Friday, November 28, 2008

ಪುಟ್ಟಿಯ ತರ್ಕ

ಪುಟ್ಟಿಗೆ ಆ ದಿನ ಸಂಭ್ರಮವೋ ಸಂಭ್ರಮ, ಇನ್ನೂ ನರ್ಸರಿಯಲ್ಲಿ ಓದುತ್ತಿರುವ ಪುಟ್ಟಿಗೆ ಅವಳ ಸುತ್ತ ಯಾವಾಗಲೂ ಜನರ ಗುಂಪಿರಬೇಕು.ಅದು ಗೆಳತಿಯರು ಅಥವಾ ಸಮವಯಸ್ಕರೇ ಆಗಬೇಕೆಂದಿಲ್ಲ,ಅವಳೊಂದಿಗೆ ಮಾತನಾಡುತ್ತಾ , ಅವಳ ಪ್ರಶ್ನೆಗಳನ್ನು ಸಹಿಸಿಕೊಳ್ಳುವ ಯಾರಾದರೂ ಸರಿಯೆ. ಅಪ್ಪ ಅಮ್ಮಂದಿರಿಬ್ಬರೂ ದುಡಿಯುವವರಾದ್ದರಿಂದ ಮನೆಯಲ್ಲಿರುವ ಅಜ್ಜಿಯೇ ಅವಳಿಗೆ ಸರ್ವಸ್ವ. ಈ ಕಾರಣದಿಂದಲೇ ಪುಟ್ಟಿ ಶಾಲೆಗೆ ಸೇರುವಾಗ ಇತರ ಮಕ್ಕಳಂತೆ ಅತ್ತು ರಗಳೆ ಮಾಡಲಿಲ್ಲ. ಮೊದಲ ದಿನ ಶಾಲೆಗೆ ಕರೆದೊಯ್ದಾಗ ಶಾಲೆಯ ತುಂಬಾ ಓಡಾಡುತ್ತಿದ್ದ ಎಲ್ಲ ವಯಸ್ಸಿನ ಮಕ್ಕಳನ್ನೂ ಕಣ್ಣರಳಿಸಿಕೊಂಡು ಆಶ್ಚರ್ಯದಿಂದ ನೋಡುತ್ತಾ ನಿಂತುಕೊಂಡುಬಿಟ್ಟಳು ಪುಟ್ಟಿ..ಅಂತಹ ಪುಟ್ಟಿಗೆ ಈ ದಿನ ಸಂಭ್ರಮ ಉಂಟಾಗುವುದಕ್ಕೆ ಕಾರಣವೂ ಇದೆ.ಈ ದಿನ ಅವಳ ತರಗತಿಯ ನೇಹಾಳ ಹುಟುಹಬ್ಬ. ಮೊದಲೇ ನಿಗದಿಯಾಗಿದ್ದಂತೆ ಅವಳ ತಂದೆ ಈ ದಿನ ಶಾಲೆಗೆ ಬಂದು ಎಲ್ಲ ಮಕ್ಕಳನ್ನೂ ಅವರ ತೋಟದ ಮನೆಗೆ ಕರೆದೊಯ್ಯುವವರಿದ್ದರು.ಸಂಜೆ ಮಕ್ಕಳೆಲ್ಲರನ್ನೂ ತಾವೇ ಶಾಲೆಯ ಬಳಿ ಬಿಡುವುದಾಗಿ ತಿಳಿಸಿದ್ದರು . ಇನ್ನು ಪುಟ್ಟಿಯನ್ನು ಹಿಡಿಯುವವರುಂಟೇ ?


