Sunday, January 18, 2009

" ಉತರನ್ " ಕಲರ್ಸ್ ಚಾನಲ್ಲಿನ ಮತ್ತೊಂದು ಬಣ್ಣದ ಗರಿ


ಕಲರ್ಸ್ ಚಾನೆಲ್ ಗೆ ಮತ್ತೊಂದು ಹೊಸ ಬಣ್ಣ ಮೂಡಿಸಿದ ಸುಂದರ ಧಾರಾವಾಹಿ ' ಉತರನ್ '

ಉತರನ್ ಎಂದರೆ ಮತ್ತೊಬ್ಬರ ಎಂಜಲಿನಲ್ಲಿ ಎಂದರೆ ಅವರು ಬಳಸಿ ಬಿಸಾಕಿದ್ದರಲ್ಲಿ ಬದುಕುವುದೆಂದು ಅರ್ಥ.ಈ ಧಾರಾವಾಹಿಯ ಟೈಟಲ್ ಸಾಂಗ್ ಬಹಳ ಅರ್ಥಪೂರ್ಣವಾಗಿದೆ.


ಬಾಲ್ಯ ವಿವಾಹದಂತಹ ಸಾಮಾಜಿಕ ಸಮಸ್ಯೆಯ ಎಲ್ಲ ಮುಖಗಳನ್ನೂ ಮನಮುಟ್ಟುವಂತೆ ಚಿತ್ರಿಸಿರುವ ಬಾಲಿಕಾ ವಧುವಿನ ನಂತರ ಕಲರ್ಸ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ‘ ಉತರನ್ ’ಕಲರ್ಸ್ ವಾಹಿನಿಯ ಬಣ್ಣವನ್ನು ಮತ್ತಷ್ಟು ಗಾಢವಾಗಿಸುತ್ತದೆ.ಮುಂಬಯಿಯ ಕೊಳಗೇರಿಯ ಹುಡುಗಿ ಇಚ್ಚಾ ಈ ಧಾರಾವಾಹಿಯ ಕೆಂದ್ರ ಪಾತ್ರ. ಕೊಳಗೇರಿ ನಿವಾಸಿಯಾದ ಅವಳಿಗೆ ಮುಗಿಲೆತ್ತರದ ಕೈಗೆಟುಕದ ಕನಸುಗಳು. ಅವಳ ಬದುಕಿನಲ್ಲಿ ಪರಿಕಾಯವಾದ ಬಂಗಲೆಯಲ್ಲಿ ವಾಸಿಸುವ ಶ್ರೀಮಂತ ಹುಡುಗಿಯ ಸ್ನೇಹ ಯಾವ ಯಾವ ತಿರುವುಗಳನ್ನು ಪಡೆದುಕೊಳ್ಳುತ್ತದೆಂಬುದೇ ಧಾರಾವಾಹಿಯ ತಿರುಳು.ಸಾಮಾಜಿಕ ಅಸಮತೋಲನದಿಂದ ತುಂಬಿತುಳುಕುತ್ತಿರುವ ಈ ಸಮಾಜದಲ್ಲಿ ಅಂತಹ ನೈಜ ಸ್ನೇಹ ಯಾವ ರೂಪ ಪಡೆದುಕೊಳ್ಳುತ್ತದೆ,ಮಕ್ಕಳ ತಿಳಿಗೊಳದಂತಿರುವ ಮನಸ್ಸುಗಳನ್ನು ಸಮಾಜ ಮತ್ತು ಹಿರಿಯರು ಕಲುಷಿತಗೊಳಿಸುವ ರೀತಿ ... ಮುಂತಾದ ಅನೇಕ ಕಾರಣಗಳಿಂದ ಈ ಧಾರಾವಾಹಿ ಮನಸೆಳೆಯುತ್ತದೆ. . ಈ ಧಾರಾವಾಹಿಯ ಕಿರುಪರಿಚಯ ಮುಂದೆ.

