದವು.

ಆಟ ಪ್ರಾರಂಭವಾಯಿತು.ಅಲ್ಲೇ ಇದ್ದ ಒಂದು ದೊಡ್ಡ ಮರದ ಬಳಿ ನಿಂತು ಕಣ್ಣುಮುಚ್ಚಿಕೊಂಡು " ಹುಚ್ಚು " ಒಂದು, ಎರಡು, ಮೂರು ...." ಎಂದು ಎಣಿಕೆ ಪ್ರಾರಂಭಿಸಿತು. ಎಲ್ಲಾ ಗುಣಗಳೂ ಅವಿತುಕೊಳ್ಳಲು ತೊಡಗಿದವು. ' ವಂಚನೆ ' ಅಲ್ಲೇ ಬಿದ್ದಿದ್ದ ತಿಪ್ಪೆಯ ರಾಶಿಯ ಮಧ್ಯೆ ಬಚ್ಚಿಟ್ಟುಕೊಂಡಿತು. ' ಸುಳ್ಳು ' ತಾನು ಒಂದು ಕಲ್ಲಿನ ಹಿಂದೆ ಬಚ್ಚಿಟ್ಟುಕೊಳ್ಳುವುದಾಗಿ ಹೇಳಿ ಕೊಳದ ತಳದಲ್ಲಿ ಮುಚ್ಚಿಟ್ಟುಕೊಂಡಿತು. ...೭೬, ೭೭ ೭೮ ಇಷ್ಟರಲ್ಲಾಗಲೇ ಬಹುಮಟ್ಟಿಗೆ ಎಲ್ಲಾ ಗುಣಗಳೂ ಅಡಗಿಕೊಂಡಿದ್ದವು. ಆದರೆ ಪ್ರೀತಿ ಮಾತ್ರ ಇನ್ನೂ ಅವಿತುಕೊಂಡಿರಲಿಲ್ಲ. ಪ್ರೀತಿಗೆ ಎಲ್ಲಿ ಮರೆಯಾಗಬೇಕೆಂದು ನಿರ್ಧರಿಸಲಾಗಲಿಲ್ಲ.ಇದರಲ್ಲಿ ಅಚ್ಚರಿಯೇನಿಲ್ಲ. ಪ್ರೀತಿ, ಪ್ರೇಮವನ್ನು ಯಾರಾದರೂ ಮುಚ್ಚಿಡಲು ಸಾಧ್ಯವೇ ? ...೯೫,೯೬,೯೭. ಅಷ್ಟರಲ್ಲಿ ಪ್ರೀತಿಗೆ ಒಂದು ಸುಂದರವಾದ ಗುಲಾಬಿ ಪೊದೆ ಕಾಣಿಸಿತು. ಕೋಡಲೇ ಆ ಪೊದೆಯ ಹಿಂದೆ ಪ್ರೀತಿ ಮರೆಯಾಯಿತು.

