Sunday, March 1, 2009

ನಾಮಾಯ ತಸ್ಮೈ ನಮಃ


ಹೆಸರಿನ ವೈಶಿಷ್ಟತೆ ನನ್ನನ್ನು ಯಾವಾಗಲೋ ಬೆರಗಿನಿಂದ ನೋಡುವಂತೆ ಮಾಡಿದೆ.ಮನುಷ್ಯ ಮಾತನಾಡುವುದನ್ನು ಕಲಿತ ನಂತರ ಪರಸ್ಪರರನ್ನು ಬೇರ್ಪಡಿಸಿ ಗುರುತಿಸಲು ಹೆಸರು ಎಂಬುದು ಹುಟ್ಟಿಕೊಂಡಿರಬೇಕು.ಕಾಲ ಸರಳವಾದಷ್ಟೂ ಹೆಸರುಗಳೂ ಸರಳವಾಗಿದ್ದುವು. ದೇವತೆಗಳನ್ನೇ ನೋಡಿ. ಅನೇಕ ದೇವರುಗಳ ಹೆಸರು ತಂದೆಯಿಂದ ಅಥವಾ ಅವರಿರುವ ಊರಿನಿಂದ ನಿರ್ಧಾರಿತವಾಗಿರುತ್ತದೆ. ನೇಗಿಲತುದಿಯಲ್ಲಿ ಸಿಕ್ಕಿದ್ದರಿಂದ ' ಸೀತಾ' ಪರ್ವತರಾಜನ ಮಗಳಾದ್ದರಿಂದ ಪಾರ್ವತಿ, ಗಿರಿರಾಜನ ಮಗಳು ಗಿರಿಜೆ, ಕೋಸಲರಾಜನ ಮಗಳು ಕೌಸಲ್ಯಾ, ದ್ರುಪದನ ಮಗಳು ದ್ರೌಪದಿ , ಪಾಂಚಾಲರಾಜನ ಮಗಳಾದ್ದರಿಂದ ಪಾಂಚಾಲಿ ( ಪಂಚ ಪಾಂಡವರ ಪತ್ನಿಯಾದ್ದರಿಂದ ಪಾಂಚಾಲಿ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ) ಎಲ್ಲರನ್ನೂ ರಮಿಸುವಷ್ಟು ಸುಂದರನಾದ್ದರಿಂದ ರಾಮ , ಕಪ್ಪಗಿದ್ದುದರಿಂದ ಕೃಷ್ನ .. ... ಹೀಗೆ ಹೇಳುತ್ತಾ ಹೋದರೆ ಅಂತ್ಯವಿಲ್ಲದಷ್ಟು ಹೆಸರುಗಳು ಸಿಗುತ್ತವೆ. ಹಿಂದಿನ ಕಾಲದಲ್ಲಿ ಅಜ್ಜನ ಹೆಸರನ್ನು ಮೊಮ್ಮಗನಿಗೆ ಇಡುತ್ತಿದ್ದರು. ಇದರಿಂದ ಹೊಸ ಹೆಸರು ಹುಡುಕುವ ತಾಪತ್ರಯ ತಪ್ಪುತ್ತಿತ್ತು.ಇತಿಹಾಸದ ಪುಟಗಳನ್ನು ತೆರೆದರೆ ಒಬ್ಬನೇ ರಾಜನ ಹೆಸರು ಮತ್ತೆ ಮತ್ತೆ ಬಂದಾಗ ಅವನಿಗೆ ೧,೨೩ ಎಂದು ವರ್ಗೀಕರಿಸುತ್ತಿದ್ದರು.

ಇನ್ನು ದಶಕಗಳ ಹಿಂದಿನ ಸಾಮಾನ್ಯ ಜನರನ್ನು ನೋಡಿದರೆ ಅಚ್ಚ ಕನ್ನಡದ ಹೆಸರುಗಳೇ ಹೆಚ್ಚಾಗಿ ಕಾಣುತ್ತವೆ.ಕೆಂಚ, ಧೂಳ್ಯ,ಕಲ್ಲಪ್ಪ, ಕಲ್ಲವ್ವ, ತಿಪ್ಪ, ಮುದ್ದ, ಮುಂತಾದವು. ನಮಗೆ ಗೊತ್ತಿರುವಂತೆ ನಮ್ಮ ದೇಸೀ ದೇವರಗಳ ಹೆಸರುಗಳೂ ಹೀಗೆ. ಕಾಳಮ್ಮ, ಮಾರಮ್ಮ, ದುಗ್ಗಮ್ಮ,ಎಲ್ಲಮ್ಮ ...ನಂತರ ಆರ್ಯರೊಂದಿಗೆ ಅವರ ದೇವರುಗಳೂ ಬಂದರು. ಇದಕ್ಕಿಂತ ಕುತೂಹಲಕರವಾಗಿರುವುದು ಕೆಲ ದೇವರುಗಳ ಒಕ್ಕಲಿರುವವರ ಮನೆಗಳಲ್ಲಿ ಆ ದೇವರ ಹೆಸರಿನೊಂದಿಗೇ ಮನೆಯವರ ಹೆಸರು ತಳುಕು ಹಾಕಿಕೊಂಡಿರುತ್ತದೆ. ಧರ್ಮಸ್ಥಳದ ಮಂಜುನಾಥನ ಭಕ್ತರಾದ ನಮ್ಮ ಸೋದರತ್ತೆಯ ಮನೆಯಲ್ಲಿರುವವರ ಹೆಸರುಗಳು ಮಂಜುನಾಥ, ಮಂಜುಳ, ಅಣ್ಣಪ್ಪ, ...ಹಿಗಿವೆ. ಇನ್ನು ನಾಗದೇವರನ್ನು ಪೂಜಿಸುವವರನ್ನು ಕೇಳಲೇಬೇಡಿ. ನನ್ನ ಅಣ್ಣನ ಗೆಳೆಯನ ಮನೆಯಲ್ಲಿ ಎಲ್ಲರ ಹೆಸರೂ ‘ನಾಗ’ಇಂದ ಪ್ರಾರಂಭವಾಗುತ್ತಿತ್ತು. ನಾಗಶಯನ, ನಾಗಮನೋಹರ, ನಾಗಚಂದ್ರಿಕಾ, ನಾಗರಾಜ, ನಾಗರತ್ನ .. ಹೀಗೆ. ಆದರೆ ಕೆಲ ಊರುಗಳಲ್ಲಿ ಕೆಲ ಹೆಸರುಗಳೇ ಹೆಚ್ಚು ಪ್ರಚಲಿತವಾಗಿರುತ್ತವೆ ಎಂಬುದು ನನಗೆ ತಿಳಿದಿರಲಿಲ್ಲ. .ನಾವು ಎರಡು ದಶಕಗಳ ಹಿಂದೆ ಗೌರಿಬಿದನೂರಿನಲ್ಲಿದ್ದಾಗ ನಾನೊಂದು ವಿಚಿತ್ರ ಗಮನಿಸಿದೆ. ಅಲ್ಲಿನ ಜನರಲ್ಲಿ ಗಂಗಾ ಹೆಸರೇ ಪ್ರಧಾನವಾಗಿ ಕಾಣುತ್ತಿತ್ತು. ಗಂಗಪ್ಪ, ಗಂಗಮ್ಮ. ದೊಡ್ಡಗಂಗಯ್ಯ, ಪುಟ್ಟಗಂಗಪ್ಪ...ಗಂಗರಾಜು, ಇದೇಕೆ ಹೀಗೆ ?ಎಂದು ಬಹಳ ಆಶ್ಚರ್ಯವಾಯಿತು. ನಮ್ಮ ಮನೆಗೆ ಕೆಲಸಕ್ಕೆ ಬರುವ ಗಂಗಮ್ಮನ ಮನೆಯಲ್ಲಿರುವವರೆಲ್ಲಾ ಗಂಗಾಗಳೇ. ಕಾರಣ ಕೇಳಿದಾಗ ಅವಳು ಕೊಟ್ಟ ಉತ್ತರ ಊರಿನ ಬಳಿ ಇರುವ ಮುದ್ದಗಾನಗುಂಟೆಯತ್ತ ಬೆರಳು ಮಾಡಿ ತೋರಿಸಿತು. ಅಲ್ಲಿನ ಗಂಗಮ್ಮನನ್ನು ಪೂಜಿಸಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಇದೆ. ನಾಗ ದೇವರನ್ನು ಪೂಜಿಸಿದರೆ ಮಕ್ಕಳಾಗುವುದು ಎಂಬ ನಂಬಿಕೆ ಇಲ್ಲವೇ ? ಹಾಗೆ.ಅಲ್ಲಿಯ ಗಂಗಮ್ಮ ಅನೇಕ ಮನೆಗಳವರಿಗೆ ಹಿಂದಿನಿಂದ ಸತ್ಯದ ದೇವರು

ಇಷ್ಟೆಲ್ಲಾ ಪೀಠಿಕೆ ಏಕೆನ್ನುವಿರೋ? ಇತ್ತೀಚೆಗೆ ಒಂದು ದಿನ ಎಂದಿನ ಹಾಗೆ ಕಾಲೇಜಿನಿಂದ ಮನೆಗೆ ಬಂದು ಗಾಡಿ ಒಳಗಿಟ್ಟು ಅಭ್ಯಾಸ ಬಲದಂತೆ ಪೋಸ್ಟ್ ಬಾಕ್ಸ್ ತೆಗೆದು ಯಾವುದಾದರೂ ಪತ್ರವಿದೆಯಾ? ಎಂದು ನೋಡಿದೆ. ಎಷ್ಟೊಂದು ಪೋಸ್ಟ್ ಗಳು!. ಒಂದೆರಡು ಪತ್ರಿಕೆಗಳು, ಮತ್ತೆರಡು ಕ್ರೆಡಿಟ್ ಕಾರ್ಡ್ Statement ಗಳು, ಅವುಗಳ ನಡುವೆ ಒಂದು ವಿದೇಶಿ ಪತ್ರ. ಅದರ ಮೇಲಿದ್ದ 'ಪ್ರತಿಭಾ ರಾಮ್ ' ಹೆಸರು ನನ್ನಲ್ಲಿ ಹೆಸರಿನ ಬಗ್ಗೆ ಇಷ್ಟೊಂದು ಯೋಚಿಸುವಂತೆ ಮಾಡಿತು. ಒಂದು ರೀತಿಯ ಅವರ್ಣನೀಯ ಆನಂದವನ್ನುಂಟು ಮಾಡಿತು. ಆ ಹೆಸರನ್ನು ಕೇಳಿ ಎಷ್ಟೊಂದು ದಿನಗಳಾದವು! ಸಾವಿತ್ರಿ ಪತ್ರ ಬರೆದು ಎಷ್ಟೊಂದು ದಿನಗಳಾದವು? . ಹೌದು ರಘು ತೀರಿಕೊಂಡನಂತರ ಸಾವಿತ್ರಿ ಪತ್ರ ಬರೆದದ್ದೇ ಕಡಿಮೆ. ಒಂದು ಹಂತದಲ್ಲಿ ಪ್ರತಿಭಾ ಹೆಸರು ಬೇಸರವಾಗಿಬಿಟ್ಟಿದ್ದು ಎಷ್ಟು ನಿಜವೋ ಈಗ ಅದರ ನೆನಪು ಸುಂದರವಾಗಿದೆ ಎಂದು ಅನಿಸುತ್ತಿರುವುದೂ ಅಷ್ಟೇ ನಿಜ..