ಅಂತೂ ಅವಳು ಸಂಭ್ರಮದಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿತು.ಎಲ್ಲ ಮಕ್ಕಳನ್ನೂ ನೇಹಾಳ ತಂದೆ ತೋಟದ ಮನೆಗೆ ಕರೆತಂದರು.ಅಂತಹ ಮನೆಯನ್ನು ಟಿವಿಯ ಪರದೆಯ ಮೇಲೆ ಮಾತ್ರ ಕಂಡಿದ್ದ ಪುಟ್ಟಿಗೆ ರೋಮಾಂಚನವಾಯಿತು. ಅವಳೊಬ್ಬಳೇ ಅಲ್ಲ ಎಲ್ಲ ಮಕ್ಕಳೂ ಸ್ವತಂತ್ರ ಹಕ್ಕಿಗಳಂತೆ ತೋಟದ ತುಂಬೆಲ್ಲಾ ಓಡಾಡಿದರು.ನೇಹಾಳ ತಂದೆ ತಾಯಿಯರು ಅತ್ಯಂತ ಸರಳ ಸ್ವಭಾವದ ಸ್ನೇಹ ಜೀವಿಗಳು, ತಮ್ಮ ಮಗಳ ಸಂತೋಷದಲ್ಲಿಯೇ ಅವರು ಸಂತೋಷ ಕಾಣುತ್ತಿದ್ದರು.ನೇಹಳ ತಂದೆಯಂತೂ ಮಕ್ಕಳೊಡನೆ ಮಗುವಾಗಿ ಬೆರೆತು ಕೀಟಲೆ ಮಾಡುತ್ತಾ, ಕತೆ ಹೇಳುತ್ತಾ ಮಕ್ಕಳನ್ನು ತೋಟದಲ್ಲೆಲ್ಲಾ ಸುತ್ತಿಸಿದರು. ಅವರ ತೋಟದ ಮನೆಯಲ್ಲಿ ಮಕ್ಕಳಿಗಾಗಿ ಆಟವಾಡಲು ಅನೇಕ ಸಾಮಗ್ರಿಗಳಿದ್ದವು. ಅದರ ಜೊತೆ ಯಾವ ನಿರ್ಬಂಧವೂ ಇರಲಿಲ್ಲ.

’ ಅದನ್ನು ಮುಟ್ಟಬೇಡ, ಅದು ಹಾಳಾಗುತ್ತದೆ"

" ಹಾಗೆ ಓಡಬೇಡ ಬೀಳುತ್ತೀಯಾ "

ಎಂದು ಗಳಿಗೆ ಗಳಿಗೆಗೆ ಎಚ್ಚರಿಸುವವರಿರಲಿಲ್ಲ.


ತೋಟದ ಇನ್ನೊಂದು ಪಾರ್ಶ್ವದಲ್ಲಿ ಸಾಲಾಗಿ ಜೋಡಿಸಿಟ್ಟ ಸಿಹಿತಿಂಡಿ, ಹಣ್ಣುಗಳ ರಾಶಿ ಎಲ್ಲವನ್ನೂ ಪುಟ್ಟಿ ಅಚ್ಚರಿಯ ಕಂಗಳಿಂದ ನೋಡುತ್ತಿದ್ದಳು. ಹಣ್ಣುಗಳ ರಾಶಿ ನೋಡಿದ ಕೂಡಲೇ ಅವಳ ಮುಖ ಮೊರದಗಲವಾಯಿತು. ಮೊದಲೇ ಅವಳಿಗೆ ಹಣ್ಣುಗಳೆಂದರೆ ಪಂಚಪ್ರಾಣ.ಹೆಚ್ಚಿಟ್ಟ ಹಣ್ಣುಗಳನ್ನು ತಿನ್ನುವುದಕ್ಕಿಂತ ಅವುಗಳನ್ನಿ ಹಾಗೇ ಕಚ್ಚಿ ತಿನ್ನುವುದೆಂದರೆ ಅವಳಿಗಿಷ್ಟ. ಅವಳು ಬಾಳೆಹಣ್ಣನ್ನು ತಿನ್ನುವುದನ್ನು ನೋಡುವುದೇ ಒಂದು ಅಪೂರ್ವ ದೃಶ್ಯ. ತನ್ನ ಪುಟ್ಟ ಪುಟ್ಟ ಕೈಗಳಿಂದ ತಾನೇ ಸಿಪ್ಪೆಬಿಡಿಸಿ ಕಚ್ಚಿ ಕಚ್ಚಿ ತಿನ್ನುವುದು ಅವಳಿಗೆ ಅಚ್ಚುಮೆಚ್ಚು.ಅಂತಹ ಪುಟ್ಟಿಯ ಎದುರು ಈಗ ಹಣ್ಣುಗಳ ರಾಶಿ ! ತನ್ನ ಕಣ್ಣೆದುರಿಗೆ ಹಣ್ಣುಗಳ ರಾಶಿ ನೋಡಿ ಯಾವುದನ್ನು ಮೊದಲು ತಿನ್ನಬೇಕೆಂಬ ಗಲಿಬಿಲಿಗೆ ಬಿದ್ದಳು ಪುಟ್ಟಿ .ಅಲ್ಲಿಯೇ ಇದ್ದ ನೇಹಾಳ ಅಮ್ಮ ಸೊಗಸಾದ ಕಲ್ಲಂಗಡಿ ಹಣ್ಣನ್ನು ಹೆಚ್ಚುತ್ತಿದ್ದರು. ರಸ ತೊಟ್ಟಿಕ್ಕುತ್ತಿದ್ದ ಕೆಂಪನೆಯ ಹಣ್ಣು. ಕೂಡಲೇ ಕೈಚಾಚಿ ಒಂದು ದೊಡ್ಡ ತುಂಡನ್ನು ಎರಡೂ ಕೈಯಲ್ಲಿ ಹಿಡಿದು ಕಚ್ಚಿ ತಿನ್ನಲಾರಂಭಿಸಿದಳು.

