Thursday, June 18, 2009

ರಾಮಾಯಣ - ಒಂದು ಪ್ರವೇಶ

ನಮ್ಮ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯಗಳಲ್ಲೊಂದಾದ ರಾಮಾಯಣ ವಾಲ್ಮೀಕಿಯಿಂದ ರಚಿತವಾದದ್ದು. ವಾಲ್ಮೀಕಿ ಈ ಕಾವ್ಯದ ಒಂದು ಪಾತ್ರವೂ ಹೌದು.ರಾಮಾಯಣ ನಡೆದದ್ದು ಹಿಂದೂ ಕಾಲಗಣನೆಯ ನಾಲ್ಕುಯುಗಗಳಲ್ಲಿ ಎರಡನೆಯದಾದ ತ್ರೇತಾಯುಗದಲ್ಲಿ.ವಾಲ್ಮಿಕಿಯಿಂದ ರಚಿತವಾದ ಈ ಮಹಾಕಾವ್ಯ ಮುಂದೆ ಲವ-ಕುಶರಿಂದ ಪ್ರಚಲಿತವಾಯಿತು. ಈ ಕಾವ್ಯದ ಎಲ್ಲ ಪಾತ್ರಗಳೂ ಭಾರತದ ಸಾಂಸ್ಕೃತಿಕ ಪ್ರಜ್ಞೆಯ ಭಾಗವಾಗಿವೆ ಎಂದು ನಿರ್ವಿವಾದವಾಗಿ ಹೇಳಬಹುದು.

ರಾಮಾಯಣದ ಕಥೆಯನ್ನು ಅತ್ಯಂತ ಸರಳವಾಗಿ ಹೇಳುವುದಾದರೆ ಇದು ಒಳಿತು ಕೆಡುಕಿನ ನಡುವಿನ ಸಂಘರ್ಷದ ಕಥೆ. ಈ ಸಂಘರ್ಷದಲ್ಲಿ ಒಳಿತಿಗೇ ಕಡೆಯಲ್ಲಿ ಜಯ ಎಂಬುದನ್ನು ಈ ಕಾವ್ಯ ಸಾರುತ್ತದೆ. ಅದಕ್ಕೆ ಹೊಂದುವಂತೆ ಇಲ್ಲಿಯ ಪಾತ್ರಗಳೂ ಅತ್ಯಂತ ನೇರ , ಸರಳ ಸ್ವಭಾವದ ಪಾತ್ರಗಳು. ಒಳಿತನ್ನು ಪ್ರತಿನಿಧಿಸುವ ರಾಮ ಈ ಕಾವ್ಯದ ನಾಯಕನಾದರೆ ಅವನ ಒಡನಾಡಿ ಸೀತೆ ಈ ಕಾವ್ಯದ ನಾಯಕಿ. ಕೆಡುಕಿನ ಸಂಕೇತವಾದ ರಾವಣ ಇಲ್ಲಿನ ಖಳನಾಯಕ. ರಾಮ ರಾವಣರ ಯುದ್ಧದಲ್ಲಿ ಅಂತಿಮವಾಗಿ ರಾಮನಿಗೇ ಜಯ.ಇದು ಅತ್ಯಂತ ಸರಳವಾಗಿ ಹೇಳಬಹುದಾದ ಕಥೆ. ಆದರೆ ಈ ಕಾವ್ಯ ಮುಂದೆ ಬಂದ ಹಲವಾರು ಭಾಷೆಯ ಅನೇಕ ಕವಿಗಳಿಗೆ ಸ್ಫೂರ್ತಿಯ ಸೆಲೆಯಾಗಿದೆ.ಹೀಗಾಗಿ ವಾಲ್ಮೀಕಿಯ ಕಾಲದಿಂದ ಹಿಡಿದು ಆಧುನಿಕ ಕಾಲದವರೆಗೂ ಅನೇಕ ಕವಿಗಳು ಈ ಕಾವ್ಯವನ್ನು ಬೇರೆ ಬೇರೆ ರೀತಿಯಲ್ಲಿ ರಚಿಸಿದ್ದಾರೆ.

