ಮೊದಲ ಬಾರಿ ನಾನೊಬ್ಬಳೇ ವಿದೇಶಕ್ಕೆ ಹೋಗುವ ಪ್ರಸಂಗ ನನ್ನ ಮುದ್ದು ಮೊಮ್ಮಗನಿಂದ ನನಗೆ ಒದಗಿತು. ಒಬ್ಬಳೇ ಹೋಗಲು ನನಗೆ ಇಷ್ಟವಿರಲಿಲ್ಲ. ಆದರೆ ಏನು ಮಾಡುವುದು ? ಸೊಸೆಯಂತೂ ಮೊಮ್ಮಗನನ್ನು ನೋಡಲು ನಿಮಗಿಷ್ಟವಿಲ್ಲವೇ ?ಎಂದು ಆಗಾಗ ಸೆಂಟಿಮೆಂಟಲ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು. ನನಗೂ ಪುಟ್ಟನನ್ನು ನೋಡುವ ಹಂಬಲ ಬೆಟ್ಟದಷ್ಟಿತ್ತು. ನನ್ನವರಿಗೆ ಒಬ್ಬಳನ್ನೇ ಕಳಿಸಲು ಇಷ್ಟವಿಲ್ಲ. ನನಗೂ ಒಳಗೊಳಗೇ ಅಳುಕು ಕಾಡುತ್ತಿದ್ದರೂ ಧೈರ್ಯದ ಸೋಗು ಹಾಕಿ ಪಯಣಕ್ಕೆ ಸಿದ್ಧಳಾದೆ.ನೇರ ಪಯಣವಾಗಿದ್ದರೆ ಅಂಥಾ ತೊಂದರೆಯೇನಿರಲಿಲ್ಲ. ಆದರೆ ಮೆಲ್ಬರ್ನ್ ಗೆ ಹೋಗುವಾಗ ಕೌಲಾಲಂಪೂರ್ ನಲ್ಲಿ ವಿಮಾನ ಬದಲಿಸಬೇಕಿತ್ತು. ಈ ಹಿಂದೆ ಎರಡು ಬಾರಿ ವಿದೇಶಕ್ಕೆ ಹೋದಾಗಲೂ ನಾವು ಮೂರು ಜನ ಒಟ್ಟಿಗೆ ಹೋಗಿದ್ದಿದ್ದು. ಕಡೆಗೆ ನನ್ನವರು ಧೈರ್ಯ ತುಂಬಿ ಯಾವುದೇ ಹೊಸ ಅನುಭವವನ್ನು ಭಯದಿಂದ ಎದುರು ನೋಡದೆ ಒಂದು ರೀತಿಯ ಚಾಲೆಂಜ್ ಆಗಿ ಭಾವಿಸಬೇಕೆಂದು ಬುದ್ಧಿವಾದ ಹೇಳಿದರು.
ಅಂತೂ ಹೊರಡುವ ದಿನ ಬಂದಿತು.ವಿದೇಶದಲ್ಲಿರುವ ಮಕ್ಕಳ ಮನೆಗೆ ಹೋಗುವಾಗ ತೆಗೆದುಕೊಂಡು ಹೋಗುವ ಸಾಮಗ್ರಿಗಳಲ್ಲಿ ಸಿಂಹಪಾಲು ತಿನ್ನುವ ಪದಾರ್ಥಗಳಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ . ಕೆಲವು ದಿನಗಳ ಮೊದಲಿನಿಂದಲೇ ತೆಗೆದು ಕೊಂಡೊಯ್ಯುವ ಸಾಮಾನುಗಳನ್ನು ಸಿದ್ಧಪಡಿಸಿಕೊಂಡಿದ್ದೆ. ವಿಮಾನ ನಿಲ್ದಾಣಕ್ಕೆ ಬರುತ್ತಲೇ ಮೊದಲನೆಯ ಆಘಾತ ಕಾದಿತ್ತು. ಹಿಂದಿನ ಬಾರಿ ಮಗ ಸೊಸೆಯರನ್ನು ಕಳಿಸಲು ಬಂದಾಗ ನಮ್ಮನ್ನೂ ಒಳಗೆ ಬಿಟ್ಟಿದ್ದರು. ಆದರೆ ಈ ಬಾರಿ ಪ್ರಯಾಣಿಕರನ್ನು ಮಾತ್ರ main entrance ನಲ್ಲಿ ಒಳಗೆ ಬಿಡುತ್ತಿದ್ದರು. ಮುಖ್ಯ ದ್ವಾರದಿಂದಲೇ ನಾನೊಬ್ಬಳೇ ಹೋಗುವುದಕ್ಕೆ ನಾನು ಮಾನಸಿಕವಾಗಿ ಸಿದ್ಧಳಿರಲಿಲ್ಲ. ಆದರೆ ಮಾಡುವುದೇನು? ಒಬ್ಬಳೇಟ್ರಾಲಿ ತಳ್ಳಿಕೊಂಡು ಒಳಹೋದೆ.ಮೊದಲಿನಂತಿರಲಿಲ್ಲ ಅಂತರಾಷ್ಟ್ರೀಯ ವಿಮಾನ ನಿಲ್ದಾಣ.ನಾನು ಮಾರ್ಕೆಟ್ಟಿಗೋ ಮೆಜೆಸ್ಟಿಕ್ಕಿಗೋ ಬಂದಿರುವೆನೇನೋ ಅನಿಸಲಾರಂಭಿಸಿತು.ಅಷ್ಟೊಂದು ನೂಕುನುಗ್ಗಲು. ತೂಕ ಚೆಕ್ ಮಾಡುವ ಕಡೆ ಮಾರುದ್ದ ಕ್ಯೂ. ಅಂತೂ ನನ್ನ ಸರದಿ ಬಂದಿತು. ಅಲ್ಲಿದ್ದ ಸುಂದರ ಯುವತಿ ಅವಳದೇ ಆದ ಇಂಗ್ಲೀಷಿನಲ್ಲಿ ಹಣ ಕಟ್ಟುವಂತೆ ಹೇಳುತ್ತಿದ್ದಾಳೆ. ನನಗೆ ಅರ್ಥವಾಗಿದ್ದು ...ಡಾಲರ್ ಪೇ.. ಎರಡೇ ಶಬ್ಧ. ನನ್ನೆದೆ ಡಗ್ ಎಂದಿತು. ಇದೇನಪ್ಪಾ ಗ್ರಹಚಾರ ಎಂದುಕೊಂಡೆ. ಆಗ ಹಿಂದೆ ಇದ್ದವರು ತೂಕ ಜಾಸ್ತಿ ಇರುವುದರಿಂದ ಹೆಚ್ಚಿಗೆ ಹಣ ಕಟ್ಟಲು ಹೇಳುತ್ತಿದ್ದಾರೆ ಎಂದರು.ಅಷ್ಟರಲ್ಲಿ ದೂರದಿಂದ ಅಮ್ಮಾ ಎಂದದ್ದು ಕೇಳಿಸಿತು. ನೋಡಿದರೆ ಇನ್ನೊಂದು ಕಡೆಯಿಂದ ಸರಳುಗಳ ಹಿಂದೆ ಕಳಿಸಿ ಕೊಡುವವರ ದಂಡೇ ಕಾಣುತ್ತಿದೆ. ನನ್ನವರ ಮುಖ ಕಂಡದ್ದೇ ಅಲ್ಲಿಯವರೆಗೆ ಓಡಿ ‘ತೂಕ ಜಾಸ್ತಿ ಇದೆಯಂತೆ’ ಎಂದೆ. ನಮ್ಮವರಿಗೆ ತಾಳ್ಮೆ ಜಾಸ್ತಿ.‘ ಗಾಬರಿ ಪಡಬೇಡ ’ಎಂದು ಹೇಳಿ ಸೆಕ್ಯುರಿಟಿಯವನ ಬಳಿ ಕೇಳಿಕೊಂಡು ಸಹಾಯ ಮಾಡಲು ಒಳಬಂದರು.ನಂತರ ಬಿಗದ ಕೈ ಕೊಡು ಕೆಲವು ಸಾಮಾನು ತೆಗೆಯೋಣ ಎಂದರು. ಅಲ್ಲವೇ ಮತ್ತೆ. ಯಾರು ಹೆಚ್ಚಿಗೆ ಡಾಲರ್ ಲೆಕ್ಕದಲ್ಲಿ ಹಣ ಕುಕ್ಕುತ್ತಾರೆ. ಮೂರು ಕೆಜಿ ತೂಕವನ್ನು ಕಡಿಮೆ ಮಾಡಬೇಕಿತ್ತು. ಪರ್ಸ್ ನಿಂದ ಬೀಗದ ಕೈ ಹೊರತೆಗೆಯಲು ಕೈ ಹಾಕಿದರೆ ಸಿಗುತ್ತಲೇ ಇಲ್ಲ. ಹುಷಾರಾಗಿ ಇಟ್ಟಿದ್ದೆನಲ್ಲಾ? ಹಾಳಾದ್ದು ಹುಷಾರಾಗಿ ಇಟ್ಟಿರುವ ವಸ್ತುಗಳೇ ಕೈಕೊಡುವುದು ಜಾಸ್ತಿ. ನನ್ನ ಧಾವಂತ ನೋಡಿ ನನ್ನವರು ‘ನಿಧಾನಕ್ಕೆ ಹುಡುಕು’ ಎಂದರು. ಅಂತೂ ಸಿಕ್ಕಿತು. ಕಿಷ್ಕಿಂದಾಕಾಂಡದಂತಿದ್ದ ಆ ಜಾಗದಲ್ಲಿ ಹೇಗೋ ಸೂಟ್ ಕೇಸ್ ಮಲಗಿಸಿ ಬೀಗ ತೆಗೆದೆ. ಒಳಗೆ ನೀಟಾಗಿ ಪ್ಯಾಕ್ ಮಾಡಿದ್ದ ವಸ್ತುಗಳು. ಹೆಚ್ಚಿಗೆ ಅಲ್ಲಾಡಿಸದೆ ಮೇಲೆ ಕೈಗೆಟುಕುವಂತೆ ಸಿಕ್ಕ ಒಂದೊಂದು ಕೆಜಿಯ ಮೂರು ಪ್ಯಾಕೆಟ್ ಗಳನ್ನು ಹೊರಹಾಕಿದೆವು. ನಾನು ಕಷ್ಟ ಪಟ್ಟು ತಯಾರಿಸಿದ್ದ ಕುಟ್ಟವಲಕ್ಕಿ, ಚಟ್ನಿಪುಡಿ ಮತ್ತು ಒಂದು ಕೆಜಿಯ ಬನ್ಸಿರವೆಯ ಪೊಟ್ಣಗಳು ಹೊರಬಂದವು. ಮನಸ್ಸಿಲ್ಲದ ಮನಸ್ಸಿನಿಂದ ಅವರ ಕೈಗೆ ಆ ಕವರ್ ಗಳನ್ನು ದಾಟಿಸಿದೆ. ಅಂತೂ ಮೊದಲ ಗಂಡಾಂತರ ದಾಟಿತು.
