Wednesday, November 5, 2008

ಬಾಲಿಕಾವಧು



ಇತ್ತೀಚೆಗೆ ಪ್ರಾರಂಭವಾದ ಹೊಸ ಚಾನಲ್ ನಲ್ಲಿ ಪ್ರಸಾರವಾಗುತ್ತಿರುವ , ಎಪ್ಪತ್ತನೆಯ ಕಂತಿನ ಆಸುಪಾಸಿನಲ್ಲಿರುವ " ಬಾಲಿಕಾವಧು" ಧಾರಾವಾಹಿ ಜನಪ್ರಿಯತೆಯ ಪಟ್ಟಿಯಲ್ಲಿ ಐದನೆಯ ಸ್ಥಾನವನ್ನು ಗಳಿಸಿರುವುದು ಭಾರತದ ಟೆಲಿವಿಷನ್ ಇತಿಹಾಸದಲ್ಲಿಯೇ ಪ್ರಾಯಶಃ ಮೊದಲನೆಯದು. ಘಟಾನುಘಟಿ ಅತ್ತೆ-ಸೊಸೆಯರ ಮಧ್ಯದಲ್ಲಿ ಈ ಪುಟ್ಟ ಸೊಸೆ ಹೇಗೆ ತಾನೆ ಜಾಗ ಗಿಟ್ಟಿಸಿಕೊಂಡಳು ? ಈ ಧಾರಾವಾಹಿಯ ವೈಶಿಷ್ಟ್ಯವೇನು ? ಈ ಎಲ್ಲ ವಿಷಯಗಳ ಬಗ್ಗೆ ಸ್ಟಾರ್ ಸಮೂಹದ ಚಾನೆಲ್ ಒಂದರಲ್ಲಿ ಇತ್ತೀಚೆಗೆ ಬಿಸಿಬಿಸಿ ಚರ್ಚೆ ನಡೆಯಿತು. ಆ ಸಂದರ್ಭದಲ್ಲಿ ಈ ಧಾರಾವಾಹಿಯ ಅತ್ತೆ-ಸೊಸೆ ( ಸುಮಿತ್ರ ಮತ್ತು ಆನಂದಿ ) ಇವರ ಸಂದರ್ಶನವೂ ಪ್ರಸಾರವಾಯಿತು.ಇದು ಕೇವಲ ಭಾರತದಲ್ಲಿ ಮಾತ್ರವಲ್ಲ ದುಬಾಯಿ, ನೆದರ್ಲ್ಯಾಂಡ್ ಅಮೆರಿಕ, ಕೆನಡ, ಮುಂತಾದ ಕಡೆಗಳಲ್ಲಿರುವ ಭಾರತೀಯರ ಮನಸ್ಸನ್ನೂ ಸೂರೆಗೊಂಡಿದೆ.ಹಾಗಾದರೆ ಈ ಧಾರಾವಾಹಿಯ ವಿಶೇಷವೇನು ?

ಈ ಧಾರಾವಾಹಿಯನ್ನು ವೀಕ್ಷಿಸುತ್ತಿರುವ ನನಗೆ ಅದರ ಬಗ್ಗೆ ಅನಿಸಿದ್ದನ್ನು ಮುಕ್ತವಾಗಿ ಇಲ್ಲಿ ಬರೆದಿದ್ದೇನೆ. ಚರ್ಚೆ, ಕಾಮೆಂಟ್ ಗಳಿಗೆ ಸ್ವಾಗತ!

ಬಾಲಿಕಾವಧು- ಹೆಸರೇ ಸೂಚಿಸುವಂತೆ ಬಾಲ್ಯವಿವಾಹದ ಕರಾಳ ಮುಖವನ್ನು ಪರಿಚಯಿಸುವ ಧಾರಾವಾಹಿ. ಈಗಲೂ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಬಾಲ್ಯವಿವಾಹಗಳು ನಡೆಯುತ್ತಿರುವ ರಾಜಾಸ್ಥಾನದ ಹಳ್ಳಿಯೊಂದರ ಸಂಸಾರದ ಸುತ್ತ ಈ ಕತೆ ಸಾಗುತ್ತದೆ. ಎಂಟು ಹತ್ತು ವಯಸ್ಸಿನ ಬಾಲಕಿ ಆನಂದಿಯ ವಿವಾಹದೊಂದಿಗೆ ಧಾರಾವಾಹಿ ಪ್ರಾರಂಭವಾಗುತ್ತದೆ. ಒಂದು ಬಡ ಕುಟುಂಬದ ತಂದೆತಾಯಿಯರ ಏಕೈಕ ಸಂತಾನ ಆನಂದಿ. ಶಾಲೆಯಲ್ಲಿ ಅತಿ ಚುರುಕಿನ ಹುಡುಗಿ. ಅಲ್ಲಿಯ ಶಿಕ್ಷಕಿಯ ಬಳಿ ತನ್ನ ಮುಗ್ಧ ಪ್ರಶ್ನೆಗಳನ್ನು ಕೇಳುತ್ತಾ ಓದಿನಲ್ಲಿ ಅತೀವ ಆಸಕ್ತಿ ಹೊಂದಿರುವ ಬಾಲಕಿ ಆನಂದಿ. ಅವಳ ಮದುವೆ ಮತ್ತೊಂದು ಹಳ್ಳಿಯ ಶ್ರೀಮಂತ ಕುಟುಂಬದ ಕಲ್ಯಾಣಿಯಮ್ಮನ ಮೊಮ್ಮಗ ಜಗದೀಶನೊಂದಿಗೆ ನಿಶ್ಚಯವಾಗುತ್ತದೆ.ಶಿಕ್ಷಕಿಯು ಆನಂದಿಯ ತಂದೆಯ ಬಳಿ ಈ ವಯಸ್ಸಿಗೆ ಮದುವೆ ಮಾಡುವುದು ಕಾನೂನು ರೀತ್ಯಾ ತಪ್ಪೆಂದು ಇನ್ನಿಲ್ಲದಂತೆ ಹೇಳುತ್ತಾಳೆ.ಆದರೆ ಈ ಮಾತುಗಳನ್ನು ಅವರು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.ಮದುವೆಯ ಕಾರ್ಯಗಳು ಪ್ರಾರಂಭವಾಗುತ್ತವೆ. ವರ ಜಗದೀಶನ ವಯಸ್ಸು ಕೆವಲ ಹತ್ತು ವರ್ಷ!. ಮೈತುಂಬಾ ಒಡವೆ, ಸೊಗಸಾದ ಮದುವೆಹೆಣ್ಣಿನ ಅಲಂಕಾರದಿಂದ ಆನಂದಿ ಸಂಭ್ರಮಿಸುತ್ತಾಳೆ.ಆದರೆ ಮದುವೆಯ ಸುದ್ದಿ ಕೇಳಿ ಶಿಕ್ಷಕಿ ಆ ಊರಿನ ಪೊಲಿಸ್ ಅಧಿಕಾರಿಗೆ ದೂರು ಕೊಟ್ಟು ಮದುವೆಯನ್ನು ನಿಲ್ಲಿಸುವಂತೆ ಹೇಳುತ್ತಾಳೆ. ಆದರೆ ಅವನೂ ಸಹ ಈ ಮದುವೆಯ ಒಂದು ಭಾಗವಾಗಿ ಸಂಭ್ರಮಿಸುತ್ತಿರುವುದನ್ನು ನೋಡಿ ಆಕೆ ಮೇಲಧಿಕಾರಿಗಳ ಬಳಿ ದೂರು ಕೊಟ್ಟು ಮದುವೆ ನಿಲ್ಲಿಸಿ ಅವರೆಲ್ಲರನ್ನೂ ಜೈಲಿಗೆ ಕಳಿಸುವೆನೆಂದಾಗ ಆನಂದಿಗೆ ದಿಗ್ಭ್ರಮೆಯಾಗಿ ಅವಳು ಕೇಳುವ ಪ್ರಶ್ನೆ " ಮದುವೆ ನಿಂತರೆ ಈ ಒಡವೆ ವಸ್ತ್ರ ಎಲ್ಲಾ ನನ್ನಿಂದ ದೂರವಾಗುತ್ತದೆಯೇ " ಎಂದು. ಮದುವೆಯ ಬಗ್ಗೆ ಅವಳಿಗಿರುವ ಕಲ್ಪನೆ ಅಷ್ಟೆ..