ಇಚ್ಚಾ ಮುಂಬಯಿಯ ಕೊಳೆಗೇರಿ ನಿವಾಸಿ. ಅವಳ ತಾಯಿ ದಾಮಿನಿ ಬಟ್ಟೆ ಹೊಲಿಯುತ್ತಾ ಕೆಲವು ಮನೆಗಳಲ್ಲಿ ಕಸಮುಸುರೆ ಮಾಡಿಕೊಂಡಿರುವ ಸಾಮಾನ್ಯ ಹೆಣ್ಣು. ಏಳೆಂಟು ವರ್ಷದ ಇಚ್ಚಾಳಿಗೆ ಸದಾಕಾಲ ಗೆಳೆಯರ ಗುಂಪು ಕಟ್ಟಿಕೊಂಡು ಬೀದಿ ಸುತ್ತುವುದೇ ಕೆಲಸ.ಅವಳ ಗೆಳೆಯರಾದರು ಯಾರು ? ಅವರೆಲ್ಲಾ ಟ್ರಾಫಿಕ್ ಸಿಗ್ನಲ್ ಗೆಳೆಯರು. ತಕ್ಲು, ಬಜ್ಜು,ಕುಕೀ - ಇವರೆಲ್ಲಾ ಟ್ರಾಫಿಕ್ ಸಿಗ್ನಲ್ ಬಳಿ ಕಾರು ಒರೆಸಿಯೋ , ಶೂ ಪಾಲಿಶ್ ಮಾಡಿಯೋ ,ಹೂ ಮಾರಿಯೋ ಜೀವನ ಸಾಗಿಸುವವರು. ಇಂತಹ ವಾತಾವರಣದಲ್ಲಿರುವ ಇಚ್ಛಾಳಿಗೆ ಸದಾಕಾಲ ಕೈಗೆಟುಕದ ಮುಗಿಲೆತ್ತರದ ಕನಸುಗಳು. ಇವಳ ಕನಸುಗಳು ಅವಳ ಗೆಳೆಯರಿಗೆ ನಗೆ ಉಕ್ಕಿಸುತ್ತವೆ. ಇತರರಂತೆ ತಾವೇಕಿಲ್ಲ ? ಎಂಬುದೇ ಅವಳನ್ನು ಸದಾ ಕಾಡುವ ಪ್ರಶ್ನೆ.ಅವಳ ತಾಯಿ ಇದಕ್ಕೆ ಕೊಡುವ ಉತ್ತರ ಬಹು ಸರಳ. ಅವರಿಗೆ ಅದೃಷ್ಟವಿದೆ. ನಮಗಿಲ್ಲ. ಇಷ್ಟಕ್ಕೇ ಸುಮ್ಮನಿರದ ಇಚ್ಛಾ ಆ‘ ಅದೃಷ್ಟ’ ಸಿಗುವುದೆಲ್ಲಿ ? ಎಂದು ಮುಗ್ಧಳಾಗಿ ಸಿಕ್ಕ ಸಿಕ್ಕವರನ್ನೆಲ್ಲಾ ಪ್ರಶ್ನಿಸುತ್ತಾಳೆ.ಒಬ್ಬಾಕೆಯಂತೂ ' ಆ ದೇವರು ಕೊಟ್ಟರೆ ನಮ್ಮ ಕೈಗೆ ಅದೃಷ್ಟ ಸಿಗುತ್ತದೆ' ಎಂದು ತತ್ವ ಜ್ಞಾನಿಯಂತೆ ಹೇಳುತ್ತಾಳೆ.ಅಷ್ಟಕ್ಕೇ ಸುಮ್ಮನಿರದ ಇಚ್ಚಾ ಶ್ರೀಮಂತ ಹುಡುಗಿಯೊಬ್ಬಳ ಕೈಯಲ್ಲಿರುವ ಟ್ಯಾಟೂ ನೋಡಿ ಅದೇ ಅದೃಷ್ಟವೆಂದು ಭಾವಿಸಿ `ಅದು ಎಲ್ಲಿ ಸಿಗುತ್ತದೆ ' ಎಂದು ತನ್ನ ಟ್ರ್ಯಾಫಿಕ್ ಸಿಗ್ನಲ್ ಗೆಳೆಯರನ್ನು ಕೇಳುತ್ತಾಳೆ.ಶ್ರೀಮಂತರಂತೆ ಇರಬೇಕೆಂಬ ತಮ್ಮಂತವರ ಕೈಗೆಟುಕದ ಇವಳ ಆಸೆಯನ್ನು ನೋಡಿ ಆ ಸ್ನೇಹಿತರು ಅವಳಿಗೆ ಕೀಟಲೆ ಮಾಡಬೇಕೆಂದು ಹಚ್ಚೆ ಹೊಯ್ಯುವವನ ಹೆಸರನ್ನು ಹೇಳಿ ಅವನೇ ಅದೃಷ್ಟ ಕೊಡುವವನೆನ್ನುತ್ತಾರೆ. ಅವರ ಮಾತನ್ನು ನಿಜವೆಂದೇ ಭಾವಿಸಿದ ಮುಗ್ಧ ಇಚ್ಛಾ ಅವನ ಇರುವಿಕೆಯನ್ನು ಪತ್ತೆ ಮಾಡಿ ಹಚ್ಚೆ ಹಾಕುವಂತೆ ಕೇಳುತ್ತಾಳೆ. ಅವಳ ವಯಸ್ಸು, ಎಳೆಯ ಕೈಗಳನ್ನು ನೋಡಿ ಅವನು ಹಿಂಜರಿದು ಅವರ ತಾಯಿಯನ್ನು ಕರೆತರುವಂತೆ ಹೇಳಿದರೆ ಒಪ್ಪದ ಹುಡುಗಿ ಹಠ ಮಾಡಿ ಹಚ್ಚೆ ಹಾಕಿಸಿಕೊಳ್ಳುತ್ತಾಳೆ. ಆದರೆ ಹಾಕಿಸಿಕೊಳ್ಳುವಾಗಲೇ ಪ್ರಜ್ಞೆ ತಪ್ಪಿ ಬೀಳುತ್ತಾಳೆ.ಮಗಳ ಈ ಸ್ಥಿತಿಯನ್ನು ಕಂಡು ರೋಧಿಸುವ ತಾಯಿ ಮುಖಕ್ಕೆ ನೀರು ಚಿಮುಕಿಸಿ ಎಚ್ಚರಿಸಿದಾಗ ಅವಳು ಹೇಳುವ ಮೊದಲ ಮಾತೇ ' ಅಮ್ಮಾ ನೋಡು ಅದೃಷ್ಟ ನನ್ನ ಕೈಗೆ ಸಿಕ್ಕಿದೆ' . ಮಗಳ ಈ ಆಸೆಯನ್ನು ನೋಡಿ ದಾಮಿನಿ ಹೇಗಾದರೂ ಮಾಡಿ ಇಚ್ಛಾಳಿಗೆ ಉತ್ತಮ ಬದುಕು ಕೊಡಲೇ ಬೇಕೆಂದು ತೀರ್ಮಾನಿಸುತ್ತಾಳೆ.

ಇಲ್ಲಿಂದ ಇಚ್ಚಾಳ ಬದುಕು ಮತ್ತೊಂದು ತಿರುವು ಪಡೆಯುತ್ತದೆ.ಇಚ್ಚಾಳ ತಾಯಿ ದಾಮಿನಿಗೆ ಬಂಗಲೆಯಲ್ಲಿ ವಾಸಿಸುವ ಶ್ರೀಮಂತರ ಮನೆಯಲ್ಲಿ ಅವರ ಏಕಮಾತ್ರ ಪುತ್ರಿಯನ್ನು ನೋಡಿಕೊಳ್ಳುವ ಕೆಲಸ ಸಿಗುತ್ತದೆ.ಆದರೆ.ದಾಮಿನಿಯೊಬ್ಬಳೇ ಬಂಗಲೆಯಲ್ಲಿದ್ದುಕೊಂಡು ಹುಡುಗಿಯನ್ನು ನೋಡಿಕೊಳ್ಳಬೇಕು.... ಇವಳ ಕಡೆಯವರಾರೂ ಅವಳನ್ನು ನೋಡಲು ಬರಬಾರದು... ಇಂತಹ ಶರತ್ತುಗಳು ದಾಮಿನಿ ದ್ವಂದ್ವಕ್ಕೆ ಸಿಲುಕುತ್ತಾಳೆ. ಒಂದು ಕಡೆ ಮಗಳಿಗೆ ಬೇಕಾಗುವಷ್ಟು ಹಣ ಸಂಪಾದಿಸಬಹುದಾದ ಅವಕಾಶ, ಮತ್ತೊಂದೆಡೆ ತನಗೆ ಒಬ್ಬ ಮಗಳಿದ್ದಾಳೆಂದು ಹೇಳಿದರೆ ಕೆಲಸಕ್ಕೆ ಎಲ್ಲಿ ಸಂಚಕಾರ ಬರಬಹುದೋ ಎಂಬ ಭಯ. ಆದರು ಈ ಕೆಲಸಕ್ಕೆ ಸೇರಿಯೇ ಬಿಡುತ್ತಾಳೆ. ಇಚ್ಚಾ ತಾಯಿಯನ್ನು ಬಿಟ್ಟಿರಲಾರದೆ ತಾಯಿಯ ಬಳಿ ಓಡಿ ಬರುತ್ತಾಳೆ. ಹವೇಲಿಯ ಒಡತಿ ಕೋಪಗೊಂಡು ಅವರಿಬ್ಬರನ್ನೂ ಓದಿಸಬೇಕೆನ್ದು ನಿರ್ಧರಿಸುತ್ತಾಳೆ. ಆದರೆ.. ಒಡತಿಯ ಮಗಳು ತಪಸ್ಯಾ ಈಗಾಗಲೇ ಇಚ್ಚಾಳ ಸ್ನೇಹದ ಸವಿಯನ್ನು ಕಂಡು ಅವಳನ್ನು ಬಿಟ್ಟಿರಲಾರದ ಸ್ಥಿತಿಗೆ ತಲುಪಿರುತ್ತಾಳೆ.ಅವಳ ಹಠ, ಅನಾರೋಗ್ಯ ಮತ್ತೆ ಇಚ್ಚಾ ಅಲ್ಲಿಯೇ ಇರುವಂತೆ ಮಾಡುತ್ತದೆ. ತಪಸ್ಯಾ ಮತ್ತು ಇಚ್ಚಾ ಇವರ ನಡುವಿನ ತರತಮ ಭಾವವಿಲ್ಲದ ಸ್ನೇಹ ನೋಡುಗರಲ್ಲಿ ಆಸಕ್ತಿ ಉಂಟುಮಾಡಿದರೆ ತಪಸ್ಯಾಳ ತಾಯಿಯ ಅಸಹನೆ ಮುಗಿಲು ಮುಟ್ಟುತ್ತದೆ. ಅದೇ ಸಮಯಕ್ಕೆ ಅವರ ಆಗಮಿಸುವ ಅಜ್ಜಿ ತಪಸ್ಯಾ ಮತ್ತು ಇಚ್ಚಾ ನಡುವೆ ಕಂದರ ಹುಟ್ಟುಹಾಕಲು ಕುತಂತ್ರ ನಡೆಸುತ್ತಾಳೆ. ಇಚ್ಚಾ ಕೆಲಸದವಳ ಮಗಳಾದ್ದರಿಂದ ಅವಳ ಸ್ಥಾನ ತಪಸ್ಯಾಳ ಮಟ್ಟಕ್ಕಿರಲು ಸಾಧ್ಯವಿಲ್ಲವೆಂಬ ಬೇಧಭಾವವನ್ನು ಉಂಟು ಮಾಡುತ್ತಾಳೆ. ಮೇಲು ಕೀಳಿನ ಅರಿವೇ ಇಲ್ಲದ ಇಚ್ಚಾಳಿಗೆ ಉಸಿರುಕಟ್ಟಿಸುವ ವಾತಾವರಣ ನಿರ್ಮಾಣವಾಗುತ್ತದೆ . ಸದಾಕಾಲ ಉತ್ಸಾಹದ ಬುಗ್ಗೆಯಂತಿದ್ದ ಮಗಳ ಸಪ್ಪೆ ಮುಖ ನೋಡಿದ ದಾಮಿನಿ ರಜೆ ಪಡೆದು ಮತ್ತೆ ತನ್ನ ಕೊಳಗೇರಿನಿವಾಸಕ್ಕೆ ಮಗಳನ್ನು ಕರೆದೊಯ್ಯುತ್ತಾಳೆ.