ನಮ್ಮ ಮನೆಯಲ್ಲಿ ಎಲ್ಲ ಮಕ್ಕಳ ಹೆಸರಿಟ್ಟವರೂ ನನ್ನ ಅಪ್ಪನೇ ಅಂತೆ. ಅದರ ಬಗ್ಗೆ ಅಮ್ಮನಿಗೂ ಹೆಮ್ಮೆ. ಎಲ್ಲರ ಹೆಸರೂ ಪರವಾಗಿಲ್ಲ. ನನಗೇಕೆ ಈ ಹೆಸರಿಟ್ಟರು ? ಎಂಬುದು ಸದಾಕಾಲ ನನ್ನನ್ನು ಕಾಡುತ್ತಿದ್ದ ಪ್ರಶ್ನೆ. ಸದಾಕಾಲ ಎಂದರೆ ನಾನು ಕಾಲೇಜಿಗೆ ಸೇರಿದಾಗಿನಿಂದ ನನ್ನನ್ನು ಕಾಡುತ್ತಿದ್ದ ಪ್ರಶ್ನೆ. ಅಲ್ಲಿಯವರೆಗೆ ನನ್ನದೊಂದು ವಿಚಿತ್ರ ಹೆಸರು ಅನ್ನಿಸಿರಲೇ ಇಲ್ಲ. ನಾನು ಚಿಕ್ಕ ಊರಿನಲ್ಲಿ ಪಿಯುಸಿ ಮುಗಿಸುವವರೆಗೆ ನನ್ನ ಹೆಸರಿನ ಬಗ್ಗೆ ನನಗೆ ಗಮನವೇ ಇರಲಿಲ್ಲ. ಆದರೆ ಬೆಂಗಳೂರಿನಂತಹ ಪಟ್ಟಣದಲ್ಲಿ ನನ್ನ ಮುಂದಿನ ವಿದ್ಯಾಭ್ಯಾಸ ಪ್ರಾರಂಭವಾದಾಗ ಈ ಹೆಸರಿನ ಬಗ್ಗೆ ಕೀಳರಿಮೆ ಉಂಟಾಗಲು ಪ್ರಾರಂಭವಾಯಿತು.ಕಾಲೇಜಿನಲ್ಲಿ ನನ್ನ ಹೆಸರು ದಾಖಲಾಗಿ ಕಾರಣಾಂತರಗಳಿಂದ ( ಹಾಸ್ಟೆಲ್ ನಲ್ಲಿ ನನ್ನ ದಾಖಲಾತಿ ಇನ್ನೂ ಆಗದೆ ಇದ್ದುದರಿಂದ) ನಾನು ಕಾಲೇಜಿಗೆ ಹೋಗುವುದು ತಡವಾದಾಗ- ಒಂದೆರಡು ದಿನ ತಡವಲ್ಲ ,ಇಪ್ಪತ್ತು ದಿನಗಳು ತಡವಾದಾಗ ಮೊದಲ ದಿನವೇ ನನ್ನದೊಂದು ಎಡವಟ್ಟು ಹೆಸರು ಎಂಬ ಅರಿವು ಮೂಡಿತು. ಈ ಮಹಾನಗರದಲ್ಲಿ ಯಾರೊಬ್ಬರ ಪರಿಚಯವೂ ಇಲ್ಲದೆ ನಾನು ಮೊದಲ ದಿನ ತರಗತಿಯ ಒಂದು ಮೂಲೆಯಲ್ಲಿ ಮುದುರಿಕೊಂಡು ಕುಳಿತಿದ್ದೆ. ಮೊದಲ ತರಗತಿ ಪ್ರಾರಂಭವಾಯಿತು. ಅಧ್ಯಾಪಕರು ಹಾಜರಿ ಹಾಕಲು ಪ್ರಾರಂಭಿಸಿ ಹೆಸರುಗಳನ್ನು ಕರೆಯಲಾರಂಭಿಸಿದರು. ಅನ್ನಪೂರ್ಣ, ಅರುಣ,.. ಭವ್ಯ.., ಭಾರತಿ.. ಬಾಲು...ಚಂದ್ರಕಾಂತ ಎಂದು ಕರೆದು ಎಂದಿನಂತೆ ಅಂದೂ ನಾನು ಹಾಜರಾಗಿಲ್ಲವೇನೋ ಎಂಬ ಭಾವದಲ್ಲಿ ಒಮ್ಮೆ ಕಣ್ಣೆತ್ತಿ ಹುಡುಗರ ಕಡೆ ನೋಡಿ Absent ಗುರುತು ಮಾಡಬೇಕೆಂದಿದ್ದರೇನೋ ? ಅಷ್ಟರಲ್ಲಿ ನಾನು ಸಣ್ಣ ದನಿಯಲ್ಲಿ 'ಎಸ್ ಸರ್' ಎಂದೆ. ಅಧ್ಯಾಪಕರೊಂದಿಗೆ ಇಡೀ ತರಗತಿ ನನ್ನತ್ತ ಆಶ್ಚರ್ಯದಿಂದ ನೋಡಲಾರಂಭಿಸಿತು. ಏಕೆಂದು ತಿಳಿಯದಿದ್ದರೂ ಎಲ್ಲರ ಗಮನ ನನ್ನ ಮೇಲಿದ್ದುದರಿಂದ ಸಂಕೋಚವಾಯಿತು.ಅಧ್ಯಾಪಕರ ಮುಖದಲ್ಲಿ ಅಚ್ಚರಿಯ ಭಾವ ಏಕೆ ಮೂಡಿತು? ತಿಳಿಯಲಿಲ್ಲ. ಆದರೆ ಇದು ಅಷ್ಟಕ್ಕೇ ನಿಲ್ಲಲಿಲ್ಲ.! ಹಾಗೇ ಹಾಜರಿ ಮುಂದುವರೆಯಿತು. 'ಲಕ್ಷ್ಮೀಕಾಂತ'ಎಂದು ಕರೆದ ಸರ್ ಒಮ್ಮೆ ಕಣ್ಣೆತ್ತಿ ಹುಡುಗಿಯರ ಕಡೆ ನೋಡಿ Absent ಮಾರ್ಕ್ ಮಾಡಬೇಕೆಂದಿದ್ದರೇನೋ ಆದರೆ ಹುಡುಗರ ಕಡೆಯಿಂದ 'ಎಸ್ ಸರ್' ಎಂಬ ಗಡಸು ಧ್ವನಿ ಕೇಳಿಸಿದಾಗ ಮತ್ತೊಮ್ಮೆ ಎಲ್ಲರ ಅಚ್ಚರಿಯ ಕಣ್ಣುಗಳು ಅವನತ್ತ ತಿರುಗಿತು. ಆ ಹುಡುಗನೂ ಅದೇ ದಿನ ತರಗತಿಗೆ ಬರಲಾರಂಭಿಸಿದ್ದ ಎಂದು ಅನಂತರ ತಿಳಿಯಿತು!.

ಹೀಗೆ ಪ್ರತಿಯೊಬ್ಬ ಅಧ್ಯಾಪಕರು ತರಗತಿಗೆ ಬಂದಾಗಲೂ 'ಚಂದ್ರಕಾಂತ' ಎಂದು ಕರೆದು ಹುಡುಗರ ಕಡೆ ನೋಡಿ ,ಅನಂತರ ನಾನು ಉತ್ತರಿಸಿದ ಮೇಲೆ ಆಶ್ಚರ್ಯದಿಂದ ನನ್ನೆಡೆ ನೋಡುವುದು.. ನಡೆದೇ ಇತ್ತು.ಇಷ್ಟು ಸಾಲದೆಂಬಂತೆ ನೋಟೀಸ್ ಬೋರ್ಡ್ ಮೇಲೆ ವಿದ್ಯಾರ್ಥಿಗಳ ರಿಜಿಸ್ಟರ್ ನಂಬರ್ ಪಟ್ಟಿಯನ್ನು ಪ್ರಕಟಿಸಿದಾಗ ನನ್ನ ಹೆಸರು ಹುಡುಗರ ಹೆಸರಿನಲ್ಲಿತ್ತು. ಆ ಕಾಲೇಜಿನಲ್ಲಿ ಹುಡುಗಿಯರ ಹೆಸರನ್ನು ಇಂಗ್ಲೀಷಿನ ಕ್ಯಾಪಿಟಲ್ ಅಕ್ಷರಗಳಲ್ಲಿ ಪ್ರಕಟಿಸುತ್ತಿದ್ದರು. ನನಗಂತೂ ಕಛೇರಿಗೆ ಹೋಗಿ ನನ್ನ ಹೆಸರು ಹುಡುಗರ ಪಟ್ಟಿಯಲ್ಲಿದೆ ಎಂದು ಹೇಳಲೂ ಸಂಕೋಚ. ಅಂತೂ ವಿದ್ಯಾಭ್ಯಾಸ ಮುಗಿಯುವಷ್ಟರಲ್ಲಿ ನನ್ನ ಹೆಸರಿನ ಬಗ್ಗೆ ಪೂರ್ಣವಾಗಿ ಕೀಳರಿಮೆ ಬಂದಿತ್ತು.

ವಿದ್ಯಾಭ್ಯಾಸ ಮುಗಿದ ಕೂಡಲೇ ನನ್ನ ಮದುವೆಯೂ ನಡೆಯಿತು. ಮದುವೆಗೆ ಮುಂಚೆ ನನ್ನವರು’ ಹೆಸರು ಬದಲಾಯಿಸಿಕೊಳ್ಳಲು ಇಷ್ಟವೆ? ಎಂದು ಕೇಳಿದಾಗ
' ಸಧ್ಯ ಮದುವೆಯ ನಂತರ ಗಂಡನ ಊರಿಗೆ ಹೋದಾಗ ನನ್ನ ಹೆಸರು ಕೇಳಿದವರಿಗೆಲ್ಲಾ ಈ ಹೆಸರು ಹೇಳಿ ಅವರ ವಿಚಿತ್ರ ಮುಖಭಾವ ನೋಡುವುದು ತಪ್ಪಿತಲ್ಲಾ ’ಎಂದು ಕೂಡಲೇ ಒಪ್ಪಿಕೊಂಡೆ. ಹೀಗೆ ನಾನು 'ಚಂದ್ರಕಾಂತ 'ಹೋಗಿ 'ಪ್ರತಿಭಾ' ಆದೆ.ಎಷ್ಟೋ ಬಾರಿ ಯಾರಾದರೂ ' ಪ್ರತಿಭಾ ' ಎಂದು ಕರೆದರೆ ತಿರುಗಿ ನೋಡಲೂ ಮರೆಯುತ್ತಿದ್ದೆ. ಹೀಗೆ ತವರು ಮನೆಯವರಿಗೆ ಚಂದ್ರಕಾಂತ , ಅತ್ತೆ ಮನೆಯವರಿಗೆ ಹಾಗೂ ನನ್ನೂರಿನವರಿಗೆ "ಪ್ರತಿಭಾ' ಹೆಸರಿನವಳಾದೆ.ಕೆಲವು ವರ್ಷಗಳುರುಳಿದುವು. ಮೊದಲ ಹೆಸರು ಕ್ರಮೇಣ ಮರೆಯಾಗಿ ಪ್ರತಿಭಾ ಹೆಸರೇ ಹೆಚ್ಚೂ ಕಡಿಮೆ ನನ್ನ ಹೆಸರಾಯಿತು. ನಮ್ಮ ಪ್ರೀತಿಯ ಮಗ ಅಂಬೆಗಾಲಿಡುತ್ತಾ , ನಡೆದಾಡುತ್ತಾ ಶಾಲೆಗೆ ಸೇರಿದ. ಮದುವೆಯಾಗಿ ಆರು ವರುಷಗಳಾದುವು.ತವರಿಗೆ ಆಗೊಮ್ಮೆ , ಈಗೊಮ್ಮೆ ಹೋಗುತ್ತಿದ್ದಾಗ ಮಾತ್ರ ನನ್ನ ಮೊದಲ ಹೆಸರು ಕಿವಿಗೆ ಬೀಳುತ್ತಿತ್ತು.ಈ ಹಂತದಲ್ಲಿ ನನಗೇ ಅರಿವಿಲ್ಲದೆ ನನ್ನ ಮೊದಲ ಹೆಸರಿನ ಬಗ್ಗೆ ನಿಧಾನವಾಗಿ ಪ್ರೀತಿ ಹುಟ್ಟಲಾರಂಭಿಸಿತು. ನಮ್ಮ ಬಾಲ್ಯದಲ್ಲಿ ನಮಗಿಷ್ಟವಿಲ್ಲದ ವಸ್ತುವನ್ನು ಯಾರಿಗಾದರೂ ( ಮನೆಯಲ್ಲಿರುವ ಇತರ ಮಕ್ಕಳಿಗೆ) ಕೊಟ್ಟು, ನಂತರ ಅವರ ಕೈಯಲ್ಲಿ ಆ ವಸ್ತುವನ್ನು ನೋಡಿದಾಗ ಅದರ ಬಗ್ಗೆ ಆಸೆಮೂಡುವುದು ಸಹಜ.ಆದರೆ ನನ್ನ ಮೊದಲ ಹೆಸರಿನ ಅನುಪಸ್ಥಿತಿಯಲ್ಲಿ ಅದು ನನ್ನನ್ನು ತೀವ್ರವಾಗಿ ಸೆಳೆಯಲಾರಂಭಿಸಿತು. ಯಾರಿಗಾದರೂ ಹೇಳಿದರೆ ಹುಚ್ಚೆನುವುದಿಲ್ಲವೇ ? ನನ್ನ ಹೆಸರು ನನ್ನ ಕಿವಿಗೆ ಬೀಳಬೇಕೆನಿಸುತ್ತಿತ್ತು.ಒಂದೆರಡು ಬಾರಿ ನನ್ನ ಹೆಸರು ಕನಸಿನಲ್ಲಿ ಕಾಣಿಸಿಕೊಳ್ಳುತ್ತಾ " ನನ್ನನ್ನು ಮರೆತೆಯಾ ? " ಎಂದು ಕೇಳಿದಂತೆನಿಸುತ್ತಿತ್ತು.ಯಾರಲ್ಲಿ ಹೇಳಿಕೊಳ್ಳುವುದು ?