ಒಂದು ಸಾಮಾಜಿಕ ಪಿಡುಗನ್ನು ಸರ್ವತೋಮುಖವಾಗಿ ಪರಿಚಯಿಸಿ ಅದರ ದುಷ್ಪರಿಣಾಮವನ್ನು ಮನರಂಜನೆಯ ಮಾಧ್ಯಮದ ಮೂಲಕ ಚಿತ್ರಿಸಿರುವ ರೀತಿ ಅಚ್ಚರಿ ಹುಟ್ಟಿಸುತ್ತದೆ.Education through Entertainment ಎಂಬ ತತ್ವ ಇಲ್ಲಿ ನೂರಕ್ಕೆ ನೂರರಷ್ಟು ನಿಜವಾಗಿದೆ. ಎಲ್ಲಿಯೂ ಘೋಷಣೆಗಳಿಲ್ಲ.ಸಮಸ್ಯೆಯ ವೈಭವೀಕರಣವಿಲ್ಲ, ಆ ಜನರ ಸಂಸ್ಕೃತಿ,ಸಹಜ ಜೀವನ ಶೈಲಿ ಇವುಗಳ ಮೂಲಕವೇ ಸಮಸ್ಯೆಯ ಆಳಕ್ಕೆ ನೋಡುಗರನ್ನು ಕರೆದೊಯ್ಯುವ ರೀತಿ ಮನೋಜ್ಞವಾಗಿದೆ. ಸಂಭ್ರಮದಿಂದ ಮದುವೆಯಾಗುವ ಆನಂದಿ ಅತಿ ಶೀಘ್ರದಲ್ಲಿಯೇ ತನ್ನ ತಾಯ್ನೆಲವನ್ನು, ತನ್ನ ಮಮತೆಯ ತಾಯ್ತಂದೆಯರನ್ನು, ತನ್ನ ಗೆಳತಿಯರನ್ನೆಲ್ಲಾ ಅಗಲಲೇ ಬೇಕಾದ ವಾಸ್ತವವನ್ನು ಅರಗಿಸಿಕೊಳ್ಳಬೇಕಾಗುತ್ತದೆ. ಆ ಪುಟ್ಟ ವಯಸ್ಸಿಗೇ ಬಾಲ್ಯ ಸಹಜ ಆಟಪಾಟಗಳನ್ನು ಮರೆತು ದೊಡ್ಡ ಹೆಂಗಸಿನಂತೆ ಗೃಹಿಣಿಯ ಕರ್ತವ್ಯಗಳನ್ನು ನಿಭಾಯಿಸುವುದನ್ನೂ ಕಲಿಯಬೇಕಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ತಾನು ಪ್ರೀತಿಸುತ್ತಿದ್ದ ಪುಸ್ತಕಗಳನ್ನು ಮುಟ್ಟಲೇಬಾರದೆಂಬ ದಾದಿಸಾ ( ಆನಂದಿಯ ಅತ್ತೆಯ ಅತ್ತೆ !!) ಆಜ್ಞೆಯನ್ನು ಒತ್ತಾಯದಿಂದ ಪಾಲಿಸಬೇಕಾಗುತ್ತದೆ.

