Saturday, October 11, 2008

ನಿನ್ನ ನೀನು ಮರೆತರೇನು ಸುಖವಿದೇ... ?



ಸೀಮಾ ಬ್ಯಾಂಕ್ ಉದ್ಯೋಗಿ. ಶಾಲಾ ದಿನಗಳಿಂದಲೂ ಅತ್ಯಂತ ಚುರುಕು ಸ್ವಭಾವದ ಹುಡುಗಿ. ಚಟುವಟಿಕೆಯ ಚಿಲುಮೆ. ಓದಿನಲ್ಲಿ, ಪಠ್ಯೇತರ ಕಾರ್ಯಕ್ರಮಗಳಲ್ಲಿ, ಒಳಾಂಗಣ, ಹೊರಾಂಗಣ ಕ್ರೀಡೆಗಳಲ್ಲಿ ಯಾವಾಗಲೂ ಮುಂದು. ತನ್ನ ಕಾಲೇಜ್ ವಿದ್ಯಾಭ್ಯಾಸ ಮುಗಿಯುವವರೆಗೂ ಛಾಂಪಿಯನ್ ಪಟ್ಟ ಅವಳದೇ.ಅವಳ ಓದು, ಜಾಣ್ಮೆ, ಕೆಲಸದಲ್ಲಿ ಅವಳಿಗಿದ್ದ ಆಸಕ್ತಿ, ಹೊಸದನ್ನು ಕಲಿಯಬೇಕೆಂಬ ತುಡಿತ ಇವೆಲ್ಲವನ್ನೂ ನೋಡಿ ಶ್ರೀನಾಥ್ ಅವಳನ್ನು ಮದುವೆಯಾದ.ಒಟ್ಟಿನಲ್ಲಿ ಅವರದು ಸುಖೀ ದಾಂಪತ್ಯ. ಮಗ ಅರ್ಜುನ್ ತಾಯಿಯದೇ ಪಡಿಯಚ್ಚು..ಅದೇ ಉತ್ಸಾಹ, ಸೀಮಾ ಅರ್ಜುನ್ ನ ಜಾಣತನ, ಚುರುಕು ಬುದ್ಧಿಯನ್ನು ಆರಾಧನಾ ಭಾವದಿಂದ ನೋಡುತ್ತಾಳೆ. ಅಷ್ಟೆ ಆಗಿದ್ದಿದ್ದರೆ ಯೋಚಿಸುವ ಅಗತ್ಯ ಇರುತ್ತಿರಲಿಲ್ಲ. ಆದರೆ ಅವನ ಜಾಣ್ಮೆ ಕಂಡು ಬೆರಗುಗೊಳ್ಳುವುದರ ಜೊತೆ ತನಗೇ ಅರಿವಿಲ್ಲದೆ ತನ್ನ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿದ್ದಾಳೆ. ಮೊನ್ನೆ ಅವಳ ಮನೆಗೆ ಹೋಗಿದ್ದಾಗ ಅಲ್ಲೇ ಟಿ.ವಿ. ನೋಡುತ್ತಿದ್ದ ಮಗನನ್ನು ಪರಿಚಯಿಸಿದಳು. ನಿಜಕ್ಕೂ ಮುದ್ದಾದ ಹುಡುಗ. ಆರನೆಯ ತರಗತಿ ಓದುತ್ತಿದ್ದ ಅರ್ಜುನ್ ಟಿ.ವಿ.ಯಲ್ಲಿ ಟರ್ಮಿನೇಟರ್ ನೋಡುತ್ತಿದ್ದ. ಅವರ ಅಮ್ಮ ನನ್ನನ್ನು ಪರಿಚಯಿಸಿದಾಗ ಒಮ್ಮೆ ನನ್ನತ್ತ ತಿರುಗಿ " ಹಾಯ್ ಆಂಟಿ " ಎಂದು ಹೇಳಿ ಮತ್ತೆ ಟಿ.ವಿ. ನೋಡಲು ಮುಂದುವರಿಸಿದ. ಸೀಮಾ ಮಗನನ್ನೇ ನೋಡುತ್ತಾ ಹೆಮ್ಮೆಯಿಂದ " ನೋಡು, ಅವನಿಗೆ ಆ ಇಂಗ್ಲೀಷ್ ಎಷ್ಟು ಚೆನ್ನಾಗಿ ಅರ್ಥವಾಗುತ್ತೆ ! ನನಗಂತೂ ಒಂದು ವಾಕ್ಯಾನೂ ಅರ್ಥವಾಗಲ್ಲ ". ಅರ್ಜುನ್ ಮಖದಲ್ಲಿ ಒಂದು ರೀತಿಯ ಹೆಮ್ಮೆ ಕಂಡಂತಾಯಿತು.