ಭಾರತದ ವಿವಿಧ ಭಾಷೆಗಳ ರಾಮಾಯಣಗಳ ಕಿರು ಪರಿಚಯ:

೧.ವಾಲ್ಮೀಕಿ ರಾಮಾಯಣದ ನಂತರ ನಮಗೆ ಸಿಗುವ ಮೊದಲ ರಾಮಾಯಣ " ಭಟ್ಟಿಕಾವ್ಯ" . ಏಳನೆಯ ಶತಮಾನದ ಭಟ್ಟಿಕವಿ ರಚಿಸಿರುವ ಈ ಕೃತಿ ಅತ್ಯಂತ ವಿಶಿಷ್ಟವಾದದ್ದು. ಇದನ್ನು ಶಾಸ್ತ್ರಕಾವ್ಯ ಎಂದೂ ಕರೆಯಬಹುದು. ಈ ಕೃತಿ ಪ್ರಾಚೀನ ಕಾಲದ ಎರಡು ಮಹಾ ಕೃತಿಗಳನ್ನು ಹೆಣೆದು ರಚಿಸಿದ ಕಾವ್ಯ. ರಾಮಾಯಣ ಮತ್ತು ಪಾಣಿನಿಯ " ಅಷ್ಟಾಧ್ಯಾಯಿ" ಕೃತಿಗಳನ್ನು ಬೆರೆಸಿ ಮಾಡಿದ ಒಂದು ನೂತನ ಪ್ರಯೋಗ. ಪಾಣಿನಿಯ ವ್ಯಾಕರಣದ ನಿಯಮಗಳನ್ನು ರಾಮಾಯಣದ ಕಥೆಯ ಪ್ರಯೋಗಗಳ ಮೂಲಕ ಹೇಳುತ್ತಾ ಹೋಗುತ್ತಾನೆ.ಈ ಕೃತಿಗೆ " ರಾವಣವಧ" ಎಂಬ ಹೆಸರೂ ಇದೆ.

೨. ಹನ್ನೆರಡನೆಯ ಶತಮಾನದ ತಮಿಳು ಕವಿ ಕಂಬನ್ ರಚಿಸಿದ " ರಾಮಾವತಾರಮ್" ಕಾವ್ಯ ಕಂಬರಾಮಾಯಣ ಎಂದೇ ಪ್ರಖ್ಯಾತವಾಗಿದೆ. ವಾಲ್ಮೀಕಿ ರಾಮಾಯಣಕ್ಕಿಂತ ಭಿನ್ನವಾದ ಕಥಾಹಂದರ ಇದರಲ್ಲಿದೆ. ಇದೊಂದು ಭಕ್ತಿಪ್ರಧಾನ ಕಾವ್ಯ.

೩.ಹದಿನಾಲ್ಕನೆಯ ಶತಮಾನದಲ್ಲಿ ಬಂಗಾಳ ಭಾಷೆಯಲ್ಲಿ ರಚಿತವಾದ " ಕೃತ್ತಿವಾಸಿ"ಕಾವ್ಯವನ್ನು " ಶ್ರೀರಾಮಪಾಂಚಾಲಿ" ಎಂದೂ ಕರೆಯುತ್ತಾರೆ.ಈ ಕೃತಿಯನ್ನು ಬರೆದ ಕವಿ ಕೃತ್ತಿಬಾಸ್ ಓಜ್. ಕನ್ನಡದ ಕುಮಾರವ್ಯಾಸನ ಕಾವ್ಯದಂತೆ ಭಕ್ತಿಪ್ರಧಾನವಾದ ಕಾವ್ಯವಿದು. ರಾಮಾಯಣದ ಕಥೆಯನ್ನು ಬಂಗಾಳ ಭಾಷೆಯಲ್ಲಿ ಹೇಳುವುದಷ್ಟೆ ಈ ಕಾವ್ಯದ ಉದ್ದೇಶವಲ್ಲ. ಉತ್ತರ ಭಾರತದ ಅನೇಕ ರಾಮಾಯಣ ಪರಂಪರೆಗಳಲ್ಲಿ ಅತಿ ಪ್ರಾಚೀನವಾದದ್ದು ಈ ಕಾವ್ಯ. ಮಧ್ಯಕಾಲೀನ ಬಂಗಾಳ ಸಮಾಜದ ಚಿತ್ರಣ , ಅಲ್ಲಿಯ ಜನರ ಸಂಸ್ಕೃತಿ, ಅವರು ಎತ್ತಿ ಹಿಡಿಯುವ ಮೌಲ್ಯಗಳು ಇವೆಲ್ಲವನ್ನೂ ಈ ಕಾವ್ಯಬಿಂಬಿಸುತ್ತದೆ ಮತ್ತು ಸುತ್ತಮುತ್ತಲ ಪ್ರಾಂತ್ಯಗಳಲ್ಲಿ ವೈಷ್ಣವಮತ ನೆಲೆಕಂಡುಕೊಳ್ಳುವಲ್ಲಿ ಈ ಕಾವ್ಯದ ಪಾತ್ರ ಮಹತ್ತರವಾದದ್ದು. ಮುಂದೆ ಬಂದ ಬಂಗಾಲಿ ಸಾಹಿತ್ಯದ ಮೇಲೆ ಈ ಕಾವ್ಯದ ದಟ್ಟ ಪ್ರಭಾವವನ್ನು ಗುರುತಿಸಬಹುದು. ರವೀಂದ್ರನಾಥ ಠಾಗೋರರ ಮೇಲೂ ಈ ಕಾವ್ಯ ಸಾಕಷ್ಟು ಪ್ರಭಾವ ಬೀರಿದೆ.