ಧಾರಾವಾಹಿಯ ಪ್ರಾರಂಭದಲ್ಲಿ ಆನಂದಿಯ ಪಾತ್ರವೊಂದೇ ಪ್ರಧಾನವಾಗಿದ್ದರೂ ಕ್ರಮೇಣ ಬಾಲ್ಯವಿವಾಹಕ್ಕೊಳಗಾಗಿ ಬಾಲ ವಿಧವೆಯಾದ ಆನಂದಿಯ ಗೆಳತಿ ಫುಲೀಯ ಕತೆ, ಚಿಕ್ಕ ವಯಸ್ಸಿಗೇ ತನ್ನ ವಯಸ್ಸಿನ ಹುಡುಗನೊಂದಿಗೆ ಮನೆ ಬಿಟ್ಟು ಓಡಿಹೋಗಿ, ಅವನು ಕೈಕೊಟ್ಟು ಗರ್ಭಿಣಿಯಾಗಿ ಮನೆಗೆ ಹಿಂತಿರುಗಿ ಊರವರಿಂದ ಸಾವಿನ ಶಿಕ್ಷೆ ಎದುರಿಸಬೇಕಾದ ಚಂಪಾಳ ಕತೆ, ಬಡತನದ ಕಾರಣದಿಂದ ತಂದೆಯ ವಯಸ್ಸಿನ ವರನೊಂದಿಗೆ ಎರಡನೆಯ ಪತ್ನಿಯಾದ ಹದಿನೆಂಟರ ಹರಯದ ಗೆಹನಾಳ ಕತೆ, ಹೀಗೆ ಅನೇಕ ಕವಲುಗಳೊಂದಿಗೆ ಕತೆ ಬೆಳೆಯುತ್ತಿದೆ. ಬಾಲ್ಯ ವಿವಾಹದಷ್ಟೇ ಭೀಕರವಾದದ್ದು ಅಗಾಧ ವಯಸ್ಸಿನ ಅಂತರದ ವಿವಾಹ ಎಂಬುದನ್ನೂ ಈ ಧಾರಾವಾಹಿ ಒತ್ತಿ ಒತ್ತಿ ಹೇಳುತ್ತಿದೆ.

ಶಿಕ್ಷಕಿಯೊಬ್ಬಳು ಬಾಲ್ಯವಿವಾಹವನ್ನು ತಡೆಯಲು ಪ್ರಯತ್ನಿಸಿದಾಗ ಅವಳನ್ನು ದೂರದ ಊರಿಗೆ ವರ್ಗ ಮಾಡಿಸುವ ಹುನ್ನಾರ ಅವಳ ಪ್ರಯತ್ನಕ್ಕೆ ಮಣ್ಣೆರಚುತ್ತದೆ. ಆದರೆ ತನ್ನ ತಂದೆಯ ವಯಸ್ಸಿನ ವ್ಯಕ್ತಿಯೊಂದಿಗೆ ವಿವಾಹವಾದ ಗೆಹನಾ ಪ್ರತಿಭಟನೆಯ ಕಿಡಿಹೊತ್ತಿಸುವ ಮೂಲಕ ಕ್ರಾಂತಿ ಮನೆಯಿಂದಲೇ ಪ್ರಾರಂಭವಾಗಬೇಕೆಂಬ ಸೂಚನೆಯನ್ನೂ ನೀಡುತ್ತದೆ.ವಯಸ್ಸಾದ ಪತಿಯ ಸಹವಾಸದಿಂದ ನೋವುಣ್ಣುತ್ತಿದ್ದ ಗೆಹನಾ ಕಡೆಗೊಮ್ಮೆ ಧೈರ್ಯದಿಂದ " ನಿನ್ನ ಮಗಳ ವಯಸ್ಸಿಗಿಂತ ಚಿಕ್ಕವಳಾದ ನನ್ನನ್ನು ಮದುವೆಯಾಗಲು ನಾಚಿಕೆಯಾಗಲಿಲ್ಲವೇ ?" ಎಂದು ಪ್ರಶ್ನಿಸುವುದನ್ನು ಕಂಡಾಗ ನಮ್ಮ ಹೃದಯವನ್ನೇ ಇರಿದಷ್ಟು ನೋವಾಗುತ್ತದೆ.

ಅವಿಕಾ ಗೋರ್ ಆನಂದಿಯ ಪಾತ್ರದಲ್ಲಿ ಸರ್ವರ ಮನಸೂರೆಗೊಂಡಿದ್ದಾಳೆ. ಅವಳ ಅಭಿನಯ ಎಂಥವರಲ್ಲಿಯೂ ಬೆರಗು ಮೂಡಿಸುವಂತದ್ದು. ಅವಳಿಗೆ ಸರಿಸಾಟಿಯಾಗಿ ಬಾಲವರನಾಗಿ ಜಗದೀಶನ ಪಾತ್ರದಲ್ಲಿ ಅವಿನಾಶ್ ಮುಖರ್ಜಿಯ ಅಭಿನಯವೂ ಮೆಚ್ಚುಗೆಗೆ ಪಾತ್ರವಾಗುತ್ತದೆ. ಹೀಗೆ ಹೇಳಿದರೆ ಇತರ ಪಾತ್ರಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಪ್ರಾದೇಶಿಕತೆಯನ್ನು ಅದರ ಎಲ್ಲ ಸೂಕ್ಷ್ಮ ವಿವರಗಳ ಮೂಲಕ,ಧಾರಾವಾಹಿಯನ್ನು ನಿರ್ದೇಶಿಸುತ್ತಿರುವ ನಿರ್ದೇಶಕರ ಅದ್ಭುತ ಸಾಮರ್ಥ್ಯ ಅನೇಕ ಕಡೆಗಳಲ್ಲಿ ಗೃಹಭಂಗ ನಿರ್ದೇಶಿಸಿದ ಗಿರೀಶ್ ಕಾಸರವಳ್ಳಿಯವರನ್ನು ನೆನಪಿಗೆ ತರುತ್ತದೆ.ಈ ಧಾರಾವಾಹಿಯ ಮತ್ತೊಂದು ಪ್ಲಸ್ ಅಂಶವೆಂದರೆ ಅದರ ಶೀರ್ಷಿಕೆ ಗೀತೆ.ಆ ಗೀತೆಯನ್ನು ಕೇಳಿದ ಯಾರೂ ಅದನ್ನು ಪೂರ್ತಿ ಕೇಳದೆ ಇರುವುದಿಲ್ಲ. ರಾಜಾಸ್ಥಾನಿ ಹಿಂದಿಯ ಆ ಜಾನಪದಹಾಡು ಹೃದಯಸ್ಪರ್ಶಿಯಾಗಿದೆ. ಈ ಧಾರಾವಾಹಿಯ ಪಾತ್ರಗಳ ವಸ್ತ್ರ ವಿನ್ಯಾಸವಂತೂ ಸಂಪೂರ್ಣ ರಾಜಾಸ್ಥಾನೀ ಸೊಗಡಿನಿಂದ ಕೂಡಿದೆ.ಎಲ್ಲಾ ಪಾತ್ರಗಳು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿವೆ.ಇನ್ನೂ ಎಪ್ಪತ್ತರ ಆಸುಪಾಸಿನ ಕಂತಿನಲ್ಲಿರುವುದರಿಂದ ಮೆಗಾಧಾರಾವಾಹಿಗಳ ದುರ್ಗುಣ ( ರಬ್ಬರಿನಂತೆ ಎಳೆಯುವುದು ) ಇನ್ನೂ ಇದಕ್ಕೆ ಅಂಟಿಕೊಂಡಿಲ್ಲ.

