Tuesday, January 6, 2009

ಚಂದ್ರಮತಿಯ ಅಂತರಂಗ

ಕಷ್ಟದ ದಿನಗಳೆಲ್ಲಾ ಕಳೆದು ಹೋಗಿದ್ದವು. ಬದುಕಿನ ಕರಾಳ ಅಧ್ಯಾಯ ಅಂತ್ಯ ಕಂಡಿತ್ತು. ಕಡೆಯೇ ಇಲ್ಲವೇನೋ ಎಂಬ ನಂಬಿಕೆಗೆಡೆಮಾಡಿದ್ದ ಕಷ್ಟಕಾರ್ಪಣ್ಯಗಳ ಹೊರೆ ಇಳಿದಿತ್ತು.ಹರಿಶ್ಚಂದ್ರನು ಮತ್ತೆ ಪ್ರಜೆಗಳ ಮೆಚ್ಚಿನ ರಾಜನಾಗಿ ಪಟ್ಟಾಭಿಷಿಕ್ತನಾಗಿ ವಾರ ಕಳೆದಿತ್ತು. ಸಕಲ ರಾಜರಿಂದ .ಋಷಿಮುನಿಗಳಿಂದ , ಪ್ರಜೆಗಳಿಂದ 'ಭಲೇ ಹರಿಶ್ಚಂದ್ರ, ಕಡೆಗೂ ನಿನ್ನ ಸತ್ಯಗುಣಕ್ಕೆ ಜಯ ಸಿಕ್ಕಿತು' ಎಂಬ ಮೆಚ್ಚಿಗೆಯ ಮಾತುಗಳನ್ನು ಕೇಳಿ ಹರಿಶ್ಚಂದ್ರನಿಗೆ ಜೀವನ ಸಾರ್ಥಕವೆಂಬ ಭಾವ ಮೂಡಿತು.ಆದರೆ ಏಕೋ ಏನೋ ತನ್ನ ಮನಸ್ಸು ಅರಳಲು, ಹಿಗ್ಗಲು ನಿರಾಕರಿಸುತ್ತಿದೆ. ಹರಿಶ್ಚಂದ್ರನು ಮತ್ತೆ ತನ್ನ ಸಾಮ್ರಾಜ್ಯ, ಪದವಿ ಎಲ್ಲವನ್ನೂ ಪಡೆದು ,ತಾನು ಮಹಾರಾಣಿಯ ಸ್ಥಾನ ಅಲಂಕರಿಸಿದ್ದರೂ ತನಗೇಕೆ ಈ ತಳಮಳ? ಬೇಡವೆಂದರೂ ಏಕೆ ಘೋರ ನೆನಪುಗಳು ಮನಸ್ಸನ್ನು ಘಾಸಿಗೊಳಿಸುತ್ತಿವೆ


ಹರಿಶ್ಚಂದ್ರನ ವಧುವಾಗಿ ಈ ನಾಡಿನ ಪಟ್ಟದರಾಣಿಯಾಗಿ ಬಂದಾಗ ತಾನೆಷ್ಟು ಮುಗ್ಧಳಾಗಿದ್ದೆ. ಚಕ್ರವರ್ತಿಯ ಪತ್ನಿಯಾಗುವೆನೆಂಬ ನೆನಪೇ ರೋಮಾಂಚನ ಉಂಟುಮಾಡುತ್ತಿತ್ತು. ಮದುವೆಯಾಗಿ ಬಂದಾಗ ಎಲ್ಲರೂ ಅವನನ್ನು 'ರಾಜಾ ಹರಿಶ್ಚಂದ್ರ ' ಎಂದೇ ಕರೆಯುತ್ತಿದ್ದರು. ಅವನನ್ನು 'ಸತ್ಯ ಹರಿಶ್ಚಂದ್ರ' ಎಂದು ಕರೆಯಲಾರಂಭಿಸಿದ್ದು ಯಾವಾಗ ಎಂಬ ಪ್ರಶ್ನೆ ತನ್ನನ್ನು ಇತ್ತೀಚೆಗೆ ತೀವ್ರವಾಗಿ ಕಾಡುತ್ತಿದೆ. ಬೇಡವೆಂದರೂ ಮನಸ್ಸು ಆ ಪ್ರಸಂಗವನ್ನೇ ಮೆಲುಕು ಹಾಕುತ್ತಿದೆ.
ಮದುವೆಯಾಗಿ ಎಷ್ಟೋವರ್ಷಗಳಾದಾರೂ ತಮಗೆ ಮಕ್ಕಳಾಗದಿದ್ಡಾಗ ಹರಿಶ್ಚಂದ್ರನ ಮನಶ್ಯಾಂತಿ ಕದಡಿಹೋಗಿತ್ತು.ಆ ಮನಸ್ಠಿತಿಯಲ್ಲಿ ಮಕ್ಕಳಾಗುವುದೆಂದು ಯಾರು ಏನೇ ಹೇಳಿದರೂ ಮಾಡಲು ಸಿದ್ಧನಾದ. ಸರಿಯೇ ತಪ್ಪೇ ಎಂದು ಯೋಚಿಸಲಾರದಷ್ಟು ದುರ್ಬಲವಾಗಿತ್ತು ಅವನ ಮನಸ್ಸು. ಆದರೂ ಪ್ರಯೋಜನಾವಾಗಲಿಲ್ಲ. ಇಂತಹ ಸಂದರ್ಭದಲ್ಲಿಯೇ ನಾರದರ ಆಗಮನವಾದದ್ದು . ವರುಣ ದೇವನನ್ನು ಪ್ರಾರ್ಥಿಸಿದರೆ ಖಂಡಿತ ಪುತ್ರ ಸಂತಾನವಾಗುವುದೆಂಬ ಆಸೆಯ ಬೀಜ ಬಿತ್ತಿಯೇ ಹೋದರು ನಾರದರು. ಅವರ ಮಾತು ಸುಳ್ಳಾಗಲಿಲ್ಲ!!


ಪ್ರಾರ್ಥನೆಗೆ ಒಲಿದ ವರುಣ ಪುತ್ರಸಂತಾನ ಭಾಗ್ಯ ಒದಗಿಸುವುದಾಗಿ ವರವಿತ್ತ, ಜತೆಗೊಂದು ಷರತ್ತನ್ನೂ ಮುಂದಿಟ್ಟ.ಅದೂ ಎಂತಹ ಷರತ್ತು, ಹುಟ್ಟುವ ಮಗುವನ್ನು ಅವನ ಯಾಗಕ್ಕೆ ಬಲಿಪಶುವನ್ನಾಗಿಸುವುದು! ವಂಶೋದ್ದಾರಕ ಹುಟ್ಟಿದರೆ ಸಾಕೆಂದು ಹಂಬಲಿಸುತ್ತಿದ್ದ ಹರಿಶ್ಚಂದ್ರ ತನ್ನೊಡನೆ ಸಮಾಲೋಚಿಸದೆ, ತನಗೊಂದು ಮಾತೂ ತಿಳಿಸದೆ ಕೂಡಲೇ ಒಪ್ಪಿಕೊಂಡ. ಮುಂದೆ ನಡೆದದ್ದು, ಲೋಹಿತಾಶ್ವನ ಜನನ. ಈ ಸಂತೋಷದಲ್ಲಿ ಪ್ರಪಂಚವನ್ನೇ ಮರೆತ ರಾಜ ವರುಣನಿಗೆ ಕೊಟ್ಟ ಮಾತನ್ನೂ ಮರೆತುಬಿಟ್ಟ. ಆದರೆ ಮರೆಯದವನು ವರುಣಮಾತ್ರ !