ಕಡೆಯದಾಗಿ ಇಬ್ಬರಿಗೂ Bye ಹೇಳೀ ಒಳ ಬಂದೆ.ಇಮಿಗ್ರೇಷನ್ ಕೌಂಟರ್ ಬಳಿ form fill ಮಾಡಿ ಕ್ಯೂಗೆ ಬಂದರೆ ಹನುಮಂತನಬಾಲದಂತಿದ್ದ ಕ್ಯೂ. ಮಧ್ಯ ರಾತ್ರಿ 12. 15ಕ್ಕೆ ಸರಿಯಾಗಿ ಬೋರ್ಡಿಂಗ್ ಪ್ರಾರಂಭವಾಯಿತು. ಟ್ರ್ಯಾವೆಲ್ ಏಜೆಂಟ್ ಹೇಳಿದಂತೆ ಕಿಟಕಿಯ ಪಕ್ಕದ ಸೀಟೇ ಸಿಕ್ಕಿತು.ಈ ಬಾರಿ ವಿಮಾನ ಟೇಕಾಫ್ ಆದಾಗ ಅಂತಹ ತೊಂದರೆಯಾಗಲಿಲ್ಲ. ಪ್ರಯಾಣ ಪ್ರಾರಂಭವಾದ ಸ್ವಲ್ಪ ಹೊತ್ತಿಗೇ ಯಥಾಪ್ರಕಾರ ಕಿತ್ತಲೆ ರಸ , ಕಡಲೆಕಾಯಿ ಪ್ಯಾಕೆಟ್ ಬಂದಿತು.ಕಾಲು ಗಂಟೆ ಅಂತರದಲ್ಲಿ ಊಟ ಬಂದಿತು.ವಿಮಾನಗಳಲ್ಲಿ ಕೊಡುವ ಊಟ ಒಂದು ರೀತಿಯ ಸಮತೋಲನ ಆಹಾರ. ಅಥವಾ ಒಂದು ಸಿದ್ಧಸೂತ್ರಕ್ಕೆ ಅಂಟಿಕೊಂಡಿರುವ ಊಟ.ಕೌಲಾಲಂಪೂರ್ ಗೆ ಹೋಗುವ ವಿಮಾನವಾದ್ದರಿಂದ ಒಳ್ಳೆಯ ಸಸ್ಯಾಹಾರಿ ಊಟ.ಎಣಿಸಿದ ಹಾಗೆ ನಾಲ್ಕು ರೀತಿಯ ಎಂಟು ದೊಡ್ಡ ಗಾತ್ರದ ಹಣ್ಣಿನ ಹೋಳುಗಳು.ಸಸ್ಯಾಹಾರಿ ಊಟದಲ್ಲಿ ಒಂದು ಸಿಹಿ ಕಡ್ಡಾಯವಾಗಿ ಇರುತ್ತದೆ. ಈ ಬಾರಿ ರಸಗುಲ್ಲ ತರಹದ ಸಿಹಿ ಪದಾರ್ಥ.ಯಾವ ಪದಾರ್ಥವೂ ಬೇಡವೆನಿಸಲಿಲ್ಲ. ಅನ್ನ ಮತ್ತು ತರಕಾರಿಯ ನಂಜಿಕೆಯೂ ಚೆನ್ನಾಗಿತ್ತು. ಅಂತೂ ಸಮಯಕ್ಕೆ ಸರಿಯಾಗಿ ಕೌಲಾಲಂಪುರ ಸೇರಿದ್ದಾಯಿತು. ಅಲ್ಲಿ ವಿಮಾನ ಬದಲಿಸಲು ನಾಲ್ಕು ಗಂಟೆ ಸಮಯವಿತ್ತು.
ಮೆಲ್ಬರ್ನ್ ಗೆ ಹೋಗುವ ವಿಮಾನ ಹತ್ತಲು ಒಂದು ರೈಲಿನಲ್ಲಿ ಹೊರಟು ಇನ್ನೊಂದು ನಿಲ್ದಾಣಕ್ಕೆ ಹೋಗಬೇಕಾಯಿತು. ನಾನು ಇಳಿದದ್ದು ಡೊಮೆಸ್ಟಿಕ್ ನಿಲ್ದಾಣ, ಈಗ ಹೊರಟಿರುವುದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಅನಂತರ ತಿಳಿಯಿತು.ಸೊಗಸಾದ ಸ್ವಚ್ಚವಾದ ವಿಮಾನ ನಿಲ್ದಾಣ. ಬೋರ್ಡಿಂಗ್ ಪಾಸ್ ತೆಗೆದುಕೊಳ್ಳುವಾಗ ಎಳೆಯ ಮಗುವನ್ನೆತ್ತಿಕೊಂಡಿದ್ದ ತಾಯಿಯೊಬ್ಬಳ ಪರಿಚಯವಾಯಿತು.ವಿಮಾನ ಪ್ರಯಾಣದಲ್ಲಿ ಎಳೆಯ ಮಕ್ಕಳಿರುವವರಿಗೆ ಮೊದಲ ಆದ್ಯತೆ ಇರುವುದರಿಂದ, ನನಗೂ ಅವಳ ಜೊತೆ ಮೊದಲು ವಿಮಾನ ಏರುವ ಅವಕಾಶ ಸಿಕ್ಕಿತು. ಈ ವಿಮಾನದಲ್ಲಿನ ಪ್ರಯಾಣ ಅತಿ ಸೊಗಸಾಗಿತ್ತು. ಪ್ರತಿಯೊಂದು ಸೀಟಿಗೂ ಒಂದು ಮಾನಿಟರ್. ಆ ಮಾನಿಟರ್ ಆಪರೇಟ್ ಮಾಡಲು ಸೀಟಿನ ಕೈ ಊರಲು ಇರುವ ಹ್ಯಾಂಡಲ್ ನಲ್ಲಿರುವ ಗುಂಡಿಗಳನ್ನು ಒತ್ತಿ ನೋಡಬೇಕಿತ್ತು. ಮಗ ನಿತಾಂತನನ್ನು ನೆನಸಿಕೊಂಡು ಮಾನಿಟರ್ ಪೂರ್ತಿ ಆಪರೇಟ್ ಮಾಡಿ ನೋಡಿದರೆ ಎಷ್ಟೊಂದು ಚಾನೆಲ್ ಗಳು. ಅವುಗಳಲ್ಲಿ ನನಗೆ ಇಷ್ಟವಾದದ್ದು ಅದರಲ್ಲಿ Live ಆಗಿ ತೋರಿಸುವ chart. ನಾವು ಆಕಾಶದಲ್ಲಿ ಎಲ್ಲಿದ್ದೇವೆ, ನಾವು ತಲುಪುವ ಸ್ಥಳ ಎಷ್ಟು ದೂರವಿದೆ, ವಿಮಾನ ಎಷ್ಟು ವೇಗವಾಗಿ ಹೋಗುತ್ತಿದೆ, ಮುಂತಾದ ವಿವರಗಳನ್ನು ನೇರ ಚಿತ್ರದ ಮೂಲಕ ತೋರಿಸುತ್ತಿರುತ್ತಾರೆ.
ವಿಮಾನ ಹೊರಟ ಕೂಡಲೆ ಯಥಾಪ್ರಕಾರ ಜ್ಯೂಸ್ ಬಂದ ಸ್ವಲ್ಪಹೊತ್ತಿಗೇ ಊಟ ಬಂದಿತು.ಈ ವಿಮಾನದಲ್ಲಿ 6 ರೀತಿಯ ಸಸ್ಯಾಹಾರಿ ಊಟಗಳು. ಕುತೂಹಲ ಉಂಟಾಯಿತು.ಅವು ಯಾವುವು ಎಂದು ನೋಡಿದೆ.
.
1.VLML - ಇದು ಪಾಶ್ಚಿಮಾತ್ಯರ ಹಾಲಿನ ಪದಾರ್ಥವಿರುವ ಸಸ್ಯಾಹಾರಿ ಊಟ.
2.VGML- ಇದು ವೇಗನ್ ವೆಜಿಟೇರಿಯನ್ ಊಟ.
3.AVML- ಇದು ಏಷ್ಯಾಟಿಕ್ ವೆಜಿಟೇರಿಯನ್ ಮೀಲ್ (ಇದು ನನ್ನ ಆಯ್ಕೆ)
4.OVML- ಇದು ಓರಿಯಂಟಲ್ ವೆಜಿಟೇರಿಯನ್ ಮೀಲ್
5. RVML- ಇದು Raw Vegetable Meal ( ಅದನ್ನು ತಿನ್ನುತ್ತಿರುವವರನ್ನು ನೋಡಿದರೆ ಹಸಿ ತರಕಾರಿಗಳ ಗುಡ್ಡವೇ ಅವರ ಮುಂದೆ ಇತ್ತು.)
6.JNML - ಇದು ಜೈನರ ಸಸ್ಯಾಹಾರಿ ಊಟ.
ನಾನು ಇದುವರೆಗೂ ಮಾಡಿದ ಮೂರು ವಿದೇಶ ಪ್ರಯಾಣಗಳಲ್ಲೆಲ್ಲಾ ಇದರಷ್ಟು ಅದ್ಭುತವಾದ ಊಟ ನನಗೆ ಸಿಕ್ಕಿರಲಿಲ್ಲ. ಊಟವನ್ನು ನೋಡುತ್ತಲೇ ಅಪ್ರಯತ್ನವಾಗಿ ನಿತಾಂತ್ ಮತ್ತು ನನ್ನವರು ನೆನಪಿಗ ಬಂದರು. ಸೊಗಸಾದ ಬಿಸಿಬಿಸಿ ಪೂರಿ ನಿತಾಂತನನ್ನು ನೆಪಿಸಿದರೆ Yogurt ( ಮೊಸರು ) ನನ್ನವರನ್ನು ನೆನಪಿಸಿತು. ಮೊಸರು ಮನೆಯದರಂತೆ ಗಟ್ಟಿಯಾಗಿಲ್ಲದಿದ್ದರೂ ( ಸ್ವಲ್ಪ ಕಂಡೆನ್ಸಡ್ ಮಿಲ್ಕ್ ತರಹ ಕಾಣುತ್ತಿತ್ತು ) ರುಚಿ ಮಾತ್ರ ಹದವಾಗಿತ್ತು.ಅಕ್ಕಿಯೋ ಸಬ್ಬಕ್ಕಿಯೋ ಹಾಕಿದ ಚಿಲ್ಡ್ ಪಾಯಸ, ದ್ರಾಕ್ಷಿ ಪಪಾಯ ಕಲ್ಲಂಗಡಿ ಸೇಬು ಹಣ್ಣಿನ ಮೂರು ಮೂರು ದೊಡ್ಡ ಹೋಳುಗಳು, ಪೂರಿಗೆ ಹೆಸರು ಬೇಳೆ ತೊವ್ವೆಯಂತಹುದು ಅನ್ನದ ಜೊತೆ ಹುರುಳಿಕಾಯಿ, ಕ್ಯಾರೆಟ್, ಹೂಕೋಸು , ಆಲೂಗಡ್ಡೆ ಹಾಕಿ ಮಾಡಿದ ವ್ಯಂಜನ.ಮನೆಯವರನ್ನು ನೆನಸಿಕೊಳ್ಳುತ್ತಾ ಸೊಗಸಾದ ಊಟವನ್ನು ನಾನೊಬ್ಬಳೇ ತಿಂದು ಮುಗಿಸಿದೆ.ಊಟದ ಬಗ್ಗೆ ಇಷ್ಟೊಂದು ವಿವರ ನೋಡಿ ಯಾರಿಗಾದರೂ ಅಚ್ಚರಿಯಾಗಬಹುದು. ಮೊದಲ ಬಾರಿ ಅಂದರೆ ಎಂಟು ವರ್ಷಗಳ ಹಿಂದೆ ಅಮೆರಿಕಾಗೆ ಹೋಗುವಾಗ ಊಟದ ವಿಚಾರದಲ್ಲಿ ನಾವು ಸಾಕಷ್ಟು ತೊಂದರೆ ಎದುರಿಸಿದ್ದೆವು. ಆದ್ದರಿಂದ ಈ ಬಾರಿ ಊಟ ಅಷ್ಟೊಂದು ಮುಖ್ಯವೆನಿಸಿತು.