ಬಾಲನಟರನ್ನು ಅನೇಕ ಧಾರಾವಾಹಿಗಳಲ್ಲಿ ನೋಡುತ್ತೇವೆ. ಆದರೆ ಬಹುತೇಕ ಪಾತ್ರಗಳು ದೊಡ್ಡವರಂತೆಯೇ ಮಾತನಾಡುವುದು, ದೊಡ್ಡವರಂತೆ ತಮ್ಮನ್ನು ತಾವು project ಮಾಡಿಕೊಳ್ಳುವುದನ್ನು ನೋಡಿ ನೋಡಿ ಬೇಸತ್ತಿರುವ ಮನಸುಗಳಿಗೆ ನಿಜವಾದ ಅರ್ಥದಲ್ಲಿ ಬಾಲ್ಯ ಎಂದರೇನು ? ಮುಗ್ಧತೆ ಎಂದರೇನು ? ಅವು ಸಹಜವಾಗಿ ಕಳೆಯುವುದೆಂದರೇನು ? ಇದೆಲ್ಲದರ ಅನುಭವ , ಅರ್ಥ ಈ ಧಾರಾವಾಹಿಯನ್ನು ನೋಡಿದಾಗ ತಾನೇ ತಾನಾಗಿ ಆಗುತ್ತದೆ.

ಈ ಧಾರಾವಾಹಿ ಪ್ರಸಾರವಾಗುವ ಚಾನೆಲ್ - ಕಲರ್ಸ್
ಸಮಯ : ಸೋಮವಾರದಿಂದ ಶುಕ್ರವಾರ ರಾತ್ರಿ ೮ ಗಂಟೆಗೆ

18 comments:

  1. ಚಂದ್ರಕಾಂತ ಅವರೆ,

    ಬಹುದಿನಗಳಿಂದಲೂ ನಾನು ಈ ಧಾರಾವಹಿಯ ಕುರಿತು ಬರೆಯಬೇಕೆಂದಿದ್ದೆ. ನಿಮ್ಮಲಿ ಓದಿ ತುಂಬಾ ತುಂಬಾ ಖುಶಿಯಾಯಿತು ನೋಡಿ. ನಿಜಕ್ಕೂ ಎಲ್ಲರೂ ಎಲ್ಲಾ ವಯಸ್ಸಿನವರೂ ನೋಡಲೇಬೇಕಾದ ಧಾರಾವಾಹಿಯಿದು ಎನ್ನಬಹುದು. ಏಕತಾ ಕಪೂರ್‍ ಈ ಧಾರಾವಾಹಿಯಿಂದ ಕಲಿಯಬೇಕಾದ್ದು ತುಂಬಾ ಇದೆ. ನನ್ನ ಅಚ್ಚುಮೆಚ್ಚಿನ ಧಾರಾವಾಹಿ. ಇದೊಂದನ್ನೇ ನಾನು ನೋಡುವುದು. ಸಹಜ ಮುಗ್ಧತೆಯಿಂದಲೇ, ಪ್ರಶ್ನೆಗಳಿಂದಲೇ ಅದೆಷ್ಟೋ ಪಿಡುಗಗಳನ್ನು ನಮ್ಮ ಮುಂದಿರಿಸುವ ಈ ಧಾರಾವಹಿಯ ಬಾಲ ಕಲಾವಿದರ ಅಭಿನಯ ಎಂತಹವರನ್ನೂ ಮನಸೂರೆಗೊಳಿಸುತ್ತದೆ.

    "ಛೋಟೀಸೀ ಉಮರಮೆ.." ಟೈಟಲ್ ಹಾಡಂತೂ ಈಗಲೂ ಮನವನ್ನು ಮೃದುವಾಗಿಸುತ್ತದೆ. ಆನಂದಿಯಿಂದ ಹಿಡಿದು.. ರಾಕ್ಷಸರಂತಿರುವ ದಾದಿಸಾ ಹಾಗೂ ಅವಳ ತಾವೂಜೀ ಎಲ್ಲರ ಅಭಿನಯವೂ ಸಹಜವೆನಿಸುತ್ತದೆ. ೨೧ ಶತಮಾನದಲ್ಲೂ ಕೂಡ ಅದೆಷ್ಟು ಮೂಡನಂಬಿಕೆಗಳು ದಬ್ಬಾಳಿಕೆಗಳು, ದೌರ್ಜನ್ಯಗಳು ಭಾರತದ ಕೆಲವೊಂದು ಹಳ್ಳಿ, ಪ್ರಾಂತಗಳಲ್ಲಿವೆಯೆಂದು ಈ ಧಾರಾವಾಹಿ ಕಾಣಿಸುತ್ತದೆ. ಮುಖ್ಯವಾಗಿ ಇದರಲ್ಲಿ ಪ್ರಾಮಾಣಿಕತೆಯಿದೆ. ಯಾವುದೇ ಚಮತ್ಕಾರವಾಗಲೀ ನಾಟಕೀಯ ತಿರುವುಗಳಾಗಲೀ ಇಲ್ಲ. ತುಂಬಾ ಇಷ್ಟವಾಯಿತು ನಿಮ್ಮ ಬರಹವನ್ನೋದಿ.