ಎಣಿಕೆ ಮುಗಿಸಿ ಕಣ್ಣು ಬಿಟ್ಟಾಗ ಹುಚ್ಚಿನ ಕಣ್ಣಿಗೆ ಮೊದಲು ಬಿದ್ದಿದ್ದೇ' ಆಲಸ್ಯ'. ಎದ್ದು ಬಚ್ಚಿಟ್ಟುಕೊಳ್ಳಲು ಅದರ ಸೋಮಾರಿತನ ಅಡ್ಡವಾಗಿ ಅದು ಅಲ್ಲಿಯೇ ಬಿದ್ದುಕೊಂಡಿತ್ತು. ಅದನ್ನು ಹಿಡಿದ ಉತ್ಸಾಹದಿಂದ ಹುಚ್ಚು ನೇರವಾಗಿ ಕೊಳದ ಬಳಿ ಹೋಗಿ 'ಸುಳ್ಳನ್ನು' ಎಳೆ ತಂದಿತು. ಅದಕ್ಕೆ ಸುಳ್ಳಿನ ಸ್ವಭಾವ ಚೆನ್ನಾಗಿಯೇ ಗೊತ್ತಿತ್ತು. ಕೊಂಚ ಸಮಯದಲ್ಲಿಯೇ 'ಹುಚ್ಚು' ಎಲ್ಲಾ ಗುಣಗಳನ್ನೂ ಹುಡುಕಿತು, 'ಪ್ರೀತಿ'ಯೊಂದನ್ನು ಹೊರತು ಪಡಿಸಿ.ಪ್ರೀತಿ ಸಿಕ್ಕದ್ದಕ್ಕಾಗಿ ಹುಚ್ಚಿಗೆ ವಿಪರೀತ ಕೋಪ ಬಂದಿತು.ಅಷ್ಟರಲ್ಲಿ ಪ್ರೀತಿಯ ಬಗೆಗಿನ ಹೊಟ್ಟೆಕಿಚ್ಚಿನಿಂದ 'ಅಸೂಯೆ' 'ಚಾಡಿ'ಯ ಕಡೆ ನೋಡಿ ಅರ್ಥಪೂರ್ಣವಾಗಿ ನಕ್ಕಿತು. ಕೂಡಲೇ 'ಚಾಡಿ"ಯು ಪಿಸುಮಾತಿನಲ್ಲಿ ಹುಚ್ಚಿಗೆ " ನೀನು ಹುಡುಕುತ್ತಿರುವ "ಪ್ರೀತಿ" ಗುಲಾಬಿ ಪೊದೆಯ ಬಳಿ ಇದೆ' ಎಂದು ತಿಳಿಸಿತು. ಕೂಡಲೇ' ಹುಚ್ಚು' ಅಬ್ಬರ ಆರ್ಭಟದಿಂದ ಕೂಗುತ್ತಾ ರಭಸದಿಂದ ಗುಲಾಬಿಯ ಮೇಲೆ ಬಿದ್ದಿತು. ಮರುಕ್ಷಣವೇ ಕಿಠಾರನೆ ಯಾರೋ ನೋವಿನಿಂದ ಕಿರುಚಿದ ಧ್ವನಿ ಕೇಳಿಸಿತು. ನೋಡಿದರೆ ಗುಲಾಬಿಯ ಮುಳ್ಳುಗಳು ಪ್ರೀತಿಯ ಕಣ್ಣುಗಳನ್ನು ಚುಚ್ಚಿ ಕುರುಡು ಮಾಡಿತ್ತು.

ಎಲ್ಲಾ' ಗುಣಗಳ' ಗಲಾಟೆಯ ಧ್ವನಿ ಕೇಳಿ ದೇವರು ಅಲ್ಲಿಗೆ ಬಂದು , ಕಣ್ಣು ಕುರುಡಾಗಿ ಗೋಳಾಡುತ್ತಿದ್ದ 'ಪ್ರೀತಿ'ಯನ್ನು ಕಂಡು ಕುಪಿತನಾಗಿ ಅದಕ್ಕೆ ಕಾರಣ ಯಾರೆಂದು ಪತ್ತೆ ಹಚ್ಚಿದನು.ನಂತರ ' ಹುಚ್ಚ'ನ್ನು ಕರೆದು " ಪ್ರೀತಿ ಕುರುಡಾದದ್ದು ನಿನ್ನಿಂದಲೇ . ಆದ್ದರಿಂದ ಇನ್ನು ಮುಂದೆ ಅದರೊಡನೆ ನೀನು ಇರಲೇ ಬೇಕು " ಎಂದು ಶಾಪಕೊಟ್ಟನು.

ಆಂದಿನಿಂದ ಪ್ರೀತಿ ಕುರುಡಾಯಿತು.. ಮತ್ತು ಪ್ರೇಮಿಗಳೆಲ್ಲಾ ಹುಚ್ಚರಾದರು.....ಇಷ್ಟಲ್ಲದೆ .." ಪ್ರೇಮಿ ಮತ್ತು ಹುಚ್ಚ ಒಂದೇ ದೋಣಿಯ ಪಯಣಿಗರು "ಎಂದು ಶೇಕ್ ಸ್ಪಿಯರ್ ಸುಮ್ಮನೆ ಹೇಳಿದ್ದಾನೆಯೇ ?