ಮಗುವಿನೊಡನೆ ಸಂತಸ ಸಂಭ್ರಮದಲ್ಲಿ ಮೈಮರೆತಿದ್ದಾಗಲೇ ವರುಣನು ಧುತ್ತೆಂದು ಬಂದು ಬಾಗಿಲು ತಟ್ಟಿದ್ದಾಗಿತ್ತು. ಮಗನನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ಸುಳ್ಳಿನ ಸರಮಾಲೆಯನ್ನೇ ಹೆಣೆದ ಹರಿಶ್ಚಂದ್ರ. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು ಎಂಬಂತೆ ಒಂದೊಂದು ಬಾರಿ ಒಂದೊಂದು ನೆಪ ಒಡ್ದಿ ಲೋಹಿತಾಶ್ವನನ್ನು ತಮ್ಮ ಬಳಿಯೆ ಉಳಿಸಿಕೊಂಡ. ಮಗುವಿನ ಹಲ್ಲು ಮೂಡಿದ ಮೇಲೆ ಕೊಡುವೆನೆಂದೊಮ್ಮೆ, ನಡೆಯಲು ಬಂದ ಮೇಲೆ ಎಂದು ಮತ್ತೊಮ್ಮೆ. ಈ ಮಧ್ಯೆ ಎಲ್ಲವೂ ಅರ್ಥವಾಗುತ್ತಿದ್ದ ಲೋಹಿತ , ಕಡೆಯ ಬಾರಿ ವರುಣ ಬಂದಾಗ ಮನೆಯಿಂದ ಓಡಿಹೋಗಿ ಎಲ್ಲಿಯೋ ಅವಿತಿಟ್ಟುಕೊಂಡ .ಮಗನನ್ನು ಹರಿಶ್ಚಂದ್ರನೇ ಬಚ್ಚಿಟ್ಟಿರುವನೆಂದು ಕೋಪಗೊಂಡ ವರುಣ ಹರಿಶ್ಚಂದ್ರನಿಗೆ ಜಲೋದರ ಶಾಪವನ್ನೂ ಕೊಟ್ಟಾಯಿತು. ವಿಧಿಯಿಲ್ಲದೆ ಅರಸನು ಮಗನ ಬದಲು ಮತ್ತಾರನ್ನಾದರೂ ವರುಣನಿಗೆ ಕೊಡಲು ನಿರ್ಧರಿಸಿದ. ಬಡತನದ ಬೇಗೆ ತಾಳಲಾರದೆ ಮುನಿಯೊಬ್ಬ ತನ್ನ ಮಗನನ್ನೇ ಕೆಲವು ಹಸುಗಳಿಗಾಗಿ ಮಾರಿಕೊಂಡ.ಮುಂದೊಂದು ದಿನ ತಾನೂ ಇಂತಹ ಮಾರಾಟದ ವಸ್ತುವಾಗುತ್ತೇನೆಂದು ಆಗ ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಈ ಎಲ್ಲ ಘಟನೆಗಳನ್ನು ದಿಗ್ಭ್ರಾಂತಳಾಗಿ ನೋಡುತ್ತಿದ್ದ ತನಗೆ ಅದು ತಪ್ಪೆಂದು ಪ್ರತಿಭಟಿಸುವ ಶಕ್ತಿಯಿರಲಿಲ್ಲ.. ಮಗನನ್ನು ಕಳೆದುಕೊಂಡ ನೋವು ಒಂದೆಡೆಯಾದರೆ , ಸುಳ್ಲಿನ ಕೆಸರಲ್ಲಿ ಮುಳುಗಿಹೋದ ಹರಿಶ್ಚಂದ್ರನ ಬಗ್ಗೆ ಆಕ್ರೋಶ, ಜಿಗುಪ್ಸೆ ಮತ್ತೊಂದೆಡೆ. ಅಂತೂ ವರುಣನ ಶಾಪದಿಂದ ಮುಕ್ತನಾದ ಹರಿಶ್ಚಂದ್ರ. ಸುಳ್ಲುಗಾರನೆಂಬ ಈ ಕಳಂಕ ತೊಳೆದುಕೊಳ್ಳಲು ಅರಸನು ಬಾರಿ ಬೆಲೆಯನ್ನೇ ತೆರಬೇಕಾಯಿತು. ಲೋಹಿತಾಶ್ವನೇನೋ ಕಂಟಕ ತಪ್ಪಿತೆಂದು ಊರಿಗೆ ಹಿಂತಿರುಗಿದ್ದ. ಪಾಪ ಕುಲಗುರು ವಸಿಷ್ಟರಂತೂ ಹರಿಶ್ಚಂದ್ರನು ಸತ್ಯವಂತ ಎಂದು ನಿರೂಪಿಸಲು ತೀವ್ರ ಹೋರಾಟ ನಡೆಸಬೇಕಾಯಿತು.