ಊಟ ಮುಗಿದ ನಂತರ ಕಿಟಕಿಯಿಂದ ಸುಂದರ ಆಗಸದ ಕ್ಷಣಕ್ಕೊಂದು ರೀತಿ ಬದಲಾಗುವ ದೃಶ್ಯ ವೈಭವ ನೋಡುತ್ತಾ ಸಮಯ ಸರಿದದ್ದೇ ತಿಳಿಯಲಿಲ್ಲ. ಎಂಟು ಗಂಟೆಗಳ ದೀರ್ಘ ಪಯಣದ ನಂತರ ವಿಮಾನ ಕೆಳಗಿಳಿಯಿತು.ಅಲ್ಲಿ ಮತ್ತೊಂದು ಸಮಸ್ಯೆ ಎದುರಿಸ ಬೇಕಾಯಿತು.ಕಸ್ಟಮ್ಸ್ ನಲ್ಲಿ ಇಡೀ ಸೂಟ್ ಕೇಸನ್ನೇ ತಲೆಕೆಳಗು ಮಾಡಿದ ಅಲ್ಲಿದ್ದ ಬಿಳಿಯ ಅಧಿಕಾರಿ. ನೋಡ ನೋಡುತ್ತಿದ್ದಂತೆ ಮನೆಯಿಂದ ಸಿದ್ಧಗೊಳಿಸಿ ತಂದಿದ್ದ ೧ ಕೆಜಿ ಚಟ್ನಿಪುಡಿಯ ಪಟ್ಟಣವನ್ನು ಕೈಗೆತ್ತಿಕೊಂಡವನೇ ಪಕ್ಕಕ್ಕಿಟ್ಟ. ಅದರೊಂದಿಗೆ ಮನೆಯಿಂದ ಸಿದ್ಧಗೊಳಿಸಿ ತಂದಿದ್ದ ಅಳಿದುಳಿದಿದ್ದ ಕುಟ್ಟವಲಕ್ಕಿ, ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಮೆಂತ್ಯೆ ಹಿಟ್ಟು, ಗೋದಿ ಹಿಟ್ಟು ಮುಂತಾದುವೆಲ್ಲವನ್ನೂ ಪಕ್ಕಕ್ಕಿಟ್ಟು , ಸೂಟ್ಕೇಸ್ ಮುಚ್ಚಿ ನಂತರ ಆ ಪ್ಯಾಕೆಟ್ ಗಳನ್ನೆಲ್ಲಾ ಒಟ್ಟಿಗೆ ಪಕ್ಕದಲ್ಲಿದ್ದ ಕಸದ ಬುಟ್ಟಿಗೆ ಹಾಕಿದ. ನಾನು ಹೌಹಾರಿ ಹೋದೆ. ನಂತರ ಕಷ್ಟಪಟ್ಟು ಏಕೆ ಆ ಪದಾರ್ಥಗಳನ್ನು ಬಿಸಾಕಿದ್ದು ಎಂದು ಕೇಳಿದಾಗ ಅವನು ಕೊಟ್ಟ ಉತ್ತರ ಯೋಚಿಸುವಂತೆ ಮಾಡಿತು. ಅಮೆರಿಕಾಗಿಂತ ಆಸ್ಟ್ರೇಲಿಯಾದಲ್ಲಿ ಆರೋಗ್ಯದ ಬಗ್ಗೆ ಕಟ್ಟುನಿಟ್ಟಾದ ಕ್ರಮಗಳಿವೆ. ಹಿಂದಿನ ಬಾರಿ ನಾವೆಲ್ಲರೂ ಆಸ್ಟ್ರೇಲಿಯಾಕ್ಕೆ ಬಂದಾಗ ನಡೆದ ಒಂದು ಪ್ರಸಂಗ ಇಲ್ಲಿ ಪ್ರಸ್ತಾಪಿಸಲೇ ಬೇಕು.
ಆಗ ಆಸ್ಟ್ರೇಲಿಯಾಕ್ಕೆ ಹೊರಟಾಗ ಬೆಂಗಳೂರಿನ Airport ನಲ್ಲಿ ನಾವೆಲ್ಲರೂ ಬಾಳೆಹಣ್ಣು , ಸೀಬೆಹಣ್ಣು ತಿಂದೆವು. ನಂತರ ಕೆಲವು ಮಿಕ್ಕ ಹೋಳುಗಳನ್ನು ನನ್ನ Vanity bagನಲ್ಲಿ ಇಟ್ಟೆ. ಮುಂದೆ ಪ್ರಯಾಣದುದ್ದಕ್ಕೂ ಅದರ ವಿಷಯ ಮರೆತೇ ಹೋಗಿತ್ತು. ಕಸ್ಟಮ್ಸ್ ನವರು ನನ್ನ ಬ್ಯಾಗ್ ಚೆಕ್ ಮಾಡಿ ಈ ರೀತಿ ಕತ್ತರಿಸಿದ ಹಣ್ಣು ತರುವುದು ತಪ್ಪೆಂದು ಗೊತ್ತಿಲ್ಲವೇ ?ಎಂದು ಅದೆಲ್ಲವನ್ನೂ ಕಸದಬುಟ್ಟಿಗೆ ಹಾಕಿದ್ದರು.ಹಾಗೆ ಹಣ್ಣುಗಳನ್ನು ತರಬಾರದೆಂದು ಹೇಳಿದ್ದರು.ಆದರೆ ಈ ಬಾರಿ ಹೀಗೇಕೆ ಮಾಡಿದರು. ಅವರು ಹೇಳಿದ ಉತ್ತರ ಮೊದಲೇ ನನಗೆ ಗೊತ್ತಿದ್ದಿದ್ದರೆ ಈ ರೀತಿ ಪದಾರ್ಥಗಳನ್ನು ಹಾಳುಮಾಡಿಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ.
ಒಳ್ಳೆಯ fresh ಆದ ಪದಾರ್ಥಗಳೆಂದು ನಾವು ನಿರ್ಧರಿಸುವ ರೀತಿಗೂ ಅವರು ಯೋಚಿಸುವ ರೀತಿಗೂ ಅಜಗಜಾಂತರ. ವ್ಯತ್ಯಾಸ. ಸ್ವಚ್ಚತೆಯನ್ನು ನಿರ್ಧರಿಸುವ ಮಾನದಂಡಗಳೂ ಬೇರೆ. Home made ಪದಾರ್ಥಗಳನ್ನು ನಾವು ಹೆಚ್ಚು ಸ್ವಚ್ಚ ಹಾಗೂ ಒಳ್ಳೆಯ ಪದಾರ್ಥಗಳೆಂದರೆ ಅವರ ಪ್ರಕಾರ Supermarket ನಲ್ಲಿ ಮಾರಾಟ ಮಾಡುವ ಪದಾರ್ಥಗಳು ಹೆಚ್ಚು fresh ಹಾಗೂ hygenic. ಸರಳವಾಗಿ ಹೇಳಬೇಕೆಂದರೆ ಪ್ಯಾಕೆಟ್ ಮೇಲೆ ಪದಾರ್ಥದ ಹೆಸರು .. ತೂಕ..ಇತ್ಯಾದಿಗಳಿರುವ ವಸ್ತುಗಳು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.‘ ಒಹೋ ಹೀಗೋ ಸಮಾಚಾರ ’ಎಂದು ಬಿಸಾಕಿದ ಪದಾರ್ಥಗಳೆಡೆ ಕಣ್ಣು ಹೊರಳಿಸಿದೆ. ಅದಕ್ಕೇ MTR ಪದಾರ್ಥಗಳು, ಆನಂದಭವನ್ ಸಿಹಿ ಪದಾರ್ಥಗಳು ಜೀವ ಉಳಿಸಿಕೊಂಡಿವೆ. ಅಕಸ್ಮಾತ್ತಾಗಿ VIJAY ಅಕ್ಕಿಹಿಟ್ಟು ಎಂದು ಪ್ರಿಂಟ್ ಆಗಿರುವ ಕವರಿನಲ್ಲಿ ಲೋಕಲ್ ಮೇಡ್ ಕಾಫಿಪುಡಿ ಹಾಕಿದ್ದೆ. ಅದು ಸ್ವಚ್ಚಪದಾರ್ಥವೆಂಬ ಹಣೆಪಟ್ಟಿ ಹೊತ್ತಿದೆಯೆಂದು ನಿರ್ಧರಿಸಿ ಆ ಕಸ್ಟಮ್ ನವನು ಅದನ್ನು ಬಿಸಾಕಿರಲಿಲ್ಲ. ಮೊದಲೇ ಈ ವಿಷಯ ಗೊತ್ತಿದ್ದರೆ ಮನೆಯಲ್ಲಿ ತಯಾರಿಸಿದ ಎಲ್ಲ ಪುಡಿಗಳನ್ನೂ ಹೀಗೆ ಪ್ರಿಂಟ್ ಆಗಿರುವ ಕವರಿನಲ್ಲಿ ತುಂಬಿಸಿಕೊಂಡು ಬರಬಹ್ದಿತ್ತಲ್ಲಾ ಎಂದು ಹಳಹಹಳಿಸಿದೆ. !!
ಅಂತೂ ಏರ್ಪೋರ್ಟ್ ಗೆ ಬಂದಿದ್ದ ಮಗ, ಸೊಸೆ ಹಾಗೂ ಮುದ್ದು ಮೊಮ್ಮಗನೊಂದಿಗೆ ಮನೆ ಸೇರಿದಾಗ ರಾತ್ರಿ ಹನ್ನೆರಡು ಗಂಟೆ. ಅಲ್ಲಿಯ ಸಮಯಕ್ಕೆ ಗಡಿಯಾರವನ್ನು ಹೊಂದಿಸಿಕೊಂಡೆ.ಪ್ರಯಾಣದ ಆಯಾಸದಿಂದ ಚೆನ್ನಾಗಿ ನಿದ್ದೆ ಬಂದಿತು. ಬೆಳಿಗ್ಗೆ ಕಣ್ಣುಬಿಟ್ಟಾಗ ಎಂಟು ಗಂಟೆ. ನನ್ನ ಜನ್ಮದಲ್ಲೇ ಅಷ್ಟು ತಡವಾಗಿ ಎದ್ದವಳಲ್ಲ ನಾನು. ಆತುರದಲ್ಲಿಯೇ ಎದ್ದು ಹಾಲಿಗೆ ಬಂದರೆ ಮನೆ ನಿಶ್ಶಬ್ದವಾಗಿದೆ. ಇನ್ನೂ ಯಾರೂ ಎದ್ದಿಲ್ಲ. ಆಮೇಲೆ ತಿಳಿಯಿತು, ಅವರೆಲ್ಲಾ ರಾತ್ರಿ ತಡವಾಗಿ ಮಲಗಿ ತಡವಾಗಿ ಏಳುವವರೆಂದು.ಮರುದಿನದಿಂದ ನನಗೆ ಅಭ್ಯಾಸಬಲದಿಂದ ಬೆಳಿಗ್ಗೆ ಬೇಗ ಎಚ್ಚರವಾಯಿತು. ಕಿಟಕಿಯಾಚೆ ನೋಡಿದರೆ ಇನ್ನೂ ಪೂರ್ಣಗತ್ತಲು. ಏನು ಮಾಡಲಿ? ನಿದ್ರೆ ಬರುತ್ತಿಲ್ಲ. ಎದ್ದು ಮಾಡುವ ಯಾವ ಕೆಲಸವೂ ಇರಲಿಲ್ಲ.