    "ಕ್ರಾಂತಿ ಶೋಷಿತರಿಂದಾದಾಗ ಮಾತ್ರ ಯಶಸ್ವಿಯಾಗುತ್ತದೇ. ಯಾರೋ ಬಂದು ನಮ್ಮನ್ನು ಉದ್ಧಾರಮಾಡುವುದಿಲ್ಲ.. ನಮ್ಮನ್ನು ನಾವೇ ಉದ್ಧರಿಸಿಕೊಳ್ಳಬೇಕೆಂದು ಶ್ರೀಕೃಷ್ಣನೇ ಹೇಳಿದ್ದಾನೆ"

    ಅಂದಹಾಗೆ ಈ ಧಾರಾವಾಹಿ ಪ್ರತಿದಿನ ಮಧ್ಯಾಹ್ನ ೨ ಗಂಟೆಗೆ ಮರುಪ್ರಸಾರವಾಗುತ್ತದೆ. ೮ ಗಂಟೆಗೆ ನೋಡಲಾಗದಿದ್ದರೆ ಮಧ್ಯಾಹ್ನವೂ ನೋಡಬಹುದು.


    ನಿಮ್ಮ ಈ ಬರಹದ ಲಿಂಕ್‌ಅನ್ನು ನನ್ನ ಬ್ಲಾಗ್‌ನಲ್ಲಿ ಹಾಕಿಕೊಳ್ಳಲೇ?

    ReplyDelete
  2. @ತೇಜಸ್ವಿನಿ

    ತೇಜಸ್ವಿನಿಯವರೆ,

    ನಿಮ್ಮ ಪ್ರತಿಕ್ರಿಯೆಗೆ ತುಂಬು ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆ ನನ್ನ ಬರವಣಿಗೆಗಿಂತ ತುಂಬಾ ಚೆನ್ನಾಗಿದೆ. ನನ್ನನ್ನು ತುಂಬಾ ಕಾಡಿದ ಧಾರಾವಾಹಿ ಇದು. ಆ ಭಾವನೆಗಳಿಗೆ ಭಾಷೆಯ ರೂಪ ಕೊಡಲೇ ಬೇಕೆನಿಸಿತು. ನನ್ನಂತೆಯೇ ಯೋಚಿಸುವ ಸಮಾನ ಮನಸ್ಕರೊಬ್ಬರು ಸಿಕ್ಕರಲ್ಲಾ ಎಂದು ನನಗೆ ಸಂತಸವಾಗಿದೆ.

    ನೀವು ಹೇಳಿದಂತೆ ಮಧ್ಯಾನ್ಹ ೨ ಗಂಟೆಗೆ ಮಾತ್ರವಲ್ಲ ,ಬೆಳಿಗ್ಗೆ ೮.೩೦, ಮಧ್ಯಾನ್ಹ೧೧ ಗಂಟೆಗೂ ಪುನರಾವರ್ತನೆಯಾಗುತ್ತದೆ. ಜೊತೆಗೆ ಪ್ರತಿ ಶನಿವಾರ ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೪.೩೦ ರ ವರೆಗೆ ಹಿಂದಿನ ೧೭ ಭಾಗಗಳು ಪ್ರಸಾರವಾಗುತ್ತದೆ.

    ಖಂಡಿತವಾಗಿಯೂ ನಿಮ್ಮ ಬ್ಲಾಗ್ ನಲ್ಲಿ ಹಾಕಿಕೊಳ್ಳಿ.

    ಇನ್ನೊಂದು ವಿಷಯ. you tube ನಲ್ಲಿ ಈ ಧಾರಾವಾಹಿಯ ೪೫ ಭಾಗಗಳನ್ನು download ಮಾಡಿಕೊಳ್ಳಬಹುದು.ಛೋಟಿ ಸಿ ಉಮರ್ ಮೆ ಹಾಡನ್ನೂ download ಮಾಡಿಕೊಳ್ಳಬಹುದು

    ReplyDelete
  3. ಲೇಖನ ಚಿಕ್ಕವಾಗಿ ಚೊಕ್ಕವಾಗಿದೆ. ನನಗೆ ಪುಟಾಣಿ ಹುಡುಗಿ ಬಹಳ ಇಷ್ಟವಾಗುತ್ತಾಳೆ. ಹಾಗೆ ಅದೇ ಕಲರ್ಸ್ ಟಿವಿಯಲ್ಲಿ ಜೈ ಶ್ರೀಕ್ರಷ್ಣಾ ಧಾರವಾಹಿ ಕೂಡ ಚೆನ್ನಾಗಿದೆ.

    ReplyDelete
  4. ನಿಮ್ಮ ಮಾಹಿತಿಯಿಂದಾಗಿ you tubeನಲ್ಲಿ ನನಗೆ Title track ಕೇಳಲು ಸಾಧ್ಯವಾಯಿತು. ತುಂಬಾ ಧನ್ಯವಾದಗಳು.

    ReplyDelete
  5. @ ಸಿಮೆಂಟ್ ಮರಳು...
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಶ್ರೀ ಕೃಷ್ಣ ಧಾರಾವಾಹಿಯ ಕೃಷ್ಣನಂತೂ ಬಲು ಮುದ್ದು ಮಗು. ಬಲರಾಮನೂ ಚೆನ್ನಾಗಿದ್ದಾನೆ. ಆ ಧಾರಾವಾಹಿಯೂ ಚೆನ್ನಾಗಿದೆ

    @ತೇಜಸ್ವಿನಿ

    ನಾನು ಹೇಳಿದ್ದನ್ನು ಎಷ್ಟು ಬೇಗ ಕಾರ್ಯರೂಪಕ್ಕೆ ತಂದಿದ್ದೀರಾ . ನನಗಂತೂ ನಿಮ್ಮನ್ನು ನೋಡಿದರೆ ನನ್ನ ವಿದ್ಯಾರ್ಥಿನಿಯರು ಹೀಗಿರಬಾರದೇ ಎನಿಸುತ್ತದೆ.
    ನಿಮ್ಮಂತೆಯೇ ಆಗಾಗ ಕೆಲವು ಕವನಗಳ ಬಗ್ಗೆ ಕೆಲವು ಅನಿಸಿಕೆಗಳನ್ನು ಬರೆಯಬೇಕೆಂದಿರುವೆ.