ಅದೇ ಸಮಯಕ್ಕೆ ಇತರ ಮಕ್ಕಳೆಲ್ಲರೂ ನೇಹಾಳ ತಂದೆ ರಾಮಮೂರ್ತಿಯೊಡನೆ ಅಲ್ಲಿಗೆ ಬಂದರು. ರಾಮಮೂರ್ತಿಯ ದೃಷ್ಟಿ ಪುಟ್ಟಿಯತ್ತ ಹೊರಳಿತು. ಎರಡೂ ಕೈಯಲ್ಲಿ ಹಣ್ಣನ್ನು ಹಿಡಿದು ಬಾಯಲ್ಲಿ ಅದನ್ನು ಕಚ್ಚುತ್ತಿದ್ದ ರೀತಿ , ಕೈ ಬಾಯಿಗಳಿಂದ ಸಣ್ಣಗೆ ತೊಟ್ಟಿಕ್ಕುತ್ತಿದ್ದ ಹಣ್ಣಿನ ರಸ, ಮಧ್ಯೆ ಮಧ್ಯೆ ಬಾಯಿಗೆ ಸಿಕ್ಕ ಬೀಜವನ್ನು ಪಕ್ಕದಲ್ಲಿದ್ದ ಪುಟ್ಟ ಬಟ್ಟಲಿನಲ್ಲಿ ಉಗಿಯುತ್ತಿದ್ದ ರೀತಿ, ತಿನ್ನುವುದರಲ್ಲಿ ಅವಳಿಗಿದ್ದ ಏಕಾಗ್ರತೆ , ಮತ್ತೆ ಮತ್ತೆ ಅವಳನ್ನು ನೋಡುವಂತೆ ಮಾಡಿತು. ಇದ್ದಕ್ಕಿದ್ದಂತೆ ತಲೆಯೆತ್ತಿ ತಮ್ಮನ್ನು ನೋಡಿದ ಪುಟ್ಟಿ " ಅಂಕಲ್ , ಅಂಕಲ್ "ಎಂದು ಓಡಿ ಬಂದಳು.ಏನೆಂದು ಕೇಳಿದಾಗ ಕಣ್ಣನ್ನು ಇಷ್ಟಗಲ ಅರಳಿಸಿ ,

" ಅಂಕಲ್ ಒಂದು ಬೀಜ ನುಂಗಿಬಿಟ್ಟೆ" ಎಂದು ಗಾಬರಿಯಿಂದ ನುಡಿದಳು.ಏಕೋ ರಾಮಮೂರ್ತಿಯವರಿಗೆ ಅವಳನ್ನು ಸ್ವಲ್ಪ ಕೀಟಲೆ ಮಾಡಬೇಕೆನಿಸಿತು.

" ಹಾಗೆಲ್ಲಾ ಬೀಜ ನುಂಗಬಾರದು ಪುಟ್ಟಿ, ನುಂಗಿದರೆ ನಿನ್ನ ಹೊಟ್ಟೆಯಲ್ಲಿ ಕಲ್ಲಂಗಡಿ ಗಿಡ ಹುಟ್ಟುತ್ತೆ " ಎಂದರು.ತಾವಂದುಕೊಂಡಂತೆ ಪುಟ್ಟಿ ಗಾಬರಿಗೊಳ್ಳಲಿಲ್ಲ. ಬದಲಿಗೆ ಕಣ್ಣು ಮಿನುಗಿಸುತ್ತಾ

" ಹಾಗಾದರೆ ಯಾವಾಗ ಬೇಕಾದರೂ ಆ ಗಿಡದಿಂದ ಹಣ್ಣು ಕಿತ್ತು ತಿನ್ನಬಹುದಲ್ವಾ ಅಂಕಲ್ " ಎಂದಳು.ಅವಳ ಮಾತಿನಲ್ಲಿಮುಗ್ಧತೆ ತುಂಬಿ ತುಳುಕುತ್ತಿತ್ತು.