ವಸಿಷ್ಟರ ಪುಣ್ಯವೆಂಬಂತೆ ಅರಸನು ಸತ್ಯವಂತನೆಂದು ಜಗತ್ತಿಗೆ ತೋರಿಸುವ ಸುವರ್ಣಾವಕಾಶ ದೇವೇಂದ್ರನ ಸಭೆಯಲ್ಲಿ ಒದಗಿಬಂದಿತು. " ಭೂಲೋಕದಲ್ಲಿ ಸೂರ್ಯವಂಶದ ಅರಸರಲ್ಲಿ ಅತಿ ಶ್ರೇಷ್ಟ ಸತ್ಯವಂತನಾರು ?" ಎಂದು ಇಂದ್ರನು ಕೇಳಿದ್ಡೇ ತಡ ವಸಿಷ್ಟರು ಸ್ವಲ್ಪವೂ ಹಿಂಜರಿಯದೆ " ಹರಿಶ್ಚಂದ್ರನೇ ಎಲ್ಲರಿಗಿಂತ ಸತ್ಯವಂತ " ಎಂದು ಘೋಷಿಸಿಬಿಟ್ಟರು. ವರುಣನಿಗೆ ಬಲಿಯಾಗಬೇಕಿದ್ದ ಋಷಿಪುತ್ರನನ್ನು ತಮ್ಮ ಮಗನೆಂದು ಸ್ವೀಕರಿಸಿದ್ದ ವಿಶ್ವಾಮಿತ್ರರು ಸುಮ್ಮನಿರುತ್ತಾರೆಯೇ? ಶೀಘ್ರಕೋಪಿಯೂ, ನೇರ ಸ್ವಭಾವದವರೂ ಆದ ಅವರು ಎದ್ದು ನಿಂತು-- ಯಾವುದನ್ನು ಹರಿಶ್ಚಂದ್ರನ ವ್ಯಕ್ತಿತ್ವದಿಂದ ಅಳಿಸಿಹಾಕಬೇಕೆಂದು ವಸಿಷ್ಟರು ಹಗಲಿರುಳೂ ಶ್ರಮಿಸುತ್ತಿದ್ದರೋ-- ಅದೇ ಪ್ರಸಂಗವನ್ನು ಚಾಚೂ ತಪ್ಪದೆ ಇಡೀ ಸಭೆಯಲ್ಲಿ ತೆರೆದಿಟ್ಟರು. ಒಂದು ಹಂತದಲ್ಲಿ ಇಬ್ಬರು ಋಷಿಗಳಿಗೂ ವಾಗ್ಯುದ್ಧ ನಡೆದು " ಹರಿಶ್ಚಂದ್ರನು ಸತ್ಯವಂತನಲ್ಲ ಎಂಬುದನ್ನು ತೋರಿಸಿಕೊಡುತ್ತೇನೆ " ಎಂದು ವಿಶ್ವಾಮಿತ್ರರು ಪ್ರತಿಜ್ಞೆ ಮಾಡುವ ಮಟ್ಟಕ್ಕೆ ಹೋಯಿತು. ಒಟ್ಟಾರೆಯಾಗಿ ನೋಡಿದರೆ ಮಾಸಿಹೋದ ಹರಿಶ್ಚಂದ್ರನ ಕೀರ್ತಿಪತಾಕೆಯನ್ನು ಎತ್ತಿ ಹಿಡಿಯುವ ಕಾರ್ಯ ಮಾಡಿದ್ದು ವಿಶ್ವಾಮಿತ್ರ ಎನ್ನಲಡ್ಡಿಯಿಲ್ಲ.
ಇದಾವುದೂ ತಮಗೆ ತಿಳಿಯಲೇ ಇಲ್ಲ. ಸಂತೋಷದಿಂದ ಇಡೀ ಪರಿವಾರವು ಜೈತ್ರಯಾತ್ರೆ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ತಮ್ಮ ರಥ ವಿಶ್ವಾಮಿತ್ರಮುನಿಯ ಆಶ್ರಮವನ್ನು ಪ್ರವೇಶಿಸಿತು. ಕುಲಗುರು ವಸಿಷ್ಟರು 'ವಿಶ್ವಾಮಿತ್ರನ ಆಶ್ರಮ ಪ್ರವೇಶಿಸಬೇಡಿ' ಎಂದು ನೀಡಿದ್ದ ಎಚ್ಚರಿಕೆ ನೆನಪಾಗಿ ಅರಸನು ಅಪರಾಧಿ ಮನೋಭಾವದಿಂದ ತೊಳಲಿದ. ಭಯ ,ಗಾಬರಿ, ಆಯಾಸಗಳಿಂದ ತನ್ನ ತೊಡೆಯ ಮೇಲೆ ತಲೆಯಿಟ್ಟು ಮಲಗಿದ್ದ ಹರಿಶ್ಚಂದ್ರನಿಗೆ ಹೆದರಿದವರ ಮೇಲೆ ಕಪ್ಪೆ ಬಿದ್ದಿತು' ಎಂಬಂತೆ ದುಃಸ್ವಪ್ನ ಬೇರೆ ಬೀಳಬೇಕೆ? ಆ ಕನಸಿನಿಂದ ಮತ್ತಷ್ಟು ಗಾಬರಿಗೊಂಡು ಎಚ್ಚತ್ತ ಹರಿಶ್ಚಂದ್ರ ತೀರ ಅಸಹಾಯಕನಾಗಿ ಕಂಡ.ಭಯದಿಂದಲೇ ತನ್ನ ಕನಸನ್ನು ವರ್ಣಿಸಿದ. ಕೋಪಗೊಂಡ ಋಷಿಯೊಬ್ಬ ರಾಜನನ್ನು ಸಿಂಹಾಸನದಿಂದ ಕೆಳಕ್ಕೆ ತಳ್ಳಿ ಸಿಂಹಾಸನವನ್ನು ಎಳೆದೊಯ್ದನಂತೆ. ಸದಾಕಾಲ ತಮ್ಮ ಸಿಂಹಾಸನವನ್ನು ಕಾಪಾಡಿಕೊಳ್ಳಬೇಕೆಂಬ ಯೋಚನೆಯಲ್ಲಿಯೇ ಮುಳುಗಿರುವ ಇತರ ರಾಜರಿಗಿಂತ ಹರಿಶ್ಚಂದ್ರನೂ ಬಿನ್ನನೇನಲ್ಲ ಎಂದು ತನಗೆ ತಿಳಿದಿದ್ದು ಆಗಲೆ. ತಾನು ಅವನನ್ನು ಸಮಾಧಾನ ಪಡಿಸಿ " ರಾಜಾ, ನೀನು ರಾಜ್ಯ , ಐಶ್ವರ್ಯ, ಅಂತಸ್ತು ,ಅಧಿಕಾರ ಯಾವುದನ್ನು ಕಳೆದುಕೊಂಡರೂ ಪರವಾಗಿಲ್ಲ , ಸತ್ಯಗುಣ ಮಾತ್ರ ಬಿಡಬೇಡ " ಎಂದು ನಯವಾಗಿ ಅವನ ಹೊಣೆಗಾರಿಕೆಯ ಬಗ್ಗೆ ಎಚ್ಚರಿಸಿದ ಮಾತು ಮುಂದೆ ಅವನ ಕಷ್ಟಕಾಲದುದ್ದಕ್ಕೂ ಶ್ರೀರಕ್ಷೆಯಾಯಿತು.


ಮುಂದಿನದೆಲ್ಲಾ ಕೆಟ್ಟ ಕನಸಿನಂತೆ ಸಾಗಿಹೋಯಿತು. ವಿಶ್ವಾಮಿತ್ರನ ಆಶ್ರಮದಲ್ಲಿ ಸುಂದರಿಯರಾದ ಇಬ್ಬರು ಹೊಲತಿಯರು ಬಂದು ಸೊಗಸಾದ ಸಂಗೀತ , ನೃತ್ಯಗಳಿಂದ ನಮ್ಮೆಲ್ಲರ ಮನತಣಿಸಿದರು. ವಿಶೇಷವಾಗಿ ಅರಸನ ದಿಕ್ಕೆಟ್ಟ ಮನಸ್ಸು ತಿಳಿಯಾಗಿ ಎಂದಿನ ಆತ್ಮವಿಶ್ವಾಸ ಮರಳಿ , ಆ ಹೊಲತಿಯರಿಗೆ ಮುತ್ತಿನ ಹಾರವನ್ನು ಮೆಚ್ಚುಗೆಯ ಕುರುಹಾಗಿ ನೀಡಿದ. ಅದು ಒಂದು ದೊಡ್ಡ ಪ್ರಮಾದವಾಗಿ ಮಾರ್ಪಟ್ಟಿದ್ದು ಮಾತ್ರ ತೀರ ಅನಿರೀಕ್ಷಿತ ಹಾಗೂ ಆಘಾತಕಾರಿ. ಏನೇ ಆಗಲಿ ಆ ಯುವತಿಯರ ಸೌಂದರ್ಯ, ಸಂಗೀತ ಮತ್ತು ನೃತ್ಯ ಕಲೆಯಲ್ಲಿ ಅವರಿಗಿದ್ದ ಪರಿಣತಿಯನ್ನು ಯಾರೇ ಆಗಲಿ ಮೆಚ್ಚಲೇ ಬೇಕು.ಜೊತೆಗೆ ಹರಿಶ್ಚಂದ್ರನೊಂದಿಗೆ ಅವರು ವಾದ ಮಾಡುತ್ತಿದ್ದ ವೈಖರಿ ದಂಗುಬಡಿಸುವಂತಿತ್ತು. ಅವರ ಮಾತಿನಲ್ಳೂ ಸತ್ಯಾಂಶವಿದೆಯಲ್ಲವೇ ಎಂಬ ಭಾವನೆ ತನ್ನಲ್ಲಿ ಸಣ್ಣಗೆ ಮೊಳಕೆಯೊಡೆದಿತ್ತು.ಮುತ್ತಿನ ಹಾರವನ್ನು ನಿರಾಕರಿಸಿದ ಯುವತಿಯರು ಬೆಳ್ಗೊಡೆ ಕೇಳಿದಾಗ ಆರಸನಿಗೆ ಕಿರಿಕಿರಿಯಾಗಿದ್ದು ನಿಜ " ಹುಟ್ಟಿನಲ್ಲಿ ಹೊಲತಿಯರಾದ ಮಾತ್ರಕ್ಕೆ ತಮ್ಮನ್ನೇಕೆ ತಿರಸ್ಕರಿಸಬೇಕು ? ಪಂಚೇಂದ್ರಿಯಗಳಲ್ಲಿ ನಾಲ್ಕು ಅಧಮ, ಒಂದು ಅಧಿಕವೇ? " ಎಂಬ ಅವರ ದಿಟ್ಟ ಪ್ರಶ್ನೆಗೆ ಅರಸನು ಉತ್ತರವನ್ನೇನೋ ಕೊಟ್ಟ. ಅದರಲ್ಲಿ ಜಾಣತನವಿತ್ತೇ ಹೊರತು ಸಮರ್ಪಕವಾಗಿರಲಿಲ್ಲ. ಅವರ ತರ್ಕಬಧ್ಧ ವಾದಮಂಡನೆಗೆ ಹರಿಶ್ಚಂದ್ರ ನಖಶಿಖಾಂತ ಕೋಪಗೊಂಡ.. ಕೋಪದ ಭರದಲ್ಲಿ ಅರಸನಾಡಿದ ಒಂದು ಮಾತು ನೇರವಾಗಿ ತನ್ನನ್ನೇ ಅವಮಾನಿಸುವಂತಿತ್ತು. ಆದರೆ ಆ ಹೊಲತಿಯರಂತೆ ವಾದಮಾಡಲು ತನಗಂತೂ ಸಾಧ್ಯವಾಗಲಿಲ್ಲ. ಬೆಳ್ಗೊಡೆಯ ಒಡೆಯನಾದ ನೀನೇ ನಮಗೆ ಒಡೆಯನಾಗು " ಎಂದು ಅವರೆಂದಾಗ ಸೂರ್ಯವಂಶದ ಬಗೆಗಿನ ಅತಿಯಾದ ಅಭಿಮಾನದಿಂದ ( ದುರಭಿಮಾನ ಎಂದರೂ ಸರಿ ) " ನನ್ನ ವಂಶಜರಿಗೆ ಹೆಣ್ಣು ಕೊಡಲು ಸಮರ್ಥರಾದ ಅರಸರು ಈ ಪ್ರಪಂಚದಲ್ಲಿಯೇ ಇಲ್ಲ " ಎಂದನಲ್ಲ. ಈ ಮಾತುಗಳು ಅವನ ಪಟ್ಟದ ರಾಣಿಯಾದ ನನ್ನ ಮನಸ್ಸಿನ ಮೇಲೆ ಬೀರುವ ಪರಿಣಾಮದ ಬಗ್ಗೆ ಅವನು ಚಿಂತಿಸಲೇ ಇಲ್ಲ.ನನಗಾದ ಅವಮಾನ ತನ್ನದೆಂದು ಅವನಿಗೆ ಅನ್ನಿಸಲೇ ಇಲ್ಲ. ಅದರ ಬದಲು ತಾನು ಏಕಪತ್ನೀವ್ರತಸ್ಥ ಎನ್ನಬಹುದಿತ್ತಲ್ಲವೇ ?