ಅನಿಮಿತ್ತವಾಗಿ ಬೆಂಗಳೂರಿನ ನನ್ನ ದಿನಚರಿ ನೆನಪಾಯಿತು.ಬೆಳಿಗ್ಗೆ ನಾಲ್ಕೂವರೆಗ ಕಣ್ಣು ಬಿಟ್ಟ ತಕ್ಷಣ ಆ ಕ್ಷಣದಲ್ಲಿ ಮಾಡಬೇಕಾದ ಕೆಲಸದ ಪಟ್ಟಿಯೇ ನನ್ನ ಮುಂದಿರುತ್ತಿತ್ತು. ಆರೂವರೆಗೆ ಕೆಲಸದವಳು ಬರುವ ಮುಂಚೆ ವಾಕಿಂಗ್ ಮುಗಿಸಿ, ಹಾಲಿನವನು ಬರುವಷ್ಟರಲ್ಲಿ ಟೋಕನ್ ಮತ್ತು ಬ್ಯಾಗ್ ನ್ನು ಗೇಟಿಗೆ ನೇತುಹಾಕಿ... ..ಬೆಳಗಿನ ಉಪಹಾರ ಅಡುಗೆಗೆ ತರಕಾರಿ ಹೆಚ್ಚಿ ಸಿದ್ಧಗೊಳಿಸಿ.... ಎಲ್ಲಕ್ಕಿಂತ ಹೆಚ್ಚಾಗಿ ಕೆಲಸದವಳು ಬೆಲ್ ಮಾಡುವ ಮುಂಚೆ ಸ್ನಾನ ಮುಗಿಸಿ.... ಹೀಗೆ ಬೆಳಿಗ್ಗೆ ನಾನು ಸಂಪೂರ್ಣ ಕೆಲಸದಲ್ಲಿ ಮುಳುಗಿರುತ್ತಿದ್ದೆ. ಆದರಿಲ್ಲಿ ? ಮಾಡುವ ಯಾವ ಕೆಲಸವೂ ಇಲ್ಲ. ಹಾಲು ದಿನಾ ತರಬೇಕಿಲ್ಲ. ಹಾಲನ್ನು ಮನೆಗೆ ತಂದುಕೊಡಲು ಅದೇನು ಬೆಂಗಳೂರಲ್ಲವಲ್ಲ!! ಇನ್ನು ಕೆಲಸದವರು ಬರುವ ಪ್ರಶ್ನೆಯೇ ಇಲ್ಲ. ಎಲ್ಲರೂ ನಿಧಾನವಾಗಿ ಏಳುವುದರಿಂದ ಅಡಿಗೆ ತಿಂಡಿಗೆ ಅವಸರವಿಲ್ಲ.ಇಲ್ಲಿಗೆ ಬರುವ ಮುಂಚೆ ನನ್ನವರು " ನೋಡು ಸದಾಕಾಲ ಕೆಲಸದಲ್ಲಿ ಮುಳುಗಿರುವ ನಿನಗೆ, ಮಗನ ಮನೆಗೆ ಹೋದಾಗ ಬಿಡುವು ಸಿಗುತ್ತದೆ. ಅದನ್ನು ಚೆನ್ನಾಗಿ enjoy ಮಾಡು " ಎಂಬ ಮಾತು ನೆನಪಿಗೆ ಬಂದಿತು.. ಬೆಳಿಗ್ಗೆ ಕಣ್ಣುಬಿಟ್ಟಾಗ ಇಷ್ಟೆಲ್ಲಾ ಯೋಚನೆಗಳು ಸರಿದುಹೋಯಿತು. ಇನ್ನು ಉಳಿದಿರುವ ಒಂದೇ ಒಂದು ಕೆಲಸವೆಂದರೆ ವಾಕಿಂಗ್ ಹೋಗುವುದು. ಆದರೆ ಈ ಊರಿನಲ್ಲಿ ಅದೆಷ್ಟು ಹೊತ್ತಿಗೆ ಸೂರ್ಯ ಕಾಣಿಸಿಕೊಳ್ಳುತ್ತಾನೋ ತಿಳಿಯುತ್ತಲೇ ಇರಲಿಲ್ಲ. ಆದರೂ ಸ್ವಲ್ಪ ಬೆಳಕು ಹರಿದ ಕೂಡಲೇ ವಾಕಿಂಗ್ ಹೊರಟೆ. ಹಿಂದಿನ ಬಾರಿ ಬಂದಿದ್ದಾಗಲೇ ಇಲ್ಲಿ ವಾಕಿಂಗ್ ನೀಡುವ ಸಂತೋಷದ ಸವಿ ಅನುಭವಿಸಿದ್ದರಿಂದ ಅದನ್ನು ಬಿಡುವ ಪ್ರಶ್ನೆಯೇ ಇರಲಿಲ್ಲ.ಅಲ್ಲಿನ ಸ್ವಚ್ಚ ರಸ್ತೆಗಳು, ವಿಸ್ತಾರ ರಸ್ತೆಯ ಇಕ್ಕೆಲದಲ್ಲಿರುವ ಹುಲ್ಲಹಾಸು, ಅದರ ಪಕ್ಕದಲ್ಲಿರುವ ಪಾದಚಾರಿ ರಸ್ತೆ.. ಎಲ್ಲಕ್ಕಿಂತ ಹೆಚ್ಚಾಗಿ ರಸ್ತೆಯಲ್ಲಿ ಅತ್ಯಂತ ವಿರಳ ಜನಸಂಚಾರ.. ಸೊಗಸಾದ ಸ್ವಚ್ಚವಾದ ಮಾಲಿನ್ಯರಹಿತ ಬೆಳಗಿನ ತಂಗಾಳಿ...ಇವೆಲ್ಲಾ ವಾಯುಸಂಚಾರದ ಸೊಗಸನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು. ಎಷ್ಟೇ ದೂರ ಸಂಚಾರ ಮುಗಿಸಿ ಬಂದರೂ ಆಯಾಸದ ಸೂಚನೆಯೇ ಇಲ್ಲ. ಬೆವರಂತೂ ಇಲ್ಲವೇ ಇಲ್ಲ. ಲೀಲಾಜಾಲವಾಗಿ ಎರಡು ಗಂಟೆ ವಾಕ್ ಮಾಡಬಹುದು.
ಇಂತಹ ಬೆಳಗಿನ ಸಂಚಾರ ಬೆಂಗಳೂರಿನ ಬೆಳಗಿನ ವಾಕ್ ಗಿಂತ ಬಲು ಭಿನ್ನ. ಯಾವುದೇ ರೀತಿಯ ಅಡೆತಡೆ ಇಲ್ಲದ್ದರಿಂದ ಹಾಗೆ ರಸ್ತೆಯ ಇಕ್ಕೆಲದ ಮನೆಗಳ ಕಡೆ ಕಣ್ಣು ಹಾಯಿಸುತ್ತಾ ಆ ಮನೆಗಳ ಸರಳತೆ, ಮನೆಯ ಮುಂದಿರುವ ಹೂಗಿಡಗಳ ಅಂದ ನೋಡುತ್ತಾ ಹೋಗುತ್ತಿದ್ದೆ. ಹಾಗೆ ಹೋಗುತ್ತಾ ಆ ಮನೆಗಳ ಮುಂದಿರುವ ಪೋಸ್ಟ್ ಬಾಕ್ಸ್ ಗಳನ್ನು ನೋಡಿದಾಗ ಕುತೂಹಲವಾಯಿತು.ಪೋಸ್ಟ್ ಹಾಕುವ ಅಂಚೆಯಣ್ಣ , ವೃತ್ತಪತ್ರಿಕೆ ಹಾಕುವ ಪೇಪರ್ ಬಾಯ್ ಗೆ ಒಳ್ಳೆಯ ಅನುಕೂಲ . ತನ್ನ ದ್ವಿಚಕ್ರವಾಹನದಿಂದ ಇಳಿಯದೆಯೇ ಪಾದಚಾರಿ ರಸ್ತೆಗೆ ಅಂಟಿಕೊಂಡಂತೆ ಪ್ರತಿಮನೆಯ ಮುಂದಿರುವ ಪೋಸ್ಟ್ ಬಾಕ್ಸಿಗೆ ಪೋಸ್ಟ್ ಹಾಕಬಹುದು.ಪತ್ರಿಕೆಗಳನ್ನು ಸುರುಳಿ ಸುತ್ತಿ ಅದರ ಕೆಳಗಿರುವ ಒಂದು ವೃತ್ತಾಕಾರದ ತೆರದ ಬಾಯಲ್ಲಿ ತುರುಕಿದರೆ ಮುಗಿಯಿತು.ಎಲ್ಲಾ ಕೆಲಸಗಳನ್ನೂ ಸುಲಭ ಮತ್ತು ವ್ಯವಸ್ಥಿತವನ್ನಾಗಿಸಿಕೊಳ್ಳುವುದರಲ್ಲಿ ಈ ಪಾಶ್ಚಿಮಾತ್ಯರು ಬಹು ನಿಸ್ಸೀಮರು.
ಪ್ರತಿದಿನದ ಕಸವಿಲೇವಾರಿಯ ವಿಷಯದಲ್ಲೂ ಅಷ್ಟೆ. ಪ್ರತಿ ಮನೆಯ ಮುಂದೆ ಸರ್ಕಾರ ನಿಗದಿಪಡಿಸಿದ ಒಂದೇ ರೀತಿಯ ಬೃಹದಾಕಾರದ ಡಸ್ಟ್ ಬಿನ್ ಗಳು. ಅದರೊಳಗೆ ನೇರವಾಗಿ ಕಸ ಹಾಕುವಂತಿಲ್ಲ. ಅದಕ್ಕಾಗಿಯೇ ನಿಗದಿಪಡಿಸಿದ ಪ್ಲ್ಯಾಸ್ಟಿಕ್ ಕವರ್ ಗಳನ್ನು ಕೊಂಡು ಅದರಲ್ಲಿ ಕಸ ಹಾಕಿ ಅದನ್ನು ಆ ಬಿನ್ ನಲ್ಲಿ ಹಾಕಬೇಕು. ಕಸ ತೆಗೆದುಕೊಂಡುಹೋಗುವ ವಾಹನ ಪ್ರತಿ ಮನೆಯ ಮುಂದೆ ಇರುವ ಬಿನ್ ಗಳನ್ನು ಯಂತ್ರದ ಕೈ ಮೂಲಕ ಎತ್ತಿ ಕಸದ ಕವರ್ ಗಳನ್ನು ತನ್ನೊಳಗೆ ಸುರುವಿಕೊಂಡು , ಖಾಲಿ ಬಿನ್ ನನ್ನು ವಾಪಸ್ ಇಡುತ್ತದೆ.ಯಾರೂ ಅದನ್ನು ಕೈಯಲ್ಲಿ ಮುಟ್ಟುವುದಿಲ್ಲ.ಕಸ ಹಾಕುವಾಗಲೂ ಅಷ್ಟೆ ತರಕಾರಿ ಸಿಪ್ಪೆ ಮುಂತಾದವುಗಳನ್ನೂ ಗಾಜಿನ ಅಥವಾ ಕೋಲಾ ಕ್ಯಾನ್ ಗಳನ್ನು ಒಂದೇ ಕವರಿನಲ್ಲಿ ಹಾಕುವಂತಿಲ್ಲ.ಹಾಗೆ ಹಾಕಿದರೆ ಅವರಿಗೆ ದಂಡ ವಿಧಿಸುತ್ತಾರೆ. ಅವರಿಗೆ ಹೇಗೆ ತಿಳಿಯುತ್ತದೆ ಎಂದು ನಾನಂದುಕೊಂಡಿದ್ದೆ. ಆದರೆ ಯಾವ ಮನೆಯ ಕಸ ಎಂಬುದನ್ನು ತಿಳಿದುಕೊಳ್ಳುವ ವ್ಯವಸ್ಥೆ ಅವರಲ್ಲಿದೆ.