    ReplyDelete
  6. ಚಂದ್ರಕಾಂತ ಮತ್ತು ತೇಜಸ್ವಿನಿ ಇಬ್ಬರಿಗು ಹೇಗೆ Thanks ಹೇಳೋದು ಅಂತಾನೆ ಗೊತ್ತಾಗ್ತಾ ಇಲ್ಲ. ನನಗೆ ಅಷ್ಟು ಇಷ್ಟ ಆಯ್ತು. ಅಭಿನಯ ಅಥವಾ ಧಾರವಾಹಿ ಬಗ್ಗೆ ನಿಮ್ಮ ವಿವರಣೆ ಮುಂದೆ ನನಗೆ ಬರೆಯಲು ಪದಗಳಿಲ್ಲ. ತುಂಬಾ ಧನ್ಯವಾಗಳು.
    ಚಂದ್ರಕಾಂತರವರೆ ನೀವು youtube ಹೇಳಿದ್ದು ತುಂಬಾ Help ಆಯ್ತು. ಹಾಗಾಗಿ ನೋಡಿಯೇ ಇಲ್ಲಿ ಬರೆಯೋಣ ಅಂತ ಹಾಗೆ ಹೋದೆ.ನಿನ್ನೆ ಇಡೀ ಅದೇ ಕೆಲಸ:-).ಇನ್ನೂ ಪೂರ್ಣ ಮುಗಿಸಲು ಆಗಿಲ್ಲ.:-((.

    ReplyDelete
  7. @ಭಾರ್ಗವಿ
    ಈಗ ನೀವು ನನಗಿಂತಾ fast.ಅದು ನನಗೆ ಇಷ್ಟ ಕೂಡಾ. ನೀವು You tubeನಲ್ಲಿ ಮೊದಲಿಂದಾ ನೋಡುತ್ತಿದ್ದೀರಾ ? ನಾನು ಮೊದಲ ಕೆಲವು ಭಾಗಗಳನ್ನು ನೋಡಿಲ್ಲ. ರಜೆ ಸಿಕ್ಕಾಗ ನೋಡಬೇಕು.
    ಈ ಚಾನೆಲ್ ಮತ್ತು ಈ ಧಾರಾವಾಹಿ ಕಣ್ಣಿಗೆ ಬಿದ್ದದ್ದೂ ಸಹ ತೀರಾ ಅನಿರೀಕ್ಷಿತ. ಯಾವತ್ತೋ ಒಂದು ದಿನ(ಸುದಿನ) ನಾವು ನೋಡುತ್ತಿದ್ದ ಕನ್ನಡ ಚಾನೆಲ್ colorsಆಗಿ ಬದಲಾಗಿ ಬಾಲಿಕಾವಧು ಪ್ರಸಾರವಾಗುತ್ತಿತ್ತು.ನಿಮಗೆ ಧಾರಾವಾಹಿ ಇಷ್ಟ ಆಗಿದ್ದು ನನಗೆ ಸಂತಸ ತಂದಿದೆ.

    ReplyDelete
  8. ಏಕ್ತಾ ಕಪೂರ್ ಬ್ರಾಂಡ್-ನ ಸೀರಿಯಲ್ಲುಗಳಿಗೆ ಸೀರಿಯಲ್ ಜಗತ್ತಿನಲ್ಲಿ ಸದ್ಯಕ್ಕೆ ಚೂರು ಹಿನ್ನಡೆಯಾಗಿದ್ದು ನನಗೆ ತುಂಬಾ ಖುಷಿಯಾಗಿದೆ, COLOURS ಮತ್ತು NDTV IMAGINE ಚೆನ್ನಾಗಿರುವ ಸೀರಿಯಲ್ಲುಗಳನ್ನು ಕೊಡುತ್ತಿವೆ, ಒಳ್ಳೆ ಲೊಕೇಶನ್, ಒಳ್ಳೆಯ ಡೈಲಾಗ್, ಸಿಂಪಲ್ ಎಡಿಟಿಂಗ್ ಇತ್ಯಾದಿ ಇಷ್ಟವಾಗುತ್ತವೆ.
    ಇಲ್ಲಿಗೆ ಇದು ನನ್ನ ಮೊದಲ ಭೇಟಿ... ಚೆನ್ನಾಗಿ ಬರೆಯುತ್ತೀರಿ, ಬರೆಯುತ್ತಿರಿ...

    ReplyDelete
  9. @ಶ್ರೀಯವರೆ
    ಬರಹದ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದ್ದಕ್ಕೆ ಧನ್ಯವಾದಗಳು.
    ನಿಜ ಇದೀಗ ಏಕ್ತಾ ಕಪೂರಳ ಹಳಸಿದ, ಏಕತಾನತೆಯಿಂದ ಕೂಡಿದ ಧಾರಾವಾಹಿಗಳ ಜಾಗದಲ್ಲಿ ಹೊಸ ಧಾರಾವಾಹಿಗಳು ಜನಪ್ರಿಯತೆಗಳಿಸುತ್ತಿರುವುದು ಒಳ್ಳೆಯ ಸೂಚನೆ.

    ReplyDelete
  10. ತುಂಬಾ ಲೇಟಾಗಿ ಬಂದೆ ಅನ್ನಿಸುತ್ತೆ.
    ಎಲ್ಲಾ ಧಾರಾವಾಹಿಗಳ ಹಾಗೇಯೋ ಅಥವಾ ಪೀರಿಯಡ್ ಮೂವಿಯೂ ಆಗಿರಬಹುದೆಂದು ನೋಡುವುದಕ್ಕೆ ಹೋಗಿರಲಿಲ್ಲ! ಎರಡೂ ಆಗಿರದೆ, ಇದೊಂದು ಜ್ವಲಂತ ಸಮಸ್ಯೆಯನ್ನೇ ಬಿಂಬಿಸುತ್ತಿರುವುದನ್ನು ನೋಡಿ ಹುಬ್ಬೇರಿಸುವಂತಾಯಿತು.

    ReplyDelete
  11. @ಮುತ್ತುಮಣಿ
    ನೀನು ಇಷ್ಟುದಿನವಾದರೂ ಬ್ಲಾಗ್ ಪ್ರಪಂಚದಲ್ಲಿ ನಿಶ್ಶ್ಯಬ್ದ್ಧವಾಗಿದ್ದುದ್ದು ನೋಡಿ ಆಶ್ಚರ್ಯವಾಗಿತ್ತು.
    ಬಾಲಿಕಾ ವಧು ಬಗ್ಗೆ ನಿನಗೆ ಒಮ್ಮೆ ಹೇಳಿದ್ದಂತೆ ನೆನಪು.ಈಗ ಅಂದರೆ೧೦ನೆ ದಿನಾಂಕದಿಂದ ಅದರ ಮೊದಲಭಾಗದಿಂದ ಬರುತ್ತಿದೆ.ನೀನು ನೋಡಬಹುದು.