ಇದೇ ಸಂದರ್ಭದಲ್ಲಿ ನನ್ನ ಮೊದಲ ಹೆಸರಿನೊಡನೆ ಮತ್ತೆ ನಾನು ಕೈಜೋಡಿಸುವ ಸಂದರ್ಭ ತಾನಾಗಿಯೇ ಒದಗಿ ಬಂದದ್ದೊಂದು ವಿಶೇಷ.ನನ್ನ ಮಗ ಶಾಲೆಗೆ ಹೋಗಲಾರಂಭಿಸದ ಮೇಲೆ ಆ ಊರಿನಲ್ಲಿರುವ ಕಾಲೇಜಿನಲ್ಲಿ ಒಂದು ಉಪನ್ಯಾಸಕ ಹುದ್ದೆ ಖಾಲಿ ಇದೆಯೆಂದೂ ಅದು ಅರೆಕಾಲಿಕ ಹುದ್ದೆಯಾದ್ದರಿಂದ ಬಂದವರಾರೂ ಅಲ್ಲಿ ಉಳಿಯುತ್ತಿಲ್ಲವೆಂದೂ ತಿಲಿಯಿತು.ಕಾಲೇಜಿನ ಮಖ್ಯಸ್ಥರು ನಮ್ಮ ಮನೆಗೆ ಬಂದು ಉಪನ್ಯಾಸಕಿಯಾಗುವಂತೆ ಕೇಳಿಕೊಂಡರು. ಉದ್ಯೋಗಸ್ಠ ಮಹಿಳೆಯಾದರೆ ನನ್ನ ಮನೆ, ಮಗುವಿನ ಕಡೆ ಗಮನ ಕಡಿಮೆಯಾಗಬಹುದೆಂದು ನಾನು ಯಾವುದೇ ಉದ್ಯೋಗಕ್ಕೆ ಪ್ರಯತ್ನಿಸಿರಲಿಲ್ಲ. ಆದರೆ ಈಗ ಮಗನೂ ಶಾಲೆಗೆ ಹೋಗುತ್ತಿದ್ದುದರಿಂದ ಕೆಲಸ, ಸಂಸಾರ ಎರಡಕ್ಕೂ ಸಮಯ ಸಿಕ್ಕುತ್ತಿದ್ದುದರಿಂದ ನಾನು ಆ ಕೆಲಸಕ್ಕೆ ಸೇರಿಕೊಂಡೆ. ಕೆಲಸಕ್ಕೆ ಸೇರುವಾಗ ನನ್ನ ಅಂಕಪಟ್ಟಿ ,ಮಾರ್ಕ್ಸ್ ಕಾರ್ಡ್ ನೋಡಿದಾಗ ಕಾಲೇಜಿನವರಿಗೆ ನನ್ನ ಹೆಸರು ಚಂದ್ರಕಾಂತ ಎಂದು ತಿಳಿಯಿತು. ಅವರು ಹೆಸರು ಬದಲಿಸಿಕೊಳ್ಳುವುದು ಕಷ್ಟವಿಲ್ಲವೆಂದು ತಿಳಿಸಿದರು. ಆದರೆ ನಾನು ಮಾತ್ರ ಈ ಸುವರ್ಣಾವಕಾಶ ಕಳೆದುಕೊಳ್ಳಲು ಸಿದ್ಧಳಿರಲಿಲ್ಲ. ಮತ್ತೊಮ್ಮೆ ಆ ಊರಿನಲ್ಲಿ ಪರಿಚಯದವರಿಗೆಲ್ಲಾ ನನ್ನ ಹಳೆಯ ಹೆಸರು ಹೇಳುವ ಸಂದರ್ಭ ಬಂದು ಹಳೆಯ ಘಟನೆಯೇ ಮರುಕಳಿಸುತ್ತಿತ್ತು.ಯಥಾಪ್ರಕಾರ ಎಲ್ಲರೂ ನನ್ನ ಹೆಸರನ್ನು ಕೇಳಿ ನನ್ನನ್ನು ಕೊಂಚ ವಿಚಿತ್ರವಾಗಿಯೇ ನೋಡಿದರೂ ನನಗೆ ಮಾತ್ರ ಮೊದಲಿನಂತೆ ಅವಮಾನ ಎನಿಸಲಿಲ್ಲ. ಕೀಳರಿಮೆಯ ಭಾವ ಮೂಡಲಿಲ್ಲ.

ಅಂದಿನಿಂದ ಎರಡುದಶಕಗಳಲ್ಲಿ ನನ್ನ ಈ ಹೆಸರು ಅನೇಕ ಬಾರಿ ನನ್ನನ್ನು ಪೇಚಿಗೆ ಸಿಲುಕಿಸಿದೆ.ನಾವು ಬೆಂಗಳೂರಿಗೆ ಬಂದು ಪೂರ್ಣಾವಧಿ ಕೆಲಸಕ್ಕೆ ಸೇರಿ, ಹೊಸ ಸಹೋದ್ಯೋಗಿಗಳ ಪರಿಚಯವಾಗಿ , ನನ್ನ ಹೆಸರು ಹೇಳಿದಾಗ ವಿಚಿತ್ರ ಮುಖಭಾವವೇ. ಈ ನಡುವೆ ನನ್ನ ಹೆಸರಿನ ಸ್ತ್ರೀಯರು ಯಾರಾದರೂ ಇದ್ದಾರೆಯೇ ? ಎಂದು ಹಾಗೆ ಸುಮ್ಮನೆ ಕಣ್ಣಾಡಿಸುತ್ತಿದ್ದೆ. ನನ್ನ ಹೆಸರಿನವರೇನೋ ಇದ್ದಾರೆ. ಆದರೆ ಎಲ್ಲರೂ ಪುರುಷರೆ. ಟಿವಿಯಲ್ಲಿ ಪ್ರಖ್ಯಾತ ಧಾರಾವಾಹಿ ಚಂದ್ರಕಾಂತಾ ಪ್ರಸಾರವಾದಾಗ.,ಕಥಾ ನಾಯಕಿ ಚಂದ್ರಕಾಂತ ರಾಜಕುಮಾರಿ ಎಂಬುದು ತಿಳಿದು ಖುಷಿಯಾಯಿತು. ನನ್ನ ಹೆಸರಿನ ಕಾರಣದಿಂದ ನಾನು ಈವರೆಗೂ ಪೇಚು ಎದುರಿಸುತ್ತಲೇ ಬಂದಿರುವೆ.

ಮೊದಲ ಬಾರಿ ಕ್ರೆಡಿಟ್ ಕಾರ್ಡ್ ಮಾಡಿಸುವಾಗ ಎಲ್ಲ ವಿವರಗಳನ್ನೂ ಬರೆದುಕೊಂಡುಹೋದ, ಬ್ಯಾಂಕಿನ ಮಹಾಶಯ. ಕಾರ್ಡ್ ಬಂದಾಯಿತು. ಬರುವ ಮುಂಚೆ ಕ್ರೆಡಿಟ್ ಕಾರ್ಡ್ ನ ಕಡೆಯವರು verification ಮಾಡುವಾಗ ಅತ್ತಕಡೆಯಿಂದ

" Can I speak to Mr. Chandrakaantha " ಎಂದು ಕೋಗಿಲೆ ಕಂಠದಿಂದ ಉಲಿದ ಹೆಣ್ಣು ಧ್ವನಿ ಕೇಳಿಸಿತು. ಎದುರಿಗಿರುವವರು ಇಂಗ್ಲೀಷ್ ನಲ್ಲಿ ಮಾತನಾಡಿದರೂ ನಾನು ಮಾತ್ರ ಕನ್ನಡದಲ್ಲಿಯೇ ಉತ್ತರಿಸುವ ಸ್ವಭಾವದವಳು.ಆದ್ದರಿಂದ

" ಹೇಳಿ, ನಾನೇ ಚಂದ್ರಕಾಂತ " ಎಂದೆ

" ನಾವು ಚಂದ್ರಕಾಂತ ಜೊತೆ ಮಾತನಾಡಬೇಕು " ಮತ್ತದೇ ಮಾತು ಅವಳದು

" ನಾನೇ ಶ್ರೀಮತಿ ಚಂದ್ರಕಾಂತ " ಎಂದೆ.

" ನಮಗೆ ಚಂದ್ರಕಾಂತ ಅವರ ಶ್ರೀಮತಿ ಬೇಡ, ಮಿಸ್ಟರ್ ಚಂದ್ರಕಾಂತ ಬೇಕು " ಎಂದಾಗ ನನ್ನ ಕೋಪ ನೆತ್ತಿಗೇರಿತು.ಆದರೂ ತಾಳ್ಮೆಯಿಂದ ಕಾರ್ಡ್ ನಲ್ಲಿ ಬರೆದ ವಿವರಗಳನ್ನು ಕಣ್ಣುಬಿಟ್ಟು ನೋಡಿ ಎಂದ ಮೇಲೆ ಅವಳು ತಾಳ್ಮೆಯಿಂದ ಇದರಲ್ಲಿ ಮಿಸ್ಟರ್ ಎಂದೇ ಇದೆಯೆಂದಳು. ಕೂಡಲೇ ನಮಗೆ ಕಾರ್ಡ್ ಬೇಡವೆಂದು ಹೇಳಿದೆ. ಕೂಡಲೇ ಎಚ್ಚೆತ್ತುಕೊಂಡ ಅವಳು ಅದನ್ನು ತಿದ್ದುಪಡಿ ಮಾಡಿ ಕಾರ್ಡ್ ಕಳಿಸುವೆನೆಂದಳು

ಇದು ಕೇವಲ ಕಾರ್ಡ್ ವಿಷಯಕ್ಕೆ ಮಾತ್ರವಲ್ಲ ವಿಮಾಪಾಲಿಸಿಯ ವಿಚಾರದಲ್ಲೂ ಹೀಗೇ ಆಗಿದೆ.ಪಾಲಿಸಿ ಮಾಡಿಸುವಾಗ ಆ ಏಜೆಂಟ್ ನನ್ನ ವಿವರಗಳನ್ನು ಸರಿಯಾಗಿಯೇ ಬರೆದಿರುವಳೆಂದು ಕೊಂಡಿದ್ದೆ. ಕೆಲವು ವರ್ಷಗಳ ನಂತರ ಸ್ವಲ್ಪ ಹಣ ಹಿಂದಕ್ಕೆ ಬಂದಾಗ ಅದರಲ್ಲಿ ಮಿಸ್ಟರ್ ಎಂದಿರುವುದನ್ನು ನೋಡಿ ಅದನ್ನು ಸರಿಪಡಿಸುವಲ್ಲಿ ಸ್ವಲ್ಪ ದಿನಗಳೇ ಕಳೆದುವು.