33 comments:

  1. ಪ್ರೀತಿಯನ್ನು ಹೇಗೆ ಬೇಕಾದರೂ ವಾಖ್ಯಾನಿಸಬಹುದು.. ನೀವು ಅದು ಸುಖ ಅಂದರೆ ಸುಖ.. ಕಷ್ಟ ಅಂದರೆ ಕಷ್ಟ...ಇತ್ಯಾದಿ.. ಇನ್ನೂ ಪ್ರೀತಿ ಬಲೆಗೆ ಬಿದ್ದಿಲ್ಲವಾ ತಂಗಿ...??

    ReplyDelete
  2. ಆಹ್! ಅದ್ಭುತ ಕಥೆ!ಇವತ್ತು ಗೊತ್ತಾಯ್ತು ಪ್ರೀತಿ ಕುರುಡಾದದ್ದು ಏಕೆ ಅಂತ.

    ReplyDelete
  3. ನನ್ನನ್ನು ಇಷ್ಟೊಂದು ಹೊಗಳ ಬೇಡಿ. ಇದು ಅಂತರ್ಜಾಲದ ತುಣುಕೊಂದರಿಂದ ಪ್ರೇರಣೆ ಪಡೆದದ್ದು:)

    ReplyDelete
  4. ಪ್ರೀತಿಗೆ ವ್ಯಾಖ್ಯಾನ ಬೇಕೆ? ಇದು ನನ್ನನ್ನು ಬಹಳ ದಿನದಿಂದ ಕಾಡುತ್ತಿರುವ ಪ್ರಶ್ನೆ. ಉತ್ತರ ಇನ್ನೂ ಸಿಕ್ಕಿಲ್ಲ....

    ಒಂದೊಂದು ಗುಣಕ್ಕೂ ಒಂದೊಂದು ಪಾತ್ರವನ್ನು ಆರೋಪಿಸಿ ಕಥೆ ಹೆಣೆದ ರೀತಿ ಬಹಳ ಸೊಗಸಾಗಿದೆ.

    ReplyDelete
  5. ಪ್ರೀತಿಗೆ ವ್ಯಾಖ್ಯಾನ ಖಂಡಿತ ಬೇಡ. ಯಾವುದನ್ನಾದರೂ ವ್ಯಾಖ್ಯಾನಕ್ಕೆ ಒಳಪಡಿಸಿದಿವಿ ಅಂದರೆ ಆ ಅರ್ಥವನ್ನು ಅಷ್ಟಷ್ಟು ಮಿತಿಗೊಳಿಸುತ್ತಿದ್ದೇವೆ ಎಂದರ್ಥ.
    ಗುಣಗಳಿಗೆ ಪಾತ್ರವನ್ನಾರೋಪಿಸುವುದಕ್ಕೆ ಸ್ವಲ್ಪ ಮಟ್ಟಿಗೆ ಪಂಚತಂತ್ರ ಕಾರಣ.

    ReplyDelete
  6. ಪ್ರೀತಿ.. ಕುರುಡು..ಹುಚ್ಚ ಮತ್ತು ಪ್ರೆಮ.. ಒಂದೆ ದೋಣಿಯ ಪಯಣಿಗರು,,ಪ್ರೀತಿ ಅಮರ.. ಹೀಗೆ ಎಲ್ಲರು ತಮಗೆ ಸಾಧ್ಯವಾದ ರೀತಿಯಲ್ಲಿ ವಿವರಿಸಲು ಪ್ರಯತ್ನ ಅನಾದಿ ಕಾಲದಿಂದ ಪ್ರಯತ್ನ ನಡೆದಿದೆ. ಸಿನೇಮಾ ಕವಿತೆ ಬರೆಯುವವರು ಲಕ್ಷಗಟ್ಟಲೆ ಹಾಡುಗಳಲ್ಲಿ ಹೇಳಿದ್ದು ಅದನ್ನೇ,,.ಅದು ವ್ಯಾಖ್ಯಾನವೆಂದು ನನ್ನ ಭಾವನೆ...ಅದಿರಲಿ..ನನ್ನ ಪ್ರಶ್ನೆಗೆ ಉತ್ತರ ಇಲ್ಲವೆ????