ತನ್ನ ಹಳೆಯ ಗೆಳೆಯರಾದ ಟಕ್ಲು, ಬಜ್ಜು ಮತ್ತು ಕುಕಿಯರೊಂದಿಗೆ ಇಚ್ಚಾ ಮತ್ತೆ ಮೊದಲಿನ ಸಂಭ್ರಮದ ಸ್ಥಿತಿಗೆ ತಲುಪುತ್ತಾಳೆ ಅವರ ನಿಷ್ಕಲ್ಮಷ ಸ್ನೇಹ ,ಇಚ್ಚಾಳ ಮೊದಲಿನ ಉತ್ಸಾಹ ಎಲ್ಲವನ್ನೂ ನೋಡಿದ ದಾಮಿನಿ ಹಣದ ಆಸೆಗಾಗಿ ಮತ್ತೆ ಆ ಬಂಗಲೆಗೆ ಹೋಗುವುದು ಬೇಡವೆಂದು ತೀರ್ಮಾನಿಸುತ್ತಾಳೆ.ಶ್ರೀಮಂತರ ಮನೆಯ ಉಸಿರುಕಟ್ಟಿಸುವ ವಾತಾವರಣಕ್ಕಿಂತ ಕೊಳಗೇರಿಯ ಆತ್ಮೀಯ ವಾತಾವರಣವೇ ಸರಿಯೆಂದುಕೊಳ್ಳುವಷ್ಟರಲ್ಲಿ ಇಚ್ಚಾಳ ಕೊಳಗೇರಿಯ ಗೆಳತಿ ರಸ್ತೆ ಅಪಘಾತಕ್ಕೆ ತುತ್ತಾಗಿ ಕಾಲು ಕಳೆದುಕೊಳ್ಳುತ್ತಾಳೆ.. ಅವಳಿಗೆ ಹಣ ಹೊಂದಿಸುವರಾರು ? ತಾಯಿ ತಂದೆಯರಿಲ್ಲದ ಅವಳಿಗೆ ಕುಡಿತದ ಚಟಕ್ಕೆ ಗುರಿಯಾಗಿರುವ ಚಿಕ್ಕಪ್ಪನೊಬ್ಬನೇ ಆಶ್ರಯ.ಮಾನವೀಯತೆಯ ದೃಷ್ಟಿಯಿಂದ ದಾಮಿನಿ, ಮನೆಯೊಡತಿ ತಮ್ಮ ತಮ್ಮಲ್ಲಿರುವ ಹಣ ಸುರಿದರೂ ಅದು ಸಾಲುವುದಿಲ್ಲ. ದಾಮಿನಿ ತನ್ನ ಬಂಗಲೆಯ ಯಜಮಾನರ ಬಳಿ ಹೇಗೋ ಹಣ ಹೊಂದಿಸಿ ತರುತ್ತಾಳೆ. ಈಗ ಹಣ ತೀರಿಸುವುದಕ್ಕಾದರೂ ಮತ್ತೆ ಬಂಗಲೆಗೆ ಹೋಗಲೇ ಬೇಕಾದ ಅನಿವಾರ್ಯತೆ ಅವಳಿಗೆದುರಾಗುತ್ತದೆ.ಇದಕ್ಕೆ ಬಿಲ್ ಕುಲ್ ಒಪ್ಪದ ಇಚ್ಚಾಳಿಗೆ ತಿಳಿ ಹೇಳುವಷ್ಟರಲ್ಲಿ ದಾಮಿನಿ ತನ್ನ ಬುದ್ದಿಯೆಲ್ಲವನ್ನೂ ಖರ್ಚು ಮಾಡಬೇಕಾಗುತ್ತದೆ.

ಈಗ ಮತ್ತೊಮ್ಮೆ ಇಚ್ಚಾಳ ಬದುಕು ಬಂಗಲೆಗೆ ಬಂದಿದೆ. ಆದರೆ ದಾಮಿನಿ ಮತ್ತು ಇಚ್ಚಾರ ಇರುವಿಕೆಯನ್ನು ಸಹಿಸದು ಮನೆಯೊಡತಿ ಹಾಗೂ ಅಜ್ಜಿ ಉಪಾಯಹುಡುಕುತ್ತಿದ್ದಾರೆ. ಅದರ ಪರಿಣಾಮ ಮತ್ತೊಬ್ಬ ಹುಡುಗಿ ಹವೇಲಿಯನ್ನು ಪ್ರವೇಶಿಸುತ್ತಾಳೆ.