ಇವುಗಳಲ್ಲದೆ ಹದಿನೈದನೆಯ ಶತಮಾನದ ರಂಗನಾಥ ಕವಿ ರಚಿಸಿದ ತೆಲುಗು ರಾಮಾಯಣ, ಹದಿನಾರನೆಯ ಶತಮಾನದಲ್ಲಿ ಬಲರಾಮದಾಸ ಕವಿ ರಚಿಸಿದ ಒರಿಯಾ ರಾಮಾಯಣ, 17ನೆ ಶತಮಾನದಲ್ಲಿ ಪ್ರೇಮಾನಂದ ಕವಿ ರಚಿಸಿದ ಗುಜರಾತಿ ರಾಮಾಯಣ , 18ನೆ ಶತಮಾನದಲ್ಲಿ ಕವಿ ಶ್ರೀಧರ ರಚಿಸಿದ ಮರಾಠಿ ರಾಮಾಯಣಗಳು ಭಾರತದ ಬಹುಮಟ್ಟಿಗೆ ಎಲ್ಲ ಭಾಷೆಗಳಲ್ಲೂ ರಾಮಾಯಣ ಕಾವ್ಯಗಳು ಬಂದಿರುವುದನ್ನು ಸೂಚಿಸುತ್ತವೆ.

ಈ ಎಲ್ಲ ಕಾವ್ಯಗಳಿಗಿಂತ ಕುತೂಹಲ ಮೂಡಿಸುವ ಮತ್ತೊಂದು ಕಾವ್ಯ ಕೇರಳ ಮತ್ತು ಲಕ್ಷದ್ವೀಪದ ಭಾಗಗಳಲ್ಲಿ ಮಾಪಿಳ್ಳೆಗಳು ಹಾಡುವ ಮಾಪಿಳ್ಳೆಪಟ್ಟು ಹಾಡಿನಲ್ಲಿ ರಾಮಾಯಣದ ಕಥೆಯ ಕೆಲವು ಭಾಗಗಳು ಸೇರಿವೆ. ಈ ಭಾಗವನ್ನು ‘ ಮಾಪಿಳ್ಳೆರಾಮಾಯಣ’ ಎಂದೂ ಕರೆಯುತ್ತಾರೆ. ಇವು ಜಾನಪದ ಹಾಡುಗಳಾಗಿದ್ದು ತಲೆಮಾರಿನಿಂದ ತಲೆಮಾರಿಗೆ ಸಾಗಿ ಬಂದಿದೆ.ಈ ರಾಮಾಯಣದ ನಾಯಕ ಒಬ್ಬ ಮುಸ್ಲಿಮ್ ಸುಲ್ತಾನ. ಇಲ್ಲಿ ರಾಮನ ಹೆಸರನ್ನು " ಲಾಮನ್" ಎಂದು ಬದಲಾಯಿಸಿರುವುದನ್ನು ಬಿಟ್ಟರೆ ಉಳಿದಂತೆ ಇತರ ಪಾತ್ರಗಳು ರಾಮಾಯಣದ ಕಾವ್ಯದಲ್ಲಿರುವಂತೆಯೇ ಇವೆ. ಮುಸ್ಲಿಮ್ ಸಾಮಾಜಿಕ ರೀತಿ ನೀತಿಗಳಿಗೆ ಹೊಂದುವಂತೆ ಕಥೆಯಲ್ಲಿ ಕೆಲವು ಮಾರ್ಪಾಟುಗಳಾಗಿವೆ.