    ReplyDelete
  12. chandra kanth avre sorry e sys nalli kannada font illa, baalika vadhu nangu tumba ishta,adke nan blog nallu adra bagge bardidde,tejasvini avra blog ninda nim link siktu,inta olle dharavahi bagge baryoru eshtond jana idare anta kushi agtide.

    ReplyDelete
  13. @ಸಪ್ನಾ

    ನಾನು ಬಾಲಿಕಾವಧು ಬಗ್ಗೆ ಬರೆದಾಗ ನನಗೂ ನಿಮ್ಮಷ್ಟೆ ಕುತೂಹಲವಿತ್ತು-ಇನ್ನೆಷ್ಟು ಜನ ನೋಡುತ್ತಾರೆಂದು.-ನನ್ನ ಸಮಾನ ಮನಸ್ಕರೆಂದು.ತೇಜಸ್ವಿನಿಯವರ ಪ್ರ್ತಿಕ್ರಿಯೆ ನೋಡಿ ಬಹಳ ಖುಶಿಯಾಯಿತು. ಭಾರ್ಗವಿಯವರು ಈ ಬರಹ ಓದಿ ಅದನ್ನು ನೋಡಲು ಪ್ರಾಂಭಿಸಿದ್ದು ಮತ್ತಷ್ಟು ಹೆಮ್ಮೆಯಾಯಿತು.ಈಗ ನಿಮ್ಮ ಪರಿಚಯ ಹಾಗೂ ನಿಮ್ಮ ಬರಹ ಓದಿ ಮೆಚ್ಚುಗೆಯಾಯಿತು. ಬಲೆ ಛಲೋ ಬರೀತೀರ್ರಿ.ನೀವೆಲ್ಲರೂ ಪತ್ರಿಕೆಗಳಲ್ಲಿ ಕೆಲಸ ಮಾಡೋದು ನೋಡಿದರೆ ನನಗೂ ಆಸೆಯಾಗುತ್ತೆ.

    ReplyDelete
  14. ಹೌದು ನೀವಿ ಹೇಳಿದ ಮೇಲೆಯೆ ನಾನು ಧಾರಾವಾಹಿ ನೋಡಿದ್ದು!

    ReplyDelete
  15. ಚಂದ್ರಕಾಂತರವರಿಗೆ,
    ನಾನು ಮೊದಲಿಂದ ನೋಡ್ತಿಲ್ಲ ಅನಿಸುತ್ತೆ.ಆದ್ರೆ ಸಿಕ್ಕಷ್ಟು ಕಂತುಗಳನ್ನು ನೋಡಿದೆ.ಚಿಕ್ಕಂದಿನಲ್ಲಿ ಪೂರ್ತಿ ಅರ್ಥ ಆಗದೆ ಇದ್ದರೂ,,, ಅರ್ಥ ಆಗುತ್ತೆ ಅಂತ ನಾಟಕ ಮಾಡ್ತಾ ರಾಮಾಯಣ,ಮಹಾಭಾರತ ನೋಡಿದ್ದು ಬಿಟ್ಟರೆ ಇಷ್ಟೊಂದು ಕಂತುಗಳನ್ನು ನಾನು ಮುಗಿಸಿದ್ದು ಬಾಲಿಕಾವಧು ಮಾತ್ರ. ಆನಂದಿ ಬಾಯಲ್ಲಿ ಸಾಸುಮಾ ಕೇಳ್ತಿದ್ದ್ರೆ,,, ಇನ್ಮುಂದೆ ಅತ್ತೆ ಪದದ ಬದಲು ಕನ್ನಡದವರು ಹಾಗೆ ಕರೆದರೆ ಆಶ್ಚರ್ಯವಿಲ್ಲ. ಧನ್ಯವಾದಗಳು.

    ReplyDelete
  16. ನಾನೂ ಅಷ್ಟೆ ಹೆಚ್ಚಿನ ಹಿಂದಿ ಧಾರಾವಾಹಿಗಳನ್ನು ನೋಡಿದವಳಲ್ಲ. ಹಮ್ ಲೋಗ್, ಬುನಿಯಾದ್ , ನುಕ್ಕಡ್ ಮುಂತಾದವನ್ನು ಬಿಟ್ಟರೆ.ಆದರೆ ಬಾಲಿಕಾವಧು ಮಾತ್ರ ನನ್ನನ್ನು ಪೂರ್ತಿ ಆವರಿಸಿಕೊಂಡುಬಿಟ್ಟಿದೆ...

    ReplyDelete
  17. ಚಂದ್ರಕಾಂತ್ ರವರಿಗೆ ನಮಸ್ಕಾರ,

    ಬಾಲಿಕಾವಧು ಸೀರಿಯಲ್ ಬಗ್ಗೆ ನಾನೂ ತುಂಬ ಕೇಳಿದ್ದೇನೆ, ಆಗಾಗ್ಗೆ ನೋಡುತ್ತಿರುತ್ತೇನೆ ; ಅದರ ವೈಶಿಷ್ಟ್ಯವನ್ನು ತುಂಬ ಚೆನ್ನಾಗಿ ಪರಿಚಯಿಸಿದ್ದೀರಿ. ನಿಜವಾಗಿಯೂ ಧಾರಾವಾಹಿಗಳ ವಿಷಯಕ್ಕೆ ಬಂದರೆ ಒಳ್ಳೆಯದು ಎಂದು ಹೇಳಬಹುದಾದ್ದು ಕೇವಲ ಬೆರಳೆಣಿಕೆಯಷ್ಟು ;ಕನ್ನಡದ ಮಟ್ಟಿಗೆ ಹೇಳುವುದಾದರೆ ಇತ್ತೀಚೆಗೆ ಝೀ ಕನ್ನಡ ವಾಹಿನಿಯಲ್ಲ ಎರಡು ಒಳ್ಳೆಯ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಒಂದು ಪ್ರಕಾಶ್ಬೆಳವಾಡಿ ನಿರ್ದೇಶನದ 'ಇಲ್ಲಿರುವುದು ಸುಮ್ಮನೆ',ಮತ್ತೊಂದು ವಿನುಬಳಂಜ ನಿರ್ದೇಶನದ 'ಜೋಗುಳ'.