ಒಂದು ಒಂದು ದಿನ ವಾಕಿಂಗ್ ಹೊರಟಾಗ ಒಂದುಕಡೆ ಮನೆ ಕಟ್ಟುವ ಕಾರ್ಯ ನಡೆಯುತ್ತಿತ್ತು. ಆದರೆ ಬೆಂಗಳೂರಿನಂತೆ ಕೆಲಸಗಾರರ ದಂಡು ಅಲ್ಲಿರಲಿಲ್ಲ. ಅಲ್ಲಿ ಮನೆಕಟ್ಟುವುದನ್ನು ನೋಡುವುದೇ ಒಂದು ಚಂದದ ಅನುಭವ. ಎಲ್ಲಾ ರೀತಿಯ ಕೇಬಲ್ ಗಳೂ ನೆಲದೊಳಗೇ. ಮನೆ ನಿರ್ಮಾಣದ ನಂತರ ರಸ್ತೆಗಳನ್ನು ಅಲ್ಲಲ್ಲಿ ಅಗೆಯುವುದು ಇಲ್ಲವೇ ಇಲ್ಲ. ಒಂದು Layout ಮಾಡುವಾಗಲೇ ಅಲ್ಲಿನ ರಸ್ತೆಮಾಡುವ ಹಂತದಲ್ಲೇ ಎಲ್ಲಾ ಕೇಬಲ್ ಗಳು ನೆಲದೊಳಗಿರುವಂತೆ ಮಾಡಿರುತ್ತಾರೆ. ಅನಂತರ ಅಲ್ಲಲ್ಲಿ ರಸ್ತೆ ಅಗೆಯುವುದು ಇಲ್ಲವೇ ಇಲ್ಲ ಎನ್ನಬಹುದು.ಮನೆ ಕಟ್ಟುವ ಚಂದದ ಪರಿ ನೋಡುತ್ತಾ ಮುಂದೆ ಹೊರಟೆ. ಅಲ್ಲಿಯೇ ಟ್ರಾಫಿಕ್ ಸಿಗ್ನಲ್ ದಾಟಬೇಕಿತ್ತು.ಮೊದಲ ಬಾರಿ ಅದನ್ನು ದಾಟುವುದು ಕಷ್ಟವೆನಿಸಿತ್ತು. ಕಾರಣ ವೇಗವಾಗಿ ಬರುವ ವಾಹನಗಳು. . ಆದರೆ ಪಾದಚಾರಿಗಳು ಸಿಗ್ನಲ್ ಬಳಿ ಒಂದು ಗುಂಡಿ ಒತ್ತಿದರೆ ಕೆಲವೇ ಸೆಕೆಂಡಿನಲ್ಲಿ ಸುತ್ತಲೂ ಕೆಂಪುದೀಪ ಬಂದು ನಾವು ನಿರಾಳವಾಗಿ ರಸ್ತೆ ದಾಟಬಹುದು. ಈ ವ್ಯವಸ್ಥೆಯನ್ನು ಅಮೆರಿಕದಲ್ಲಿ ನೋಡಿದ್ದರಿಂದ ಇದು ವಿಶೇಷ ಅನಿಸಲಿಲ್ಲ. ಆದರೆ ಗುಂಡಿ ಒತ್ತಿದ ಕೂಡಲೇ ಒಂದು ರೀತಿಯ ಕಟಕಟ ಧ್ವನಿ ಕೇಳಿಸಿತು.ಕುರುಡರು ರಸ್ತೆ ದಾಟುವಾಗ ಗುಂಡಿ ಒತ್ತಿದ ನಂತರ ಈ ದ್ವನಿ ಬಂದು ನಿಂತ ಮೇಲೆ ರಸ್ತೆ ದಾಟಬಹುದು ಎಂಬುದರ ಸೂಚನೆ ಇದು!ಎಂದು ನಂತರ ತಿಳಿಯಿತು.
ಇವೆಲ್ಲವನ್ನೂ ಗಮನಿಸುತ್ತಾ ನಡೆಯುವುದೇ ನನ್ನ ವಾಕಿಂಗ್ ನ ಸ್ವಾರಸ್ಯವನ್ನು ಹೆಚ್ಚಿಸುವ ಅಂಶಗಳಾಗಿದ್ದವು. ಇವೆಲ್ಲದರ ಜೊತೆ ಆ ಮನೆಗಳ ಮುಂದಿರುವ ಹೆಸರಿನ ಮೇಲೂ ಕಣ್ಣಾಡಿಸುತ್ತಾ ಹೊರಟಾಗ ಏನೋ ಹೆಚ್ಚುಕಡಿಮೆ ಇದೆಯಲ್ಲಾ ಎನಿಸಿತು. ಮತ್ತೆ ಗಮನವಿಟ್ಟು ಮನೆಯ ಸಂಖ್ಯೆಯನ್ನು ನೋಡುತ್ತಾ ಹೊರಟರೆ ಆ ಸಂಖ್ಯೆಗಳಲ್ಲಿ ನಿರಂತರತೆಯೇ ಇಲ್ಲ. ಕೆಲವು ದಿನಗಳು ತಲೆಕೆಡಿಸಿಕೊಂಡು ನೋಡಿದ ಮೇಲೆ ತೀಳಿಯಿತು. ಅಲ್ಲಿ ಬೆಸ ಸಂಖ್ಯೆಯ ಮನೆಗಳೆಲ್ಲಾ ರಸ್ತೆಯ ಒಂದು ಕಡೆ, ಸರಿ ಸಂಖ್ಯೆಯ ಮನೆಗೆಳೆಲ್ಲಾ ರಸ್ತೆಯ ಇನ್ನೊಂದು ಕಡೆ ಇರುತ್ತವೆ.ಹೊಸ ಮನೆಗಳನ್ನು ಹುಡುಕುವಾಗ ಬಹಳ ಸುಲಭ. ನಮಗೆ ಬೇಕಾದ ಸಂಖ್ಯೆ ಸರಿಯೋ ಬೆಸವೋ ಗಮನಿಸಿಕೊಂಡರೆ ಸಾಕು!. ಈ ರೀತಿಯ ಸರಿ , ಬೆಸ ಸಂಖ್ಯೆಗಳ ವಿಂಗಡಣೆ ವಿಮಾನ ನಿಲ್ದಾಣಗಳ ಒಳಗೂ ಇದೆ.
ದಿನದಿನದ ವಾಕಿಂಗ್ ನಿಂದ ಈ ಎಲ್ಲ ವಿಚಾರಗಳೂ ತಿಳಿಯುತ್ತಾ ಹೋಯಿತು. ಇವೆಲ್ಲಕ್ಕಿಂತ ವಿಶೇಷಾದದ್ದು ಮತ್ತೊಂದು ಅಂಶ.ಅದು ನನಗಂತೂ ಬಹಳ ಅಚ್ಚರಿ ಹುಟ್ಟಿಸಿತು. ಎಂದಿನಂತೆ ಪ್ರತಿದಿನ ನಾನು ವಾಕಿಂಗ್ ಹೋಗುತ್ತಿದ್ದೆ. ಆಕಾಶದಲ್ಲಿ ಕಣ್ಣಾಮುಚ್ಚಾಲೆ ಆಡುವಂತೆ ಆಗೊಮ್ಮೆ, ಈಗೊಮ್ಮೆ ಸೂರ್ಯ ತನ್ನ ಇರುವಿಕೆಯನ್ನು ತೋರಿಸುತ್ತಿದ್ದ. ಸರಿಸುಮಾರು ಒಂದು ಒಂದೂವರೆ ಗಂಟೆ ವಾಕಿಂಗ್ ಮಾಡಿದರೆ ನಮ್ಮ ಬೆಂಗಳೂರಿನಲ್ಲಿ( ಭಾರತದಲ್ಲಿ ಅನ್ನಬಹುದು)ಸೂರ್ಯ ಎಷ್ಟು ದೂರ ಚಲಿಸಿರುತ್ತಾನೆ ಎಂಬುದು ನಮಗೆಲ್ಲಾ ಗೊತ್ತು. ಆದರೆ ಇಲ್ಲಿ ನನಗರ್ಥವಾಗದ ಒಂದು ಅಂಶ ನನ್ನ ತಲೆ ಕೊರೆಯುತ್ತಿತ್ತು. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ಸೂರ್ಯ ನೆತ್ತಿಯ ಮೇಲೆ ಬಂದದ್ದನ್ನು ನಾ ಕಾಣಲೇ ಇಲ್ಲ. ಅದ್ಯಾವ ಮಾಯೆಯಲ್ಲೋ ನನ್ನ ಕಣ್ಣಿಗೆ ಮಣ್ಣೆರಚಿ ಪೂರ್ವದಿಂದ ಸ್ವಲ್ಪ ಮೇಲೆ ಬಂದು ಇದ್ದಕ್ಕಿದ್ದಂತೆಪಶ್ಚಿಮ ಮತ್ತು ದಕ್ಷಿಣದ ನಡುವಿನ ನೈರುತ್ಯ ದಿಕ್ಕಿನಲ್ಲಿ ಪ್ರತ್ಯಕ್ಷವಾಗುತ್ತಿದ್ದ. ನಾನೇ ಸರಿಯಾಗಿ ನೋಡುತ್ತಿಲ್ಲವೋ ಸೂರ್ಯನೇ ತನ್ನ ದಿನ ನಿತ್ಯದ ಚಲನೆ ಬೇಸರ ಬಂದು ಈ ರೀತಿ ದಿಕ್ಕು ತಪ್ಪುತ್ತಿರುವನೋ ? ಯಾರಲ್ಲಿ ಈ ವಿಷಯ ಹೇಳಿಕೊಳ್ಳುವುದು? ಕಡೆಗೆ ತಡೆಯಲಾರದೆ ನನ್ನ ಸೊಸೆಯನ್ನು ಕೇಳಿದಾಗ ಅವಳು ಆ ದೇಶದಲ್ಲಿ ಸೂರ್ಯನ ಚಲನೆ ಹಾಗೆಯೇ ಎಂದಳು. ಭೌಗೋಳಿಕವಾಗಿ ನಮ್ಮ ದೇಶ ಇರುವ ರೀತಿಗೂ ಆ ದೇಶ ಇರುವ ರೀತಿಗೂ ವ್ಯತ್ಯಾಸವಿದೆ ಎಂದಳು. ನಾವೂ ಭೂಗೋಳ ಓದಿದವಳೇ. ಆದರೆ ಅದನ್ನೆಂದೂ ವಿಶ್ಲೇಷಣೆ ಮಾಡಿದವಳಲ್ಲ. ಆ ಭೌಗೋಳಿಕ ಅಂಶಗಳು ನನಗೆ ಬೇಕಿಲ್ಲ. ಆದರೆ ನೆತ್ತಿಯ ಮೇಲೆ ಸೂರ್ಯ ಬಾರದ ಆ ದೇಶದವರು ಎಷ್ಟೊಂದು ವಂಚಿತರು ಅನಿಸಿತು.ನೆತ್ತಿಯ ಮೇಲೆ ಸೂರ್ಯ ಬಂದ ಎನ್ನುವುದು ಹಿಂದಿನ ಕಾಲದಲ್ಲಿ ನಮ್ಮ ದೇಶದವರಿಗೆ ಎಷ್ಟೊಂದು ವಿಷಯ ತಿಳಿಸುತ್ತಿತ್ತು.ದಿನ ಅರ್ಧ ಕಳೆದಿದೆ., ರೈತನು ಹೊಲದಲ್ಲಿ ಊಟ ಮಾಡುವ ಸಮಯ., ಈ ಸಮಯದಲ್ಲಿ ನೆರಳು ನಮ್ಮ ಕಾಲಬುಡದಲ್ಲಿರುತ್ತದೆ ., ಇತ್ಯಾದಿ, ಇತ್ಯಾದಿ...ಆದರೆ ನೆತ್ತಿಯ ಮೇಲೆ ಬಾರದಿರುವ ಇಂತಹ ಒಂದು ದೇಶವಿದೆಯೆಂದೂ ಅದನ್ನು ನಾನು ನೋಡುತ್ತೇನೆಂದು ನಾನಂತೂ ಭಾವಿಸಿರಲಿಲ್ಲ.ವಿಪರ್ಯಾಸವೆಂದರೆ ಅದೇ ಊರಿನಲ್ಲಿರುವ ಕೆಲವು ಭಾರತೀಯರಲ್ಲಿ ಇದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದಾಗ ಅವರು ಕೊಟ್ಟ ಉತ್ತರ " ಹೌದಾ ಇಲ್ಲಿ ಸೂರ್ಯ ನೆತ್ತಿಯ ಮೇಲೆ ಬರುವುದಿಲ್ಲವಾ ?" ಎಂದು. ಪಾಪ, ಪ್ರತಿನಿತ್ಯ AC ಕಾರುಗಳಲ್ಲಿಯೇ ಓಡಡುವ ಅವರಿಗೆ ತಲೆ ಎತ್ತಿ ಆಕಾಶ ನೋಡುವ ಸಂದರ್ಭವಾದರೂ ಹೇಗೆ ಸಿಗುತ್ತದೆ?ಆಧುನಿಕ ಕಾಲದಲ್ಲಿ ಮನುಷ್ಯ ಪ್ರಕೃತಿಯಿಂದ ಎಷ್ಟೊಂದು ದೂರವಾಗುತ್ತಿದ್ದಾನೆ.ಈಗಾಗಲೇ ನಮ್ಮ ದೇಶದಲ್ಲಿಯೂ ಬೆಳದಿಂಗಳಿನ ಸೌಂದರ್ಯ ನೋಡದ ಅನೇಕ ಮಕ್ಕಳು ಇದ್ದಾರೆ.ಮುಂದೊಂದು ದಿನ ಸೂರ್ಯನು ಯಾವ ದಿಕ್ಕಿನಲ್ಲಿ ಹುಟ್ಟಿ ಯಾವ ದಿಕ್ಕಿನಲ್ಲಿ ಮುಳುಗುತ್ತಾನೆಂದರೆ ಕಣ್ಣು ಕಣ್ಣು ಬಿಡುವ ಸ್ಥಿತಿ ತಲುಪಿದರೆ ಅಚ್ಚರಿಯೇನಿಲ್ಲ
ನಲ್ಲೆ, ನೀ ಕನಸ ಕಾಣು...