" ಪಪ್ಪಾ, ಬೇಗ ಬಾ. ಅಂಜು ಬಿದ್ದುಹೋದಳು " ಎಂದು ಅಲ್ಲಿಗೆ ಬಂದ ನೇಹಾ ಅಪ್ಪನ ಕೈಹಿಡಿದು ಕರೆದೊಯ್ದಳು ಅಂತೂ ಸಂಭ್ರಮದ ಆ ದಿನ ಮುಗಿಯಿತು.ಆ ರಾತ್ರಿ ಪುಟ್ಟಿಯ ಕನಸಿನಲ್ಲಿ ಕಲ್ಲಂಗಡಿಯದೇ ರಾಜ್ಯಭಾರ.ಮರುದಿನ ಭಾನುವಾರ. ಅವಳು ಈ ರಾತ್ರಿ ಎಷ್ಟು ಹೊತ್ತು ಬೇಕಾದರೂ ಮಲಗಬಹುದು

ಬೆಳಿಗ್ಗೆ ಕಣ್ಣು ಬಿಡುವಷ್ಟರಲ್ಲಿ ಚಿಕ್ಕಿ, ಚಿಕ್ಕಪ್ಪ, ಅಪ್ಪ, ಅಮ್ಮ , ಅಜ್ಜಿ ಎಲ್ಲರ ಧ್ವನಿ ಕಿವಿಯ ಮೇಲೆ ಬಿತ್ತು.. ಭಾನುವಾರಗಳೆಂದರೆ ಪುಟ್ಟಿಗೆ ಎಲ್ಲಿಲ್ಲದ ಆನಂದ. ಆ ದಿನ ಮನೆಗೆ ಬರುವ ಚಿಕ್ಕಿಯ ಜೊತೆ ಆಟವಾಡುತ್ತಾ, ಮಾತನಾಡುತ್ತಾ ಕಾಲ ಕಳೆಯುವುದೆಂದರೆ ಅವಳಿಗೆ ಪರಮಾನಂದ.ಚಿಕ್ಕಿಯ ನೆನಪಾಗುತ್ತಲೇ ಚಕ್ಕನೆ ಹಾಸಿಗೆಯಿಂದ ಎದ್ದು ಅವಳ ಬಳಿ ಓಡಿದಳು. ಅವಳೊಂದಿಗೆ ಮಾತನಾಡಲು ಬೇಕಾದಷ್ಟು ವಿಷಯಗಳಿದ್ದವು. ಶಾಲೆಯಲ್ಲಿ ರೂಪಾ ಮ್ಯಾಮ್ ತನ್ನನ್ನು ಗುಡ್ ಗರ್ಲ್ ಎಂದದ್ದು, ನೇಹಾಳ ಬರ್ತ್ ಡೇ ಪಾರ್ಟಿ- ಎಲ್ಲವನ್ನೂ ಹೇಳಬೇಕಿತ್ತು.ಅಂತೂ ಬೇಗ ಬೇಗ ಹಲ್ಲುಜ್ಜಿ, ಸ್ನಾನ ಮಾಡಿ ಚಿಕ್ಕಿಯ ಬಳಿ ಓಡಿ ಅವಳ ತೊಡೆಯೇರಿದಳು.ಇನ್ನೂ ಸರಿಯಾಗಿ ಕುಳಿತಿರಲಿಲ್ಲ, ಅಷ್ಟರಲ್ಲಿ ಅಮ್ಮ ಬಳಿ ಬಂದು ಅವಳನ್ನೆತ್ತಿ ಪಕ್ಕದಲ್ಲಿ ಕೂರಿಸಿದಳು.ಪುಟ್ಟಿಗೆ ಅಚ್ಚರಿ, ತನ್ನ ಮೆಚ್ಚಿನ ಚಿಕ್ಕಿಯ ತೊಡೆಯೇರಲು ಅಮ್ಮನೇಕೆ ಅಡ್ಡಿಪಡಿಸಬೇಕು?ಸಹಾಯಕ್ಕಾಗಿ ಚಿಕ್ಕಿಯ ಮುಖ ನೋಡಿದರೆ ಅವಳು ತನ್ನದೇ ಲೋಕದಲ್ಲಿ ಮೈಮರೆತಂತಿತ್ತು.ತನ್ನ ರಕ್ಷಣೆ ತಾನೇ ಮಾಡಿಕೊಳ್ಳುವಂತೆ ಮತ್ತೆ ತೊಡೆಯೇರಲುತೊಡಗುತ್ತಾ " ನಾನು ಅಲ್ಲೇ ಕೂತ್ಕೋಬೇಕು" ಎಂದು ರಾಗ ಎಳೆದಳು.