ನಾವಿಬ್ಬರೂ ಮಾತನಾಡುತ್ತಿದ್ದಾಗ ನನ್ನ ಮೊಬೈಲ್ ರಿಂಗಾಯಿತು. ನಾನು ಮಾತು ಮುಗಿಸಿದ ಕೂಡಲೇ ಸೀಮಾ " ನಿನ್ನ ಸೆಲ್ ನಂಬರ್ ಕೊಡು " ಎಂದು ಕೇಳಿದಳು. ನಾನು ಹೇಳುತ್ತಿದ್ದಂತೆಯೇ " ಇರು ಬಂದೆ "ಎಂದು ಒಳಗೆ ಹೋಗಿ ಅವಳ ಮೊಬೈಲ್ ತಂದು "ಅರ್ಜುನ್ ಆಂಟಿ ನಂಬರ್ ಇದರಲ್ಲಿ ಸ್ಟೋರ್ ಮಾಡು "ಎಂದಳು. ಅವನು ಹೆಮ್ಮೆಯಿಂದ " ಹೇಳಿ ಆಂಟಿ " ಎಂದ. ನನಗೆ ಆಶ್ಚರ್ಯವಾಯಿತು. " ಯಾಕೆ? ನೀನೇ ಎಂಟರ್ ಮಾಡಬಹುದಲ್ಲ.ಅವನನ್ನು ಯಾಕೆ ಕರೆದೆ ?" ಏಂದಾಗ ಅರ್ಜುನ್ ನನ್ನ ಕಡೆ ನೋಡುತ್ತಾ " ಆಂಟಿ ಅಮ್ಮನಿಗೆ ಅದೆಲ್ಲಾ ಗೊತ್ತಾಗಲ್ಲ. ನಾನೇ ಅದೆಲ್ಲಾ ಮಾಡಿಕೊಡೋದು " ಎಂದು ನಗುತ್ತಾ ಹೇಳಿದ. ನನಗೆ ಆಶ್ಚರ್ಯವಾಯಿತು. ಕಾಲೇಜಿಗೇ ಛಾಂಪಿಯನ್ ಆಗಿದ್ದ ಸೀಮಾಗೆ ಏನೂ ಗೊತ್ತಾಗುವುದಿಲ್ಲ!!? ಅವಳ ಕಡೆ ನೋಡಿದರೆ ಮಗನನ್ನೇ ಹೆಮ್ಮೆಯಿಂದ ನೋಡುತ್ತಿದ್ದ ಅವಳು " ಹೌದಪ್ಪಾ ಅದೆಲ್ಲಾ ಅರ್ಜುನ್ ಮಾಡಿಕೊಡುತ್ತಾನೆ ".