ಮುಂದೆ ಇಚ್ಚಾಳ ಬದುಕು ? ಕಾದು ನೋಡಬೇಕಿದೆ. ಇಚ್ಚಾಳ ಪತ್ರ ನಿರ್ವಹಿಸಿರುವ ಸ್ಪರ್ಶ ಅತ್ಯಂತ ಲವಲವಿಕೆಯ ಅಭಿನಯ ನೀಡಿದ್ದಾಳೆ. ಅವಳ ವೇಷ ಭೂಷಣ, ಆಂಗಿಕ ಅಭಿನಯ ಎಲ್ಲವೂ ಪಕ್ಕಾ ಕೊಳಗೇರಿ ಹುಡುಗಿಯ ಹಾಗೇ ಇದೆ. ಆದರೆ ಅವಳ ಕಣ್ಣುಗಳ ಹೊಳಪಿಗೆ ಯಾರಾದರೂ ಅಚ್ಚರಿ ಪಡಬೇಕು. ಮುಂಬಯಿಯ ಕೊಳಗೇರಿಯಲ್ಲಿಯೆ ಚಿತ್ರಣವಾಗಿರುವುದು ಇದರ ಮತ್ತೊಂದು ವಿಶೇಷ.

30 comments:

  1. ಇದಕ್ಕೆ ಬೇಗ ಬಂದೆ,

    ನಾನು ಧಾರಾವಾಹಿ ನೋಡುವುದಿಲ್ಲ, ಆದರೂ... ಒಂದು ಒಳ್ಳೆಯ ಕಥೆ ಓದಿದ ಹಾಗಾಯಿತು :)

    ReplyDelete
  2. ಚಂದ್ರ ಕಾಂತ ಮೇಡಮ್,

    ನಾನು ಟಿ.ವಿ. ನೋಡುವುದನ್ನು ಬಿಟ್ಟಿದ್ದೇನೆ. ಆದ್ದರಿಂದ ನನಗೆ ಯಾವ ಚಾನಲ್ಲಿನಲ್ಲಿ ಯಾವ ಸಿನಿಮಾ, ಧಾರವಾಹಿಯೆಂದು ತಿಳಿಯುವುದಿಲ್ಲ....ಅದರೆ ನೀವು ಹೇಳಿದ ಧಾರವಾಹಿಯ ಕತೆ ಬಲು ಕುತೂಹಲಕಾರಿಯಾಗಿದೆ. ನೋಡಬೇಕೆನ್ನಿಸುತ್ತದೆ......ನೀವು ತುಂಬಾ ಹೇಳಿಕೊಂಡು ಹೋಗಿದ್ದೀರಿ....ಹೀಗೆ ನಿಮ್ಮಿಂದ ಹೊಸ ವಿಚಾರಗಳು ಬರುತ್ತಿರಲಿ......

    ReplyDelete
  3. @ ಮುತ್ತುಮಣಿ

    ಇದಕ್ಕೆ ಎಲ್ಲರಿಗಿಂತ ಬೇಗ ಬಂದಿರುವೆ. ನನಗೆ ನಿನ್ನ ಅಭಿಪ್ರಾಯ ಅಮೂಲ್ಯ. ಏಕೆ ಗೊತ್ತೇ? ಧಾರಾವಾಹಿ ನೋಡಿಲ್ಲದವರಿಗೆ ಅದರ ಪರಿಚಯ ಮಾಡಿಕೊಟ್ಟಿರುವುದು ಹೇಗಿರುತ್ತದೋ ಅನಿಸಿತ್ತು. ಒಳ್ಳೆಯ ಕಥೆ ಓದಿದ ಹಾಗಾಯಿತು. ಎಂದಿರುವೆ. Thanks :)

    ReplyDelete
  4. ಚಂದ್ರಕಾಂತ ಅವರೆ,

    ಸವಿವರವಾದ ಉತ್ತಮ ಲೇಖನ. ತುಂಬಾ ಚೆನ್ನಾಗಿದೆ.

    ನಾನೂ ಈ ಧಾರಾವಾಹಿಯನ್ನು ಸಮಯವಾದಾಗಲೆಲ್ಲಾ ನೊಡುವೆ. ಆದರೆ ನೋಡಿದಾಗಲೆಲ್ಲಾ ನನ್ನ ಪುಟ್ಟಿಯನ್ನು ಇಚ್ಚಾಳಲ್ಲಿ ಕಂಡಂತಾಗಿ ತುಂಬಾ ನೋವಾಗುತ್ತದೆ. ಆಕೆ ಹೊಳಪು ಕಂಗಳೊಳಗೆ ತುಂಬಿರುವ ನಿರಾಸೆ, ಆಶಯ, ನಿರೀಕ್ಷೆಗಳನ್ನು ನೋಡಿ ದುಃಖವಾಗುತ್ತದೆ..:( ಅದೆಷ್ಟು "ಇಚ್ಚಾ" ಅಂತಹ ಪುಟಾಣಿಗಳು ದೇಶದಲ್ಲಿ ಹೊಸ ಬೆಳಕಿನ ನಿರೀಕ್ಷೆಯಲ್ಲಿದ್ದಾರೋ ಕಾಣೆ?!

    ಇದೇ ಧಾರಾವಾಹಿಯ ಮತ್ತೊಂದು ದೃಶ್ಯ ನನ್ನ ಮನದಲ್ಲಿ ಅಚ್ಚಳಿಯದಂತೇ ಉಳಿದಿದೆ.

    ಒಮ್ಮೆ ಇಚ್ಚಾ ಶ್ರೀಮಂತರ ಮನೆಯ ಹುಡುಗಿಯೋರ್ವಳು ತನ್ನ ಹುಟ್ಟೂದ ದಿನದಾಚರಣೆಯನ್ನು ತುಂಬಾ ಆಡಂಬರವಾಗಿ ಆಚರಿಸಿದ್ದನ್ನು ಕಂಡು ಆಕೆಯೂ ತನ್ನ ಹುಟ್ಟುದ ಹಬ್ಬವನ್ನು ಆಚರಿಸಬೇಕೆಂದು ಅಮ್ಮನನ್ನು ಕಾಡುತ್ತಾಳೆ. ತನ್ನ ಹುಟ್ಟಿದ ದಿನ ಎಂದು ಬರುವುದೆಂದು ಕೇಳುತ್ತಾಳೆ. ಕೊಳೆಗೇರಿಯಲ್ಲಿರುವ ಆ ಬಡ ತಾಯಿ ಎಲ್ಲಿಂದ ತಾನೇ ಅಷ್ಟೊಂದು ದುಡ್ಡು ತರಬಲ್ಲಳು..?!! ಅದಕ್ಕಾಗಿ ಆಕೆ ಸುಂದರವಾದ ಸುಳ್ಳನ್ನು ಹಣೆಯುತ್ತಾಳೆ. "ಊರಿನ ತುಂಬೆಲ್ಲಾ ಬೆಳಕು ತುಂಬಿದ ದಿನ, ಆಗಸ ತುಂಬೆಲ್ಲಾ ಬೆಳಕಾದ ದಿನವೇ ನಿನ್ನ ಹುಟ್ಟಿದ ಹಬ್ಬ ಬರುವುದು" ಎನ್ನುತ್ತಾಳೆ. ಅದನ್ನೇ ನಂಬಿದ ಇಚ್ಚಾ, ದೀಪಾವಳಿಯಂದು ರಾತ್ರಿ ಊರಿನ ತುಂಬೆಲ್ಲಾ ಬೆಳಕು ತುಂಬಿದುದನ್ನು ಹಾಗೇಯೇ ಆದಸದ ತುಂಬೆಲ್ಲ ಪಟಾಕಿಯ ಬೆಳಕು ತುಂಬಿದುದನ್ನು ನೋಡಿ "ಅಮ್ಮ ಇವತ್ತು ನನ್ನ ಹುಟ್ಟುದ ದಿನ. ಕೇಕ್, ಚೋಕಲೇಟ್ ಎಲ್ಲಾ ತಾ ಹಬ್ಬ ಆಚರಿಸೋಣ.." ಎನ್ನುವ ಆಕೆಯ ಮಾತುಗಳು ನನ್ನ ಕಣ್ಗಳನ್ನೇ ತೋಯಿಸಿದ್ದವು. ಮುಗ್ಧತೆಯೊಳಗಿನ ಆಕಾಂಕ್ಷೆ ಹಾಗೇ ಆ ಅಸಹಾಯಕ ತಾಯಿಯ ಮೊಗದಲ್ಲಿರುವ ನೋವು ತುಂಬಾ ಆಳವಾದ ಪರಿಣಾಮವನ್ನು ಬೀರುತ್ತವೆ.