( ಸ್ಫೂರ್ತಿ, ಆಕರ ವಿಕಿಪೀಡಿಯ. ಮುಂದಿನ ಭಾಗದಲ್ಲಿ ಕನ್ನಡದ ರಾಮಾಯಣದ ಪರಿಚಯ)

14 comments:

  1. ಚಂದ್ರಕಾಂತರವರೆ....

    ನಮ್ಮ ದೇಶದ ಸಂಸ್ಕ್ರತಿಯ ಪ್ರತೀಕ ಈ ಕಾವ್ಯ...
    ನಮ್ಮ ನಡೆ ನುಡಿ.. ಜನಸಾಮಾನ್ಯರ ಮೇಲೆ ಇಂದೂ ಸಹ ಇದರ ಪ್ರಭಾವ ಇದೆ..
    ಇತ್ತೀಚೆಗೆ ನಾವು ಮಲೇಷಿಯಾ ಹೋದಾಗ ಅಲ್ಲೂ ಸಹ ರಾಮಾಯಣದ ಪ್ರಭಾವ ಕಾಣಲು ಸಿಕ್ಕಿತು..
    (ಈಗ ಅದು ಮುಸ್ಲಿಮ್ ರಾಷ್ಟ್ರ)
    ಥೈಲ್ಯಾಂಡ್ ನಲ್ಲೂ ರಾಮಾಯಣ ಇದೆಯಂತೆ..

    ನೀವು ಪರಿಚಯಿಸಿ ಕೊಟ್ಟ ರಾಮಾಯಣಗಲ ಈ ಲೇಖನ ಸಂಗ್ರಹ ಯೋಗ್ಯ...
    ಇನ್ನುಳಿದಂತೆ "ತುಳಸಿ ರಾಮಾಯಣ" ಬಗೆಗೆ ಕೇಳಿದ್ದೆ..

    ಇನ್ನಷ್ಟು ಇಂಥಹ ಲೇಖನ ನಿಮ್ಮಿಂದ ನಿರೀಕ್ಷಿಸುವೆ...

    ಅಭಿನಂದನೆಗಳು..

    ReplyDelete
  2. ಪ್ರಕಾಶ್

    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ. ನಾನು ಬರೆದ ಈ ಲೇಖನದಲ್ಲಿ ನನಗೆ ಪರಿಚಯವಿದ್ದಿದ್ದು ತುಳಸಿ ರಾಮಾಯಣ ಮತ್ತು ಕಂಬರಾಮಾಯಣ ಮಾತ್ರ. ಆದರೆ ಹುಡುಕುತ್ತ ಹೋದಂತೆ ಇಷ್ಟೊಂದು ರಾಮಾಯಣಗಳನ್ನು ನೋಡಿ ನನಗಾದ ಆಶ್ಚರ್ಯ ಈ ಲೇಖನ ಬರೆಯಲು ಪ್ರೇರೇಪಿಸಿತು.

    ನೀವು ವಿದೇಶಿ ರಾಮಾಯಣಗಳ ಬಗ್ಗೆ ಉತ್ಸುಕತೆ ತೋರಿದ್ದರಿಂದ ಮುಂದಿನ ಭಾಗದಲ್ಲಿ ವಿದೇಶದಲ್ಲಿ ಸಿಗುವ ರಾಮಾಯಣಗಳನ್ನು ತಿಳಿಸುವೆ

    ReplyDelete
  3. ಚಂದ್ರಕಾಂತರವರೆ,

    ಬಗೆಬಗೆಯ ರಾಮಾಯಣವನ್ನು ಪರಿಚಯಿಸಿದಕ್ಕಾಗಿ ಧನ್ಯವಾದಗಳು.
    ಪಾಣಿನಿಯ ಅಷ್ತಾದ್ಯಾಯಿಯಲ್ಲಿ ನನಗೆ ಆಸಕ್ತಿ. ಭಟ್ಟಿಕಾವ್ಯದ ಬಗ್ಗೆ ನನಗೆ ತಿಳುವಳಿಕೆ ಇರಲಿಲ್ಲ. ಸಮಯ ಸಿಕ್ಕಾಗ ಇದನ್ನು ಓದುವೆ.