    ReplyDelete
  7. ನೀವು ಕೇಳಿದ ಪ್ರಶ್ನೆ ಬಾಲಿಶ ಅನ್ನಿಸಿತು. ಅದಕ್ಕೆ ಉತ್ತರಿಸಲಿಲ್ಲ.
    ಆದರೂ ಉತ್ತರ ಬೇಕೆಂದರೆ ಇಷ್ಟರಲ್ಲೇ ನನ್ನ ಮೊಮ್ಮಗ ಎರಡನೆಯ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾನೆ.

    ReplyDelete
  8. ಲೇಖನ ಓದಿದಾಗ ನನಗೆ ಹಾಗೆ ಅನಿಸಿತು. ಹಾಗಾದರೆ ಮೊಮ್ಮಗನ ಪ್ರೀತಿಯ ಬಲೆಗೆ ಬಿದ್ದಿದ್ದೀರಿ..!!? ಬೇಜಾರಗಬೇಡಿ. ಕ್ಷಮೆ ಇರಲಿ.

    ReplyDelete
  9. @ಸಿಮೆಂಟ್...

    ಬೇಜಾರೇನಿಲ್ಲ.

    ReplyDelete
  10. ನೀವು ಹೇಳುವುದು ಸರಿ. ಇದರ ಬಗ್ಗೆ ಬಹುಶಃ ಎಷ್ಟು ಚರ್ಚೆ ಆಲೋಚನೆಗಳು ನಡೆದರೂ ಮುಗಿಯುವುದು ಅಥವಾ ಇದಂ ಇತ್ತಂ ಎಂದು ಮುಗಿಸುವುದು ಸಾಧ್ಯವಿಲ್ಲವೇನೋ....

    ReplyDelete
  11. @ಮುತ್ತುಮಣಿ

    ನಿನ್ನ ಅಭಿಪ್ರಾಯ ನನ್ನದೂ ಹೌದು

    ReplyDelete
  12. ಚಂದ್ರಕಾಂತರವರೆ,
    ಪ್ರೀತಿ ಯಾಕೆ ಕುರುಡು? ವ್ಹಾವ್ ,ಚೆನ್ನಾಗಿದೆ ಕಥೆ.ಪ್ರೇರಣೆ ಯಾವುದೇ ಇರಲಿ,ಒಳ್ಳೆಯ ಅರ್ಥಪೂರ್ಣ ಕಥೆ ಕೊಟ್ಟಿದ್ದಕ್ಕೆ ಧನ್ಯವಾದಗಳು.

    ReplyDelete
  13. @ಸಾಟಿಯಾರು
    ನನ್ನ ಬ್ಲಾಗ್ ಗೆ ಭೇಟಿ ಕೊಟ್ಟದ್ದಕ್ಕೆ ಧನ್ಯವಾದಗಳು.ಅಂತೂ ಪ್ರೇಮ ಕುರುಡಾದ ಕತೆ ಓದಿ ಸಂತೋಷವಾದದ್ದಕ್ಕೆ Thanks.ಪ್ರೇರಣೆಯನ್ನು ಮರೆತು ಕತೆಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದು ನನಗೆ ನಿಜಕ್ಕೂ ಸಂತೋಷದ ವಿಚಾರ. ಯಾಕೆಮ್ದರೆ ಪ್ರೇರಣೆ ಎಂದ ಕೂಡಲೇ ಅದರ ಗುಣಮಟ್ಟ Original ಅಲ್ಲ ಎಂಬುದು ಅನೇಕರ ಅಭಿಪ್ರಾಯ.