    ಮೂರುತಿ ಚಿಕ್ಕದಾದರೂ ಕೀರುತಿ ದೊಡ್ಡದು ಎನ್ನುತ್ತಾರೆ. ಅಂತೆಯೇ "ಬಾಲಿಕಾ ವಧುವಿನ" ಆನಂದಿ ಹಾಗೂ "ಉತರನ್‌ನ" ಇಚ್ಚಾರ ಅಭಿನಯಗಳು ನಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ.

    ReplyDelete
  5. hello madam,
    ಈ ಧಾರವಾಹಿಯ ಒಂದೆರಡು ಭಾಗ ನೋಡಿದ್ದೆ. ಚಿಕ್ಕ ಹುಡುಗಿಯ ಅಭಿನಯ ಚೆನ್ನಾಗಿದೆ, ನೀವು ಬರೆದಿರುವುದೂ ಚೆನ್ನಾಗಿದೆ :)

    ಆದ್ರೆ ಯಾವಾಗ್ಲು ನೋಡಕ್ ಆಗಲ್ಲ..

    ReplyDelete
  6. ಚಂದ್ರಕಾಂತಾ,
    ನಾನೂ ಸಹ ಧಾರಾವಾಹಿ ನೋಡುವದಿಲ್ಲ; ಏಕೆಂದರೆ ನಮ್ಮ ಮನೆಯಲ್ಲಿ ಟೀವಿ ಇಲ್ಲ.
    ಆದರೆ ನೀವು ಬರೆದದ್ದನ್ನು ಓದಿ ಧಾರಾವಾಹಿಯ ಬಗೆಗೆ ಉತ್ತಮ ಅಭಿಪ್ರಾಯ ಮೂಡಿತು.

    ReplyDelete
  7. ಚಂದ್ರಕಾಂತರವರೆ...

    ಈ ಧಾರವಾಹಿಯ ಹುಡುಗಿಯ ಅಭಿನಯ ನನಗೆ ತುಂಬಾ ಇಷ್ಟ...

    ನೋಡಲಿಕ್ಕೆ ಚಂದವಿಲ್ಲದಿದ್ದರೂ...
    ತನ್ನ ಮಾತಿನ ಶೈಲಿಯಿಂದ, ಅಭಿನಯದಿಂದ...
    ನೋಡುಗರ ಮನಸೂರೆಗೊಳ್ಳುತಾಳೆ...

    ಏಕತಾ ಕಪೂರ ಧಾರವಾಹಿಗಳ ಹಾವಳಿ ಈಗ ಕಡಿಮೆಯಾಗುತ್ತಿದೆ....

    ನಿಮ್ಮ ಲೇಖನ ತುಂಬಾ ಚೆನ್ನಾಗಿದೆ...

    ಒಮ್ಮೆ "ಜೈ ಶ್ರೀ ಕ್ರಷ್ಣ.." ಬಗೆಗೂ ಬರೆಯಿರಿ...

    ಧನ್ಯವಾದಗಳು...

    ReplyDelete
  8. I have to get Chandy to translate this one too...

    ReplyDelete
  9. @ ಶಿವು ಮತ್ತು ಸುನಾಥ ಸರ್

    ನೀವಿಬ್ಬರೂ ಟಿವಿ ನೋಡುವುದೇ ಇಲ್ಲ ಎಂದಿರುವಿರಿ. ನಿಜಕ್ಕೂ ಇದು ಎಲ್ಲರೂ ಮೆಚ್ಚಬೇಕಾದ ವಿಚಾರ. ಇದು ನಿಮ್ಮ ಮನಸ್ಸಿನ ಧೃಡತೆಯನ್ನು ತೋರಿಸುತ್ತದೆ. ಆದರೂ ನೀವಿಬ್ಬರೂ ನನ್ನ ಬರಹವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.ಶಿವು ಅವರೆ ಕಥೆ ತುಂಬಾ ಕುತೂಹಲಕಾರಿಯಾಗಿದೆ. ನಾನು ತುಂಬಾ ಬರೆದಿಲ್ಲಾ :) ಸಂಕ್ಷಿಪ್ತವಾಗಿ ಬರೆದಿದ್ದೇನೆ.

    ReplyDelete
  10. @ ತೇಜಸ್ವಿನಿ

    ನಿಮ್ಮ ವಿವರವಾದ ಪ್ರತಿಕ್ರಿಯೆಗೆ ಧನ್ಯವಾದಗಳು. ಹುಟ್ಟುಹಬ್ಬದ ಪ್ರಸಂಗದಷ್ಟೇ ಸುಂದರವಾದ ಹತ್ತಾರು ದೃಶ್ಯಗಳು ಈ ಧಾರಾವಾಹಿಯಲ್ಲಿವೆ. ಇಚ್ಚಾಳ ವ್ಯಕ್ತಿತ್ವ ನಿರ್ಮಾಣದಲ್ಲಿ ತಾಯಿ ದಾಮಿನಿಯ ಪಾತ್ರದ ಪ್ರಾಮುಖ್ಯತೆ ಧಾರಾವಾಹಿಯುದ್ದಕ್ಕೂ ಗೋಚರವಾಗುತ್ತದೆ. ನೆನ್ನೆ ಪ್ರಸಾರವಾದ ಭಾಗದಲ್ಲಿ ಇಚ್ಚಾ ‘ ನನ್ನನ್ನು ಕಂಡರೆ ಅಜ್ಜಿ ಮತ್ತು ಠಾಕುರಾಣಿ ಏಕೆ ಇಷ್ಟಪಡುವುದಿಲ್ಲ, ಅಜ್ಜಿ ಏಕೆ ಸುಳ್ಳು ಹೇಳೀದಳು ? ’ ಎಂದು ಕೇಳಿದಾಗ ದಾಮಿನಿ ಕೊಡುವ ಉತ್ತರ ಎಷ್ಟು ಅರ್ಥಪೂರ್ಣವಾಗಿದೆ.

    ಆನಂದಿ ಮತ್ತು ಇಚ್ಚಾ ಇಬ್ಬರಲ್ಲಿರುವ ಸಮಾನ ಗುಣಗಳೆಂದರೆ ಇಬ್ಬರೂ ನಿಷ್ಕಲ್ಮಷ ಮನಸ್ಸಿನ ಮುಗ್ಧರು. ಅನಿಸಿದ್ದನ್ನು ನೇರವಾಗಿ ಕೇಳುವವರು.