9 hours ago

ಚಂದ್ರ ಕಾಂತ ಮೇಡಮ್,
ReplyDeleteನಿಮ್ಮ ಪ್ರವಾಸ ಕಥನವನ್ನು ನಾನು ಮುಂದೆ ಯಾವಾಗಲಾದರೂ[ಸದ್ಯದಲ್ಲೇ]ವಿಮಾನ ಪ್ರಯಾಣ, ವಿದೇಶ ಅಂತ ಹೊರಟರೆ ಕೈಪಿಡಿಯಾಗಿ ಕೊಂಡೈಯಬಹುದು...ಅಷ್ಟು ಚೆನ್ನಾಗಿ ವಿವರವಾಗಿ ಪ್ರತಿಯೊಂದನ್ನು ಬಿಡದೆ ವಿವರಿಸಿದ್ದೀರಿ.....ಇದರ ಪೂರ್ಣ ವಿವರನ್ನು ಮುಂದೆ ಬರೆಯಿರಿ....ಬರವಣಿಗೆ ಕುತೂಹಲ ಮೂಡಿಸುತ್ತಾ ಓದಿಸಿಕೊಂಡು ಹೋಗುವುದಲ್ಲದೇ ನಾವು ಜೊತೆಯಲ್ಲೇ ಇದ್ದು ಅನುಭವಸಿದಂತೆ ಭಾಸವಾಗುತ್ತದೆ...
ಮತ್ತೆ ನನ್ನ ಬ್ಲಾಗಿನಲ್ಲಿ ವ್ಯಾಲೆಂಟೈನ್ಸ್ ಡೇ ಗಾಗಿ ಒಂದು ಪುಟ್ಟ ಕತೆ [ಹೃದಯಸ್ಪರ್ಶಿ, ಹಾಗಂತ ಎಲ್ಲರೂ ಹೇಳಿದ್ದಾರೆ] ಬರೆದಿದ್ದೇನೆ ಸಂಭಂದಗಳನ್ನು ಮೀರಿದ ಗೆಳತನ. ಇದರ ಬಗ್ಗೆ ಇಷ್ಟಪಟ್ಟು ಬರೆದಿದ್ದು....ನೀವು ಬನ್ನಿ ಓದಿ..enjoy ಮಾಡಿ.....
ಚಂದ್ರಕಾಂತರವರೆ..
ReplyDeleteನಾವೇ ಹೋದಂತಿತ್ತು..
ಸರಳವಾಗಿ, ಸೂಕ್ಷ್ಮವಾಗಿ ವಿವರಿಸಿದ್ದೀರಿ...
ನೀವು ಆಸೆ ಪಟ್ಟು ತೆಗೆದುಕೊಂಡು ಹೋದ
ಮನೆಯಲ್ಲಿ ತಯಾರಿಸಿದ
ತಿಂಡಿ ಎಸೆದದುದನ್ನು ಓದಿ ಬೇಜಾರಾಯಿತ್
ಮೊಮ್ಮಗನ ಫೋಟೊ ಹಾಕಿ..
ಅಲ್ಲಿ ಏನೇನು ನೋಡಿದಿರಿ..?
ಅಲ್ಲಿ ಭಾರತೀಯರನ್ನು ಕಂಡರೆ ಹೊಟ್ಟೆಕಿಚ್ಚಂತೆ ನಿಜವೇ?
ನಿಮ್ಮ ಅನುಭವಗಳೇನು..?
ಮುಂದಿನ ಕಂತನ್ನು ಕಾಯುವೆ..
ಚಂದವಾದ ಪ್ರವಾಸ ಕಥನಕ್ಕೆ ಧನ್ಯವಾದಗಳು...
@ಶಿವು ಅವರೆ
ReplyDeleteನಿಮ್ಮ ಪ್ರಥಮ ಪ್ರತಿಕ್ರಿಯೆಗೆ ಧನ್ಯವಾದಗಳು. ಈ ಬರಹವನ್ನು ಪೋಸ್ಟ್ ಮಾಡಲು ತುಂಬಾ ಯೋಚಿಸಿದೆ. ನಮ್ಮ ಅನುಭವಗಳು ಇತರರಿಗೆ ವರದಿಯಂತೆ ಕಂಡರೆ ಎಂಬ ಅಳುಕು ನನ್ನನ್ನು ಯಾವಾಗಲೂ ಕಾಡುತ್ತದೆ. ನನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆ ಈದಿ ಸಮಾಧಾನವಾಯಿತು.
ನೀವು ಸಧ್ಯದಲ್ಲೇ ವಿದೇಶಕ್ಕೆ ಹೋಗುವಂತಾಗಲಿ. ನನ್ನ ಬರಹ ಕೈಪಿಡಿಯಂತೆ ಕಂಡಿದ್ದರೆ Thanks
@ ಪ್ರಕಾಶ್ ಅವರೆ
ReplyDeleteನಿಮ್ಮ ವಿವರವಾದ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಜ, ಮನೆಯಲ್ಲಿ ನಾನೇ ಪ್ರೀತಿಯಿಂದ ಸಿದ್ಧಪಡಿಸಿದ ಪದಾರ್ಥಗಳನ್ನು ಅವರು ನಿರ್ದಾಕ್ಷಿಣ್ಯವಾಗಿ ಬಿಸಾಕಿದಾಗ ನನಗೆ ತುಂಬಾ ದುಃಖವಾಯಿತು.ಆದರೆ ಅಸಹಾಯಕಳಾಗಿದ್ದೆ.
ನಾನು ನನ್ನ ಬ್ಲಾಗ್ ನಲ್ಲಿ ಹಾಕಿರುವ ಎಲ್ಲಾ ಫೋಟೋಗಳೂ ನನ ಮೊಮ್ಮಗನದೇ.
ಅಲ್ಲಿ ನಾವು ಮೊದಲಬಾರಿ ಹೋಗಿದ್ದಾಗ ಕೆಲವು ಸ್ಥಳಗಳನ್ನು ನೋಡಿದೆವು. ಈ ಬಾರಿಯ ಪ್ರವಾಸ ಕೇವಲ ಮುದ್ದುಮೊಮ್ಮಗನೊಂದಿಗೆ ಆಟವಾಡುವುದಕ್ಕೇ ಮೀಸಲಾಗಿತ್ತು.
ಎಂಟು ವರ್ಷಗಳ ಹಿಂದೆ ( ಅವಳಿ ಕಟ್ಟಡಗಳು ಬೀಳುವ ಮುಂಚೆ) ಅಮೆರಿಕಾಗೆ ಹೋದಾಗಿನ ಅನುಭವಗಳು ಅನೇಕವಿವೆ. ಓದಲು ಯೋಗ್ಯವಾಗಿದೆ ಎಂಬ ಭರವಸೆ ಈಗ ಬಂದಿರುವುದರಿಂದ ಅವುಗಳನ್ನೂ ಬರೆಯುತ್ತೇನೆ
ನಾನು ಕಂಡ ಮಟ್ಟಿಗೆ ವಿದೇಶೀಯರು ಯಾರ ಸುದ್ಧಿಗೂ ಹೋಗುತ್ತಿರಲಿಲ್ಲ. ವ್ಯಕ್ತಿಸ್ವಾತಂತ್ರ್ಯಕ್ಕೆ ಹೆಚ್ಚಿನ ಬೆಲೆ ಕೊಡುತ್ತಾರೆ.ಬಹುಶಃ ಕೆಲಸ ಮಾಡುವ ಸ್ಥಳದಲ್ಲಿ ಇಂತಹ ಹೊಟ್ಟೆಕಿಚ್ಚು ಕಾಣುತ್ತದೇನೋ ? ನಮಗಂತೂ ಅಮೆರಿಕದಲ್ಲಿ ಬಹಳ ಒಳ್ಳೆಯ ಅನುಭವಗಳಾದವು. ಅವರ ಮಾನವೀಯತೆ ಹಾಗೂ ನಿಸ್ವಾರ್ಥ ಗುಣ ನಮ್ಮ ಅನುಭವಕ್ಕೆ ಬಂದಿತು
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಚಂದ್ರಕಾಂತರವರೆ..
ReplyDeleteನೀವು ಈ ಲೇಖನ ಬಹಳ ಸಮಯ ಕಾಯಿಸಿ ಹಾಕಿದ್ದೀರಿ..
ನಿಮ್ಮ ಇನ್ನಷ್ಟು ಪ್ರವಾಸ ಕಥನ,
ಹಾಸ್ಯ ಬರಹಗಳು ಬರಲಿ..
ಅನುಭವ ಲೇಖನಗಳೂ ಬರಲಿ..
ನಿಮ್ಮ ಪ್ರತಿಕ್ರಿಯೆ , ಹಾಗೂ ಲೇಖನ ಎರಡೂ ಚೆನ್ನಾಗಿ ಇರುತ್ತವೆ...
ವಂದನೆಗಳು
ಚಂದ್ರಕಾಂತ ಮೇಡಮ್,
ReplyDeleteಪ್ರಕಾಶ್ ಹೆಗಡೆಯವರ್ ಅಭಿಪ್ರಾಯ ಸರಿಯೆನಿಸುತ್ತದೆ....ನೀವು ನಿಮ್ಮ ಅಮೇರಿಕಾ ಅನುಭವ ಬರೆಯಿರಿ....ದೊಡ್ಡವರು[ಬುಷ್....ಇತ್ಯಾದಿ..] ಮಾಡುವ ರಂಪಾಟವನ್ನೇ ನಾವು ಇಡೀ ಅಮೇರಿಕಾ ಅಂದುಕೊಂಡು ಪೂರ್ತಿ ಅಮೇರಿಕಾ ಕೆಟ್ಟದು ಅಂದುಕೊಳ್ಳುತ್ತೇವೆ....ನಿಜಕ್ಕೂ ಅಮೇರಿಕಾ ಮಾತ್ರವಲ್ಲ ಅಫ್‌ಘಾನಿಸ್ಥಾನದ ಜನ ಸಾಮಾನ್ಯರು ಒಳ್ಳೆಯವರೇ.... ದೊಡ್ಡ ವ್ಯಕ್ತಿಗಳ ರಾಜಕೀಯದಿಂದಾಗಿ ನಮಗೆ ಆ ದೇಶದ ಜನರೆಲ್ಲಾ ಹೀಗೆ ಎನ್ನುವ ಕೆಟ್ಟ ಅಭಿಪ್ರಾಯ ಬಂದುಬಿಟ್ಟಿರುತ್ತದೆ.....ಅದಕ್ಕೆ ನಿಮಗೆ ಆದ ನಿಜ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಾಗ ನಿಜಸ್ಥಿತಿ ಗೊತ್ತಾಗುತ್ತದೆ.[ಒಂದು ವಿಚಾರ ಪ್ರಪಂಚದ ಎಲ್ಲಾ ಜನಸಾಮಾನ್ಯರಿಗೂ ಪ್ರೀತಿ ಗೌರವ, ಸ್ವಾಭಿಮಾನ, ಆಸೆ, ಒಳ್ಳೆಯವರಂತೆ ನಡೆದುಕೊಳ್ಳುವುದು, ಸತ್ಯವಾಗಿ ಬಾಳುವುದು ಇತ್ಯಾದಿಗಳೆಲ್ಲಾ ಬೇಕಿರುತ್ತದೆ]..ಖಂಡಿತ ಇದರ ಬಗ್ಗೆ ಬರೆಯಿರಿ.....ಕಾಯುತ್ತೇನೆ....