ಕೆಲವು ವರ್ಷಗಳ ಹಿಂದೆ ಪತ್ರಿಕೆಯೊಂದಕ್ಕೆ ನನ್ನ ಲೇಖನವನ್ನು ಕಳಿಸಿದಾಗ ಅವರು ಚಂದ್ರಕಾಂತ್ ಎಂದು ಪ್ರಕಟಿಸಿದ್ದರು.ಸಂಪಾದಕರೊಂದಿಗೆ ಮಾತನಾಡಿದಾಗ ಅವರು ಹೇಳಿದ್ದು
" ಮುಂದಿನ ಬಾರಿ ಸರಿಯಾಗಿ ಪ್ರಕಟಿಸುತ್ತೇವೆ " ಎಂದು. ಮತ್ತೊಂದು ಲೇಖನ ಪ್ರಕಟವಾಯಿತು. ಅದರಲ್ಲಿ ಚಂದ್ರಕಾಂತಾ ಎಂದು ಪ್ರಕಟಿಸಿದ್ದಾರೆ. ಸ್ತ್ರೀಲಿಂಗಕ್ಕೆ ದೀರ್ಘ ಸ್ವರ ಇರಬೇಕಲ್ಲವೇ ? ಎಂದು.ತಮ್ಮ ವ್ಯಾಕರಣ ಜ್ಞಾನವನ್ನು ಪ್ರದರ್ಶಿಸಿದರು ಇನ್ನು ಇವರೊಂದಿಗೆ ಮಾತನಾಡಿ ಪ್ರಯೋಜನವಿಲ್ಲವೆಂದು ಸುಮ್ಮನಾದೆ.

ಕೆಲವೊಮ್ಮೆ ಬ್ಲಾಗ್ ಸಹೃದಯಿಗಳೂ ನನ್ನನ್ನು ಸರ್ ಎಂದೇ ಸಂಬೋದಿಸಿದ್ದಾರೆ.ನಾನು ಮಾತ್ರ ಈಗ ಯಾರನ್ನೂ ತಿದ್ದಲು ಹೋಗುತ್ತಿಲ್ಲ.

ಆದರೆ ತೀರಾ ಇತ್ತೀಚೆಗೆ ಟಿ.ಎನ್.ಸೀತಾರಾಮ್ ತಮ್ಮ ಮುಕ್ತ...ಮುಕ್ತ ಧಾರಾವಾಹಿಯಲ್ಲಿ ಶಾಂಭವಿಯ ಅಣ್ಣನಿಗೆ ಚಂದ್ರಕಾಂತ ಎಂಬ ಹೆಸರಿಟ್ಟುಬಿಟ್ಟಿದ್ದಾರೆ.! ಅದು ಯಾವ ನ್ಯಾಯ ಹೇಳಿ?

ನನಗೇ ಆಶ್ಚರ್ಯವಾಗುವಂತೆ ನನಗೀಗ ಕೀಳರಿಮೆ ಪೂರ್ತಿ ಕಡಿಮೆಯಾಗಿದೆ." ನನಗೇಕೆ ನಮ್ಮಪ್ಪ ಈ ಹೆಸರಿಟ್ಟರೋ" ಎಂದು ತಲೆಚಚ್ಚಿಕೊಳ್ಳುವುದನ್ನೂ ಬಿಟ್ಟಿದ್ದೇನೆ.ಇಂತಹ ಒಂದೊಂದು ಪ್ರಸಂಗ ನಡೆದಾಗಲೂ ನನ್ನ ಹೆಸರಿನ ಮೇಲಿನ ವ್ಯಾಮೋಹ ಹೆಚ್ಚುತ್ತಲೇ ಹೋಗಿದೆ. ಆದ್ದರಿಂದಲೇ " ನಾಮಾಯ ತಸ್ಮೈ ನಮಃ " ಎಂದು ನನ್ನ ಹೆಸರಿಗೊಂದು ನಮಸ್ಕಾರ ಹಾಕಿದ್ದೇನೆ.

36 comments:

  1. ಚ೦ದ್ರಕಾ೦ತಾ ಅವರೇ,
    ನಿಮ್ಮ ಹೆಸರು ಓದಿ ನಾನು ಮೊದಲು ಕನ್ಫ್ಯೂಸ್ ಮಾಡಿಕೊ೦ದಿದ್ದೆ. ಆಮೇಲೆ ತಿಳಿಯಿತು. ನಾಮ ವಿಶೇಷಗಳ ಬಗೆಗಿನ ನಿಮ್ಮ ಬರಹ ಸ್ವಾರಸ್ಯಕರವಾಗಿದೆ. ಕೆಲವರ ಹೆಸರು ಕುಮಾರಿ ಎ೦ದಿರುತ್ತೆ ಅವರು ಮದುವೆಯಾದ ಮೇಲು ಶ್ರೀಮತಿ ಕುಮಾರಿ ಆಗುತ್ತಾರೆ. ಇನ್ನು ಕೆಲವರು ಶ್ರೀಮತಿ ಎ೦ಬ ಹೆಸರಿನವರಿರುತ್ತಾರೆ. ಅವರು ಮದುವೆಗೆ ಮೊದಲು ಕುಮಾರಿ ಶ್ರೀಮತಿ, ಮದುವೆಯಾದ ಮೇಲೆ ಶ್ರೀಮತಿ ಶ್ರೀಮತಿ ಆಗುತ್ತಾರೆ. ಚಿತ್ರವಿಚಿತ್ರ ಹೆಸರುಗಳು ಇನ್ನೂ ಅನೇಕ ಇದ್ದಾವೆ,
    ಉದಾ: ಹುಚ್ಚೇಗೌಡ, ಬೆಟ್ಟೆಗೌಡ, ಕುಳ್ಳೇಗೌಡ, ಮೋಟೇಗೌದ, ಹೀಗೆ ಇನ್ನೂ ಅನೇಕ ಇವೆ.

    ReplyDelete
  2. ಚಂದ್ರಕಾಂತರವರೆ..

    ಇಂಥಹ ಬರವೊಂದನ್ನು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದೆ..

    ನಕ್ಕೂ ನಕ್ಕೂ ಸುಸ್ತಾದೆ..

    ಓದುತ್ತ..ಓದುತ್ತ ನನಗೊಂದು ವಿಷಯ ಬರೆಯಲು ಸ್ಪೂರ್ತಿ ಕೊಟ್ಟಿದ್ದೀರಿ..

    ವಿನೋದಮಯ ಬರಹವನ್ನೂ ಬಹಳ ಚೆನ್ನಾಗಿ ಬರೆಯುತ್ತೀರಿ..

    ನನಗೆ ಬಹಳ ಇಷ್ಟವಾಯಿತು...

    ಚಂದವಾದ ಬರಹಕ್ಕೆ ಅಭಿನಂದನೆಗಳು...

    ಇನ್ನಷ್ಟು ಹಾಸ್ಯ ಬರಹ ಬರೆಯಿರಿ.. ಪ್ಲೀಸ್..

    ReplyDelete
  3. ಹ್ಹೆ ಹ್ಹೆ, ಸಕ್ಕತ್,, ನಾನೂ ಬ್ಲಾಗಲ್ಲಿ ನಿಮ್ಮ ಹೆಸ್ರು ನೋಡಿ ಮೇಲು ಅಂತಾನೇ ಅಂದ್ಕೊಂಡಿದ್ದೆ, ಬರಹ ಓದಿದ ಮೇಲೆ ಗೊತ್ತಾಯ್ತು ನೀವು ಫೀಮೇಲು ಅಂತ :)
    ನಿಮ್ಮ ತಂದೆ "ಚಂದ್ರಕಾಂತ" ಅಂತ ಹೆಸ್ರಿಟ್ಟಿದ್ದು ಎಷ್ಟು ಒಳ್ಳೇದಾಯ್ತು ನೋಡಿ, ಇಲ್ಲಾಂದಿದ್ರೆ ನಮಗೆ ಒಂದು ಒಳ್ಳೇ ಲೇಖನ ಓದೋ ಅವಕಾಶ ತಪ್ತಿತ್ತು,, ಮತ್ತೆ ನಿಮಗೆ, ನೀವು ಮೇಲೆ ತಿಳಿಸಿದ ಎಷ್ಟೋ ಪ್ರಸಂಗಗಳೂ..

    ನನ್ನ ಸ್ನೇಹಿತ ಒಬ್ಬ ಇದಾನೆ.. ಅವ್ನ ಹೆಸ್ರು ಮಾನಸ ಅಂತ! ಅವರಮ್ಮನ್ನ "ಯಾಕೆ ಹುಡುಗಿ" ಹೆಸ್ರು ಇಟ್ಟಿದೀರ ಅಂತ ಕೇಳಿದ್ರೆ ಎರಡನೇ ಮಗು ಹುಡ್ಗ್ಗಿ ಆಗ್ಬೇಕು, ಅದಕ್ಕೆ ಮಾನಸ ಅಂತ ಹೆಸರು ಇಡ್ಬೇಕು ಅಂತ ಅಂದುಕೊಂಡಿದ್ವಿ, ಹುಡುಗ ಹುಟ್ಟಿದ.. ಆದ್ರೆ ಹೆಸ್ರು ಮೊದಲು ಅಂದುಕೊಂಡಿದ್ದೇ ಇಟ್ವಿ ಅಂದ್ರು..

    ಮತ್ತೆ ನನ್ನ ಹೆಸ್ರು ಪಾಲಚಂದ್ರ.. ಫಾಲ ಅಂದ್ರೆ ಹಣೆ, ಚಂದ್ರ ತಿಂಗಳು.. ಹಣೆಗಣ್ಣ ಇದ್ದಂಗೆ ಹೆಣೆತಿಂಗಳ.. ಎಲ್ರೂ ಪಾಲ ಅಂದ್ರೇನು ಅಂತ ಕೇಳಿದಾಗ ನಂಗೂ ಒಂಥರಾ ಆಗುತ್ತೆ.. ಅದಿಕ್ಕೆ ನಾನು ಪಾಲಚಂದ್ರ ಅಂದ್ರೆ ಏನೂ ಅಲ್ಲ, ನನ್ನ ಹೆಸ್ರು ಅಂತ ಹೇಳ್ತೀನಿ..

    --
    ಪಾಲ

    ReplyDelete
  4. ಹಲೋ ಮೇಡಂ,
    ನಿಮ್ಮ ಜೊತೆ ಕೆಲಸ ಮಾಡುವಾಗ ನನ್ನ ಸಹೋದ್ಯೋಗಿ ಮಿತ್ರರು ನಿಮ್ಮ ಹೆಸರನ್ನು ಬಳಸುವಾಗಲೆಲ್ಲ ಹಾಗೂ ನಿಮ್ಮನ್ನು ಖುದ್ದು ನೋಡುವವರಿಗೂ ನಿಮ್ಮನ್ನು ಗಂಡಸು ಎಂದುಕೊಂಡಿದ್ದೆ.ಆದರೆ ನಿಮ್ಮನ್ನು ನೋಡಿದ ಮೇಲೆ ನನ್ನ ಅನುಮಾನ ಪರಿಹಾರವಾಯಿತು."ಹೆಸರಲ್ಲೇನಿದೆ"? ಎಂದು ಅದ್ಯಾವ ಗಳಿಗೆಯಲ್ಲಿ ಶೇಕ್ಷಪೀಯರ್ ಹೇಳಿದನೋ!ನನ್ನ ಪ್ರಕಾರ ಹೆಸರಲ್ಲಿ ಏನೆನೆಲ್ಲ ಇದೆ.ಅಲ್ಲೊಂದು ಮೋಹಕತೆ ಇದೆ, ಮಾರ್ದ್ರವತೆ ಇದೆ, ಎಲ್ಲಕ್ಕಿಂತ ಹೆಚ್ಚಾಗಿ ಲಿಂಗ ಇದೆ.ನೀವು ಇಷ್ಟೆಲ್ಲ ಬರೆದಿದ್ದರಿಂದ ನಾನು ಇಷ್ಟೆಲ್ಲ ಹೇಳಬೇಕಾಯಿತು.ಬೇಸರಿಸಿಕೊಳ್ಳಬೇಡಿ.Anyway thanks for such a wonderful humorous article.I really enjoyed it.