    ಹಾಗೆ ನಮ್ಮ ಕನ್ನಡದಲ್ಲಿ ರಚಿತವಾದ ರಾಮಾಯಣಗಳು, ೧೩ನೇ ಶತಮಾನದ ಜೈನ ಕವಿ ರಚಿಸಿದ ಕುಮುದೇಂದು ರಾಮಾಯಣ, ನಾಗಚಂದ್ರ ರಚಿಸಿದ ಪಂಪ ರಾಮಾಯಣ (ರಾಮಚಂದ್ರ ಚರಿತ ಪುರಾಣ) ಮತ್ತು ನಮ್ಮ ರಾಷ್ಟ್ರ ಕವಿ ಕುವೆಂಪುರವರ ರಾಮಾಯಣ ದರ್ಶನಂ, ಈ ಪಟ್ಟಿಗೆ ಸೇರಿಸಬಹುದು ಅಲ್ಲವೇ?

    ReplyDelete
  4. ಚಂದ್ರಕಾಂತಾ,
    ರಾಮಾಯಣಗಳ ಬಗೆಗೆ ಒಳ್ಳೆಯ ಮಾಹಿತಿ ನೀಡಿದ್ದೀರಿ. ಕನ್ನಡ ರಾಮಾಯಣಗಳ ಬಗೆಗೂ ಸ್ವಲ್ಪ ಹೇಳಬಹುದಿತ್ತು. ಕನ್ನಡದ ರಾಮಾಯಣಗಳಲ್ಲಿ latest ಸೇರ್ಪಡೆ ಎಂದರೆ ಮೊಯಿಲಿಯವರ ರಾಮಾಯಣ.(Political ರಾಮಾಯಣ ಅಲ್ಲ!)

    ReplyDelete
  5. ರಾಜೀವ್ ಅವರೆ

    ನೀವು ಇದೇ ಮೊದಲ ಬಾರಿಗೆ ನನ್ನ ಬ್ಲಾಗಿಗೆ ಬಂದಿದ್ದೀರೆನಿಸುತ್ತದೆ. ನಿಮಗೆ ಸ್ವಾಗತ.
    ಪಾಣಿನಿಯ ಅಷ್ಟಾಧ್ಯಾಯಿ ನಿಜಕ್ಕೂ ಬಹಳ ಕುತೂಹಲಕಾರಿಯಾದದ್ದು. ನಾನು ಅದನ್ನು ಪೂರ್ತಿ ಓದಿಲ್ಲ. ಕೇಶಿರಾಜನ ಶಬ್ದಮಣಿದರ್ಪಣ ಓದುವಾಗ ಪಾಣಿನಿಯ ವಿಚಾರವನ್ನು ಅಲ್ಪ ಸ್ವಲ್ ತಿಳಿದುಕೊಂಡಿರುವೆ.

    ನಮ್ಮ ಕನ್ನಡದ ರಾಮಾಯಣಗಳಿಗೆ ಇನ್ನೊಂದುಲೇಖನ ಮೀಸಲಾಗಿಟ್ಟಿರುವೆ. ಅದಕ್ಕಾಗಿ ಇಲ್ಲಿ ಸೇರಿಸಲಿಲ್ಲ. ಕುಮುದೇಂದು ರಾಮಾಯಣ ಮತ್ತು ತೊರವೆ ರಾಮಾಯಣಗಳ ವಿಚಾರ ಸಂಗ್ರಹಿಸಬೇಕಿದೆ. ನಾಗಚಂದ್ರನ ರಾಮಚಂದ್ರಚರಿತ ಪುರಾಣ ನನ್ನ ಅಚ್ಚುಮೆಚ್ಚಿನ ಕಾವ್ಯ. ಅದರ ಕೆಲವುಭಾಗಗಳನ್ನು ಬರೆಯಬೇಕೆಂದುಕೊಂಡಾಗಲೇ ಅನಿಸಿದ್ದು. - ಮೊದಲು ಬೇರೆ ಬೇರೆ ರಾಮಾಯಣಗಳನ್ನು ತಿಳಿದುಕೊಳ್ಳೋಣವೆಂದು.ಆದ್ದರಿಂದ ಈ ಪ್ರವೇಶ ಲೇಖನ.