ಕಡೆಗೆ ಆದದ್ದಾದರೂ ಏನು ? ಅರಸನ ಉತ್ತರದಿಂದ ತೃಪ್ತರಾಗದ ಆ ಹೊಲತಿಯರು ಅರಸನನ್ನು ಅವನು ಎಲ್ಲಿಗೆ ಹೊರಟರಲ್ಲಿಗೆ ಹಿಂಬಾಲಿಸುವುದಾಗಿ ಘಂಟಾಘೋಷವಾಗಿ ಹೇಳಿದಾಗ , ಸಂಯಮ ಕಳೆದುಕೊಂಡ ಅರಸನು ವರ್ತಿಸಿದ ರೀತಿ ಮಾತ್ರ ಅಕ್ಷಮ್ಯ.ತನ್ನೆಲ್ಲ ಶಿಷ್ಟಾಚಾರವನ್ನುಮರೆತು ಅವರು ಹೆಣ್ಣುಗಳೆಂಬುದನ್ನೂ ಮರೆತು ಚಾಟಿಯಿಂದ ಅಟ್ಟಾಡಿಸಿಕೊಂಡುಹೊಡೆದ ದೃಶ್ಯ ತನ್ನ ಕಣ್ಣಿನಿಂದ ಮರೆಯಾಗಿಲ್ಲ.ತನ್ನ ಅರಸನಲ್ಲಿ ಇಷ್ಟೊಂದು ಕ್ರೌರ್ಯ ತುಂಬಿದೆಯೇ ? ಅದುತನಕ ಅವನ ವ್ಯಕ್ತಿತ್ವದ ಈ ಮುಖ ತನಗೆ ತಿಳಿದಿರಲೇ ಇಲ್ಲ.


ಆ ಮುಖ ಮಾತ್ರವಲ್ಲ ಅವನ ವ್ಯಕ್ತಿತ್ವದ ಇನ್ನೊಂದು ಘೋರ ಮುಖ ಪರಿಚಯವಾದದ್ದು ಕಾಡಿನಲ್ಲಿ ಆ ಅವಮಾನಕರ ಪ್ರಸಂಗವನ್ನು ಮರೆಯಬೇಕೆಂದು ಶತಪ್ರಯತ್ನ ಮಡಿದರೂ ಮತ್ತೆ ಮತ್ತೆ ನೆನಪಿಗೆ ಬಂದು ಚಿತ್ರಹಿಂಸೆ ನೀಡುತ್ತದೆ. ಕಾಡಿನಲ್ಲಿ ತಾವು ನಡೆಯುತ್ತಿರುವಾಗ ಇದ್ದಕ್ಕಿದ್ದಂತೆ ಆವರಿಸಿದ ಕಾಡ್ಗಿಚ್ಚಿನ ತೀವ್ರತೆ ಎಲ್ಲರನ್ನೂ ದಿಗ್ಭ್ರಮೆಗೊಳಿಸಿತು.ಅರಸನು ತಾನೆ ಮೊದಲು ಬೆಂಕಿಗಾಹುತಿಯಾಗುವೆನೆಂದು ಮುಂದೆ ಸಾಗಿದಾಗ ತಾನು " ಅರಸ, ಎಲ್ಲ ವಿಷಯದಲ್ಲೂ ಹೆಣ್ಣು ಗಂಡನನ್ನು ಹಿಂಬಾಲಿಸಬೇಕು.ಆದರೆ ಸಾವಿನ ವಿಷಯದಲ್ಲಿ ಮಾತ್ರ ಹೆಣ್ಣು ಮುನ್ನಡೆಯಬೇಕಾದ್ದು ಧರ್ಮವಲ್ಲವೇ ? " ಎಂದು ಪತಿವ್ರತಾಧರ್ಮವನ್ನು ನೆನಪಿಸಿ ಅಗ್ನಿಗೆ ನಮಸ್ಕರಿಸಿ " ತಾನು ಪತಿವ್ರತೆಯಾಗಿರುವುದು ಸತ್ಯವೇ ಆಗಿರುವುದಾದರೆ ಅಗ್ನಿ ತನ್ನನ್ನು ಸುಡದಿರಲಿ" ಎಂದು ಹೇಳಿ ಬೆಂಕಿಯಲ್ಲಿ ನಡೆದಾಗ ಅಗ್ನಿ ಶಾಂತವಾಯಿತು.ಆ ಬೆಂಕಿ ನಂದಿದರೂ ಹರಿಶ್ಚಂದ್ರನ ಮಾತಿನ ಬೆಂಕಿ ಈಗಲೂ ತನ್ನನ್ನು ಸುಡುತ್ತಿದೆ. " ಚಂದ್ರಮತಿ ಬೆಂಕಿಯ ನೆಪದಿಂದ ನಿನ್ನ ಪಾತಿವ್ರತ್ಯದ ಪರೀಕ್ಷೆಯಾಯಿತು. "


ತನ್ನ ಪಾತಿವ್ರತ್ಯ ಪರೀಕ್ಷೆಗೊಳಪಡಬೇಕಿತ್ತೆಂದು ಹರಿಶ್ಚಂದ್ರ ಕಾಯುತ್ತಿದ್ದನೇ ? ಅದಕ್ಕೆ ಬೆಂಕಿಯ ಸಾಕ್ಷ್ಯ ಬೇಕಿತ್ತೇ ? ದಾಂಪತ್ಯದಲ್ಲಿ ಸತಿಪತಿಯರ ನಡುವಿನ ನಂಬಿಕೆ ವಿಶ್ವಾಸಗಳೆ ಭದ್ರ ಬುನಾದಿ ಎಂಬ ಅರಿವಿಲ್ಲದ ವ್ಯಕ್ತಿಯೇ ಆತ ? ಅವನ ಮಾತುಗಳು ಶೂಲದಂತೆ ಚುಚ್ಚಿದರೂ ಮಾತು ಮೂಕವಾಯಿತು. ಇತರ ಕ್ಷತ್ರಿಯ ರಾಜರಂತಲ್ಲದೆ - "ರಾಜಾ ಬಹುವಲ್ಲಭಾ" ಎಂಬ ಮಾತನ್ನು ಸುಳ್ಳು ಮಾಡಿ " ಏಕಪತ್ನೀವ್ರತಸ್ತ"ನಾದನೆಂದು ಅವನನ್ನು ಗೌರವಿಸಬೇಕೇ ಅಥವಾ ಪತ್ನಿಯನ್ನು ಪರೀಕ್ಷಿಸುವ ಸಂದರ್ಭ ಹೇಗಾದರೂ ಒದಗಿತಲ್ಲ ಎಂದು ಸಂಭ್ರಮಿಸುತ್ತಿರುವ ಅವನ ಸಂಕುಚಿತ ವ್ಯಕ್ತಿತ್ವವನ್ನು ಕಂಡು ಖಿನ್ನಳಾಗಬೇಕೋ ? ತಿಳಿಯಲಿಲ್ಲ.