ಇದು ಸೀಮಾ ಒಬ್ಬಳ ಕತೆಯಲ್ಲ. ಶಿಕ್ಷಕಿಯಾಗಿರುವ ನಿರ್ಮಲಾ ಇತ್ತೀಚೆಗೆ ದ್ರೈವಿಂಗ್ ಕಲಿತು ಹೊಸಾ ಸ್ಕೂಟಿಯಲ್ಲಿ ಶಾಲೆಗೆ ಬಂದಾಗ ,"ಅದು ಎಷ್ಟು ಮೈಲೇಜ್ ಕೊಡುತ್ತೇ? ಅದರ fuel ಟ್ಯಾಂಕ್ ಕೆಪಾಸಿಟಿ ಎಷ್ಟು?" ಮುಂತಾದ ಸರಳ ಪ್ರಶ್ನೆಗಳಿಗೂ ಅವಳ ಉತ್ತರ ಒಂದೇ. " ನನಗೇನೂ ಗೊತ್ತಿಲ್ಲ. ನಮ್ಮ ಆದರ್ಶ್ ಗೆ ಟ್ಯೂಶನ್ ಗೆ ನನ್ನ ಗಾಡಿ ಕೊಡುವುದರಿಂದ ನನ್ನ ಗಾಡಿಯ ಎಲ್ಲ ವಿಚಾರವನ್ನೂ ಅವನೇ ನೋಡಿಕೊಳ್ತಾನೆ. ಟ್ಯಾಂಕ್ ಯಾವಾಗಾಲೂ ತುಂಬಿರುವಂತೆ ಗಮನಿಸಿಕೊಳ್ಳುತ್ತಾನೆ " ಯಥಾಪ್ರಕಾರ ಇವಳ ಮುಖದಲ್ಲೂ ಮಗನ ಬಗ್ಗೆ ಹೆಮ್ಮೆ ರಾರಾಜಿಸುತ್ತಿತ್ತು.ಅವಳ ಮಗ ಈಗ ಎಂಟನೇ ತರಗತಿಯಲ್ಲಿ ಇದ್ದಾನೆ.ಅವನು ಆರನೆಯ ತರಗತಿಯಲ್ಲಿದ್ದಾಗಲೇ ಅವರ ಅಪ್ಪ ಅವನಿಗೆ ಗಾಡಿ ಓಡಿಸುವುದನ್ನು ಕಲಿಸಿದ್ದರು. ಆಗಲೇ ಅವನು ಅವರಮ್ಮನನ್ನು ಡಬಲ್ ರೈಡ್ ಮಾಡುತ್ತಿದ್ದ.

ಉಷಾ ಒಂದು ಎಂ.ಎನ್.ಸಿಯಲ್ಲಿ ದುಡಿಯುತ್ತಿದ್ದವಳು ಮಗಳು ಹುಟ್ಟಿದಾಗ ಅವಳ ಕಡೆ ಫೂರ್ಣ ಗಮನ ಹರಿಸಬೇಕೆಂದು ಕೆಲಸ ಬಿಟ್ಟಿದ್ದಳು.ಅವಳು ಆರನೆಯ ತರಗತಿ ಮುಗಿಸುವವರೆಗೆ ಅವಳೆಡೆ ಪೂರ್ಣಗಮನ ಹರಿಸಿದ್ದು, ಈ ಕಾಲಕ್ಕೆ ತಕ್ಕಂತೆ ಸ್ವಿಮ್ಮಿಂಗ್, ಸ್ಕೇಟಿಂಗ್, ಡ್ಯಾನ್ಸ್, ಸಂಗೀತ, ಕಂಪ್ಯೂಟರ್ -ಎಲ್ಲವನ್ನೂ ಅನೂಷಾ ಕರತಲಾಮಲಕ ಮಾಡಿಕೊಳ್ಳುತ್ತಿದ್ದಂತೆ ,ಅವಳಿಗೀಗ ತನ್ನ ಮೇಲ್ವಿಚಾರಣೆಯ ಅಗತ್ಯ ಅಷ್ಟಿಲ್ಲ ಎಂಬ ಕಾರಣದಿಂದ ತನ್ನ ಹೆಚ್ಚಿನ ಗಮನವನ್ನು ಟಿ.ವಿ.ನೋಡುತ್ತಾ, ನಿರಾಳವಾಗಿ ಕಾಲಕಳೆಯುವುದನ್ನು ರೂಡಿಸಿಕೊಂಡಳು.ಹೀಗೇ ಎರಡು ವರ್ಷ ಸರಿದಿದ್ದು ಅವಳ ಗಮನಕ್ಕೇ ಬರಲಿಲ್ಲ.ಗಮನಕ್ಕೆ ಬರುವಷ್ಟರಲ್ಲಿ ಮಗಳಿಗಿಂತ ತಾನು ಬಹಳ ಹಿಂದುಳಿದಿರುವುದು ಅರಿವಿಗೆ ಬಂತು. ಅನೂಷಳ ಬಾಯಲ್ಲಿ ಇತ್ತೀಚೆಗೆ " ನಿನಗೆ ಗೊತ್ತಾಗಲ್ಲ ಬಿಡಮ್ಮ " ಎಂಬ ಮಾತು ಮೇಲಿಂದ ಮೇಲೆ ಕೇಳಿ ಬರುತ್ತಿದೆ.ಉಷಾಳೂ ಸಹ ತನಗೇನೂ ಗೊತ್ತಿಲ್ಲ ಎಂಬುದನ್ನೇ ಸತ್ಯ ಎಂದುಕೊಂಡಿದ್ದಾಳೆ.