    ಈಗಾಗಲೇ ಕುವೆಂಪುರವರ ರಾಮಾಯಣದ ಒಂದು ಭಾಗವನ್ನು " ...ಸಿತೆಯರ ಅಗ್ನಿಪ್ರವೇಶ" ಎಂಬ ಹೆಸರಿನಲ್ಲಿ ಬರೆದಿದ್ದೇನೆ. ಇನ್ನೂ ಬರೆಯಬೇಕಾದ್ದು ಸಾಕಷ್ಟಿದೆ.

    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  6. ಸುನಾಥ್ ಸರ್

    ಕನ್ನಡ ರಾಮಾಯಣಗಳಿಗೇ ಇನ್ನೊಂದು ಲೇಖನ ಮೀಸಲಿರಿಸಿರುವೆ.ವೀರಪ್ಪ ಮೊಯಿಲಿ ಅವರ ರಾಮಾಯಣದ ಬಗ್ಗೆ ಕೇಳಿದ್ದೇನೆ. ಆದರೆ ಓದಿಲ್ಲ.ನೀವು ಓದಿದ್ದೀರಾ?ಸಾಧ್ಯವಾದರೆ ಓದುವೆ

    ReplyDelete
  7. ಚಂದ್ರಕಾಂತ ಮೇಡಂ,
    ಹೇಗಿದ್ದೀರಿ? ಬಹಳ ದಿವಸಗಳ ನಂತರ ನಿಮ್ಮ ಬ್ಲಾಗಿಗೆ ಭೇಟಿ ನೀಡುತ್ತಿದ್ದೇನೆ. ಕ್ಷಮೆಯಿರಲಿ. ವಿವಿಧ ರಾಮಾಯಣಗಳ ಬಗ್ಗೆ ಚನ್ನಾಗಿ ವಿವರಿಸಿದ್ದೀರಿ. ಆದರೆ ಇವುಗಳಲ್ಲಿ “ತುಳಸಿ ರಾಮಾಯಣ” ಬಿಟ್ಟು ಹೋಗಿದೆಯಲ್ವೆ? ಅಥವಾ ಮುಂದಿನ ಕಂತಿನಲ್ಲೇನಾದರು ಬರೆಯುವಿರಾ?

    ReplyDelete
  8. ತುಂಬಾ ಮಾಹಿತಿ ಪೂರ್ಣ ಲೇಖನ ಮೇಡಮ್...ಆದ್ರೆ ಯಾಕೋ... ಈ ಬರಹ ಓದಿದ ಮೇಲೆ ನಾಳೆ ನನಗೆ ಏನಾದ್ರು ಪರೀಕ್ಷೆ ಇದ್ಯೇನೋ ಅನ್ನಿಸ್ತಿದೆ. ಒಂಥರ ಭಯ ಆಗ್ತಿದೆ!!!

    (old habits die hard!)

    ReplyDelete
  9. ಉದಯ್

    ನೀವು ಹೇಳಿದಂತೆ ತುಳಸಿರಾಮಾಯಣ ಸೇರಿಸಲು ಮರೆತಿರುವೆ. ಮುಂದಿನ ಲೇಖನದಲ್ಲಿ ಸೇರಿಸಿಕೊಳ್ಳುವೆ.

    ReplyDelete
  10. ಗೀತಾ

    ನಿನ್ನ ಪ್ರತಿಕ್ರಿಯೆ ಅರ್ಥವಾಯಿತು. ಇದು ಕೇವಲ ಮಾಹಿತಿಪೂರ್ಣ ಲೇಖನ ಅಷ್ಟೆ. ನಾನು ಇದನ್ನು ಬ್ಲಾಗಿನಲ್ಲಿ ಸೇರಿಸಿದ್ದಕ್ಕೆ ಮುಖ್ಯ ಕಾರಣ ನನ್ನ reference ಗಾಗಿ.ಅಂತೂ ಮನಃಪುರ್ವಕವಾಗಿ ಪ್ರತಿಕ್ರಿಯಿಸಿದ ನಿನಗೆ Thanks:)