ಹೀಗೆ ತೊಳಲಾಡುತ್ತಿರುವಾಗಲೇ ಬಳಿಗೆ ಬಂದ ದಾಸಿ " ಮಹಾರಾಣಿ, ಮಹಾರಾಜರೂ ಮತ್ತು ಯುವರಾಜರೂ ನಿಮ್ಮ ನಿರೀಕ್ಷೆಯಲ್ಲಿದ್ದಾರೆ " ಎಂದಾಗ "ಈ ದಿನದ ಸಭೆ ವಿಶೇಷವಾದದ್ದು, ನಾಡಿನ ಪಟ್ಟಮಹಿಷಿಯಾದ ತಾವು ಬರಬೇಕು " ಎಂದು ಅರಸನು ಹೇಳಿದ ಮಾತು ನೆನಪಾಗಿ ಮುಖದಲ್ಲಿ ಕೃತಕ ಗಾಂಭೀರ್ಯ ಹಾಗು ಕೃತಕ ಸಂತೋಷವನ್ನು ತಂದುಕೊಂಡು ಅಲ್ಲಿಂದ ಹೊರಟಳು


22 comments:

  1. ಚಂದ್ರಕಾಂತರವರೆ,
    ಚಿಕ್ಕ ಚೊಕ್ಕ ಲೇಖನದಲ್ಲಿ ಎಷ್ಟೊಂದು ವಿವರಣೆ ನೀಡಿದ್ದೀರಿ.ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿಯುತ್ತವೆ ಕೆಲವೊಮ್ಮೆ, ಇದಕ್ಕೆ ಚಂದ್ರಮತಿಯು ಹೊರತಲ್ಲವಲ್ಲ ಅನ್ನಿಸಿತು. ತುಂಬಾ ತುಂಬಾ ಚೆನ್ನಾಗಿ ಬರೆದಿದ್ದೀರಿ.ಇದಕ್ಕಿಂತ ಏನು ಹೇಳೋದು ಗೊತ್ತಾಗ್ತಾ ಇಲ್ಲ. ಹೆಚ್ಚು ಹೆಚ್ಚು ಬರಹ ನಿಮ್ಮಿಂದ ಬರಲಿ ಎಂದು ಆಶಿಸುವೆ.
    ನನಗು ಸತ್ಯಹರಿಶ್ಚಂದ್ರನ ಇನ್ನೊಂದು ಮುಖ ಗೊತ್ತೇ ಇರಲಿಲ್ಲ.ಲೋಹಿತಾಶ್ವನ ಸಾವು & ಸ್ಮಶಾನ ಪ್ರಸಂಗ ಮಾತ್ರ ಗೊತ್ತಿತ್ತು.ಬೆಳಿಗ್ಗೇನೆ ಒಂದು ಒಳ್ಳೆ ಲೇಖನವನ್ನೋದಿದ ಖುಷಿಯಲ್ಲಿ ಧನ್ಯವಾದಗಳು.

    ReplyDelete
  2. This comment has been removed by a blog administrator.

    ReplyDelete
  3. ಚಂದ್ರ ಕಾಂತ ಮೇಡಮ್,
    ಸತ್ಯ ಹರಿಶ್ಚಂದ್ರನ ಇನ್ನೊಂದು ಮುಖ ಗೊತ್ತಿರಲೇ ಇಲ್ಲ..ಅದರ ಬಗ್ಗೆ ಚೆನ್ನಾಗಿ ಬರೆದಿದ್ದೀರಿ...ಕೆಲವು ವಿಚಾರಗಳು ನಮಗೂ ತಿಳಿಯಿತು....ಒಟ್ಟಾರೆ ಲೇಖನ ತುಂಬಾ ಮಾಹಿತಿಯುಕ್ತವಾಗಿದೆ....

    ReplyDelete
  4. ಚಂದ್ರಕಾಂತರವರೆ....

    ನನಗೆ ಇಂಥಹ ವಿಚಾರಗಳೆಂದರೆ ಬಹಳ ಖುಷಿ..
    ಚಂದ್ರಮತಿಯ ಮನಸ್ಸಿನ ತೊಳಲಾಟವನ್ನು ಚೆನ್ನಾಗಿ ಬಿಂಬಿಸಿದ್ದೀರಿ..
    ಇದರಲ್ಲಿ ಕಾದಂಬರಿ, ನೀಳ್ಗಥೆ ಬರೆಯುವಷ್ಟು ಸರಕು ಇದೆ..
    ಇದನ್ನು ಓದುತ್ತಿದ್ದ ಹಾಗೆ ನನಗೆ "ಕಸ್ತೂರಬಾ" ನೆನಪಾದರು..
    ಮಹಾತ್ಮರ ಆತ್ಮಕಥೆ ತಾವೂ ಓದಿರಬಹುದು..
    ಗಾಂಧಿಯವರೇನೋ "ಮಹಾತ್ಮರಾದರು..
    ಸಾಮಾನ್ಯ ಮಹಿಳೆಯಾದ "ಕಸ್ತೂರಬಾ" ...
    ಪಟ್ಟ ಕಷ್ಟ ಕಾರ್ಪಣ್ಯ, ನೋವುಗಳ ಬಗೆಗೆ ಯಾರೂ ಗಮನ ಹರಿಸುವದಿಲ್ಲ.

    ಹೆಣ್ಣಿನ ಮನೋವೇದನೆ ಚಂದವಾಗಿ ,, ವಿವರಿಸಿದ್ದೀರಿ...

    ಓದುತ್ತ.. ಓದುತ್ತ ನಾವೇ ಚಂದ್ರಮತಿಯ ಪಾತ್ರದಲ್ಲಿ ತಲ್ಲೀನರಾಗಿಬಿಡುತ್ತೇವೆ..

    ಕಥೆಯನ್ನು ಭಿನ್ನವಾದ ಕೋನದಿಂದ ನೋಡುವ ....
    ನಿಮ್ಮ ಈ ವಿಮರ್ಶಾತ್ಮಕ ಭಾವ ನನಗೆ ತುಂಬಾ ಇಷ್ಟವಾಯಿತು....

    ನೀವು "ಯಯಾತಿ" ಥರಹ ಇದನ್ನು ಕಾದಂಬರಿಯಾಗಿ ಬರೆಯಿರಿ...


    ಚಂದವಾದ ಬರಹಕ್ಕೆ ಅಭಿನಂದನೆಗಳು...

    ReplyDelete
  5. @ ಭಾರ್ಗವಿ

    ನಿಮಗೆ ನನ್ನ ಈ ಬರವಣಿಗೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು. ನಿಮ್ಮಂತಹ ಸಹೃದಯ ಓದುಗರಿರುವಾಗ ಖಂಡಿತ ಮತ್ತಷ್ಟು ಬರೆಯುತ್ತೇನೆ.