    ReplyDelete
  5. ಪ್ರತಿಭಾ ಅವರೆ,

    ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ನೀವು ಮೊದಲ ಸಲ ನನ್ನ ಬ್ಲಾಗ್‌ನಲ್ಲಿ ಪ್ರತಿಕ್ರಿಯಿಸಿದಾಗ ನಾನೂ ನಿಮ್ಮ ತಪ್ಪಾಗಿ ತಿಳಿದಿದ್ದೆ. ಆಮೇಲೆ ನಿಮ್ಮ ಪ್ರೊಫೈಲ್ ನೋಡಿದಾಗ ಸತ್ಯ ತಿಳಿಯಿತು. ಹೆಸರಲ್ಲೇ ಎಲ್ಲವೂ ಅಡಗಿದೆ ಎಂದು ಎಷ್ಟು ಸರಳವಾಗಿ ಹಾಗೂ ಮನದಟ್ಟಾಗುವಂತೆ ಹೇಳಿದ್ದೀರಿ!! ವಾಸ್ತವಿಕತೆಯ ಜೊತೆಗೆ ಹದವಾಗಿ ಮಿಳಿತವಾದ ಹಾಸ್ಯ ಮನಸೂರೆಗೊಂಡಿತು.

    ReplyDelete
  6. ಪರಾಂಜಪೆಯವರೆ

    ನಿಮ್ಮ ಪ್ರತಿಕ್ರಿಯೆ ಚೆನ್ನಾಗಿದೆ. ನಿಜ ನನ್ನ ಗೆಳತಿಯೊಬ್ಬಳು ಮಗಳಿಗೆ ಶ್ವೇತಾ ಎಂದು ಹೆಸರಿಟ್ಟು ಅವಳು ಸ್ವಲ್ಪ ಕಪ್ಪು ವರ್ಣವಿದ್ದಿದ್ದಕ್ಕೆ ಗೊಣಗಾಡುತ್ತಿದ್ದಳು.

    ReplyDelete
  7. ಪ್ರಕಾಶ್ ಅವರೆ

    ನಿಮ್ಮ ಕ್ಷಿಪ್ರ ಪ್ರತಿಕ್ರಿಯೆಗೆ ಧನ್ಯವಾದಗಳು
    ಬರಹ ಓದಿ ನಕ್ಕಿದ್ದರೆ ಬರೆದದ್ದು ಸಾರ್ಥಕ

    ReplyDelete
  8. ಪಾಲಚಂದ್ರ

    ನಿಮ್ಮ ಹೆಸರಿಗೆ ಒಳ್ಳೆಯ ಅರ್ಥ ಕೊಡುತ್ತಿರುವಿರಿ ಬಿಡಿ. ನಿಜ ಅದು ನನ್ನ ಹೆಸರು ಅಂದರೆ ಸಾಕು ಮಾನಸ ಬಗ್ಗೆ ಹೇಳಿದ್ದು ನಗೆ ತರಿಸಿತು
    ನನ್ನ ಅಪ್ಪ ಈ ಹೆಸರಿಟ್ಟಿದ್ದು ಒಳ್ಳೆಯದಾಯಿತು ಎಂದು ನೀವು ಹೇಳಿರುವುದು ನಿಜವಾದ ಮಾತು
    ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  9. ಒಂದು ಹೆಸರಿನ ಹಿನ್ನಲೆ ಬೆನ್ನಟ್ಟಿ!!!! ತುಂಬಾ ತುಂಬಾ ಚೆನ್ನಾಗಿದೆ!ನನ್ನ ಗೆಳೆಯನ ಹೆಸರು ಸಂದೀಪ ಎ. ಇಂಗ್ಲೀಷ್ ನಲ್ಲಿ ಕರೆಯುವಾಗ "ಎ" ಹಿಂದುಗಡೆ ಬಂದು ಆತ ಸಂದೀಪಾ ಆಗಿದ್ದ!! ಸರ್ ಗಳೆಲ್ಲ ಹುಡ್ಗಿಯರ ಕಡೆ ನೋಡ್ತಿದ್ರು!! ಆಮೇಲೆ ಆತನಿಗೆ ಮಾಮು ಅಂಥ ಹೆಸರು ಬಿತ್ತು ನೋಡಿ!!! :)

    ReplyDelete
  10. ಉದಯ್ ಅವರೆ

    ನೀವೂ ಸಹ ನನ್ನದು ಪುರಷರ ಹೆಸರು ಅಂದುಕೊಂಡಿದ್ದಿರಾ?ಅಂತೂ ನಿಮಗೂ ನನ್ನ ಬರಹ ನಗೆ ತರಿಸಿತಲ್ಲಾ?

    ReplyDelete
  11. ತೇಜಸ್ವಿನಿ
    ನನಗೆ ಶಾಕ್ ಅಗುತ್ತಿಲ್ಲ. ನನಗನ್ನಿಸಿತ್ತು, ಅನೇಕ ಜನ ಹಾಗೆ ಭಾವಿಸಿದ್ದಾರೆ ಎಂದು ಆಯಿತು ನೋಡೋಣ ಎಂದೇ ಬರೆದೆ. ನೋಡಿ ಎಷ್ಟೊಂದು ಜನ ನಿಜ ಹೇಳ್ತಿದ್ದೀರಾ!!!??

    ReplyDelete
  12. ತೇಜಸ್ವಿನಿ
    ನನ್ನ ಬರಹವನ್ನು ಚೆನ್ನಾಗಿ ವಿಶ್ಲೇಷಿಸಿದ್ದೀರಿ. ಧನ್ಯವಾದಗಳು

    ReplyDelete
  13. ನಿತಿನ್ ಮುತ್ತಿಗೆಯವರೆ

    ನನ್ನ ಬ್ಲಾಗ್ ಗೆ ನಿಮ್ಮದು ಮೊದಲ ಹೆಜ್ಜೆ ಅನಿಸುತ್ತದೆ.ಧನ್ಯವಾದಗಳು

    ReplyDelete
  14. ನಾನೇನೂ ಕನ್ನಡದ ಪಂಡಿತನಲ್ಲ. ನನಗೆ ತಿಳಿದ ಮಟ್ಟಿಗೆ "ಕೃಷ್ಣ" ಪುಲ್ಲಿಂಗ, "ಕೃಷ್ಣಾ" ಸ್ತ್ರೀಲಿಂಗ. ಮೊದಲನೆಯದು ಕೃಷ್ಣನ ಹೆಸರು, ಎರಡನೇಯದು ದ್ರೌಪದಿಯ ಇನ್ನೊಂದು ಹೆಸರು. ನಮ್ಮ ಉತ್ತರ ಕರ್ನಾಟಕದಲ್ಲಿ ಹಿಂದೆ (ಅಂದರೆ ನಮ್ಮಜ್ಜಿಯ ಕಾಲದಲ್ಲಿ)ಮಾಧ್ವರ ಮನೆಯ ಹೆಸರುಗಳು "ಕೃಷ್ಣಾ" "ಭೀಮಾ" ಎಂದು ಇರುತ್ತಿದ್ದವು, ಅವೇ ಮುಂದೆ "ಕೃಷ್ಣಾಬಾಯಿ", "ಭೀಮಕ್ಕ" ಆಗುತ್ತಿದ್ದವು. ಹಾಗೆಯೇ ನಿಮ್ಮ ಹೆಸರು , "ಚಂದ್ರಕಾಂತ" ಪುಲ್ಲಿಂಗ, "ಚಂದ್ರಕಾಂತಾ" ಅಥ್ವಾ "ಚಂದ್ರಕಾಂತೆ" ಆದರೆ ಸ್ತ್ರೀಲಿಂಗ ಎಂದು ನನ್ನ ಅಂಬೋಣ.

    ಮಜಾ ಅಂದ್ರೆ, "ಡರ್" ಚಿತ್ರದ ಹಾಡು "ತು ಹೈ ಮೇರೀ ಕಿರನ್" ಇದೆಯಲ್ಲ, ಅದು ಗಂಡಸು ಗಂಡಸಿಗೆ ಹಾಡಿದ್ದು ಎಂದು ಅಂದುಕೊಂಡಿದ್ದೆ!

    ನಮ್ಮ ಮನೆಯ ನೆಂಟರು ಪಂಜಾಬಿಗಳು. ಗಂಡನ ಹೆಸರು "ಜಸ್ವಿಂದರ್", ಹೆಂಡತಿಯ ಹೆಸರೂ "ಜಸ್ವಿಂದರ್"..ಆತ ಸಿಂಗ್, ಆಕೆ ಕೌರ್, ಅಷ್ಟೇ ವ್ಯತ್ಯಾಸ.

    ಹೋಗಲಿ ಬಿಡಿ, ಹೆಸರಲ್ಲೇನಿದೆ ಎಂದು ಶೇಕ್ಸ್‍ಪಿಯರ್ ಹೇಳಿಲ್ಲವೇ?

    - ಕೇಶವ (www.kannada-nudi.blogspot.com)

    ReplyDelete
  15. ನಿಮ್ಮ ಮುಂಚಿನ ಎರಡು ಲೇಖನಗಳಿಗೂ ನಾನು ಪ್ರತಿಕ್ರಿಯಿಸಲು ಆಗಲಿಲ್ಲ.

    ಲೇಖನಗಳು ಬಹಳ ಚೆನ್ನಾಗಿ ಮೂಡಿಬರುತ್ತಿವೆ. ಹಾಗೆಯೇ ಬ್ಲಾಗಿನ ಹೊಸ ಬಣ್ಣ, ವಿನ್ಯಾಸ ಕೂಡ ಸುಂದರವಾಗಿದೆ. :)

    ReplyDelete
  16. ನನ್ನತ್ತೆಯ ಮಗಳು ತನಗೆ ಗಂಡು ಮಗು ಹುಟ್ಟಿದರೆ "ಅಗ್ನಿ" ಎಂದು ಹೆಸರಿಡುತ್ತೇನೆ ಅನ್ನುತ್ತಿದ್ದಳು. ಆದರೆ ಹೆಣ್ಣು ಮಗು ಜನಿದರೂ ಅಗ್ನಿ ಎಂದೇ ಹೆಸರಿಟ್ಟಳು!
    ನಿಮ್ಮ ಹೆಸರಿನ ಬಗ್ಗೆ ಬರೆಯುತ್ತಾ ನಾವೆಲ್ಲಾ ಹೆಸರಿನ ಬಗ್ಗೆ ಮೆಲಕು ಹಾಕುವಂತೆ ಮಾಡಿದ ನಿಮ್ಮ ಬರಹಕ್ಕೆ ಧನ್ಯವಾದಗಳು. ನನಗೆ ನನ್ನ ತಾತನ ಹೆಸರಿಟ್ಟಿದ್ದಾರೆ.