" ಬೇಡ ಪುಟ್ಟಿ ಚಿಕ್ಕಿಗೆ ನೋವಾಗುತ್ತೆ" ಅಮ್ಮನ ಉತ್ತರ.

" ನಾನು ಯಾವಾಗ್ಲೂ ಇಲ್ಲೇ ಕೂರೋದು." ಹಟದ ದ್ವನಿಯಲ್ಲಿ ಪುಟ್ಟಿ ಹೇಳಿದಳು.

ಅಷ್ಟರಲ್ಲಿ ಅಲ್ಲಿಗೆ ಬಂದ ಅಜ್ಜಿಯೂ ಅಲ್ಲಿ ಕೂರಬೇಡವೆಂದು ಅನುನಯಿಸತೊಡಗಿದಳು.

" ಅಲ್ಲಿ ಕೂತರೆ ಪಾಪಂಗೆ ನೋವಾಗುತ್ತೆ ಪುಟ್ಟಿ "

" ಇಲ್ಲಿ ಪಾಪಾನೂ ಇಲ್ಲ ಏನೂ ಇಲ್ಲ, ನೀನು ಸುಳ್ಳು ಸುಳ್ಳೇ ಹೇಳ್ತೀಯಾ "ಎಂದು ಹೇಳಿ ಗಟ್ಟಿಯಾಗಿ ಅಳಲು ಪ್ರಾರಂಭಿಸಿದಳು.

" ಇಲ್ಲ ಪುಟ್ಟಿ, ಚಿಕ್ಕಿ ಹೊಟ್ಟೇಲಿ ಪಾಪ ಇದೆ ಅದಕ್ಕೆ ನೋವಾಗುತ್ತಲ್ವಾ"

ಅದುವರೆಗೂ ಚಿಕ್ಕಿಯ ತೊಡೆಯನ್ನು ತನ್ನ ಪುಟ್ಟ ಕೈಗಳಿಂದ ಬಳಸಿ ಹಿಡಿದಿದ್ದ ಪುಟ್ಟಿ ಆಘಾತವಾದಂತೆ ಕೈಬಿಟ್ಟು ಎರಡು ಹೆಜ್ಜೆ ಹಿಂದೆ ಸರಿದಳು.ನಂತರ ಚಿಕ್ಕಿಯ ಮುಖವನ್ನೇ ದುರುಗುಟ್ಟಿ ನೋಡುತ್ತಾ
" ಚಿಕ್ಕಿ , ನೀನು ತುಂಬಾ ಕೆಟ್ಟೋಳು.. " ಎಂದು ಗಟ್ಟಿಯಾಗಿ ಕಿರುಚಿದಳು.

ಅಲ್ಲಿ ಕುಳಿತಿದ್ದ ಹಿರಿಯರಿಗೆಲ್ಲಾ ಅವಳ ಪ್ರತಿಕ್ರಿಯೆ ವಿಚಿತ್ರ ಎನಿಸಿತು. ಕಸಿವಿಸಿಗೊಂಡ ಅಮ್ಮ ಪುಟ್ಟಿಯ ಬಳಿ ಬಂದು " ಹಾಗೆಲ್ಲಾ ಅನ್ನಬಾರದು, ಚಿಕ್ಕಿಗೆ ಸಾರಿ ಹೇಳು ಪುಟ್ಟಿ " ಎಂದಳು.
ಪುಟ್ಟಿಯದು ಮಾತ್ರ ಒಂದೇ ರಾಗ. " ಚಿಕ್ಕಿ ಕೆಟ್ಟೋಳು "ಇದುವರೆಗೂ ಸುಮ್ಮನಿದ್ದ ಪುಟ್ಟಿಯ ಅಪ್ಪ ಅವಳ ಬಳಿ ಬಂದು ಅವಳನ್ನು ಮಮತೆಯಿಂದ ಎತ್ತಿಕೊಂಡು ರಮಿಸುತ್ತಾ ಅವಳ ಕಣ್ಣೊರೆಸಿ,,

" ಯಾಕೆ ಪುಟ್ಟಿ ಚಿಕ್ಕಿ ಕೆಟ್ಟೋಳು " ಎಂದು ಕೇಳಿದರು.