ಚಂದ್ರಕಾಂತಾ,
ReplyDeleteಆಪ್ತವಾದ ಸೊಗಸಾದ ಶೈಲಿಯಲ್ಲಿ ಅನೇಕ ಮಾಹಿತಿ ನೀಡಿರುವಿರಿ.
ಇನ್ನೂ ಹೆಚ್ಚಿನ ವಿವರಗಳನ್ನು ಓದಲು ಉತ್ಸುಕನಾಗಿದ್ದೇನೆ.
ದಯವಿಟ್ಟು ತಿಳಿಸಿರಿ.
ಚಂದ್ರಕಾಂತಾ ಮೇಡಮ್,
ReplyDeleteಪ್ರವಾಸ ಕಥನ ಚೆನ್ನಾಗಿದೆ.
ಆಸ್ಟ್ರೇಲಿಯಾದ ಜನ ಜೀವನ ಮತತ್ತು ವಿಶೇಶತೆಗಳ ಬಗ್ಗೆ ಬರೆಯಿರಿ. !
ನಾನು ಮೊದಲ ಬಾರಿಗೆ ಅಮೇರಿಕಾಗೆ ವಿಮಾನ ಪ್ರಯಾಣ ಮಾಡುವಾಗಿನ ಅನುಭವಗಳು ನೆನಪಾದವು.
ಚಂದ್ರಕಾಂತ್ ಮೇಡಂ,
ReplyDeleteನಿಮ್ಮ ಪ್ರವಾಸ ಕಥನ ನನ್ನನ್ನೂ ಆಸ್ತ್ರೇಲಿಯಾಗೆ ಕರೆದುಕೊಂಡು ಹೋಗಿದ್ದಲ್ಲದೆ ನನ್ನ ಮೊದಲ ವಿದೇಶಿ ಯಾತ್ರೆಯನ್ನೂ ಜ್ಞಾಪಿಸಿತು. ಈಗಾಗಲೇ ಅರ್ಧ ಬರೆದಿಟ್ಟಿರುವ ನನ್ನ ವಿದೇಶಿ ಯಾತ್ರೆಯ ಅನುಭವವನ್ನು ಹೊತ್ತು ಶೀಘ್ರದಲ್ಲಿ ನನ್ನ ಬ್ಲಾಗಲ್ಲಿ ಹಾಜರಾಗುವೆ.
ಚಂದ್ರಕಾಂತ,
ReplyDeleteನಿಮ್ಮ ಈ ಸವಿವರವಾದ ಲೇಖನದಿಂದ ಅದೆಷ್ಟೋ ವಿಷಯಗಳ ಕುರಿತು ಮಾಹಿತಿ ತಿಳಿದಿಂತಾಯಿತು. ಧನ್ಯವಾದಗಳು ನಮ್ಮೊಂದಿಗೆ ಹಂಚಿಕೊಂಡದ್ದಕ್ಕೆ. ನೆತ್ತಿಯ ಮೇಲೆ ಸೂರ್ಯಮೂಡದಿರುವ ವಿಷಯ ತುಂಬಾ ಅಚ್ಚರಿ ಮೂಡಿಸಿತು! ಎಲ್ಲೋ ಒಂದು ಕಡೆ ಓದಿದ ನೆನಪಾಗುತ್ತಿದೆ ಈ ಕೆಳಗಿನ ಹಾಡಿನ ಸಾಲು..
"ಹೂವು ಅರಳುವವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನವರೆಗೆ"
ಮೇಡಂ,
ReplyDeleteನಾನಿನ್ನೂ ವಿದೇಶ ಪ್ರವಾಸ ಮಾಡಿಲ್ಲ. ಹಾಗಾಗಿ ನಿಮ್ಮ ವಿಮಾನ ಪ್ರಯಾಣದ ಅನುಭವವನ್ನು ತೊಂಬಾ enjoy ಮಾಡಿದೆ. ಹಾಗೆಯೇ ಅಲ್ಲಿನ ಸಣ್ಣ ಸಣ್ಣ ವಿಷಯಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಬರೆದಿದ್ದೀರ. ಅದು ಇನ್ನಷ್ಟು ಇಷ್ಟವಾಯ್ತು. (ಮನೆ ನಂಬರ್, ಟ್ರಾಫಿಕ್ ದಾಟುವುದು, ಮನೆ ಕಟ್ಟುವುದು, ನೆತ್ತಿಮೇಲೆ ಬರದ ಸೂರ್ಯ). ಇದು ಬೇಜಾರು ಅನಿಸುವುದೇ ಇಲ್ಲ. ಇನ್ನಷ್ಟು ಮತ್ತಷ್ಟು ಬರೆಯಿರಿ.
@ ಸುನಾಥ್ ಸರ್
ReplyDeleteನೀವು ನನ್ನ ಬರಹವನ್ನು ಮೆಚ್ಚಿದ್ದು ಸಂತೋಷ.ನಿಮ್ಮ ಪ್ರೋತ್ಸಾಹ ಹೀಗೇ ಇರಲಿ
@ ಹೇಮಾಶ್ರೀ
ReplyDeleteತುಂಬಾ ದಿನ ಆಗಿತ್ತು ನೀವು ನನ್ನ ಬ್ಲಾಗಿಗೆ ಬಂದು. ನಿಮ್ಮ ಹಳೆಯ ಹಾಡುಗಳ ಆಯ್ಕೆ ಬಹಳ ಚೆನ್ನಾಗಿದೆ
ವಿದೇಶದಲ್ಲಿರುವ ನಿಮಗೆ ನನ್ನ ಬರಹ ಇಷ್ಟವಾಗಿದ್ದು ಸಮಾಧಾನದ ವಿಷಯ. ಆಸ್ಟ್ರೇಲಿಯಾ ಹಾಗೂ ಅಮೆರಿಕದ ಮತ್ತಷ್ಟು ವಿವರಗಳನ್ನು ಬರೆಯುತ್ತೇನೆ. ನೀವೂ ನಿಮ್ಮ ಅನುಭವಗಳನ್ನು ಬರೆಯಿರಿ
@ ಬಿಸಿಲಹನಿ
ReplyDeleteಉದಯ್ ಅವರೆ ನನ್ನ ಬರಹ ಇನ್ನೊಮ್ಮೆ ಓದಿದಾಗ ಸಾಕಷ್ಟು ತಪ್ಪುಗಳು ಕಂಡವು.ನಗಬೇಡಿ.ನಿಮಗೆ ನನ್ನ ಆಸ್ಟ್ರೇಲಿಯಾ ಕಥನ ಅಷ್ಟೊಂದು ಇಷ್ಟವಾಯ್ತೆಂದು ಬರೆದಿರುವುದು ಉತ್ಪ್ರೇಕ್ಷೆಯಲ್ಲಾ ಅಂದುಕೊಳ್ಳುವೆ.
ನೀವೂ ನಿಮ್ಮ ವಿದೇಶದ ಅನುಭವಗಳನ್ನು ಬರೆಯಿರಿ
@ ತೇಜಸ್ವಿನಿ
ReplyDeleteನಿಮ್ಮಂತಹ ಸಹೃದಯರು ಇರುವುದರಿಂದಲೇ ನಾನು ಈ ಬರಹ ಬರೆಯಲು ಸಾಧ್ಯವಾಯಿತು. ನನಗೂ ಸೂರ್ಯನ ಆ ಸುತ್ತುವಿಕೆ ಬಹಳ ಅಚ್ಚರಿಯುಂಟು ಮಾಡಿತು
ಧನ್ಯವಾದಗಳು.
@ ಮಲ್ಲಿಕಾರ್ಜುನ
ReplyDeleteನನ್ನ ಲೇಖನವನ್ನು ಅಷ್ಟೊಂದು ಸೂಕ್ಷ್ಮವಾಗಿ ವಿಶ್ಲೇಷಿಸಿರುವುದಕ್ಕೆ ಧನ್ಯವಾದಗಳು. ಬಹಳ ಸಂಕೋಚದಿಂದಲೇ ಬರವಣಿಗೆ ಪ್ರಾರಂಭಿಸಿದೆ. ನೀವು ಹೇಳಿದ ಎಲ್ಲಾ ಅಂಶಗಳೂ - ಅವು ಚಿಕ್ಕವಾದರೂ- ನನಗೂ ಅಷ್ಟೇ ಅಚ್ಚರಿ ಉಂಟು ಮಾಡಿದವು
ಲೇಖನ ಮೆಚ್ಚಿ ಬೇಜಾರಾಗುವುದೇ ಇಲ್ಲ ಎಂದಿರುವುದಕ್ಕೆ ಧನ್ಯವಾದಗಳು
@ ತೇಜಸ್ವಿನಿ
ReplyDeleteನೀವು ತಿಳಿಸಿರುವ ಕವನದ ಸಾಲುಗಳು ಬಹುಶಃ ಕವಿ ಜಿ.ಎಸ್.ಶಿವರುದ್ರಪ್ಪ ಅವರದು. ಬಹಳ ಸುಂದರವಾದ ಕವನ. ಈ ಸಂದರ್ಭಕ್ಕೆ ಹೊಂದುತ್ತದೆ.
hello madam,
ReplyDeleteಚೆನ್ನಾಗಿ ಬರೆದಿದ್ದೀರ ನಿಮ್ಮ ಪ್ರವಾಸದ ಅನುಭವಗಳನ್ನು. ತುಂಬ ವಿವರವಾದ ಲೇಖನ. ಸೂರ್ಯ ನೆತ್ತಿಯ ಮೇಲೆ ಬಾರದೆ ಇದ್ದದ್ದು ತುಂಬ ಆಶ್ಚರ್ಯವಾಯಿತು! ಸ್ಕೂಲಲ್ಲಿ ಭೂಮಿಯ ಕಕ್ಷೆ, ಅಕ್ಷಾಂಶ, ರೇಖಾಂಶ ಓದಿದ್ದೇ ಓದಿದ್ದು!!! ಅದಕ್ಕೆ ಇರಬಹುದು "ದೇಶ ಸುತ್ತು, ಕೋಶ ಓದು " ಅನ್ನುವ ಗಾದೆ ಮಾಡಿರುವುದು :)
[[ಅದರೊಂದಿಗೆ ಮನೆಯಿಂದ ಸಿದ್ಧಗೊಳಿಸಿ ತಂದಿದ್ದ ಅಳಿದುಳಿದಿದ್ದ ಕುಟ್ಟವಲಕ್ಕಿ, ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಮೆಂತ್ಯೆ ಹಿಟ್ಟು, ಗೋದಿ ಹಿಟ್ಟು ಮುಂತಾದುವೆಲ್ಲವನ್ನೂ ಪಕ್ಕಕ್ಕಿಟ್ಟು , ಸೂಟ್ಕೇಸ್ ಮುಚ್ಚಿ ನಂತರ ಆ ಪ್ಯಾಕೆಟ್ ಗಳನ್ನೆಲ್ಲಾ ಒಟ್ಟಿಗೆ ಪಕ್ಕದಲ್ಲಿದ್ದ ಕಸದ ಬುಟ್ಟಿಗೆ ಹಾಕಿದ.]]
ReplyDeleteಛೇ :(
[[ಮೊದಲೇ ಈ ವಿಷಯ ಗೊತ್ತಿದ್ದರೆ ಮನೆಯಲ್ಲಿ ತಯಾರಿಸಿದ ಎಲ್ಲ ಪುಡಿಗಳನ್ನೂ ಹೀಗೆ ಪ್ರಿಂಟ್ ಆಗಿರುವ ಕವರಿನಲ್ಲಿ ತುಂಬಿಸಿಕೊಂಡು ಬರಬಹ್ದಿತ್ತಲ್ಲಾ ಎಂದು ಹಳಹಹಳಿಸಿದೆ. !!]]
ಒಳ್ಳೆ ಉಪಾಯ!