    ReplyDelete
  17. ಚಂದ್ರಕಾಂತಾ,
    ನಾನು ನಿಮ್ಮ blogನಲ್ಲಿ ಪ್ರತಿಕ್ರಿಯೆ ಬರೆಯುವಾಗ ಅಥವಾ ನನ್ನ blogನಲ್ಲಿ ನಿಮ್ಮ ಪ್ರತಿಕ್ರಿಯೆಗೆ ಉತ್ತರಿಸುವಾಗ ‘ಚಂದ್ರಕಾಂತಾ’ ಎಂದೇ ಸಂಬೋಧಿಸುತ್ತಿದ್ದನ್ನು ನೀವು ಬಹುಶಃ ಗಮನಿಸಿರಬೇಕು. ಚಂದ್ರಕಾಂತಾ ಎನ್ನುವದೇ ಸರಿಯಾದದ್ದು.ಯಾಕೆಂದರೆ ಸ್ತ್ರೀಯರ ಹೆಸರುಗಳು ‘ಆ’ಕಾರಾಂತವಾಗಬೇಕು.
    ಕನ್ನಡ ವಿಕಿಪೀಡಿಯಾದಲ್ಲಿ ನಾನು ಹಳಗನ್ನಡ ಸಾಹಿತಿ ‘ನೇಮಿಚಂದ್ರ’ನ ಬಗೆಗೆ ಒಂದು brief sketch ಬರೆದಿದ್ದೆ. ಆಬಳಿಕ ಹೊಸಗನ್ನಡ ಲೇಖಕಿ ‘ನೇಮಿಚಂದ್ರ’ರ ಬಗೆಗಬರೆಯಲು ಹೊರಟಾಗ ಒಳ್ಳೆ ಫಜೀತಿಯಾಯಿತು. ಈ ಲೇಖಕಿ ‘ನೇಮಿಚಂದ್ರಾ’ ಎಂದು ಬರೆದುಕೊಳ್ಳಬೇಕು.ಆದರೆ ಹಳೆ ಮೈಸೂರಿನಲ್ಲಿರುವ
    ರೂಢಿಯಂತೆ ‘ನೇಮಿಚಂದ್ರ’ ಎಂದು ಬರೆದುಕೊಳ್ಳುತ್ತಾರೆ. ಅವರು ಬರೆದುಕೊಳ್ಳುವಂತೆಯೇ title ಕೊಡಲು ಹೋದರೆ, ಅದನ್ನು ಸ್ವೀಕರಿಸಲು ವಿಕಿಪೀಡಿಯಾ ಸಿದ್ಧವಿರಲಿಲ್ಲ. ಕೊನೆಗೆ ಕಂಸಿನಲ್ಲಿ ಏನೊ ಒಂದು ವೈಶಿಷ್ಟ್ಯ ಬರೆದು
    ಆ ಲೇಖನವನ್ನು ನಾನು ಹಾಕಬೇಕಾಿತು.
    ಇರಲಿ, ನಿಮ್ಮ ಲೇಖನ ಸ್ವಾರಸ್ಯಕರವಾಗಿದೆ. ಮನುಷ್ಯರ ಮನಸ್ಸಿನ ಹಲವು ಮುಖಗಳನ್ನು ವಿನೋದಪೂರ್ವಕವಾಗಿ ತೋರಿಸುತ್ತದೆ.

    ‘ಚಂದ್ರಕಾಂತಾ’ ಹೆಸರಿಗೆ ಮೂರು ಅರ್ಥಗಳಿವೆ:
    (೧)ಚಂದ್ರನಿಗೆ ಪ್ರಿಯಳಾದವಳು, ಅಂದರೆ ರೋಹಿಣಿ ನಕ್ಷತ್ರ
    (೨)ಚಂದ್ರನು ಯಾರಿಗೆ ಪ್ರಿಯನಾಗಿರುವನೊ ಆ ಪರಶಿವನ ಪತ್ನಿ, ಪಾರ್ವತಿ
    (೩)ಚಂದ್ರನ ಕಾಂತಿ ಅಂದರೆ ಬೆಳದಿಂಗಳು.

    ನಿಮಗೆ ಮುದ್ದಾದ ಹೆಸರನ್ನು ಕೊಟ್ಟ ನಿಮ್ಮ ತಂದೆಯವರಿಗೆ ಅಭಿನಂದನೆಗಳು.

    ReplyDelete
  18. ಹ್ಹಾ ಹ್ಹಾ ಹ್ಹಾ..
    ನಿಜವಾಗಲು ನಾನು ಎಲ್ಲರ ಹಾಗೆಯೇ ತಿಳಿದೆದ್ದೆ.
    ನಿಮ್ಮ "ನಾಮಾಯ ತಸ್ಮೈ ನಮಃ" ಬರಹ ತುಂಬಾ ಚನ್ನಾಗಿದೆ.
    ನನಗೂ ಕೂಡ ನನ್ನ ಹೆಸರೆಂದರೆ ತುಂಬಾ ಇಷ್ಟ. I'm proud of my name.

    ReplyDelete
  19. ಚಂದ್ರಕಾಂತಾ ಮೇಡಮ್,

    ಕೆಲಸದಲ್ಲಿ ಸ್ವಲ್ಪ ಬ್ಯುಸಿಯಾಗಿದ್ದರಿಂದ ನಿಮ್ಮ ಬ್ಲಾಗಿಗೆ ಬರುವುದು ತಡವಾಯಿತು...ಕ್ಷಮೆಯಿರಲಿ.....

    ನಿಮ್ಮ ಈ ಹೆಸರಿನಿಂದಾದ ಪಡಿಪಾಟಲು ನೋಡಿ ಸಿಕ್ಕಾಪಟ್ಟೆ ನಗುಬಂತು...'
    ಬಾಲ್ಯದಲ್ಲಿ ಕಾಲೇಜಿನಲ್ಲಿ, ಮದುವೆಯಲ್ಲಿ,, ಬ್ಯಾಂಕಿನದಂತೂ ಬಲು ತಮಾಷೆಯೆನಿಸಿತು....
    ಮತ್ತೆ ನನ್ನ ಶ್ರಿಮತಿಯ ಆಣ್ಣನ ಹೆಸರು "ಅಣ್ಣಪ್ಪ" ಅವನಿಗೆ ಸಿಗುವ ಹೆಂಡತಿಯು ಗಂಡನನ್ನು ಪ್ರೀತಿಯಿಂದ ಹೆಸರಿಡಿದು ಕರೆಯುವಂತವಳಾದರೆ ಅವನ ಸ್ಥಿತಿ ಮುಂದೆ ಏನಾಗುತ್ತದೋ..ನೋಡಬೇಕು....
    ಮತ್ತೆ ಬ್ಲಾಗಿನಲ್ಲಿ ಮೊದಲಿಗೆ ನಿಮ್ಮನ್ನು " ಚಂದ್ರಕಾಂತ ಸರ್ " ಅಂತ ಕರೆದವನು ನಾನೆ ಇರಬೇಕು...ನನ್ನ ಬ್ಲಾಗಿನ " children of heavan" ಚಿತ್ರದ ವಿಮರ್ಶೆಗೆ ಪ್ರತಿಕ್ರಿಯಿಸಲು ನೀವು ಮೊದಲನೆ ಬಾರಿ ನನ್ನ ಬ್ಲಾಗಿಗೆ ಬಂದಾಗ ನಾನು ಹಾಗೆ ಬ್ಲಾಗಿನಲ್ಲಿ ಹಾಕಿದ್ದೆ....ಅದನ್ನು ಮತ್ತೆ ನೀವು ಬ್ಲಾಗಿಗೆ ಬಂದು ನನ್ನನ್ನು ತಿದ್ದೀದ್ದೀರಿ......

    ನನ್ನಮ್ಮ ಹೇಳುತ್ತಾರೆ "ಹೆಸರಲ್ಲೇನಿದೆಯೋ ನಿನ್ನ ತಲೆ, ಹೆಸರುಬೇಳೆಕಾಳು " ಅನ್ನುತ್ತಾರೆ.....ಅವರಿಗೆ ಇದೆಲ್ಲಾವನ್ನು ಹೇಳಿದರೆ ಏನನ್ನುತ್ತಾರೋ....

    ಒಟ್ಟಾರೆ ಒಂದು ಸುಂದರ ತಿಳಿಹಾಸ್ಯ ಹಾಸ್ಯಬರಹ ಓದಿದಂತಾಯಿತು..

    ಅಂದ ಹಾಗೆ ನಾಳೆ ನಡೆದಾಡುವ ಹೊಸ ಭೂಪಟಗಳು ಬರುತ್ತಿವೆ....ನೀವು ನೋಡಲು ಬರುತ್ತಿರಲ್ಲ.....ಕಾಯುತ್ತಿರುತ್ತೇನೆ....

    ReplyDelete
  20. ನಮಸ್ಕಾರ ಕೇಶವ ಕುಲಕರ್ಣಿಯವರೆ

    ನಿಮ್ಮ ಹೆಸರನ್ನು ಬೇರೆಯವರ ಬ್ಲಾಗ್ಇನಲ್ಲಿ ನೋಡುತ್ತಿದ್ದೆ. ಈಗ ನನ್ನ ಹೆಸರು ನಿಮ್ಮನ್ನು ಇಲ್ಲಿಯವರೆಗ ಕರೆತಂದದ್ದು ಸಂತಸ ತಂದಿದೆ. ನೀವು ಹೇಳಿರುವುದೆಲ್ಲಾ ಸರಿ. ಸಂಸ್ಕೃತ ಪದಗಳಲ್ಲಿ ಪುಲ್ಲಿಂಗ ರೂಪದ ಪದಗಳು ಒಂದು ಅಕಾರ ಸೇರಿದರೆ ಸ್ತ್ರೀಲಿಂಗವಾಗುತ್ತವೆ.ಇನ್ನು ನನ್ನ ಹೆಸರಿನ ಬಗ್ಗೆ ಮುಂದೆ ಬರೆಯುವೆ.

    ReplyDelete
  21. @ಮುತ್ತುಮಣಿ

    ಹೇಮಾ ನನ್ನ ಮೇಲೆ ನಿನಗೆ ಕೋಪ ಅಥವಾ ಅಸಮಾಧಾನ ಎಂದುಕೊಂಡಿದ್ದೆ.
    ನೀನು ಬಹಳ busyಯಾಗಿರಬಹುದು ಎಂದು ಆಮೇಲೆ ಅಂದುಕೊಂಡೆ.

    ನನ್ನ ಬ್ಲಾಗಿನ ಹೊಸ ರೂಪ ಹೇಗಿದೆಯೋ ಅನಿಸುತ್ತಿತ್ತು. ಚೆನ್ನಾಗಿದೆ ಎಂದು ಕೇಳಿ ಖುಷಿಯಾಯಿತು.

    ನನ್ನ ಬ್ಲಾಗಿನ ಬರಹಗಳು ಚೆನ್ನಾಗಿವೆ ಎಂದಿರುವೆ. ಅದಕ್ಕೆ ನಿನಗೇ Thanks ಹೇಳಬೇಕು.ನೀನು ನನಗೆ ಒತ್ತಾಸೆ ಕೊಡದಿದ್ದರೆ ನಾನು ಬ್ಲಾಗ್ ತೆರೆಯುತ್ತಲೇ ಇರಲಿಲ್ಲ
    ಮತ್ತೊಮ್ಮೆ ಧನ್ಯವಾದಗಳು

    ReplyDelete
  22. ಸುನಾಥ್ ಸರ್

    ನನ್ನ ಲೇಖನ ಹೆಸರು ಎರಡನ್ನೂ ಮೆಚ್ಚಿದ್ದಕ್ಕೆ ಧನ್ಯವಾದಗಳು.
    ನೀವು ನನ್ನ ಹೆಸರಿಗೆ ಎಷ್ಟೊಂದು ಅರ್ಥ ಕೊಟ್ಟಿರುವಿರಿ.ನಮ್ಮ ತಂದೆಗೆ ಈ ಅರ್ಥ ಗೊತ್ತಿತ್ತೇನೋ ಎಂದು ಈಗ ಅನಿಸುತ್ತಿದೆ. ಏಕೆಂದರೆ ನನ್ನ ಜನ್ಮ ನಕ್ಷತ್ರ ರೋಹಿಣಿ!!
    .
    ನನ್ನ ಹೆಸರಿನ ನಿಜವಾದ ಅರ್ಥ Moonstone ಎಂದು. ಅದು ಒಂದು ಶಿಲೆ. ಇದು ಒಂದು ಕವಿಸಮಯ. ಈ ಶಿಲೆ ಸಾಮಾನ್ಯ ಶಿಲೆ ಅಲ್ಲ.ಅಮೃತಶಿಲೆ. ಬೆಳದಿಂಗಳ ರಾತ್ರಿಯಲ್ಲಿ ತಂಪಾದ ರಸ ಜಿನುಗುವ ಶಿಲೆ. ಆದ್ದರಿಂದ ‘ ಚಂದ್ರಕಾಂತ’ ಪುಲ್ಲಿಂಗ; ‘ಚಂದ್ರಕಾಂತಾ’ ಸ್ತ್ರೀಲಿಂಗೆ ಎಂಬ ವಾದ ಒಪ್ಪಲಾಗುವುದಿಲ್ಲ ಅಲ್ಲವೇ ಸರ್?