ಅವಳು ಕೊಟ್ಟ ಉತ್ತರ ಎಲ್ಲರನ್ನೂ ದಂಗುಬಡಿಸಿತು.

" ಮತ್ತೆ ಮತ್ತ್ರೆ ಚಿಕ್ಕಿ ಪಾಪನ್ನ ತಿಂದು ಬಿಟ್ಟಿದ್ದಾಳೆ. ಪಾಪನ್ನ ತಿನ್ನೋವರು ಕೆಟ್ಟೋರಲ್ವಾ ?

ಅವಳ ಅಸಂಬದ್ಧ ಉತ್ತರ ಕೇಳಿ ಕೋಪಗೊಂಡ ಅಮ್ಮ " ಏನೆ ನಿನ್ನ ತಲೆಹರಟೆ ಮಾತು. ಯಾರು ಹೇಳಿದ್ದು ಚಿಕ್ಕಿ ಪಾಪೂನ ತಿಂದಿದ್ದಾಳೆ ಅಂತ "

" ನಂಗೆಲ್ಲಾ ಗೊತ್ತು. ನೇಹ ಡ್ಯಾಡಿ ಹೇಳಿದ್ದಾರೆ ಹಣ್ಣಿನ ಬೀಜ ತಿಂದರೆ ಗಿಡ ಬೆಳೆಯುತ್ತೆ ಅಂತ.ಚಿಕ್ಕಿ ಪಾಪೂನ ತಿಂದಿದ್ದಾಳೆ. ಅದಕ್ಕೆ ಅವಳ ಹೊಟ್ಟೆಯಲ್ಲಿ ಪಾಪೂ ಇರೋದು "

ಅಳುತ್ತಾ ಪುಟ್ಟಿ ಹೇಳಿದ ಮಾತು ಕೇಳಿ ಯಾರಿಗೂ ಮಾತು ಹೊರಡಲಿಲ್ಲ. ಅವಳಿಗೆ ಸಮಾಧಾನವಾಗುವ ಹಾಗೆ ಹೇಗಪ್ಪಾಅವಳಿಗೆ ಹೇಳೋದು ಎಂಬ ಚಿಂತೆ ಪುಟ್ಟಿಯ ಅಪ್ಪನ ತಲೆ ಕೊರೆಯಲಾರಂಭಿಸಿತು. ಈಗಾಗ್ಲೇ ಅವಳ ತರ್ಕ ಅವರ ತಲೆಯನ್ನು ಅರ್ಧ ತಿಂದುಹಾಕಿತ್ತು.!!

-------

18 comments:

  1. ತುಂಬಾ ಚಂದವಾಗಿ ವಿವರಿಸಿದ್ದೀರಿ..
    ಸಂದರ್ಭವನ್ನು ಮಕ್ಕಳಾಗಿ ಅನುಭವಿಸಿದ್ದೀರಿ.. ಹಾಗಾಗಿ ನಿರೂಪಣೆ ಚೆನ್ನಾಗಿದೆ..
    ನಿಜ ಹೇಳಲಾ..? ನಿಮ್ಮ ಪುಟ್ಟಿಯ ಮುಗ್ಧ ಪ್ರಶ್ನೆಗಳಿಗೆ ಮನ ಸೋತಿದ್ದೇನೆ...
    ಧನ್ಯವಾದಗಳು...

    ReplyDelete
  2. Bubba saw the picture of all those fruits and exclaimed, 'yummmmmm!'.
    Hahaha..

    ReplyDelete
  3. thumba chennagide madam
    puttiya diary odida haagide :)

    ReplyDelete
  4. ಪುಟ್ಟಿಗೆ ಜನ್ಮದಿನದ ಶುಭಾಶಯಗಳು.
    ಅವಳ ಪ್ರಶ್ನೆ ಕೇಳಿ ತುಂಬಾ ನಗು ಬಂದಿತು.
    ನಮ್ಮೊಡನೆ ಅವಳ ಪ್ರಶ್ನೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  5. ಏನ್ ಉತ್ತರ ಕೊಡೋದು ಮಕ್ಕಳು ಈಥರ ಪ್ರಶ್ನೆ ಕೇಳ್ಬಿಟ್ರೆ!! ಆ ಪುಟ್ಟಿಯ ಬುದ್ಢಿ ಸಖತ್ ತೀಕ್ಷ್ಣ. ಮೆಚ್ಚಬೇಕು ತರ್ಕವನ್ನ.