ಸುಮಾ ಕಾಲೇಜೊಂದರ ಉಪನ್ಯಾಸಕಿ. ಅವಳ ಮಗ ಇದೀಗ ತಾನೇ ಇಂಜಿನಿಯರಿಂಗ್ ಕಾಲೇಜಿನ ಮೆಟ್ಟಿಲು ಹತ್ತಿದ್ದಾನೆ. ಓದಿನಲ್ಲಿ ಪ್ರಚಂಡ. ಕಂಪ್ಯೂಟರ್ ಎಂದರೆ ಕರತಲಾಮಲಕ. ಕಂಪ್ಯೂಟರ್ ಮುಂದೆ ಅವನ ಕೈಚಳಕ ನೋಡಿ ಸುಮಾ ದಂಗಾಗಿದ್ದಾಳೆ. ಅಷ್ಟೇ ಅಲ್ಲ. ಅವನೆದುರಿಗೇ ಯಾವಾಗಲೂ ಅವನ ಕಂಪೂಟರ್ ಜ್ಞಾನವನ್ನು ಕೊಂಡಾಡಿದ್ದಾಳೆ. ನೀನೂ ಕಂಪ್ಯೂಟರ್ ಕಲಿ ಎಂದು ಪತಿ ಮೋಹನ ಅನೇಕ ಬಾರಿ ಹೇಳಿದ್ದಾನೆ. ಅವಳಿಗೆ ಮಾತ್ರ ಅದು ಅಲರ್ಜಿ. ಅದು ಬ್ರಹ್ಮ ವಿದ್ಯೆ ಎಂಬ ನಂಬಿಕೆ. ಆದರೀಗ ಕಾಲೇಜುಗಳಲ್ಲಿ ಉಪನ್ಯಾಸಕರೆಲ್ಲಾ ಕಂಪ್ಯೂಟರ್ ಬಳಸಿ ಪಾಠ ಮಾಡಿ ಎಂದು ಹೇಳುತ್ತಿದ್ದಾರೆ. ಮಗನ ಬಳಿ ಅದರ ಬಗ್ಗೆ ಕೇಳಿದರೆ ಅವಳಿಗೆ ಅರ್ಥವಾಗದಷ್ಟು ವೇಗವಾಗಿ ಹೇಳಿಕೊಡುತ್ತಾನೆ. ಸಹೋದ್ಯೋಗಿಗಳು " ಪರವಾಗಿಲ್ಲಪ್ಪ ! ನಿಮಗೇನೂ ನಿಮ್ಮ ಮಗಾನೇ ಹೇಲಿಕೊಡುತ್ತಾನೆ " ಎಂದಾಗ ಪೆಚ್ಚು ನಗೆ ನಗುತ್ತಾಳೆ. ಕಂಪ್ಯೂತರ್ ತರಗತಿಗೆ ಹೋಗಿ ಕಲಿಯಲೂ ಅವಳಿಗೆ ಕೀಳರಿಮೆ ಕಾಡುತ್ತಿದೆ. ಇಂತಹ ಸಮಸ್ಯೆ ಬಹುಶಃ ಮೂವತ್ತು ಮೂವತೈದರ ಆಸುಪಾಸಿನ ಎಲ್ಲಾ ತಾಯಂದಿರ ಸಮಸ್ಯೆಯೂ ಆಗಿದೆ.