    @ ಶಿವೂ ಅವರಿಗೆ

    ನಾವೆಲ್ಲಾ ರಾಜಕುಮಾರ್ ಅಭಿನಯದ ಸತ್ಯ ಹರಿಶ್ಚಂದ್ರ ನೋಡಿದ್ದೇವಲ್ಲ. ಅದರಲ್ಲಿ ಬರುವ ಪ್ರಸಂಗಗಳೇ ಮನದಲ್ಲಿ ಅಚ್ಚಳಿಯದೇ ಉಳಿದಿರುತ್ತದೆ.ನಾನು ರಾಘವಾಂಕನ ‘ ಹರಿಶ್ಚಂದ್ರಕಾವ್ಯ ’ವನ್ನು ಪೂರ್ಣ ಓದಿರುವುದರಿಂದ ಇತ್ತ ಕಡೆ ಗಮನ ಹರಿಸಲು ಸಾಧ್ಯವಾಯಿತು. ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.

    @ ಸಿಮೆಂಟು ಮರಳಿನ ...

    ನೀವು ಬರವಣಿಗೆಯನ್ನು ಆಮೂಲಾಗ್ರವಾಗಿ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
    ನಿಜ ಹೇಳಬೇಕೆಂದರೆ ಬರೆಯಲು ಪ್ರಾರಂಭಿಸಿದಾಗ ಅದು ಬಹಳ ಧೀರ್ಘವಾಗಿತ್ತು. ಇತರರಿಗೆ ಇದು ಬೋರ್‍ ಹೊಡೆಸಬಹುದೆಂಬ ಅನುಮಾನದಿಂದ ಸಂಕ್ಷಿಪ್ತವಾಗಿ ಬರೆದೆ. ಆದರೂ ಎಲ್ಲರಿಗೂ ಸರಳವಾಗಿ ತಲುಪುವುದೋ ಇಲ್ಲವೋ ಎಂಬ ಅಳುಕು ಮನದ ಮೂಲೆಯಲ್ಲಿ ಇತ್ತು.

    ನೀವು ಹೇಳಿದಂತೆ ಕಸ್ತೂರ್ಬಾ ಅವರ ಜೀವನ ಅವರ ಮಕ್ಕಳ ಜೀವನ ವೇದನೆಯನ್ನುಂಟು ಮಾಡುವಂತದ್ದು. ಗಾಂಧಿ ಮಹಾತ್ಮರಾಗಬೇಕಾದರೆ ಇವರೆಲ್ಲ ಬೆಲೆ ತೆರಲೇ ಬೇಕಾಯಿತು.

    ಈ ದೃಷ್ಟಿಕೋನದಿಂದ ಕಥೆ ಬರೆಯಲು ನನಗೆ ಪ್ರೇರಣೆ ಮಾಸ್ತಿಯವರ " ಹೇಮಕೂಟದಿಂದ ಬಂದಮೇಲೆ " ಕಥೆ. ಅದರಲ್ಲಿ ಶಕುಂತಲೆಯ ಜೀವನವನ್ನು ಭಿನ್ನ ದೃಷ್ಟಿಕೋನದಿಂದ ಬರೆದಿದ್ದಾರೆ.

    ಇದನ್ನು ಕಾದಂಬರಿಯಾಗಿ ಬರೆಯುವಂತೆ ಸಲಹೆ ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  6. ಮೇಡಮ್...ಕಥೆ ಓದಿ ನಾನು ಒಂದೈದು ನಿಮಿಷ ಹಾಗೆ ಸುಮ್ನೆ ಕೂತೆ. ಚಂದ್ರಮತಿಯ ದೃಷ್ಟಿಕೋನದಿಂದ ಹರಿಶ್ಚಂದ್ರನನ್ನು ಇದುವರೆಗೂ ನೋಡಿದ್ದಿಲ್ಲ. ದಯವಿಟ್ಟು ಇದನ್ನು ನೀವು ನೀಳ್ಗತೆಯಾಗಿ ಬರೆಯಿರಿ. ಖಂಡಿತಾ ಬೋರ್ ಆಗಲ್ಲ. ತುಂಬಾ interesting and eye-opening ಆಗಿದೆ ಕತೆ.

    ReplyDelete
  7. ಚಂದ್ರಕಾಂತಾ, ಇಲ್ಲಿಗೆ ಹೊಸಬಳು ನಾನು. ಇಂದೇ ಬಂದೆ. ಈ ಲೇಖನ ತುಂಬಾ ಹಿಡಿಸಿತು. ಚಂದ್ರಮತಿಯ ಒಳತೋಟಿಯನ್ನು ಗಾಢವಾಗಿ ಹಿಡಿದಿರಿಸಿದ್ದೀರಿ, ಹಾಗೆಯೇ ಆಕೆಯ ಸಾಮ್ರಾಜ್ಞಿತ್ವದ ಗಾಂಭೀರ್ಯವನ್ನೂ. ಧನ್ಯವಾದಗಳು. ಉಳಿದ ಲೇಖನಗಳನ್ನೂ ನಿಧಾನವಾಗಿ ಓದುವೆ.

    ReplyDelete
  8. ಚಂದ್ರಕಾಂತ ಅವರೆ,

    ಈವರೆಗೆ ಊರ್ಮಿಳೆ, ದ್ರೌಪದಿ, ಸೀತೆ, ರಾಧೆ, ಅಹಲ್ಯೆ ಮುಂತಾದವರ ಕುರಿತು ವಿಭಿನ್ನ ದೃಷ್ಟಿಕೋನವನ್ನು ತೋರುವ ಬರಹಗಳು ಸಾಕಷ್ಟು ಬಂದಿವೆ. ಹಲವಷ್ಟನ್ನು ಓದಿಯೂ ಇದ್ದೇನೆ. ಆದರೆ ಚಂದ್ರಮತಿಗೆ ಹೀಗೊಂದು ಅಂತರಂಗವೂ ಇರಬಹುದೆಂದು ಯೋಚಿಸಿ ವಿಭಿನ್ನವಾಗಿ ನಿರೂಪಿಸಿದ ನಿಮ್ಮ ಕಥೆ ತುಂಬಾ ಇಷ್ಟವಾಯಿತು. ಚಂದ್ರಮತಿಯ ಅಂತರಂಗದ ಕುರಿತಾದ ಬರಹವನ್ನೋದಿರುವುದು ಇದೇ ಮೊದಲು ನೋಡಿ. ಆದರೆ ಕಥೆಯನ್ನು ಇನ್ನೂ ಬೆಳೆಸಬಹುದಿತ್ತು ಎಂದೆನಿಸುತ್ತಿದೆ. ಕಥೆ ದಿಢೀರನೆ ಮುಕ್ತಾಯಗೊಂಡಂತಾಯಿತು ಅಷ್ಟೇ...
    ಮತ್ತಷ್ಟು ಇಂತಹ ಕಥೆಗಳ ನಿರೀಕ್ಷೆಯಲ್ಲಿರುವೆ.

    ReplyDelete
  9. ನೀವು ಕೂಡ ಬಹಳಷ್ಟು ಲೇಖಕಿಯರಂತೆ ರಾಮಾಯಣ,ಮಹಾಭಾರತದ ಸ್ತ್ರೀ ಪಾತ್ರಗಳನ್ನು ಸ್ತ್ರೀವಾದದ ಹಿನ್ನೆಲೆಯಲ್ಲಿ ವಿಶ್ಲೇಷಿಸುವಂತೆ ವಿಶ್ಲೇಷಿಸಿದ್ದೀರಿ.