    ReplyDelete
  6. @ ಸಿಮೆಂಟು ಮರಳಿನ...

    ಬರಹವನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದಕ್ಕೆ ಧನ್ಯವಾದಗಳು.

    @ಗೀತಾ
    ನಾ ಬರೆದ ಕತೆ ಪುಟ್ಟಿಯ ಡೈರಿಯ ಹಾಗೆ ಕಂಡಿದ್ದರೆ ಅದನ್ನು compliment ಎಂದು ಸ್ವೀಕರಿಸುತ್ತೇನೆ. Thankyou

    @ಸುನಾಥ್ ಅವರೆ
    ನನ್ನಬ್ಲಾಗ್ ಗೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು.ಪ್ರಶ್ನೆ ಕೇಳಿ ನಗು ಬಂದಿದ್ದರೆ ಬರಹ ಸಾರ್ಥಕವಾಯಿತು ಎಂದುಕೊಳ್ಳುವೆ.

    @ ಲಕ್ಷ್ಮಿ
    ಮುಗ್ಧ ಮಕ್ಕಳೆಂದರೆ ಅಷ್ಟೆ ತಾನೆ? 1+1=2 ಎಂಬಷ್ಟು ಎಲ್ಲವನ್ನೂ ಸರಳವಾಗಿ, ನೇರವಾಗಿ ತೆಗೆದುಕೊಳ್ಳುತ್ತಾರೆ. ಮಕ್ಕಳು ಬಾಯ್ತೆರೆದರೆ ಏನು ಪ್ರಶ್ನೆ ಕೇಳ್ತಾರೋ ಎಂದು ಬಹಳಾಷ್ಟು ಜನ ಹೆದರುತ್ತಾರೆ !!!ಆದರೆ ಈಗಿನ ಕಾಲದ ಮಕ್ಕಳು ದೊಡ್ಡವರಿಗಿಂತ ದೊಡ್ಡವರ ಹಾಗೆ ವರ್ತಿಸುತ್ತಾರೆ

    ReplyDelete
  7. ಚಂದ್ರಕಾಂತರವರೆ,
    ಪುಟ್ಟಿಯ ಮುಗ್ಧ ಮನಸ್ಸನ್ನು ಚೆನ್ನಾಗಿ ವರ್ಣಿಸಿದ್ದೀರಿ, ಹಾಗೆ ಮಕ್ಕಳು ಒಂದೊಂದು ಮುಗ್ಧ ಪ್ರಶ್ನೆ ಕೇಳುವಾಗಲೂ ಅವರ ಮುಖಭಾವವನ್ನು ವರ್ಣಿಸಲು ಸಾಧ್ಯವಿಲ್ಲ. ನೋಡಿಯೇ ಅನುಭವಿಸಬೇಕು.ಎಷ್ಟೇ ದೊಡ್ಡವರಾದರು ಮಕ್ಕಳಿಂದ ಮತ್ತಷ್ಟು ಕಲಿಯುತ್ತೇವೆ ಅನ್ನಿಸುತ್ತೆ.

    ReplyDelete
  8. ಚಂದ್ರಕಾಂತರವರೆ,
    ನನ್ನ E-Mail Id ಇಲ್ಲಿದೆ ನೋಡಿ:-)
    saatiyaaru@yahoo.com

    ReplyDelete
  9. @ ಭಾರ್ಗವಿ
    ನಿಮ್ಮ ಸಲಹೆಯಿಂದ ಈಗ ನನ್ನ ಕಾಮೆಂಟ್ ಪುಟವೂ ಕನ್ನಡವಾಗಿದೆ.

    ನಿಮ್ಮ E-Mail Idಗಾಗಿ ಧನ್ಯವಾದಗಳು

    @ಮುತ್ತುಮಣಿ

    ಇತ್ತೀಚೆಗೆ ಬಹಳ busyಯಾಗಿರುವೆ ಅನಿಸುತ್ತೆ.
    ಮಗುವಿನ ಮುಗ್ಧತೆ ಮೆಚ್ಚಿದ್ದಕ್ಕೆ :))

    ReplyDelete
  10. ಹೌದು ಸ್ವಲ್ಪ ಕೆಲಸ ಜಾಸ್ತಿ ಆಗಿದೆ, ಇನ್ನೊಂದು ಐದಾರು ದಿನ ಮತ್ತೆ ವಾಪಸು ಬರುತ್ತೇನೆ.