    ಕೇಶವ ಕುಲಕರ್ಣಿಯವರು ‘ಚಂದ್ರಕಾಂತೆ’ ಸ್ತ್ರೀಲಿಂಗ ಎಂದಿದ್ದಾರೆ. ಅದೂ ಸರಿಯಲ್ಲ ಅನಿಸುತ್ತೆ.

    ನನ್ನ ಬರಹದ ಬಗ್ಗೆ ಇಷ್ಟೊಂದು ವಿವರವಾಗಿ ಬರೆದದ್ದಕ್ಕೆ ಧನ್ಯವಾದಗಳು

    ReplyDelete
  23. ಮಲ್ಲಿಕಾರ್ಜುನ ಅವರೆ

    ನಿಜ, ಎಲ್ಲರೂ ತಮ್ಮ ಹೆಸರನ್ನು, ಇತರರ ಹೆಸರನ್ನು, ವಿಚಿತ್ರ! ಹೆಸರುಗಳನ್ನು ಮೆಲಕು ಹಾಕುತ್ತಿರುವುದು ಸಂತಸದ ವಿಚಾರ.ಅಗ್ನಿ,ಪೃಥ್ವಿ ಮುಂತಾದವುಗಳು ಹುಡುಗ , ಹುಡುಗಿಯರಿಬ್ಬರಿಗೂ ಹೊಂದುತ್ತವೆ. ಆದರೆ ಇತ್ತೀಚೆಗೆ ನನಗೆ ತಿಳಿದವರೊಬ್ಬರು ತಮ್ಮ ಮಗಳಿಗೆ ‘ಅನಗ’ಎಂದು ಹೆಸರಿಟ್ಟರು. ಅರ್ಥವೇನೆಂದರೆ ಲಕ್ಷ್ಮಿ ಎಂಬ ಉತ್ತರ ಬಂತು. ಎಲ್ಲಿದೆ ಹಾಗೆ? ಎಂದರೆ ಲಲಿತಾ ಸಹಸ್ರನಾಮದಲ್ಲೋ ಇನ್ಯಾವುದರಲ್ಲೋ ಇದೆ. ಹಾಗಿದ್ದಮೇಲೆ ಅದು ಲಕ್ಷ್ಮಿಯ ಹೆಸರಲ್ಲವೇ ? ಎಂದು ನನ್ನನ್ನೇ ಪ್ರಶ್ನಿಸಿದರು. ಕಡೆಗೆ ನಾನು ಅದು ‘ಅನಘ’ಪಾಪವಲ್ಲದ್ದು, ಪುಣ್ಯ ಎಂದರ್ಥ ಎಂದರೆ ಅವರ ಮುಖ ಪೆಚ್ಚಾಯಿತು. ನಾನೇ ಅವರಿಗೆ " ಪುಣ್ಯ, ಪರಿಶುದ್ಧವಾಗಿರುವುದೇ ದೇವರ ಲಕ್ಷಣವಲ್ಲವೇ ? ಅದನ್ನು ಲಕ್ಷ್ಮಿ ಎಂದರೆ ತಪ್ಪಿಲ್ಲ " ಎಂದು ಸಮಾಧಾನ ಹೇಳಿ ಕಳಿಸಿದೆ.

    ಈಗಿನ ಕಾಲದಲ್ಲೂ ತಾತನ ಹೆಸರಿಡುವುದು ಆಶ್ಚರ್ಯ ಉಂಟುಮಾಡಿತು.

    ReplyDelete
  24. ಶಿವು ಅವರೆ

    ನಿಜ, ನೀವೇ ನನ್ನನ್ನು ಸರ್ ಎಂದು ಕರೆದದ್ದು. ಆದರೆ ಎಷ್ಟೊಂದು ಜನ ನನ್ನನ್ನು " ಸರ್ " ಎಂದುಕೊಂಡಿದ್ದಾರೆ ನೋಡಿ

    ReplyDelete
  25. ಶಿವು ಅವರೆ

    ನನ್ನ ಲೇಖನ ನಿಮ್ಮಲ್ಲಿ ನಗೆ ಉಕ್ಕಿಸಿದ್ದರೆ ಬರೆದದ್ದು ಸಾರ್ಥಕ ಎಂದುಕೊಳ್ಳುವೆ

    ReplyDelete
  26. ನನಗೆ ನಿಮ್ಮ ಮೇಲೆ ಕೋಪವೇ!? ನನ್ನ ಬ್ಲಾಗಿಗೆ ಬನ್ನಿ, ಉತ್ತರ ಬರೆದಿದ್ದೇನೆ :)

    ಇನ್ನೊಂದು ವಿಷಯ ಹೇಳಬೇಕಿತ್ತು,
    ನಿಮಗೆ ಎರಡು ಹೆಸರಿದೆ ಎಂದಿದ್ದೀರಿ, ಆದರೆ ನನಗೆ ಅಥವಾ ವಿವಿಎನ್ ನ ಹಲವು ವಿದ್ಯಾರ್ಥಿಗಳಿಗೆ, ’ಚಂದ್ರಕಾಂತಾ ಮೇಡಮ್’ ಎಂಬುದೇ ಪ್ರಿಯ. ಹೇಳುವಾಗ ದೀರ್ಘ ಸಹಜ ತಾನೆ?

    ReplyDelete
  27. ಹೇಮಾ
    ನಿನಗೆ ಉತ್ತರಿಸಿ ಆಮೇಲೆ ನಿನ್ನ ಬ್ಲಾಗಿಗೆ ಬರುವೆ.
    ನೀನು ಹೇಳುವಂತೆ ಮಾತನಾಡುವಾಗ ಅಂತ್ಯ ಸ್ವರ ದೀರಘವಾಗುವುದು ಸಹಜ.
    ನಾನು ನಿನ್ನನ್ನು ಹೇಮಾ ಎನ್ನುವುದಿಲ್ಲವೇ?

    ReplyDelete
  28. ಚಂದ್ರಕಾಂತರವರೆ,
    ನಾನು ಸಹ ಪ್ರಾಮಾಣಿಕವಾಗಿ ಹೇಳುತ್ತಿರುವೆ. ನನ್ನ ಬ್ಲಾಗ್ ಲ್ಲಿ ನಿಮ್ಮ ಹೆಸರು ಮೊದಲಸಲ ನೋಡಿದಾಗ ನನಗೆ ಹೊಳೆದದ್ದು ಇವನು ಹೇಗೆ ಬಂದ ಇಲ್ಲಿ? ನನ್ನ ತಮ್ಮ. ಮನೆಯಲ್ಲಿ ನನ್ನ ಬ್ಲಾಗ್ ಬಗ್ಗೆ ಹೇಳಿರಲಿಲ್ಲ. ಆದರು ಫೋಟೋಗಳಿಂದಲೇ ಸುಳಿವು ಹಿಡಿದು ಬಂದಿದ್ದಾನೆ ಅಂದುಕೊಳ್ಳುತ್ತಾ ನಿಮ್ಮ ಪ್ರೊಫೈಲ್ ನೋಡಿದೆ. ಆಗ ತಿಳಿದದ್ದು.
    ಇನ್ನೊಮ್ಮೆ ಶಿವೂ ಅವರ ಬ್ಲಾಗಲ್ಲಿ ಚಂದ್ರಕಾಂತ್ ನೋಡಿ ,ಅವರು ಚಂದ್ರಕಾಂತ್ ಖಂಡಿತ ಅಲ್ಲ ಅಂತ ಬರೆದೆ. ಮುಂದೆ ಅವರು ಸರ್ ಮಾಡಿಬಿಟ್ಟಿದ್ದರು. ಈ ಬರಹ ನಿಮ್ಮಿಂದ ನಿರೀಕ್ಷಿಸಿದ್ದೆ.
    ನಿಮ್ಮ ಪ್ರತಿಭಾ ಹೆಸರು ಚೆನ್ನಾಗಿದೆ.

    ReplyDelete
  29. ಚಂದ್ರಕಾಂತ ಮೇಡಂ...
    ಕಾಮೆಂಟುಗಳ ಜಾಡು ಹಿಡಿದು ನಿಮ್ಮ ಬ್ಲಾಗಿಗೆ ಬಂದ ನನಗೆ ಇಲ್ಲಿನ ಬರಹಗಳನ್ನು ಓದಿ ತುಂಬ ಖುಷಿಯಾಯಿತು. ನವಿರುಹಾಸ್ಯದೊಂದಿಗೆ ಹೆಸರಿನಿಂದಾಗುವ ಪಡಿಪಾಟಲನ್ನು ಚೆಂದವಾಗಿ ನಿರೂಪಿಸಿದ್ದೀರಿ. ತಮಗೆ ಧನ್ಯವಾದಗಳು.

    ಯಾವತ್ತೋ ಓದಿದ ಯಂಡಮೂರಿ ವಿರೇಂದ್ರನಾಥರವರ ‘ಥ್ರಿಲ್ಲರ್’ ಕಾದಂಬರಿಯ ನಾಯಕನ ‘ಅನುದೀಪ’ ಎಂಬ ಹೆಸರು ಮನದೊಳಗೇ ಉಳಿದಿತ್ತು. ಮಗ ಹುಟ್ಟಿದಾಗ ನನ್ನ ಮನದೊಳಗಿನ ‘ಅನುದೀಪ’ ಮನದಾಚೆಯೂ ಬಂದು, ಅದಕ್ಕೆ ಮನೆಯವರೆಲ್ಲರ ಓಟು ಸಿಕ್ಕು ಮಗನಿಗೆ ಅನುದೀಪ ಅಂತಲೇ ಹೆಸರಿಟ್ಟೆವು. ಬೆಂಗಳೂರಿನ ಶಾಲೆಯಯೊಂದರಲ್ಲಿ ಅಪ್ಲಿಕೇಷನ್ ಫಾರ್ಮ್ ಅಲ್ಲಿ ನಾವು ಸರಿಯಾಗಿಯೇ, ಅಂದರೆ ಮೇಲ್ ಅಂತಲೇ ನಮೂದಿಸಿದ್ದರೂ, ಅವರು ತಮ್ಮ ದಾಖಲೆಗಳಲ್ಲಿ ಫಿಮೇಲ್ ಎಂಬುದಾಗಿ ನಮೂದಿಸಿದ್ದರು. ಅದನ್ನ ಸರಿಪಡಿಸಿದ್ದು ಅಷ್ಟೇನೂ ಅನ್ನಿಸಿರಲಿಲ್ಲ. ಮತ್ತೆ ಪಾಸ್ಪೋರ್ಟ್ ಅಲ್ಲಿಯೂ ಅದೇ ಕತೆ. ಆಗ ನಿಜವಾಗಿಯೂ ಬೇಸರವಾಗಿತ್ತು.
    ನನ್ನ ಮಗ ಆಗಾಗ ತನ್ನ ಹೆಸರಿನ ಅರ್ಥಕೇಳುತ್ತಾನೆ. ಈಗೀಗ ಭಯವಾಗ್ತಿದೆ, ಅವನಿಗೆ ತನ್ನ ಹೆಸರಿನ ಮೇಲೆ ಕೀಳರಿಮೆ ಆರಂಭವಾಗಿರಬಹುದಾ ಅಂತನ್ನಿಸಿದರೂ ಹಾಗೆ ಯೋಚಿಸಲಾರ, ತುಂಬ ಚಿಕ್ಕವನು ಅಂತ ಸಮಾಧಾನ ಮಾಡಿಕೊಳ್ಳುತ್ತೇನೆ. ಮುಂದೆ ದೊಡ್ಡವನಾದಾಗ ತನ್ನ ಹೆಸರಿನ ಬಗ್ಗೆ ನಮ್ಮನ್ನು ಪ್ರಶ್ನಿಸಿದರೆ ನಿಮ್ಮ ಈ ಬರಹವನ್ನು ಓದಲು ಕೊಟ್ಟುಬಿಡುತ್ತೇನೆ. ಅವನಿಗೆ ಈ ಬರಹ ಒಳ್ಳೆಯ ಸಮಾಧಾನವಾಗಬಹುದು ಹಾಗೆಯೇ ನೀವೂ ಸಹ ತನ್ನ ಜೊತೆಯೆನಿಸಬಹುದು. ತಮಗೆ ಮತ್ತೊಮ್ಮೆ ಧನ್ಯವಾದ.