[[ಬೆವರಂತೂ ಇಲ್ಲವೇ ಇಲ್ಲ. ಲೀಲಾಜಾಲವಾಗಿ ಎರಡು ಗಂಟೆ ವಾಕ್ ಮಾಡಬಹುದು.]]
humidity ಜಾಸ್ತಿ ಇದ್ರೆ ಬೆವ್ರು ಜಾಸ್ತಿ ಅಲ್ವ?
[[ಮೊದಲ ಬಾರಿ ನಾನೊಬ್ಬಳೇ ವಿದೇಶಕ್ಕೆ ಹೋಗುವ ಪ್ರಸಂಗ ನನ್ನ ಮುದ್ದು ಮೊಮ್ಮಗನಿಂದ ನನಗೆ ಒದಗಿತು.]]
ಮೊಮ್ಮಗನ ಬಗ್ಗೆ ನೀವೇನೂ ಹೇಳೇ ಇಲ್ಲ.. ಬೇರೆ ಬರಹ ಇದ್ಯೆನೋ, ನೋಡ್ತೀನಿ
ಸೂಪರ್ರಾಗಿದೆ ನಿಮ್ಮನುಭವದ ಬರಹ, ವಂದನೆಗಳು.
--
ಪಾಲ
@ ಗೀತಾ
ReplyDeleteನನಗೂ ಹಾಗೇ ಅನಿಸಿದ್ದು. ನಾವೆಲ್ಲಾ ಭೂಗೋಳ ಓದುವ ರೀತಿಯೇ ಸರಿಯಿಲ್ಲ ಅಂತ ನನ್ನ ಭಾವನೆ. ಅಕ್ಷಾಂಶ, ರೇಖಾಂಶ ಮುಂತಾದುವು ನಮಗೆ ಬರಿಯ ಪದಗಳಾಗಿವೆ. ನೀನು ಹೇಳಿದ ಗಾದೆ ಸಮಯೋಚಿತವಾಗಿದೆ. ಈ ಗಾದೆ ಕೇಳಿದಾಗ -ಶಿವರಾಮ ಕಾರಂತರು ವರ್ಷ ಪೂರ್ತಿ ಸುತ್ತಾಡಿ ನಂತರ ವರ್ಷಕ್ಕೊಂದರಂತೆ ಕಾದಂಬರಿ ಬರೆಯುತ್ತಿದ್ದುದು ನೆನಪಿಗೆ ಬಂತು.
ಪ್ರತಿಕ್ರಿಯೆಗೆ ಧನ್ಯವಾದ.
@ ಪಾಲಚಂದ್ರ
ReplyDeleteನಿಮ್ಮ ಪ್ರತಿಕ್ರಿಯೆ ಬಹಳ ಚೆನ್ನಾಗಿದೆ.ನಾವೆಲ್ಲಾ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುವಾಗ ನಿಮ್ಮ ಹಾಗೆ ವಾಕ್ಯಗುಚ್ಚಗಳಿಗೆ ಆವರಣ ಹಾಕಿ ನಿರ್ದಾಕ್ಷಿಣ್ಯವಾಗಿ ಕಾಮೆಂಟ್ ಬರೆಯುತ್ತೇವೆ.
ನೀವು ಎಷ್ಟು ಗಮನವಿಟ್ಟು ಈ ಬರಹ ಓದಿರುವಿರಿ. ಅದಕ್ಕಾಗಿ ಧನ್ಯವಾದಗಳು.
ಇನ್ನು ಹ್ಯುಮಿಡಿಟಿ ಬಗ್ಗೆ ಬರೆದಿರುವಿರಿ. ನಾನು ಆ ಜಾಗಕ್ಕೆ ಭೇಟಿಕೊಟ್ಟಾಗಿನ ಸೀಮಿತ ಅನುಭವ ಅಷ್ಟೆ ಅದು. ಒಟ್ಟಿನಲ್ಲಿ ಬೆವರಂತೂ ಇರಲೇ ಇಲ್ಲ.
ಮೊಮ್ಮಗನ ಬಗ್ಗೆ ಬರೆದ ಪ್ಯಾರಾ ಎಲ್ಲಿಹೋಯಿತು ಎಂದು ನಮ್ಮವರೂ ಕೇಳಿದರು. ಸಧ್ಯ ಯಾರೂ ಗಮನಿಸಲಿಲ್ಲವಲ್ಲ! ಎಂದುಕೊಳ್ಳುವಷ್ಟರಲ್ಲಿ...ಈಗ ನೀವೇ ಹೇಳಿ ಆ ಅನುಭವವನ್ನು ಈಗ ಬರಹದ ಮಧ್ಯೆ ಸೇರಿಸಿದರೆ ಚಂದವೋ ? ಬೇರೆಯ ಬರಹ ಬರೆದರೆ ಚಂದವೋ?
ಇಷ್ಟೊಳ್ಳೆಯ ಪ್ರತಿಕ್ರಿಯೆಗೆ ಧನ್ಯವಾದಗಳು
ಕಂಪ್ಯೂಟರಿನಲ್ಲಿ ಉದ್ದುದ್ದ ಲೇಖನ ಓದೋ ತಾಳ್ಮೆ ಬರೋದು ಕಷ್ಟ(ನನಗೆ!), ಆದ್ರೂ ನಿಮ್ಮ ಬರಹ ಓದಿಸಿಕೊಂಡು ಹೋಯಿತು.. ಸರಿ, ಮೊಮ್ಮಗನೊಂದಿಗಿನ ಅನುಭವ ಬೇರೆ ಬರೆದ್ರೇ ಚೆಂದ :)
ReplyDeleteಅಂದಹಾಗೆ "ಬತ್ತದ ತೊರೆ" ನನ್ನ ಮೆಚ್ಚಿನ ಕಾರಂತರ ಕಾದಂಬರಿಯಲ್ಲೊಂದು..
ಚಂದ್ರಕಾಂತರವರೆ,
ReplyDeleteತುಂಬಾ ತಡವಾಯ್ತು ಕ್ಷಮಿಸಿ.
ನಿಮ್ಮ ಬರಹ ತುಂಬಾ ಆಪ್ತವಾಗಿದೆ.ಮೊದಲ ಸಲ ಹೋಗೋರಿಗೆ ನಿಮ್ಮ ಲೇಖನ ಖಂಡಿತ ಹೆಲ್ಪ್ ಆಗುತ್ತೆ. ಒಬ್ಬರೇ ವಿದೇಶಕ್ಕೆ ಹೋಗಬೇಕು ಅಂದ್ರೆ ಎಲ್ಲದರಲ್ಲೂ ಹೆಚ್ಚು ನಿಗಾ ವಹಿಸುತ್ತೇವೆ ಅನ್ನಿಸುತ್ತಿದೆ. ನಾನಂತೂ ಇಲ್ಲೀವರೆಗೆ ಜೊತೆಯಾಗಿ ಹಿತವಾಗಿ ಅಂತಾನೆ ಪ್ರಯಾಣ ಮಾಡಿದ್ದು:-).
ಇನ್ನು ನನ್ನ ಮೊದಲ ವಿದೇಶ ಪ್ರಯಾಣ ನನಗೆ ಅತ್ತಿದ್ದು ಬಿಟ್ಟು ಬೇರೇನೂ ನೆನಪಿಲ್ಲ:-(. ನನಗಿಷ್ಟವಾಗಿದ್ದು ಮೊದಲ ಸಲ ತಾಯ್ನಾಡಿಗೆ ಹಿಂತಿರುಗಿದ ಅನುಭವ, ಆ ಸಮಯದಲ್ಲಿ ನೋಡಿದ್ದೆಲ್ಲ ವ್ಹಾವ್ ಅನ್ನೋ ತರಹ ಕಾಣ್ತಿತ್ತು.
@ ಪಾಲಚಂದ್ರ
ReplyDeleteನಿಜ, ನನಗೂ ಉದ್ದ ಬರೆಯೋದು, ಓದೋದು ಅಂದ್ರೆ ಕಷ್ಟ. ನನ್ನ ಬೇರಾವ ಬರಹಗಳೂ ಇಷ್ಟುದ್ದ ಇಲ್ಲ.
ನೀವು ಹೇಳಿದಂತೆ ಮೊಮ್ಮಗನ ಬಗ್ಗೆ ಬೇರೆ ಬರಹ ( ಫೋಟೋಗಳೊಂದಿಗೆ ಪೋಸ್ಟ್ ಮಾಡುವೆ)
ನಿಮ್ಮ ಬ್ಲಾಗಿಗೆ ಬಂದರೆ ಬಹಳ ಸೀರಿಯಸ್ ಬರಹಗಾರರು ನೀವು. ಇನ್ನೂ ಯಾವುದನ್ನೂ ಪೂರ್ತಿ ಓದಿಲ್ಲ. ಓದಿದ ಮೇಲೆ ಪ್ರತಿಕ್ರಿಯಿಸುವೆ
@ ಭಾರ್ಗವಿ
ReplyDeleteಅಂತೂ ನಮ್ಮ ಭಾರಗವಿ ನಮ್ಮ ಲೇಖನ ಓದಿದರು!
ಭಾರ್ಗವಿ ಬಹುಶಃ ನೀವು ಮದುವೆಯಾದ ನಂತರ ಪತಿಯೊಂದಿಗೆ ವಿದೇಶಕ್ಕೆ ಹೋದಿರಿ ಅನಿಸುತ್ತದೆ. ಅದಕ್ಕೆ ಅತ್ತುಕೊಂಡು ಹೋಗಿರುವಿರಿ
ನಾವಂತೂ ಮಗನು ಅಲ್ಲಿ ಕೆಲಸಕ್ಕೆ ಸೇರಿದ ಮೇಲೆ ಎರಡು ತಿಂಗಳ ಮಟ್ಟಿಗೆ ಹೋಗಿದ್ದು. ಆದ್ದರಿಂದ ಅಳು ಬರಲ್ಲ್ಲ:)
@ ಪಾಲಚಂದ್ರ
ReplyDeleteನನಗೂ ಕಾರಂತರೆಂದರೆ ಇಷ್ಟ. ಹಾಗೂ ಬತ್ತದತೊರೆ ನನ್ನ ಮೆಚ್ಚಿನ ಕಾದಂಬರಿ
ನೀವೂ ಕಾರಂತರ ಅಭಿಮಾನಿ ಅಂತ ಕೇಳಿ ಖುಷಿ ಆಯ್ತು.. ಅಂದಹಾಗೇ ನೀವಂದುಕೊಂಡಂತೆ ನಾನೇನೂ ಸೀರಿಯಸ್ ಬರಹಗಾರ ಅಲ್ಲ.. http://palachandra.blogspot.com/2009/01/blog-post_26.html ಇದು ರವಿಕೆ ಕಣದ ಬಗ್ಗೆ ಬರೆದ ಇತ್ತೀಚೆಗಿನ ಬರಹ.. ಬಿಡುವಿದ್ದಾಗ ಓದಿ, ಹಾಸ್ಯ ಅನ್ನಿಸಲೂ ಬಹುದು :)
ReplyDeleteಮೇಡಮ್...ನಿಜ್ವಾಗ್ಲು ಎಷ್ಟು ಚೆನ್ನಾಗಿ ಬರ್ದಿದಿರಾ ಅಂದ್ರೆ...ಪೋಸ್ಟ್ ಮುಗಿದ ಮೇಲೆ...ಅಯ್ಯೋ ಇಷ್ಟ್ ಬೇಗ ಮುಗಿದುಹೋಯ್ತಾ ಅನ್ನಿಸಿತು !
ReplyDeleteಸೂರ್ಯ ನೆತ್ತಿಗೆ ಬರಲೇ ಇಲ್ಲ...ಒಳ್ಳೆ observation ನಿಮ್ಮದು.ಮುಂದಿನ ಪೀಳಿಗೆ ದಿಕ್ಕು ಯಾವುು ಎಂದು ಕೇಳಿದರೆ ಪಿಳಿ ಪಿಳಿ ನೋಡುವುದರ ಬಗ್ಗೆ ಎನೂ ಆಶ್ಚರ್ಯ ಇಲ್ಲ.