    ReplyDelete
  14. Neevu tumba chennagi bareyuttiri.., oduttiddare innu odona, mattu odona anisuttide :)

    ReplyDelete
  15. kathe thumba chennagide madam :)

    Shakespear helida aa doniyannu avane huttu haki nadesuthaneno antha nanage anumaana ;)...yaakandre preethi-hucchu hididavaru kathe, kavana bareyalu shuru madikolluthare!!!

    ReplyDelete
  16. @ನಿವಿ
    ನಿಮಗೆ ನನ್ನ ಲೇಖನಗಳು ಮೆಚ್ಚುಗೆಯಾಗಿದ್ದು ನನಗೆ ಖುಶಿ ತಂದಿದೆ.ಇಂತಹ ಮಾತುಗಳು ಮತ್ತಷ್ಟು ಬರೆಯಲು ಉತ್ತೇಜನ ನೀಡುತ್ತದೆ. Thanks

    @ಗೀತಾ
    ನೀನು ಹೇಳಿದ್ದು ನೂರಕ್ಕೆ ನೂರು ಸತ್ಯ. ಆ ದೋಣಿಯಲ್ಲಿರುವ ಮೂವರಲ್ಲಿ ಹುಚ್ಚನೊಬ್ಬನೇ ನಿಜವಾದ ಹುಚ್ಚ.ಅವನಿಗೆ ಹೊರಜಗತ್ತಿನ ಪರಿವೆ ಇರುವುದಿಲ್ಲ!
    ಆದರೆ ಪ್ರೇಮಿ ಮತ್ತು ಕವಿ ಇವರಿಬ್ಬರು ಅರೆಹುಚ್ಚರು! ಪೂರ್ತಿ ಹುಚ್ಚರಿಗಿಂತ ಅರೆಹುಚ್ಚರೇ ಹೆಚ್ಚು Danger. ಕವಿಯಾದ ಶೇಕ್ಸ್ಪಿಯರ್ಗೆ ಇದು ಚೆನ್ನಾಗಿ ಅನುಭವವಾಗಿತ್ತು ಅನಿಸುತ್ತದೆ.

    ReplyDelete
  17. @ ಗೀತಾ ಮತ್ತು ಚಂದ್ರಕಾಂತ
    ಏನಿದು ನಿಮ್ಮ ಚರ್ಚೆ? ನನಗೆ ಒಂದೂ ಅರ್ಥವಾಗ್ತಿಲ್ಲ :(

    ReplyDelete
  18. @ಮುತ್ತುಮಣಿ
    ನಿನಗೆ ಗೀತಾ ಮತ್ತು ನನ್ನ ಮಾತು ಅರ್ಥ ಆಗಬೇಕಾದರೆ Shakespearನ ಮೂಲ ಹೇಳಿಕೆ ಕೊಡುತ್ತೇನೆ.ಅವನು ಹೇಳಿದ್ದು "The Lover , Lunatic and the Poet sail in the same boat "

    ReplyDelete
  19. ಚಂದ್ರಕಾಂತರವರೆ,
    Original ಕಥೆ ಬರೆದವರಿಗೂ ಏನಾದರು ಪ್ರೇರಣೆ ಇರಲೇ ಬೇಕಲ್ವಾ? ನೀವು ಹೇಳಿದ್ದರಿಂದ ತಾನೆ ನಮಗೆಲ್ಲ ಗೊತ್ತಾಗಿದ್ದು:).ನನಗನ್ನಿಸೋದು ಇದು Original ಕಥೇನೆ. ಇದು ನನ್ನ ಅಭಿಪ್ರಾಯ.

    ReplyDelete
  20. @ಭಾರ್ಗವಿಯವರೆ ಅಂತೂ ನನ್ನ ಮಾತಿಗೆ ಬೆಲೆಕೊಟ್ಟು ಹೆಸರು ತಿಳಿಸಿದ್ದಕ್ಕೆ ಧನ್ಯವಾದಗಳು. ಇನ್ನು ಮುಂದೆ ಇಬ್ಬರೂ ’..ವರೆ’ ಅನ್ನುವುದನ್ನು ಬಿಡಬಹುದೇನೋ ಅನಿಸುತ್ತದೆ.