    ReplyDelete
  10. @ ಲಕ್ಷ್ಮೀ

    ಕಥೆ ನಿಮ್ಮನ್ನು ಇಷ್ಟೊಂದು ಆಕರ್ಷಿಸಿದ್ದಕ್ಕೆ , ಕಣ್ತೆರೆಸುವಂತದ್ದು ಅನಿಸಿದ್ದಕ್ಕೆ, ನೀಳ್ಗತೆಯಾಗಿ ಬರೆಯುವಂತೆ ಸೂಚಿಸಿದ್ದಕ್ಕೆ ಧನ್ಯವಾದಗಳು

    @ ಸುಪ್ತದೀಪ್ತಿ ಅವರಿಗೆ

    ನಿಮ್ಮ ಈ ಹೆಸರು ಬಹಳ ಚೆನ್ನಾಗಿದೆ. ನನ್ನ ಬ್ಲಾಗಿಗೆ ನಿಮಗೆ ಸ್ವಾಗತ. ನನ್ನ ಲೇಖನದಲ್ಲಿ ಚಂದ್ರಮತಿಯ ಗಾಂಭೀರ್ಯ ಗುರುತಿಸಿದ್ದಕ್ಕೆ ಧನ್ಯವಾದಗಳು.

    @ ತೇಜಸ್ವಿನಿ ಅವರಿಗೆ

    ನೀವು ಹೇಳಿದ ಊರ್ಮಿಳೆ, ದ್ರೌಪದಿ, ಸೀತೆ, ರಾಧೆಯರಲ್ಲದೆ ಅಮೃತಮತಿ, ಯಶೋದರೆಯರ ಪಾತ್ರಗಳನ್ನು ವಿಭಿನ್ನವಾಗಿ ನೋಡಿರುವ ಬರಹಗಳನ್ನು ನಾನೂ ಓದಿರುವೆ. ಆದರೆ ಹಾಗೆ ವಿಭಿನ್ನವಾಗಿ ಬರೆಯಬೇಕೆಂಬ ದೃಷ್ಟಿಕೋನ ಹೊಂದಿ ಬರೆದ ಕಥೆಯಲ್ಲ ಇದು. ಚಂದ್ರಮತಿಯ ಪಾತ್ರ ನನ್ನನ್ನು ಗಾಢವಾಗಿ ತಟ್ಟಿದ್ದರ ಪರಿಣಾಮವೇ ಈ ಕಥೆ. ನಿಮ್ಮ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.

    @ ಬಿಸಿಲಹನಿ

    ಉದಯ್ ಅವರೆ ಸ್ತ್ರೀವಾದದ ಹಿನ್ನೆಲೆಯನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು. ಆದರೆ ಇದನ್ನು ಬರೆಯುವಾಗ ಅದು ಸ್ತ್ರೀವಾದದ ಹಿನ್ನೆಲೆಯ ವಿಶ್ಲೇಷಣೆ ಎಂದು ತಿಳಿದಿರಲಿಲ್ಲ . ಆರೇಳು ವರ್ಷಗಳ ಕಾಲ ವಿದ್ಯಾರ್ಥಿನಿಯರಿಗೆ ಇಡೀ ಹರಿಶ್ಚಂದ್ರಕಾವ್ಯ ಪಾಠ ಮಾಡಿದ ಅನುಭವದ ಹಿನ್ನೆಲೆಯಲ್ಲಿ ಚಂದ್ರಮತಿಯ ಪಾತ್ರಕ್ಕೆ ಬಹಳ ಅನ್ಯಾಯವಾಗಿದೆ ಅನಿಸಿತು.ಅದನ್ನು ಮೊದಲು ವಿಮರ್ಶೆಯ ರೂಪದಲ್ಲಿ ಬರೆದೆ. ಸರಿಹೋಗಲಿಲ್ಲ ಅನಿಸಿದ್ದರಿಂದ ಚಂದ್ರಮತಿಯ ಸ್ಥಾನದಲ್ಲಿ ನಿಂತು ಕಥೆ ಬರೆದೆ. ಇದನ್ನು ಬರೆದ ನಂತರ ನನ್ನವರು ಹೇಳಿದಾಗಲೇ ಇದು ಸ್ತ್ರೀವಾದದ ಹಿನ್ನೆಲೆಯ ವಿಶ್ಲೇಷಣೆ ಎಂದು ತಿಳಿದದ್ದು ಹಾಗೂ ಖುಷಿಯಾದದ್ದು.

    ReplyDelete
  11. ಹೊಸದು ಏನು ಬರೆದಿಲ್ವ ಮ್ಯಾಡಮ್ ಅಂತ ಕೇಳಲು ಬಂದೆ...ನೋಡಿದ್ರೆ ತುಂಬಾಆಆ ಚೆನ್ನಾಗಿರುವ ಕಥೆ ಬರೆದಿದ್ದೀರ [ಅಪ್ ಡೇಟ್ ಸರಿಯಾಗಿ ನೋಡಿಲ್ಲ ನಾನು] . ಚಿಂತನೆಗೆ ಹಚ್ಚುವ ಲೇಖನ

    ಕಾಲೇಜಿ ನಲ್ಲಿ ನಿಮ್ಮ ಕ್ಲಾಸ್ ಬಹಳ interesting ಆಗಿ ಇರಬಹುದು ಅನಿಸಿತು :)

    ReplyDelete
  12. @ ಗೀತಾ

    ನನಗೆ ಆಶ್ಚರ್ಯ ಆಗಿತ್ತು. ಯಾಕೆ ಗೀತಾ ಏನೂ ಪ್ರತಿಕ್ರಿಯಿಸಿಲ್ಲ ಅಂತ. ಬಹುಶಃ ಹಾಸ್ಯ ಲೇಖನ ಬರೆದಿಲ್ಲ ಎಂದು ಉದಾಸೀನಳಾಗಿರುವಿಯೇನೋ ಅನ್ನಿಸಿತು.ಹಾಸ್ಯ ಲೇಖನ ಪ್ರಾರಂಭಿಸಿರುವೆ. ಬಹುಶಃ ಮುಂದಿನ ಪೋಸ್ಟ್ ಅದಾಗಬಹುದು

    ಕಥೆ ಇಷ್ಟ ಆಗಿದ್ದಕ್ಕೆ ಧನ್ಯವಾದಗಳು. ನಾನು ಈಗಾಗಲೇ ಹೇಳಿರುವಂತೆ ನೀನು ನನ್ನ ವಿದ್ಯಾರ್ಥಿನಿಯಾಗಿದ್ದರೆ ಎಷ್ಟು ಚಂದವಿತ್ತು ಅನಿಸುತ್ತದೆ.:)

    ReplyDelete
  13. ಒಂದು ಪೌರಾಣಿಕ ಕತೆಯನ್ನು ಬಳಸಿಕೊಂಡು ಎಷ್ಟೆಲ್ಲ ಸಾಮಾಜಿಕ ಹಾಗೂ ಮನೋವೈಜ್ಞಾನಿಕ ವಿಶ್ಲೇಷಣೆ ಮಾಡಿದ್ದೀರಿ. ಈ 'ಹೊಸ ಬಗೆಯ'ಕತೆ ನನಗೆ ತುಂಬ
    ಮೆಚ್ಚಿಗೆಯಾಯ್ತು.

    ReplyDelete
  14. This comment has been removed by a blog administrator.

    ReplyDelete
  15. @sunaath ಸರ್

    ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆಂದು ನೋಡುತ್ತಿದ್ದೆ. ಮನೋವೈಜ್ಞಾನಿಕ ವಿಶ್ಲೇಷಣೆಯನ್ನು ಗುರುತಿಸಿ ‘ ಹೊಸ ಬಗೆ ’ಯ ಕಥೆ ಎಂದು ಕರೆದಿರುವುದಕ್ಕೆ ಧನ್ಯವಾದಗಳು

    ReplyDelete
  16. ಚಂದ್ರಕಾಂತರವರೆ...

    ಸಂಕ್ರಮಣದ..
    ಶುಭಾಶಯಗಳು...!