ಸೀಮಾ, ಉಷಾ, ನಿರ್ಮಲಾ , ಸುಮಾ - ಇವರಲ್ಲಿ ಸಮಾನವಾಗಿರುವ ಒಂದು ಅಂಶವಿದೆ. ಮಕ್ಕಳು ಸ್ವಲ್ಪ ದೊಡ್ದವರಾಗುತ್ತಲೇ ಅವರೆಲ್ಲರೂ ತಮಗೆ ತಾವೇ ಒಂದು ರೀತಿಯ ನಿವೃತ್ತ ಜೀವನ ಆಯ್ಕೆ ಮಾಡಿಕೊಂಡು , ತಮಗಿಂತ ಮಕ್ಕಳು ತುಂಬ ತಿಳಿದವರು ಬುದ್ಧಿವಂತರು ಎಂಬ ಭಾವದಿಂದಲೇ ಕೃತಾರ್ಥತೆ ಕಂಡುಕೊಳ್ಳುವ ಹಂತ ತಲುಪಿರುತ್ತಾರೆ. ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದಂತೇ ತಮ್ಮನ್ನು ತಾವು ಕೀಳು ಎಂದು ಭಾವಿಸುವ ತಾಯಂದಿರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ತಂದೆಯರ ವಿಷಯದಲ್ಲಿ ಹೀಗಾಗುವುದು ಅಪರೂಪ ಎನ್ನಬಹುದು.ಹೀಗೇಕೆ ? ಮೊದಮೊದಲು ಮಕ್ಕಳು ತಮಗಿಂತ ಜಾಣರು ಎಂಬ ಭಾವದಿಂದ ಪುಳಕಿತರಾಗುವ ತಾಯಂದಿರು ಬಹುಬೇಗ ಸಂತೃಪ್ತಿಯ ಹಂತಕ್ಕೆ ತಲುಪಿ ಮೈಮರೆತಿರುವಾಗಲೇ ಇದ್ದಕ್ಕಿದ್ದಂತೆ ತಮ್ಮ ಹಾಗು ತಮ್ಮ ಮಕ್ಕಳ ನಡುವಿನ ಅಂತರ ಕಂದರವಾಗುವ ಮಟ್ಟಕ್ಕೆ ತಲುಪಿರುವುದು ಅರಿವಿಗೆ ಬಂದು ತೀವ್ರ ಖಿನ್ನತೆಗೆ ತುತ್ತಾಗುವ ಸಾಧ್ಯತೆಯೇ ಹೆಚ್ಚು.

ಸಾಮಾನ್ಯವಾಗಿ ಹೆಂಗಸರು ಬಹುಬೇಗ ಭಾವನಾತ್ಮಕವಾಗಿ ಪರಾವಲಂಬಿಗಳಾಗಲು ಇಚ್ಚಿಸುತ್ತಾರೆ.ಪತಿ ಹಾಗು ಮಕ್ಕಳ ಅಹಂ ನ್ನು ತಣಿಸುತ್ತಾ ತಮ್ಮನ್ನು ತಾವು ದಡ್ದರೆಂದು ಬಿಂಬಿಸಿಕೊಳ್ಲುತ್ತಾ ಅವರನ್ನು ತೃಪ್ತಿಪಡಿಸುತ್ತಾ ಕೃತಾರ್ಥರಾಗುತ್ತಾರೆ.ಇದರಿಂದ ತಮ್ಮ ತ್ಯಾಗಬುದ್ಧಿಗೆ ಹೆಚ್ಚಿನ ಬೆಲೆ ಸಿಗುತ್ತದೆ ಎಂದುಕೊಳ್ಳುತ್ತಾರೆ. ಆದರೆ ಅದರ ಬದಲಿಗೆ ತಮ್ಮನ್ನು ಮಕ್ಕಳು ಅಸಡ್ಡೆಯಿಂದ ಕಂಡಾಗ ದುಃಖಿತರಾಗುತ್ತಾರೆ.ಮಕ್ಕಳು ಚೆನ್ನಾಗಿ ಓದಿ ಸಮಾಜದಲ್ಲಿ ಒಳ್ಳೆಯ ಸ್ಥಾನ ಪಡೆದುಕೊಳ್ಳಲೆಂಬುದು ಎಲ್ಲ ತಾಯ್ತಂದೆಯರ ಅಭಿಲಾಷೆಯಾಗಿರುತ್ತದೆ. ಮಕ್ಕಳಿಗೆ ಯಾವ ತೊಂದರೆಯೂ ಆಗಬಾರದೆಂದು ಅವರಿಗೆ ಯಾವ ರೀತಿ ಸಹಾಯ ಮಾಡುತ್ತಾರೆಂದರೆ ಅವರ ಎಲ್ಲ ಕೆಲಸಗಳನ್ನೂ ತಾವೇ ಮಾಡುತ್ತಾ , ತಾವಿರುವುದೇ ಅವರ ಸೇವೆಗಾಗಿ ಎಂಬ ಭಾವ ಮೂಡಿಸುತ್ತಾರೆ. ನನ್ನ ಗೆಳತಿಯೊಬ್ಬಳು ಕಾಲೇಜಿಗೆ ಹೋಗುವ ಮಗ ಸರಿಯಾಗಿ ತಿಂಡಿ ತಿನ್ನುವುದಿಲ್ಲವೆಂದು ಊಟದ ತಟ್ಟೆ ಹಿಡಿದುಕೊಂಡು ಅವನ ಬೆನ್ನ ಹಿಂದೆಯೇ ಓಡಾಡುತ್ತಾ ಅವನ ಬಾಯಿಗೆ ತುತ್ತಿಡುವುದನ್ನು ನೋಡಿ ದಂಗಾಗಿದ್ದೇನೆ. ಈ ರೀತಿಯ ಅತಿರೇಕದ ಪ್ರೀತಿಯಿಂದ ಅವನನ್ನು ನಿಷ್ಪ್ರಯೋಜಕನನ್ನಾಗಿಸಬಹುದೇ ಹೊರತು ಮತ್ತೇನಿಲ್ಲ.