    ಒಂದು ಕಾಲದಲ್ಲಿ ಬಡವರು ತಮಗೆ ಎಟುಕಲಾರದ್ದನ್ನು ಬಯಸಬಾರದೆನ್ನುತ್ತಿದ್ದರು ಅದಕ್ಕೇ ತಾನೆ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎನ್ನುವುದು. ಈಗ ಕಾಲ ಬದಲಾಗಿದೆ,ಯಾರು ಯಾವ ಕನಸು ಬೇಕಾದರೂ ಕಾಣಬಹುದು ಅದನ್ನು ಈ ಧಾರಾವಾಹಿ ತೋರಿಸುತ್ತಿರುವುದು ನನಗೆ ಮೆಚ್ಚುಗೆಯಾದ ಅಂಶ.

    ಮತ್ತೊಮ್ಮೆ ಧನ್ಯವಾದಗಳು

    ReplyDelete
  11. ಗೀತಾ

    ನೀನು ಈ ಧಾರಾವಾಹಿ ನೋಡುತ್ತೀಯಾ ಎಂದು ಕೇಳಿ ಅಚ್ಚರಿಯಾಯಿತು. ನೀನು ನೋಡುವುದು ಕಡಿಮೆಯಲ್ಲವೇ ?
    ಇಚ್ಚಾಳ ಅಭಿನಯ ನಿಜಕ್ಕೂ ಅದ್ಭುತ. ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  12. @ ಇಟ್ಟಿಗೆಸಿಮೆಂಟು

    ಪ್ರಕಾಶ್ ಅವರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಈ ಧಾರಾವಾಹಿಯ ಇಚ್ಚಾ ನೋಡಲು ಸುಮಾರಾಗಿ ಕಾಣುವಂತೆ ಅವಳ ವೇಷಭೂಷಣಗಳಿವೆ ಅನಿಸುತ್ತದೆ. ಅವಳ ತೆಳ್ಳನೆಯ ಮೈಕಟ್ಟು ಅಪ್ಪಟ ಬಡ ಹುಡುಗಿಯಂತೆ ಅವಳನ್ನು ತೋರಿಸುತ್ತದೆ.

    ಅವಳ ಅಭಿನಯ ಮಾತಿನ ಶೈಲಿ ಅವಳು ಅಮ್ಮೊ ಎಂದು ತಾಯಿಯನ್ನು ಕರೆಯುವ ರೀತಿ ಬಹಳ ಆಕರ್ಷಕವಾಗಿದೆ.ಅವಳ ಕಣ್ಣುಗಳ ಕಾಂತಿ ಅಚ್ಚರಿ ಹುಟ್ಟಿಸುತ್ತದೆ. ಸಂತಸ, ಕೋಪ, ಅಸಮಾಧಾನ, ಅವಮಾನ ಇವೆಲ್ಲವೂ ಅವಳ ಮುಖದಲ್ಲಿ ಅದೆಷ್ಟು ದಟ್ಟವಾಗಿ ಮೂಡುತ್ತವೆ.

    ನಾನು ಹಿಂದಿ ಧಾರಾವಾಹಿಗಳನ್ನು ನೋಡುವವಳೇ ಅಲ್ಲ. ಬಹಳ ಹಿಂದೆ ದೂರದರ್ಶನದಲ್ಲಿ ಬರುತ್ತಿದ್ದ ಏಕ್ ಕಹಾನಿ, ನುಕ್ಕಡ್, ದರ್ಪಣ್ ಮುಂತಾದವನ್ನು ಬಿಟ್ಟರೆ Star Z Sonyಗಳನ್ನು ನೋಡಿದವಳೇ ಅಲ್ಲ. ಆಕಸ್ಮಿಕವಾಗಿ ಕಲರ್ಸ್ ಕಣ್ಣಿಗೆ ಬಿದ್ದು ಅದನ್ನು ಮಾತ್ರ ನೋಡುತ್ತಿದ್ದೇನೆ. ಇದರಲ್ಲಿಯೂ ಕೆಲವು ಏಕತಾ...ಳಂತಹ ಕಳಪೆ ಧಾರಾವಾಹಿಗಳೂ ಇವೆ.

    ಜೈಶ್ರೀಕೃಷ್ಣ ಧಾರಾವಾಹಿಯ ಬಗ್ಗೆ ಬರೆಯಲು ಕೇಳಿದ್ದಕ್ಕೆ ಧನ್ಯವಾದಗಳು. ಪ್ರಯತ್ನಿಸುತ್ತೇನೆ.
    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  13. Dear Oanh

    I know you can't understand. This is the story of a small slum girl. She has big dreams and aspirations. To fulfil her dreams and to provide a better livelihood her mother takes up a job of housemaid at a rich house. Her work is to look after the daughter of that rich house.That innocent girl doesn't know the difference between rich and poor ,but how the circumstances make her feel she is there to use the leftovers of the rich girl. ...In this way the story goes.

    It is in Hindi language.You can ask the rest of the story with Chandan:). The serial is still going on.

    I always remember those Korean movies - The last dance is with me and Really I love you. - which I didnot seen completely.

    ReplyDelete
  14. ನೀವು ಕಾಲೇಜಿನಲ್ಲಿ ಬಿಡುವಿನ ವೇಳೆಯಲ್ಲಿ ನಮ್ಮೊಂದಿಗೆ ಕನ್ನಡ ಧಾರಾವಾಹಿಗಳ ಬಗ್ಗೆ ಚರ್ಚಿಸುತ್ತಿದ್ದೀರಿ. ಈಗ ಹಿಂದಿ ಧಾರಾವಾಹಿಗಳ ಬಗ್ಗೆ ಬ್ಲಾಗಲ್ಲಿ ಬರಿದಿದ್ದೀರಿ. ಧಾರಾವಾಹಿ ನೋಡಿದಷ್ಟೇ ಖುಶಿಯಾಯಿತು.

    ReplyDelete
  15. ಚಂದ್ರಕಾಂತ ಮೇಡಮ್,

    ನಾನು ನಿಮ್ಮ ಲೇಖನಕ್ಕೆ ಪ್ರತಿಕ್ರಿಯಿಸುವಾಗ ತುಂಬಾ ಚೆನ್ನಾಗಿ ಬರೆದಿದ್ದೀರಿ ಅಂತ ಹೇಳುವ ಪ್ರಯತ್ನದಲ್ಲಿ ಚೆನ್ನಾಗಿ ಪದವನ್ನು ಗಡಿಬಿಡಿಯಲ್ಲಿ ಟೈಪಿಸುವಾಗ ತಪ್ಪಿಹೋಗಿತ್ತು...ಅದು ನಿಮಗೆ ಉದ್ದವಾಗಿ ಬರೆದಿದ್ದೀರಿ ಅಂತ ನಿಮಗೆ ಅನಿಸಿದೆ...ಗೊತ್ತಾಗದೆ ಆಗುವ ತಪ್ಪುಗಳಿಗೆ ಕ್ಷಮೆಯಿರಲಿ.....