    ಅಂತೂ ಈ ಬರವಣಿಗೆ ನನ್ನದೇ ಅಂತ ಒಪ್ಪಿಕೊಂಡಿದ್ದೀರಾ.ಅದು ನನಗೆ credit ಅಂತ ಭಾವಿಸುವೆ.

    ReplyDelete
  21. ನಿಮ್ಮ ಬರವಣಿಗೆ ಸೊಗಸಾಗಿದೆ....


    ವಂದನೆಗಳೊಂದಿಗೆ,
    ಪ್ರಶಾಂತ ಜಿ ಉರಾಳ

    ReplyDelete
  22. @ಪ್ರಶಾಂತ್ ಅವರಿಗೆ

    ನನ್ನ ಬ್ಲಾಗ್ ಗೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಹಾಗೆ ಭೇಟಿ ಕೊಡುತ್ತಿರಿ

    ReplyDelete
  23. ಚಂದ್ರಕಾಂತರವರಿಗೆ,
    ನಾನು ಹೆಸರು ಹೇಳಿ ಆಯ್ತಲ್ಲ ಇನ್ನು ನನಗೆ ರವರೆ ಬೇಡ (ವಚನ ಬದಲಿಸಿ) ಅಂತ ಹೇಳಲು ಮರೆತು ಮತ್ತೆ ಬರುವಷ್ಟರಲ್ಲಿ ನೀವು ಹೇಳಿ ಆಗಿದೆ. ನೀವು ತುಂಬಾ fast.(ನಿಮ್ಮಂತೆ fast ಆಗಲು ಟ್ರೈ ಮಾಡ್ತೀನಿ:-). ನಾನು ಮಾತ್ರ ಬಿಡಲು ಆಗಲ್ಲ.ದಯವಿಟ್ಟು ನೀವು ಬಿಡಲೇಬೇಕು.

    ReplyDelete
  24. @ ಭಾರ್ಗವಿ
    ನಾನು ರವರೆ ಬಿಡುತ್ತೇನೆ. ಆದರೆ ಬಹುವಚನದಲ್ಲಿಯೇ ಮಾತನಾಡಿಸುತ್ತೇನೆ:)

    ReplyDelete
  25. ಹೌದು ಮೂಲ ಕೋಟ್ ಓದಿದರೆ ಮನಸಿಗೆ ಏನೋ ಹೊಳೆದಂತೆ ಆಗುತ್ತದೆ. :)

    ReplyDelete
  26. @ಮುತ್ತುಮಣಿ
    ನೀನು ಏನೂ ಅರ್ಥವಾಗುತ್ತಿಲ್ಲ ಅಂದಮೇಲೆ ಮೂಲ Quote ಕೊಡೋಣ ಎನಿಸಿದ್ದು.ನಿನಗೆಅರ್ಥವಾದಂತಾಗಿದ್ದಕ್ಕೆ ಸಮಾಧಾನ ಎನಿಸಿತು:)

    ReplyDelete
  27. ಚಂದ್ರಕಾಂತ್ ಅವರೆ,
    ನಿಮ್ಮ ಈ ಕಥೆಯ ಬಗ್ಗೆ ಹೇಳಲು ಮಾತುಗಳಿಲ್ಲ. ಎಲ್ಲಾ ಮನುಷ್ಯನ ಗುಣಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿದ್ದೀರ. ಕಥೆ ಅರ್ಥವತ್ತಾಗಿದೆ.

    ನನ್ನ ಅಂತರ್ವಾಣಿಯನ್ನು ಕೇಳಲು ಬರುತ್ತೀರ ಎಂದು ನಂಬಿದ್ದೇನೆ.