ತಾಯಂದಿರು ಮಕ್ಕಳ ದೃಷ್ಟಿಯಲ್ಲಿ ತಮ್ಮ ಘನತೆ ಉಳಿಸಿಕೊಂಡೂ ಪ್ರೀತಿಯನ್ನು ತೋರಿಸುವುದು ಹೇಗೆ ? ಕೀಳರಿಮೆಯ ಕವಚದಿಂದ ಹೊರಬರುವುದು ಹೇಗೆ ? ಸರಳ ಮಾತಿನ ಉತ್ತರವೆಂದರೆ ಮಕ್ಕಳೊಡನೆ ತಾವೂ ಬೆಳೆಯುವುದು !! ಅಂದರೆ ಮಕ್ಕಳು ಚಿಕ್ಕವರಿರುವಾಗ ಅವರಿಗೆ ಪಾಠ ಓದಿಸುವಾಗ ತಾವೂ ಅವರೊಂದಿಗೆ ಅದನ್ನು ಅರ್ಥಮಾಡಿಕೊಳ್ಳುತ್ತಾ ಬೆಳೆಯಬೇಕು. ತನಗಾಗಿ ದಿನದ ಸ್ವಲ್ಪ ಸಮಯವನ್ನು ಮೀಸಲಿಡಬೇಕು. ತನ್ನ ಬಗ್ಗೆ ತನಗೆ ಗೌರವವಿರಬೇಕು. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಎಲ್ಲಕ್ಕಿಂತ ಮೊದಲು ಮನಸ್ಸು ಮಾಡಬೇಕಷ್ಟೆ. ಇದರೊಂದಿಗೆ ದೈನಂದಿನ ಆಗುಹೋಗುಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಇದು ಕಷ್ಟದ ಕೆಲಸವೇನಲ್ಲ. ಹೆಣ್ಣು ಯಾವುದೇ ವಿಷಯವನ್ನು ಬಹುಬೇಗ ಕಲಿಯುತ್ತಾಳೆ. ಇದೆಲ್ಲವನ್ನೂ ಬೆಳೆಸಿಕೊಂಡರೆ ಮಕ್ಕಳು ಇತರರೂ ಬೆಲೆ ಕೊಡುತ್ತಾರೆ. ಗೌರವಿಸುತ್ತಾರೆ. ಆದರೆ ಆತ್ಮವಿಶ್ವಾಸ ಅಹಂಕಾರದ ಗಡಿ ದಾಟುವುದು ಬೇಡ. ಏಕೆಂದರೆ ಅವೆರಡರ ನಡುವಿನ ಗೆರೆ ಬಹಳ ತೆಳುವಾಗಿದೆ.ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕೆಂದರೆ ಮಕ್ಕಳೋಡನೆ ಪ್ರೀತಿ ತೋರಿಸಬಾರದೆಂದಲ್ಲ. ಶಿಸ್ತು, ಪ್ರೀತಿ ಇವೆರಡನ್ನೂ ಬ್ಯಾಲೆನ್ಸ್ ಮಾಡಬೇಕು.










12 comments:

  1. ನೀನು ಹೇಳಿದಂತೆ ಪೋಸ್ಟ್ ಮಾಡುವಾಗ ಹೆಚ್ಚು ಕಡಿಮೆಯಾಗಿತ್ತು. Edit ಮಾಡುವಾಗ ಕೆಲವೊಮ್ಮೆ ತುಂಬಾ confuse ಆಗುತ್ತೆ, ಆದ್ದರಿಂದ ಅದನ್ನು ತೆಗೆದು ಬೇರೆಯದನ್ನು publish ಮಾಡಿದ್ದೇನೆ.