    ReplyDelete
  30. ತುಂಬ ಚೆನ್ನಾಗಿದೆ ನಿಮ್ಮ ಹೆಸರಿನ ಕಥೆ ಮ್ಯಾಡಮ್...ಹೆಸರು ಕೇಳಿದ ಕೂಡಲೆ ವ್ಯಕ್ತಿಯ ಬಗ್ಗೆ ಒಂದು ಕಲ್ಪನೆ ಮೂಡುವುದು ನಿಜ. ಆದ್ರೆ ನಿಮ್ಮ ಬಗ್ಗೆ ಮೊದಲೆ ಕೇಳಿದ್ದರಿಂದ ನಿಮ್ಮದು male ಹೆಸರು ಅನ್ನಿಸಲಿಲ್ಲ. ನಿಮ್ಮ ಹೆಸರಲ್ಲೇ ’ಕವಿಸಮಯ’ ಇದೆ ಅಂದ್ಮೇಲೆ ನೀವು ಕವನಗಳು ಬರೀಬೇಕು ಮ್ಯಾಡಮ್ :)

    ನಾನು ಕೆಲಸಕ್ಕೆ ಸೇರಿದ ಹೊಸದರಲ್ಲಿ ನಮ್ಮ boss "ನಾರಾಯಣ ಸ್ವಾಮಿ ಅವರು ಬರ್ತಾರೆ , ಅವರ ಜೊತೆ discuss ಮಾಡಿ" ಎಂದರು. ನಾನು ಒಳಗೆ ಬಂದ ಬಿಳಿ ತಲೆಗಳಿಗೆಲ್ಲ smile ಕೊಟ್ಟಿದ್ದೇ ಕೊಟ್ಟಿದ್ದು.....! ಕಡೆಗೆ ಒಬ್ಬರು young & smart ಕರಿತಲೆ ಬಂದು.."drawings ಎಲ್ಲಿ? shall we start?" ಅಂದ್ರು! ನಾನು full ಸುಸ್ತು....

    ReplyDelete
  31. ಶಾಂತಲಾ ಮೇಡಮ್

    ನಾನು ನಿಮ್ಮ ಬ್ಲಾಗಿಗೆ ಒಂದೆರಡು ಬಾರಿ ಭೇಟಿ ಕೊಟ್ಟಂತೆ ನೆನಪು. ಅಂತೂ ನಿಮ್ಮ ಹೆಸರು ಚಿರಪರಿಚಿತ. ನಿಮ್ಮ ಬ್ಲಾಗ್ ಗೆ ನೀವು ಹಾಕಿರುವ ಪುಟ್ಟಕಂದನ ಪಾದಗಳು ನನ್ನನ್ನು ಯಾವಾಗಲೂ ಸೆಳೆಯುತ್ತಿತ್ತು. ‘ಜೋಗುಳ’ ಧಾರಾವಾಹಿಯವರು ನಿಮ್ಮ ಫೋಟೋ ಕದ್ದಿದ್ದಾರೋ? ಸ್ಫೋರ್ತಿ ಪಡೆದಿದ್ದಾರೋ?

    ನನ್ನ ಬರಹಕ್ಕೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನಿಮ್ಮ ಮಗನ ಅನುದೀಪ ಹೆಸರು ಬಹಳ ಚೆನ್ನಾಗಿದೆ. ಅವನಿಗೆ ಹೇಳೀ ನಿನ್ನ ಹೆಸರು ಬೇರೆಯವರದ್ದಕ್ಕಿಂತ special, ಆದ್ದರಿಂದ ನೀನು ಹೆಮ್ಮೆ ಪಡಬೇಕು ಎಂದು.

    ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ನಿಮ್ಮ ಕತೆ ನೋಡಿದಂತೆ ನೆನಪು.

    ReplyDelete
  32. ಗೀತಾ

    ನಿನಗಿದು ನ್ಯಾಯವೇ? ನನ್ನನ್ನು ಬರೆಯುವಂತೆ ಪ್ರೇರೇಪಿಸಿ ಬ್ಲಾಗ್ ಕಡೆ ತಲೆಹಾಕದಿದ್ದರೆ ನಾನೇನೆಂದುಕೊಳ್ಳಲಿ ? ಸಧ್ಯ ಬಂದೆಯಲ್ಲ! Better Late than never!

    ನನ್ನ ಹೆಸರಲಿ ಕವಿಸಮಯ ಇದೆ ಅಷ್ಟೆ. ನಿನ್ನ ಹೆಸರೇ ಕವನವಾಗಿದೆ. ನನಗೂ ಕವಿತೆಗೂ ಅಜಗಜಾಂತರ.

    ನಿನ್ನ ಕನ್ನಡ ಬರಹ, ತಿಳಿಹಾಸ್ಯವನ್ನು ಒಳಗೊಂಡು ಎಷ್ಟು ಚೆನ್ನಾಗಿದೆ. ಬಹಳ ಚೆನ್ನಾಗಿ ಬಿಳಿತಲೆ, ಕರಿತಲೆಯನ್ನು ವರ್ಣಿಸಿದ್ದೀಯಾ. ಇನ್ನು ಮುಂದೆ ಕನ್ನಡದಲ್ಲಿ ಬರೆಯಲು ಪ್ರಯತ್ನಿಸು.
    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  33. ಶಿವಪ್ರಕಾಶ್

    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಜ, ಎಲ್ಲರಿಗೂ ತಮ್ಮ ಹೆಸರಿನ ಬಗ್ಗೆ ಹೆಮ್ಮೆ ಇರಬೇಕು. ಅವರಿಂದ ಹೆಸರಿಗೆ ಒಂದು ಬೆಲೆಬರಬೇಕು.

    ReplyDelete
  34. ಮೇಡಮ್ ನನ್ನ ಮೇಲೆ ಸಿಟ್ಟಾಗದಿರಿ. ಮಾರ್ಚ್ "ಪ್ರೊಡಕ್ಶನ್ ಟಾರ್ಗೆಟ್" ಅನ್ನುವ ಮಾಯಜಿಂಕೆಯ ಬೆನ್ನಟ್ಟುವ ತಿಂಗಳು. ಹೆಚ್ಹಿಗೆ ಸಮಯ ಸಿಗುವುದಿಲ್ಲ. ನಿಮ್ಮ ಲೇಖನ ನಾನು ಖಂಡಿತ ಓದುವೆ :)

    ReplyDelete
  35. ಚಂದ್ರಕಾಂತ ಮೇಡಮ್,

    ನಿಮಗೆ " women's day" ಶುಭಾಶಯಗಳು.....

    ಈ ದಿನ ನಿಮ್ಮದಾಗಲಿ ಅಂತ ನನಗೆ ಆರೈಸಲು ಇಷ್ಟವಾಗುವುದಿಲ್ಲ....ಏಕೆಂದರೆ ಇದೊಂದೇ ದಿನ ನಿಮ್ಮದಲ್ಲ.....ಪ್ರತಿಕ್ಷಣ, ನಿಮಿಷ, ಗಂಟೆ, ದಿನ, ತಿಂಗಳು, ವರ್ಷಗಳು...ಎಲ್ಲಾ ನಿಮ್ಮವೇ....ನಿಮಗಿಷ್ಟ ಪಟ್ಟಂತೆ ಇರಲು ಇವೆ.. ಪ್ರತಿಕ್ಷಣ ಪ್ರೀತಿಯಿಂದ ಇರಿ.... ಅದರ ನೆಪದಲ್ಲಿ ಪ್ರೀತಿಸಿ.....ಪ್ರೀತಿ ಹಂಚಿ...ನಿಮ್ಮನ್ನು ಪ್ರೀತಿಸಿಕೊಳ್ಳಿ......[ಇದರಲ್ಲಿ ನಮ್ಮ ಸ್ವಾರ್ಥವಿದೆ. ನೀವು ಚೆನ್ನಾಗಿದ್ದರೆ ನಮ್ಮನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತೀರಿ.....ತಾಯಿ, ಅಕ್ಕ-ತಂಗಿ, ಪುಟ್ಟ ಮಗುವಿನ ಹಾಗೆ ನಮನ್ನೂ ಪ್ರೀತಿಸುತ್ತೀರಿ...] ನಿಮ್ಮ ಪತಿ-ಮಕ್ಕಳನ್ನು... ಭಂದು ಭಾಂದವರವನ್ನು ಪ್ರೀತಿಸಿ...ಗೆಳೆಯರನ್ನು ಪ್ರೀತಿಸಿ...ಸಮಯವಿದ್ದರೆ ನಮ್ಮೆಡೆಗೂ ಒಂದಿಡಿ ಪ್ರೀತಿ...ತೋರಿಸಿ.....

    ಮತ್ತೊಮ್ಮೆ ಅಭಿನಂದನೆಗಳು.....

    ಪ್ರತಿಕ್ಷಣದಲ್ಲೂ ಪ್ರೀತಿಯಿಂದ....

    ಶಿವು.....

    ReplyDelete
  36. ಚಂದ್ರಕಾಂತರವರೆ..

    ಶಿಷ್ಯನ ಪ್ರಣಾಮಗಳು...

    ಅನುಮಾನ ಬಂದಾಗ ನಿಮ್ಮ ನೆನಪಾಗುತ್ತದೆ..

    ನಾನು "ಯುಗಾದಿ" ಶಬ್ಧದ ಬದಲಿಗೆ..
    "ಉಗಾದಿಯ" ಶುಭಾಶಯ ಎಂದು ಹೇಳಿರುವೆ...

    "ಉಗಾದಿ" ಶಬ್ಧಕ್ಕೆ ಏನೂ ಅರ್ಥವಿಲ್ಲವೆಂದೂ..
    ಓದುಗರೊಬ್ಬರು ಪ್ರತಿಕ್ರಿಯಿಸಿದ್ದಾರೆ..
    ನನ್ನ ಲೇಖನದ ಪ್ರತಿಕ್ರಿಯೆಯಲ್ಲಿ ತಾವು ನೋಡಬಹುದು...

    ಅನುಮಾನ ಪರಿಹರಿಸುವಿರಿ ಎಂದು ನಂಬಿರುವೆ...

    ತಮಗೂ "ಯುಗಾದಿಯ ಶುಭಾಶಯಗಳು.."

    ReplyDelete