    ReplyDelete
  28. @ ಅಂತರ್ವಾಣಿ
    ನಾನು ಮತ್ತೆ ಮತ್ತೆ ಹೇಳುತ್ತೇನೆ. ಇದು ನನ್ನ ಸ್ವಂತ ಸೃಷ್ಟಿಯಲ್ಲ. ಹೋರಣ ಅಂತರ್ಜಾಲದ್ದು. ಕಟ್ಟುವಿಕೆ ಮಾತ್ರ ನನ್ನದು. ಒಟ್ಟಿನಲ್ಲಿ ನಿಮಗೆ ಇಷ್ಟವಾದದ್ದಕ್ಕೆ ಧನ್ಯವಾದಗಳು.
    ಖಂಡಿತ ನಿಮ್ಮ ಅಂತರ್ವಾಣಿ ಕೇಳಲು ಬರುವೆ.

    ReplyDelete
  29. ಇದು ಸ್ಪುರ್ತಿಗೊಂದು ಬರೆದದ್ದು ಅನ್ನೋದಕ್ಕಿಂತ ಕನ್ನಡಾನುವಾದ ಅನ್ನಬಹುದು. ಇದೆ ಕಥೆ ವರ್ಷಗಳ ಹಿಂದೆ ನಂಗೆ mail ಮೂಲಕ ಬಂದಿತ್ತು. ಆದರು ಈ ಮೂಲಕ ಎಲ್ಲರೂ ಕಥೆಯನ್ನು ಓದುವನ್ತಾಗಿದ್ದು ಸಂತೋಷ. ಯಾರ ಕಲ್ಪನೆಯೂ ಗೊತ್ತಿಲ್ಲ, ಆದರೆ ಅವರ ಕಲ್ಪನೆಗೆ hats off...

    ReplyDelete
  30. @ ಅನಾಮಿಕರಿಗೆ

    ಅಂತರ್ಜಾಲದಲ್ಲಿ ನೇರವಾಗಿ ಈ ಕತೆ ನನಗೆ ಸಿಕ್ಕಿಲ್ಲ. ಯಾರೋ ಈ ಕತೆಯನ್ನು ಹೇಳಿದ್ದನ್ನು ಕೇಳಿದ್ದಷ್ಟೆ. ಅವರು ಹೇಳಿದ ಕತೆಯಲ್ಲಿ ’ ಚಾಡಿ’ ಪಾತ್ರ ಇರಲಿಲ್ಲ. ಹಾಗೂ shakespearನ ಕೋಟ್ ಮಾಡಿದ್ದು ನಾನೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.

    ReplyDelete
  31. ಚಂದ್ರ ಕಾಂತ ಮೇಡಮ್,

    ನಿಮ್ಮ ಕಲ್ಪನೆಯ ಅದ್ಬುತವಾಗಿದ್ದರೂ ವಾಸ್ತವಕ್ಕೆ ಹತ್ತಿರವೆನಿಸುತ್ತದೆ. ಕತೆ ಹೇಳುವ ಶೈಲಿ ತುಂಬಾ ಚೆನ್ನಾಗಿದೆ. ಕೊನೆಗೂ ಗೊತ್ತಾಯಿತು...ಪ್ರೀತಿ.......
    ಮತ್ತದೆ ಪ್ರೀತಿಯಿರಲಿ..
    ಶಿವು.

    ReplyDelete
  32. @ ಶಿವು ಅವರೆ

    ಇದು ನನ್ನ ಕಲ್ಪನೆಯಲ್ಲ. ಅಂತರ್ಜಾಲದ ತುಣುಕೊಂದರ ಪ್ರೇರಣೆ. ಶೈಲಿ ನನ್ನದೆ,ಕಡೆಯ ಶೇಕ್ಸ್ಪಿಯರನ quotation ನಾನೇ ಸೇರಿಸಿದ್ದು. ಆದ್ದರಿಂದ ನಿಮ್ಮ ಚೆನ್ನಾಗಿದೆ ಎಂಬ complimentನ್ನು ಸ್ವೀಕರಿಸುತ್ತೇನೆ!!

    ReplyDelete