    ನಿನ್ನ ಸಲಹೆಗೆ Thanks

    ReplyDelete
  2. ಚಂದ್ರಕಾಂತರವರೆ.. ನಿಮ್ಮ ಬರವಣಿಗೆ ಚೆನ್ನಾಗಿದೆ.. ಸರಳ ಭಾಷೆ..ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ.. ಇನ್ನಷ್ಟು ಬರೆಯಿರಿ...

    ReplyDelete
  3. ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು...ಮತ್ತಷ್ಟು ಬರೆಯಲು ಸ್ವಲ್ಪ ಉತ್ತೇಜನ ಸಿಕ್ಕಂತಾಗಿದೆ.

    ReplyDelete
  4. ತುಂಬಾ ಸಕಾಲಿಕ ಬರಹ. ಇಷ್ಟವಾಯಿತು ನಿರೂಪಣೆ, ಶೈಲಿ ಹಾಗೂ ನಿಮ್ಮ ದೃಷ್ಟಿಕೋನ. ಬರೆಯುತ್ತಿರಿ. ಬರುತ್ತಿರುವೆ.

    ReplyDelete
  5. ತೇಜಸ್ವಿನಿಯವರೆ ನೀವು ನನ್ನ ಬ್ಲಾಗ್ ಗೆ ಬಂದದ್ದು ಬಹಳ ಸಂತೋಷ. ನಿಮ್ಮದನ್ನು ನಾನು regular ಆಗಿ ನೋಡುತ್ತಿರುತ್ತೇನೆ.

    ReplyDelete
  6. ಚಂದ್ರಕಾಂತರವರೆ,
    ನಿಮ್ಮ ಬರಹಗಳೆಲ್ಲ ಚೆನ್ನಾಗಿವೆ, ನಿಮ್ಮದೇ ಅನುಭವಗಳು ಅನಿಸುತ್ತೆ, ಎಲ್ಲಕ್ಕಿಂತ ಮೊದಲು ಮನಸ್ಸು ಮಾಡಬೇಕಷ್ಟೆ,ಖಂಡಿತ ನಿಜ. ಶಿಸ್ತು ,ಪ್ರೀತಿ ಎರಡನ್ನು ಬ್ಯಾಲೆನ್ಸ್ ಮಾಡೋಕೆ ತಾಳ್ಮೆಮತ್ತು ಜಾಣ್ಮೆ ಎರಡೂ ಬೇಕು. ಎಷ್ಟೆಲ್ಲ ಜಾಣರಿದ್ದರು ಮಕ್ಕಳನ್ನು ಬೆಳೆಸುವುದರಲ್ಲಿ ತಲ್ಲೀನರಾಗಿ ನೀಟಾಗಿ ಅಡುಗೆನೂ ಮಾಡೋಕೆ ಬರೋಲ್ವೇನೋ ಅನಿಸಿ ಬಿಡುತ್ತೆ ಒಮ್ಮೊಮ್ಮೆ. ಹೀಗೆ ಹೆಚ್ಚು ಹೆಚ್ಚು ಬರಹ ಬತ್ತದ ತೊರೆಯಲ್ಲಿ ಹರಿದು ಬರಲಿ.

    ReplyDelete
  7. @ಸಾಟಿಯಾರು
    ರೀ ಈಗಲಾದರೂ ನಿಮ್ಮ ಹೆಸರು ಹೇಳೀಪ್ಪಾ :)
    ನಿಜಕ್ಕೂ ನನ್ನ ಬರವಣಿಗೆ ನೀವೆಲ್ಲಾ ಹೊಗಳುವಷ್ಟು ಚೆನ್ನಾಗಿದೆಯೇ ? ಎಂದು ನನಗೆ ನಾನೇ ಕೇಳಿಕೊಳ್ಳುವಂತಾಗಿದೆ. ಹೌದು ನೀವು ಹೇಳಿದಂತೆ ಇದೆಲ್ಲಾ ಪರೋಕ್ಷವಾಗಿ ನನ್ನ ಅನುಭವಗಳೇ:)ಆದ್ದರಿಂದ ನನಗೆ ನಾನೇ ಹೇಳಿಕೊಂಡ ಬುದ್ಧಿಮಾತುಗಳಿವು.!
    ನನ್ನ ಮಾತು ಕೇಳಿ ನಗಬೇಡಿ.ಹೀಗೆ ಆಗಾಗ ನನಗೆ ನಾನೇ ಬುದ್ಧಿ ಹೇಳಿಕೊಳ್ಳುತ್ತಿರುತ್ತೇನೆ.