    ReplyDelete
  16. ಚಂದ್ರಕಾಂತರವರೆ,
    ಹ್ಮ್,ಈಗಾಗಲೇ ಬಾಲಿಕಾ ವಧು ನೋಡುವಲ್ಲಿ ಮುಳುಗಿಬಿಟ್ಟಿದ್ದೇನೆ. ಇದನ್ನು ಸ್ಟಾರ್ಟ್ ಮಾಡಲು ಯೋಚಿಸುತ್ತಿದ್ದೇನೆ:). ತುಂಬಾ ತುಂಬಾ ಚೆನ್ನಾಗಿ ಬರೆದಿದ್ದೀರಿ. ನಿಜವಾಗಿ ಒಳ್ಳೆ ಕಥೆ ಓದಿದಂತಾಯಿತು.ಒಳ್ಳೆಯ ಸಂದರ್ಭವನ್ನು ವಿವರಿಸಿದ ತೇಜಸ್ವಿನಿಯವರಿಗೂ ಹಾಗೂ ನಿಮಗೂ ವಂದನೆಗಳು.

    ReplyDelete
  17. ಚಂದ್ರಕಾಂತ ಮೇಡಮ್,

    ಮನಃಪೂರ್ವಕವಾಗಿ ನಗಬೇಕಾ.. ......!! ನಡೆದಾಡುವ ಭೂಪಟಗಳನ್ನು....ನೋಡಲು ಬನ್ನಿ....

    http://chaayakannadi.blogspot.com/

    ಪ್ರೀತಿಯಿರಲಿ...

    ಶಿವು.....

    ReplyDelete
  18. @ ಬಿಸಿಲಹನಿ

    ಉದಯ್ ಅವರೆ ಇತ್ತೀಚೆಗೆ ಒಳ್ಳೆಯ ಕನ್ನಡ ಧಾರಾವಾಹಿ ಬರುತ್ತಿಲ್ಲ ಎನ್ನುವುದಕ್ಕಿಂತ ಕಲರ್ಸ್ ಚಾನೆಲ್ ನನ್ನನ್ನು ತುಂಬಾ ಆಕರ್ಷಿಸಿದೆ ಎಂದರೆ ತಪ್ಪಾಗದು. ಅದರಲ್ಲಿ ಕೆಲವು ಧಾರಾವಾಹಿಗಳು ಸುಮಾರಾಗಿದ್ದರೂ ಅನೇಕ ಧಾರಾವಾಹಿಗಳು ವಿವಿಧ ಕಾರಣಗಳಿಂದ ಮನಸೆಳೆಯುತ್ತವೆ.ಅವುಗಳಲ್ಲಿ ಬಾಲಿಕಾವಧು ಮತ್ತು ಉತರನ್ ಹಾಗೂ ಜೈಶ್ರೀಕೃಷ್ಣ ಬಹಳ ಚೆನ್ನಾಗಿವೆ.

    ನಿಮಗೆ ಧಾರಾವಾಹಿಗಳನ್ನು ಪರಿಚಯಿಸಿದ ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.

    ReplyDelete
  19. ಶಿವು ಅವರೆ

    ಮತ್ತೊಮ್ಮೆ ನಿಮ್ಮ ಕಾಮೆಂಟ್ ಓದಿದ ಮೇಲೆ ‘ ಚೆನ್ನಾಗಿ ’ ಪದ ಬಿಟ್ಟುಹೋಗಿರುವುದು ಗೊತ್ತಾಯಿತು. ಇಂತಹ ತಪ್ಪುಗಳು ಎಲ್ಲರಿಗೂ ಆಗುತ್ತವೆ ಬಿಡಿ. ಅದಕ್ಕಾಗಿ ನೀವು ಬೆಸರಪಡಬೇಡಿ.

    ನಿಮ್ಮ ನಡೆದಾಡುವ ಭೂಪಟಗಳನ್ನು ನೋಡಿ ದಂಗಾಗಿ ಹೋದೆ.

    ReplyDelete
  20. ಪ್ರಿತಿಯ ಭಾರ್ಗವಿ

    ನೀವು ಎಲ್ಲಿ ಮಾಯವಾದಿರಿ ಎಂದುಕೊಂಡಿದ್ದೆ. ಅಂತೂ ಬಂದಿರಲ್ಲ. ನೀವು ಅಭಿಪ್ರಾಯ ಪಟ್ಟಂತೆ ಬಾಲಿಕಾವಧು ಉತ್ಕೃಷ್ಟ ಧಾರಾವಾಹಿ. ಬಾಲ್ಯವಿವಾಹವನ್ನು ತಪ್ಪಿಸಲಾಗದಿದ್ದರೂ , ಎಳೆವಯಸ್ಸಿನ ತಾಯಂದಿರು ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕೆಂಬ ಬಗ್ಗೆ ಇತ್ತೀಚೆಗೆ ಗೆಹನಾಳ ಪಾತ್ರದಲ್ಲಿ ತೋರಿಸುತ್ತಿರುವುದು ಬಹಳ ಚೆನ್ನಾಗಿದೆಯಲ್ಲವೇ ?

    ಉತರನ್ ನಿಜವಾಗಿಯೂ ಅದಕ್ಕಿಂತ ಹೆಚ್ಚಿನ ಜನರನ್ನು ತಲುಪುವಂತಹ ಧಾರಾವಾಹಿ. ಈ ಧಾರಾವಾಹಿಯ ಕಥೆ ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ.
    ಉತರನ್ ಪರಿಚಯಿಸಿದ್ದು ನಿಮಗೆ ಕತೆಯಂತೆ ಕಂಡಿದ್ದರೆ ಬರವಣಿಗೆ ಸಾರ್ಥಕ ಎಂದುಕೊಳ್ಳುವೆ. ಧನ್ಯವಾದಗಳು.

    ReplyDelete
  21. ಚಂದ್ರ ಕಾಂತ ಮೇಡಮ್,

    ನಡೆದಾಡುವ ಭೂಪಟಗಳನ್ನು ನೋಡಿ ನೀವು ಯಾವ ರೀತಿ ದಂಗಾಗಿದ್ದೀರಿ...ಅನ್ನುವುದನ್ನು ನನ್ನ ಬ್ಲಾಗಿನಲ್ಲಿ ಕಾಮೆಂಟಿಸಿದರೆ ನನಗೂ ಸೇರಿದಂತೆ ಎಲ್ಲರಿಗೂ ಸಂತೋಷವಾಗುತ್ತದೆ....ಬರುತ್ತಿರಲ್ವ...

    ReplyDelete
  22. ಮೇಡಂ....ಇತ್ತೀಚೆಗೆ ಯಾಕೋ ಸೀರಿಯಲ್ ಗಳನ್ನು ನೋಡಲು ಸಮಯವೇ ಸಾಲುತ್ತಿಲ್ಲ ! ಕನ್ನಡದ ಸೀರಿಯಲ್ಲುಗಳನ್ನೇ ನೋಡೋದು ಬಿಟ್ಟುಬಿಟ್ಟಿರುವೆ ! ಆದರೂ, ಈ ಕಥೆ ತುಂಬಾ ಚೆನ್ನಾಗಿದೆ. ಮನಸ್ಸಿಗೆ ನಾಟಿತು. ನೋಡಲು ಪ್ರಯತ್ನ ಮಾಡುವೆ.