    ಮಕ್ಕಳೆಲ್ಲ ಪಟ್ಟಣದ ಬದುಕಿಗೆ ಮುಖಮಾಡಿ ಹಳ್ಳಿಗಳೆಲ್ಲ ಖಾಲಿಯಾಗಿ ಅಲ್ಲಿನ ವಯಸ್ಸಾದವರ ಗೊಂದಲ, ತಲ್ಲಣ, ಜೊತೆಗೆ ಜಾಗತೀಕರಣದ ಪ್ರಭಾವಕ್ಕೆ ಒಳಗಾದ ಮನಸ್ಸುಗಳು ಹಣದ ಬೆನ್ನು ಹತ್ತಿ ಹೇಗೆ ಭ್ರಷ್ಟಗೊಳ್ಳುತ್ತವೆ ಎಂಬುದನ್ನು ಪ್ರಕಾಶ್ ಯಾವುದೇ ಆಡಂಬರವಿಲ್ಲದೆ ತುಂಬ ತಣ್ಣಗೆ ಇಲ್ಲಿರುವುದು ಸುಮ್ಮನೆ ಧಾರಾವಾಹಿಯಲ್ಲಿ ಹೇಳುತ್ತಿದ್ದಾರೆ.

    ಜೋಗುಳ, ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸಂಸ್ಕ್ರತ ಲೆಕ್ಚರರ್ ಕುಟುಂಬದ ಕಥೆ. ಈತ ಸ್ವಭಾವತಃ ಒಳ್ಳೆಯವನಾದರೂ ಈತನಲ್ಲಿ ಒಂದು ವಿಚಿತ್ರ ಕಾಂಪ್ಲೆಕ್ಸ್ ಇದೆ, ತನಗೆ ಒಂದಿಪ್ಪತ್ತು ವರುಷಗಳು ಕಡಿಮೆಯಾಗಿದ್ದರೆ ಏನೇನೋ ಸಾಧಿಸುತ್ತಿದ್ದೆ ಎಂದು ಕನಸು ಕಾಣುತ್ತಿರುತ್ತಾನೆ, ಜೊತಗೆ ತನ್ನಿಂದ ಆಗದ್ದನ್ನು ತನ್ನ ಮಗ ಮಾಡಲಿ ಎಂದು ದಿನಾ ಒಂದೊಂದು ರೀತಿ ಹೇಳಿ ಅವನನ್ನು ಗೊಂದಲಗೊಳಿಸುತ್ತಿರುತ್ತಾನೆ.ಜೊತೆಗೆ ಮಧ್ಯಮವರ್ಗದ ಕನಸುಗಳು, ತಾಪತ್ರಯಗಳ ಬದುಕನ್ನು ವಿನುಬಳಂಜ ನೈಜವಾಗಿ ತೆರದಿಟ್ಟಿದ್ದಾರೆ. ಈಗ ಬೇರೆ ಬೇರೆ ವಾಹಿನಿಗಳಲ್ಲಿ ಪ್ರಸಾರವಾಗಿತ್ತಿರುವ ಧಾರಾವಾಹಿಗಳಿಗೆ ಹೋಲಿಸಿದಾಗ ಸದಭಿರುಚಿಯ ಧಾರಾವಾಹಿಗಳು ಎನಿಸಿತು. ಸಾಧ್ಯವಾದರೆ ನೋಡಿ.
    ಚಾನಲ್ - ಝೀ ಕನ್ನಡ.
    ಇಲ್ಲಿರುವುದು ಸುಮ್ಮನೆ - ಸೋಮ-ಶುಕ್ರ ರಾತ್ರಿ 8 ಗಂಟೆಗೆ.
    ಜೋಗುಳ - ಸೋಮ-ಶುಕ್ರ ರಾತ್ರಿ 8.30 ಕ್ಕೆ.

    ReplyDelete
  18. @ ಗ್ರೀಷ್ಮಾ

    ನನ್ನ ಬ್ಲಾಗ್ ಗೆ ಮೊದಲನೆಯ ಬಾರಿ ಭೇಟಿ ಕೊಟ್ಟಿರುವಿರಿ ಅನಿಸುತ್ತದೆ.ನಿಮಗೆ ಹಾರ್ದಿಕ ಸ್ವಾಗತ

    ಬಾಲಿಕಾವಧುವಿನ ಬಗ್ಗೆ ನನ್ನ ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ಇದೇ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಉತರನ್ ಮತ್ತೊಂದು ಒಳ್ಳೆಯ ಧಾರಾವಾಹಿ

    ಇಲ್ಲಿರುವುದು ಸುಮ್ಮನೆ ಆಗಾಗ ಒಮ್ಮೊಮ್ಮೆ ನೋಡುತ್ತೀನೆ. ಆದರೆ ಅದೇ ಸಮಯದಲ್ಲಿ ಬಾಲಿಕಾವಧು ಬರುವುದರಿಂದ ಸ್ವಲ್ಪ ಕಷ್ಟ:)

    ಜೋಗುಳ ನನಗೆ ಬಹಳ ಹಿಡಿಸಿತು. ಆದರೆ ಮೊದಲಿನಿಂದ ನಾ ನೋಡಿಲ್ಲ. ಅದರಲ್ಲಿ ಸಂಸ್ಕೃತ ಅಧ್ಯಾಪಕ ಯಾರು ? ತಿಳಿಯಲಿಲ್ಲ. ಆದರೆ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಹುಡುಗಿ ( ಸೈನಸ್ ಪ್ರಾಬ್ಲಮ್) ಮತ್ತು ಅವಳ ತಂಗಿ ಬಹಳ ಇಷ್ಟವಾದರು. ಬಾಡಿಗೆ ತಾಯಿಯ ಬಗ್ಗೆ ಚೆನ್ನಾಗಿ ತೋರಿಸುತ್ತಿದ್ದಾರೆ. ನಿಮ್ಮ ಸಲಹೆಗೆ ಧನ್ಯವಾದಗಳು

    ReplyDelete