    ReplyDelete
  11. ಚಂದ್ರಕಾಂತ ಅವರೆ,

    ಮಕ್ಕಳ ಮನಸ್ಸು ಬಿಳಿಹಾಳೆ ಇದ್ದಂತೆ.. ನಾವು ಏನನ್ನು ಹೇಳುತ್ತೇವೋ ಅದನ್ನೇ ನಂಬುತ್ತಾರೆ ಅವರು. ಹಾಗಾಗಿ ಅವರು ಕೇಳುವ ಪ್ರಶ್ನೆಗಳಿಗೆ ಸರಿಯಾದ, ನೇರವಾದ ಉತ್ತರವನ್ನೇ ಆದಷ್ಟು ಕೊಡಬೇಕು. ಇಲ್ಲದಿದ್ದರೆ ಇಂತಹ ಅವಾಂತರವೇ ಆಗೋದು :) ನನ್ನ ಪುಟ್ಟಿಯೂ ಅವಳದೇ ಭಾಷೆಯಲ್ಲಿ ಪ್ರಶ್ನೆಗಳನ್ನು ಕೇಳಿತ್ತಾಳೆ. ಅರ್ಥವೇ ಆಗೊಲ್ಲಾ ಎಷ್ಟೋ ಸಲ. ಆದರೂ ಕಷ್ಟ ಪಡಬೇಕಾಗುತ್ತದೆ :) ನಿಮ್ಮ ಲೇಖನದ ಶೈಲಿ ಹಾಗೂ ಪುಟ್ಟಿ ತುಂಬಾ ಮೆಚ್ಚಿಗೆಯಾಯಿತು.

    ReplyDelete
  12. ಚಂದ್ರಕಾಂತರವರೆ,
    ಈ ದಿನ ದಟ್ಸ್ ಕನ್ನಡದಲ್ಲಿ ತೇಜಸ್ವಿನಿಯವರ ಬರಹ ದಯವಿಟ್ಟು ತಪ್ಪದೆ ಓದಿ,ಆರೋಗ್ಯ ಭಾಗ್ಯದಲ್ಲಿ ಪೂರ್ಣಪಾಠ ವಿಭಾಗದಲ್ಲಿದೆ.

    ReplyDelete
  13. ಭಾರ್ಗವಿಯವರೆ

    ನಿಮ್ಮ ಸೂಚನೆಗೆ ಧನ್ಯವಾದಗಳು. ತೇಜಸ್ವಿನಿಯವರ ಬರಹವನ್ನು thatskannadaದಲ್ಲಿ ಓದಿದೆ.ಅಭಿಪ್ರಾಯವನ್ನೂ ಬರೆದಿದ್ದೇನೆ

    ReplyDelete
  14. ಚಂದ್ರಕಾಂತ ಮೇಡಮ್,

    ಪುಟ್ಟಿಯ ಮುಗ್ದತೆ ನನಗಿಷ್ಟವಾಯಿತು. ಅವಳು ಆಗಾಗ ಹರಿಸುತ್ತಿದ್ದ ಮಿಂಚುಗಳು ಪಂಚಿಂಗ್ ಆಗಿದ್ದವು. ಮತ್ತು ಬರವಣಿಗೆ ನಮನ್ನು ಮತ್ತೆ ಮಕ್ಕಳ ಚಿತ್ರಗಳನ್ನು ಕಟ್ಟಿಕೊಟ್ಟಿತು.
    ಶಿವು.

    ReplyDelete
  15. @ ರಮೇಶ್ ಅವರಿಗೆ

    ಖಂಡಿತ ಅವಳು ಒಳ್ಳೆ ಪುಟ್ಟಿ. ಆದರೆ ಅವಳು ಪೇಚು ತಂದಾಗ ಮಾತ್ರ ತರಲೆ ಪುಟ್ಟಿ ಅನಿಸುತ್ತಾಳೆ!

    @ ಶಿವು ಅವರಿಗೆ

    ನಿಜ ಪುಟ್ಟಿಯ ಮುಗ್ಧತೆ ನನಗೂ ಇಷ್ಟ.ದುರಂತವೆಂದರೆ ಇಂದಿನ ಮಕ್ಕಳು ತಮ್ಮ ಬಾಲ್ಯವನ್ನು ಬಹು ಬೇಗ ಕಳೆದುಕೊಂಡ ಹಾಗೆ ಮುಗ್ಧತೆಯನ್ನೂ ಕಳೆದುಕೊಳ್ಳುತ್ತಿದ್ದಾರೆ.ಅಲ್ಲವೇ ?

    ReplyDelete