    ReplyDelete
  23. @ ಲಕ್ಷ್ಮಿ
    ಸೀರಿಯಲ್ ಗಳನ್ನು ನೋಡುವುದನ್ನೇ ಬಿಟ್ಟಿರುವೆ ಎಂದಿರುವೆ. ಬಹಳ ಒಳ್ಳೆಯದು. ಅದೇ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬಹುದು!! ಈ ಧಾರಾವಾಹಿ ನಾನು ಲೇಖನ ಬರೆದಾದ ಮೇಲೆ ಮತ್ತಷ್ಟು ಚೆನ್ನಾಗಿ ಮೂಡಿಬರುತ್ತಿದೆ. ನನ್ನ ಬರಹ ಇಷ್ತವಾಗಿದ್ದಕ್ಕೆ ಧನ್ಯವಾದಗಳು

    ReplyDelete
  24. ಚಂದ್ರಕಾಂತರವರೆ,
    ನೀವು ಇಷ್ಟೊಳ್ಳೆ ಧಾರಾವಾಹಿಗಳನ್ನು ಪರಿಚಯಿಸಿದರೆ ನಾನು ಮಾಯವಾಗದೆ ಇನ್ನೇನು ಮಾಡಲು ಸಾಧ್ಯ:-)? ಇಲ್ಲಿ ಓದಿದ ಮೇಲೆ ನೋಡದೇ ಇರಲು ಸಾಧ್ಯವೇ? ಹೇಗೋ ನೋಡಲು ಪ್ರಾರಂಭಿಸಿಬಿಟ್ಟೆ. ತುಂಬಾನೆ ಇಷ್ಟ ಆಯ್ತು. ಇಚ್ಚಾ,ದಾಮಿನಿ,ತಪಸ್ಯಾ ಎಲ್ಲಾ ಪಾತ್ರಗಳು ಹಿಡಿಸಿದವು. ಮತ್ತೊಮ್ಮೆ ತುಂಬಾ ಧನ್ಯವಾದಗಳು.

    ReplyDelete
  25. ನಾನು ಧಾರಾವಾಹಿ ನೊಡೋದೇ ಇಲ್ಲ..ಈವಾಗ ನೋಡಕ್ಕೂ ಸಮಯ ಸಿಗಲ್ಲ. ನಿಮ್ ಬರಹದ ಮೂಲಕ ಒಳ್ಳೆಯ ಕತೆ ಓದಿದ ಖುಷಿ ಅನುಭವಿಸಿದೆ.
    -ಚಿತ್ರಾ

    ReplyDelete
  26. @ ಭಾರ್ಗವಿ
    ನೀವು ಉತರನ್ ನೋಡಲು ಪ್ರಾರಂಭಿಸಿರುವುದು ಕೇಳಿ ಸಂತೋಷವಾಯಿತು. ತುಂಬಾ ಸಹಜವಾಗಿದೆಯಲ್ಲವೇ ? ದಾಮಿನಿಗೆ ತನ್ನ ಮಗಳನ್ನು ಕೆಲಸದವಳನ್ನಾಗಿಸುವುದು ಇಷ್ಟವಿಲ್ಲದಿರುವುದು, ಅಜ್ಜಿಯ ಕುತಂತ್ರ ಮನಸ್ಸನ್ನು ಆಳವಾಗಿ ತಟ್ಟಿತು

    ಇನ್ನೊಂದು ವಿಷಯ :) ಜೀವನ್ ಸಾಥಿ ಎಂಬ ಮತ್ತೊಂದು ಧಾರಾವಾಹಿ ಕಣ್ಣಿಗೆ ಬಿತ್ತು. ಅದರ ಒಂದೆಳೆಯ ಕತೆ ತುಂಬಾ ಹಿಡಿಸಿತು. ಅದರ ಪರಿಚಯ ಮಾಡಿಕೊಡಲೇ ?ಅಂದಹಾಗೆ ನೀವು ವಿದೇಶದಲ್ಲಿ ಇಂಟರ್ ನೆಟ್ ಮೂಲಕ ಧಾರಾವಾಹಿ ನೋಡುವಿರಾ ಅಥವಾ ಈ ಚಾನೆಲ್ ಗಳು ಬರುತ್ತವೆಯೇ ?

    ReplyDelete
  27. @ ಚಿತ್ರಾ ಕರ್ಕೇರಾ

    ನಿಮ್ಮ ಬರುವಿಕೆ ನನಗೆ ತುಂಬಾ ಖುಶಿ ಕೊಟ್ಟಿದೆ. ಧಾರಾವಾಹಿ ನೋಡದವರು ಹಾಗೂ ಕತೆ ಮೆಚ್ಚಿದವರ ಲಿಸ್ಟ್ ಗೆ ನೀವೂ ಸೇರಿದ್ದು ಸಂತೋಷ. ಉತರನ್ ಮಾತ್ರ ನಿಜಕ್ಕೂ ಉತ್ತಮ ಸಾಮಾಜಿಕ ಕಳಕಳಿ ಉಳ್ಳ ಧಾರಾವಾಹಿ. ಕತೆ ಓದಿ ಖುಷಿ ಅನುಭವಿಸಿದ್ದಕ್ಕೆ ಧನ್ಯವಾದಗಳು.

    ReplyDelete
  28. ಚಂದ್ರಕಾಂತರವರೆ,
    ಮತ್ತೆ ಇನ್ನೊಂದು ಧಾರವಾಹಿ ಪರಿಚಯ ಮಾಡಿಕೊಡಲೇ ಅಂತಿದ್ದೀರಲ್ಲ:-). ಮಾಡಿ ಮಾಡಿ. ಎಲ್ಲ ಲಿಸ್ಟ್ ಮಾಡಿಟ್ಟುಕೊಳ್ತೇನೆ . ನಾನು ಇಂಟರ್ನೆಟ್ ನಲ್ಲಿಯೇ ನೋಡ್ತೀನಿ. ಧನ್ಯವಾದಗಳು.

    ReplyDelete
  29. hello madam,
    ಏನು ಹೊಸದು ಬರೆದಂತಿಲ್ಲ...ಪರೀಕ್ಷೆ ಸಮಯ ಬ್ಯುಸಿ ಆಗಿದ್ಡೀರ ಅನ್ಸತ್ತೆ :)

    ReplyDelete
  30. @ ಗೀತಾ

    ಹೇಗಿದ್ದೀಯಾ ? ಪರೀಕ್ಷೆಗಳು ಮುಗಿದು ಹೊಸ ಸೆಮೆಸ್ಟರ್ ಪ್ರಾರಂಭವಾಗಿದೆ. ಸಮಯ ಸಿಗುವುದು ಸ್ವಲ್ಪ ಕಡಿಮೆಯೇ.ಆದರೂ ಮತ್ತೊಂದು ಲೇಖನ ಸಿದ್ಧವಾಗುತ್ತಿದೆ. ಬಹುಶಃ ಈ ಶನಿವಾರ ಅಥವಾ ಭಾನುವಾರ ಪೋಸ್ಟ್ ಮಾಡುವೆ. Thanks for your concern

    ReplyDelete