    ReplyDelete
  8. ಖಂಡಿತ ಹೊಗಳುತ್ತಿಲ್ಲ,ನಿಮ್ಮ ಬರಹ ಇಷ್ಟ ಆಯ್ತು.ನಗೋದಾ? ಛೆ ,ಖಂಡಿತ ಇಲ್ಲಾರೀ, ಅನುಭವದಿಂದ ಬಂದ ಮಾತು.ಆ ಸ್ಟೇಜ್ ಗೆ ಬಂದಾಗಲೇ ಗೊತ್ತಾಗೋದು ಅನಿಸುತ್ತೆ.

    ReplyDelete
  9. @ಸಾಟಿಯಾರು? ಭಾರ್ಗವಿ
    ನಿಮ್ಮ ಹೆಸರು ತಿಳಿಸಿದ್ದು ತುಂಬಾ ಸಂತೋಷ. ನನಗಂತೂ ವ್ಯಕ್ತಿಗಳನ್ನು ಹೆಸರಿನಿಂದ ನೆನಪಿನಲ್ಲಿ ಇಟ್ಟುಕೊಳ್ಳುವುದೇ ಇಷ್ಟ.

    ನೀವು ಹೇಳಿರುವುದು ನಿಜ. ಅನುಭವದಿಂದ ಮಾತ್ರ ಈ ವಿಷಯಗಳು ಮನದಟ್ಟಾಗುತ್ತವೆ. ಆದರೂ ಕೆಲವರು ಮಾತ್ರ ಈ ಅಂಶಗಳನ್ನು ಒಪ್ಪುವುದೇ ಇಲ್ಲ!

    ReplyDelete
  10. ಹಲೋ ಮೇಡಂ,ಇತ್ತೀಚಿನ ದಿನಗಳಲ್ಲಿ ಮಕ್ಕಳು ಅತಿಯಾದ ಮುದ್ದು ಮತ್ತು ಪ್ರೀತಿಯಿಂದ ಹಾಳಾಗುವದನ್ನು ನಾನು ನೋದಿದ್ದೇನೆ.ನಿಮ್ಮ ಲೇಖನ ಇದನ್ನ್ನು ಚೆನ್ನಾಗಿ ಪ್ರತಿಬಿಂಬಿಸುತ್ತದೆ. ಅಂದಹಾಗೆ ಹೇಗಿದ್ದೀರಿ? ಕಾಲೇಜಿನಲ್ಲಿ ಎಲ್ಲರೂ ಹೇಗಿದ್ದಾರೆ? ನನ್ನದೊಂದು ಬ್ಲಾಗ್ www.bisilahani.blogspot.com ನ್ನು ನೋಡಿ ಅಭಿಪ್ರಾಯ ಹೇಳಿ.ಮತ್ತೆ ಬರೆಯುವೆ. - ಉದಯ ಇಟಗಿ

    ReplyDelete
  11. @ ಬಿಸಿಲ ಹನಿ ಉದಯ್ ಅವರಿಗೆ

    ನಿಮ್ಮ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು. ಮೇಡಮ್ ಎಂದು ಬೇರೆ ಸಂಬೋಧಿಸಿದ್ದಿರಿ. ಯಾರೆಂದು ತಲೆಕೆಡಿಸಿಕೊಂಡಿದ್ದೆ. ನಂತರ ನೋಡಿದ ಮೇಲೆ ಖುಷಿಯಾಯಿತು. ರೇಖಾ ಹಾಗು ಮಗಳು ಹೇಗಿದ್ದಾರೆ. ನೀವು ವಿದೇಶದಲ್ಲೇ ಇರುವಿರಾ?ಕಾಲೇಜಿನಲ್ಲಿ ಎಲ್ಲಾ ಚೆನ್ನಾಗಿದ್ದಾರೆ.

    ReplyDelete