    ReplyDelete
  17. ಚಂದ್ರಕಾಂತಾ ಅವರೇ, ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಭೇಟಿ. ಬಹಳ ಚೆನ್ನಾಗಿದೆ ನಿಮ್ಮ ಬ್ಲಾಗ್. ಈ ಲೇಖನವೂ ಕೂಡ ಸೊಗಸಾಗಿದೆ. ನನ್ನ ಪ್ರಕಾರ, ಯಾವುದೇ ದೊಡ್ಡ ಪೌರಾಣಿಕ ಅಥವಾ ಐತಿಹಾಸಿಕ ವ್ಯಕ್ತಿಯ ಬಗ್ಗೆ ಬಹಳಷ್ಟು ಉಹಾಪೋಹಗಳು ಸಾಧಾರಣವಾಗಿ ಕೂಡಿಕೊಳ್ಳುವುದು ಸಹಜ. ಆತ ಹೀರೋ ಆದರೆ ಆತನಿಗೆ ಎಳ್ಳಷ್ಟೂ ನೆಗೆಟಿವ್ ಅಂಶ ಆರೋಪಿಸದೆ, ವಿಲನ್ ಆದರೆ ಆತನ ಕಣಕಣದಲ್ಲೂ ಕ್ರೂರತ್ವ ತುಂಬಿ ಥೂ, ಛೀ, ಅನ್ನುವುದೇ ಲೋಕ ರೂಢಿ. ಆದರೆ ವಾಸ್ತಾವಾಂಶ ಇದಕ್ಕೆಲ್ಲ ಬಹುದೂರ. ಎಲ್ಲರಲ್ಲೂ ಋಣಾತ್ಮಕ ಹಾಗೂ ಧನಾತ್ಮಕ ಅಂಶಗಳು ಕೂಡಿರುತ್ತವೆ. ಯಾವುದು ಜಾಸ್ತಿ ಯಾವುದು ಕಡಿಮೆ ಅನ್ನುವುದರ ಮೇಲೆ ಆತನ ಒವರಾಲ್ ವ್ಯಕ್ತಿತ್ವದ ಒಂದು ಮುಖ ಮಾತ್ರ ಕಾಣುತ್ತದೆ. ಇಲ್ಲಿಯಾದರೋ ಚಂದ್ರಮತಿ ತಾನೇ ಬೆಂಕಿಯೊಳಗೆ ಪ್ರವೇಶಿಸುತ್ತಾಳೆ, ಆದರೆ ಸೀತೆಗೆ ಶ್ರೀರಾಮನೆ ಬೆಂಕಿ ಪ್ರವೇಶ ಮಾಡುವಂತೆ ಆದೇಶಿಸುತ್ತಾನೆ. ಭೀಷ್ಮನು ತನ್ನ ಪ್ರತಿಜ್ಞೆಯ ಬೆಂಕಿಯಲ್ಲಿ ನೂರಾರು ವರ್ಷ ಬೇಯಲಿಲ್ಲವೇ? ಎಲ್ಲ ದೇಶ, ಎಲ್ಲ ಕಾಲಗಳಲ್ಲೂ ಎಲ್ಲ ರೀತಿಯ ಜನ ಇರುತ್ತಾರೆ. ಯಾವ ಸಂದರ್ಭದಲ್ಲಿ ಯಾವ ರೀತಿ ವರ್ತಿಸುತ್ತಾರೆಂಬುದರ ಮೇಲೆ ಅವರ ವ್ಯಕ್ತಿತ್ವ ರೂಪುಗೊಳ್ಳುತ್ತದೆ.

    ಒಂದು ಹೊಸ ಆಯಾಮದ ಪರಿಚಯ ಮಾಡಿಕೊಟ್ಟಿದ್ದೀರಿ. ಧನ್ಯವಾದಗಳು. ನನ್ನ ಬ್ಲಾಗಿಗೂ ಬನ್ನಿ.

    ReplyDelete
  18. @ ಭಾರ್ಗವಿ
    ನಿಮ್ಮ ಅನಿಸಿಕೆ ಎರಡು ಬಾರಿ ಪುನರಾವರ್ತನೆಗೊಂಡಿದ್ದರಿಂದ ಒಂದನ್ನು ಅಳಿಸಿಹಾಕಿದ್ದೇನೆ. ತಪ್ಪಾಗಿ ಭಾವಿಸಬೇಡಿ.

    @ ಸುನಾಥ್ ಸರ್

    ನಿಮ್ಮ ಅನಿಸಿಕೆಯೂ ಎರಡು ಬಾರಿ ಪುನರಾವರ್ತನೆಗೊಂಡಿದ್ದರಿಂದ ಒಂದನ್ನು ಅಳಿಸಿಹಾಕಿರುವೆ. ತಪ್ಪರ್ಥ ಮಾಡಿಕೊಳ್ಳಬೇಡಿ

    ReplyDelete
  19. @ ಎಚ್.ಎಸ್. ಧರ್ಮೇಂದ್ರ ಅವರೆ

    ನನ್ನ ಬ್ಲಾಗಿಗೆ ನಿಮಗೆ ಸ್ವಾಗತ.
    ನನ್ನ ಬರವಣಿಗೆಗಳು ಚೆನ್ನಾಗಿದೆ ಎಂದಿರುವುದಕ್ಕೆ Thanks

    ನಿಮ್ಮ ಕಾಮೆಂಟ್ ( ಅನಿಸಿಕೆ) ನನಗೆ ಬಹಳ ಇಷ್ಟವಾಯಿತು. ನೀವು ಹೇಳಿರುವುದು ನಿಜ. ಪೌರಾಣಿಕ ಅಥವಾ ಐತಿಹಾಸಿಕ ವ್ಯಕ್ತಿಗಳನ್ನು ನಮ್ಮ ಜನಗಳು ಕಪ್ಪು ಬಿಳುಪಿನಲ್ಲೇ ಗುರುತಿಸುತ್ತಾರೆ.ಇದಕ್ಕೆ ಕೆಲವು ಕನ್ನಡದ ಕವಿಗಳು exception ಎನ್ನಬಹುದು. ಪಂಪ ತನ್ನ ಭಾರತದಲ್ಲಿ ಕರ್ಣ, ದುರ್ಯೋಧನರಲ್ಲಿರುವ ಒಳ್ಳೆಯ ಗುಣಗಳನ್ನು ಎಷ್ಟು ಚೆನ್ನಾಗಿ ಹಿಡಿದಿಟ್ಟಿದ್ದಾನೆ. ಹಾಗೆಯೇ ಕುಮಾರವ್ಯಾಸನೂ ಸಹ - ಕೃಷ್ಣನನ್ನು ಎಷ್ಟೇ ಹೊಗಳಿದರೂ ಅವನ ದೌರ್ಬಲ್ಯ( weak point) ಗಳನ್ನೂ ಗುರುತಿಸಿದ್ದಾನೆ.

    ನನ್ನ ಕತೆಯ ಹೊಸ ಆಯಾಮ ಗುರುತಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.

    ReplyDelete
  20. ಚಂದ್ರಕಾಂತ ಅವರೇ, ನೀವು ನನ್ನ ಬ್ಲಾಗಿಗೆ ಬಂದು ನನ್ನ ಪದ್ಯಗಳನ್ನು ಇಷ್ಟಪಟ್ಟಿದ್ದೀರಿ, ನಿಮಗೆ ಧನ್ಯವಾದಗಳು. ಹಾವು + ತೋರೆ = 'ಹಾವ್ತೋರೆ' ಆಗುತ್ತೆ ಅಂದಿರಿ, 'ಹಾವ್ದೋರೆ' ಕೂಡ ಆಗುತ್ತದಲ್ಲವೇ?

    ReplyDelete
  21. ಆಗಬಹುದು ಧರ್ಮೇಂದ್ರ ಅವರೆ :)

    ReplyDelete
  22. ತುಂಬಾ ಲೇಟಾಗಿ ಬಂದೆ ಅನ್ನಿಸುತ್ತೆ!

    ಈ ಲೇಖನವನ್ನು ನಾನು ಮೊದಲೇ ಓದಿದ್ದೆನಲ್ಲವೇ? ತುಂಬಾ ಚೆನ್ನಾಗಿದೆ.

    ಕಾಮೆಂಟುಗಳನ್ನು ನೋಡಿ ಹರ್ಷವಾಯಿತು.

    ReplyDelete