    ReplyDelete
  11. ಚಂದ್ರಕಾಂತ ಮೇಡಮ್,

    ರಾಮಾಯಣದಲ್ಲಿ ಇಷ್ಟೋಂದು ಪ್ರಕಾರವೇ....ನನಗಂತೂ ಆಶ್ಚರ್ಯವೆನಿಸುತ್ತದೆ...ಭಾರತದ ಎಲ್ಲಾಭಾಷೆಗಳ ರಾಮಾಯಣ ಕೃತಿಗಳನ್ನು ಕರ್ತ್ರುವಿನ ಸಮೇತ ಮಾಹಿತಿ ನೀಡಿದ್ದೀರಿ....
    ರಾಮಾಯಣ ಮತ್ತು ಮಹಾಭಾರತಗಳನ್ನು ಓದಿ ತುಂಬಾ ದಿನವಾಗಿತ್ತು. ಬಿಡುವಿಲ್ಲದ ಕೆಲಸ ಇತ್ಯಾದಿಗಳಿಂದಾಗಿ ಸಾಧ್ಯವಾಗಿರಲಿಲ್ಲ... ನಿಮ್ಮ ಲೇಖನಗಳಿಂದಾಗಿ ಈಗ ಸ್ವಲ್ಪ ಬಿಡುವು ಮಾಡಿಕೊಂಡು ಮತ್ತೊಂದು ಸುತ್ತು ಕೆಲವು ಈ ಸಂಭಂದ ಓದಬೇಕೆನಿಸುತ್ತಿದ್ದೆ.....

    ಧನ್ಯವಾದಗಳು...

    ReplyDelete
  12. ಶಿವು

    ನಾನಿನ್ನೂ ಪೂತಿಯಾಗಿ ಹೇಳಿಲ್ಲ! ಹೇಳುತ್ತಾ ಹೋದರೆ ಆಶ್ಚರ್ಯವಾಗುವಷ್ಟು ರಾಮಾಯಣ ಪರಂಪರೆಗಳಿವೆ. ರಾಮಾಯಣ ಓದಬೇಕೆನಿಸುವಷ್ಟು ಈ ಬರಹ ನಿಮಗೆ ಪ್ರೇರೇಪಣೆ ಕೊಟ್ಟಿದೆಯಲ್ಲಾ, ಅಷ್ತರ ಮಟ್ಟಿಗೆ ನನ್ನ ಬರಹ ಸಾರ್ಥಕ.

    ReplyDelete
  13. ಚಂದ್ರಕಾಂತ ಮೇಡಂ,

    ವಾರಾಂತ್ಯದಲ್ಲಿ ತಿರುಗಾಟಕ್ಕೆ ಹೋದ್ದರಿಂದ ಇಂದು ನಿಮ್ಮ ಬರಹ ಓದಿದೆ. ನಿಮ್ಮ ಬರಹ ಮಾಹಿತಿ ಪೂರ್ಣವಾಗಿದೆ. ಗೀತಾ ಅವರಿಗೆ ಬರೆದ ಪ್ರತಿಕ್ರಿಯೆಯಲ್ಲಿ ಈ ಬರಹ ಕೇವಲ ನಿಮ್ಮ ರೆಫೆರೆನ್ಸಿಗೆ ಮಾತ್ರ ಎಂದು ಬರೆದಿದ್ದೀರ.

    ಮೊದಲೆರಡು ಪ್ಯಾರಾದಲ್ಲಿ ರಾಮಾಯಣದ ಕಿರುಪರಿಚಯ ಮಾಡಿಸಿದ್ದೀರ. ಇಲ್ಲಿ ರಾಮಾಯಣ ಹೆಸರಿನ ಔಚಿತ್ಯವನ್ನೊಳಗೊಂಡತೆ (ಕಥೆ ಹೊರತಾಗಿ) ಇನ್ನಷ್ಟು ವಿಷಯ ಸೇರಿಸಿದ್ದರೆ ಸೊಗಸಿತ್ತು. ಇನ್ನು ರಾಮಾಯಣದ ಹಲವು ಬರಹಗಳ ಪರಿಚಯದಲ್ಲಿ ಇನ್ನಷ್ಟು ವಿಷಯ ಸೇರಿಸಬಹುದಿತ್ತು. ಉದಾಹರಣೆಗೆ ತಮಿಳಿನ ರಾಮಾವತಾರಮ್ ಅದರಲ್ಲಿರುವ ಖಂಡಗಳು, ಅಲ್ಲಿಯ ಕಥೆ ಮೂಲ ರಾಮಾಯಣಕ್ಕಿಂತ ಹೇಗೆ ಭಿನ್ನ ಮೊದಲಾದ ವಿಷಯಗಳು.

    ಜನಪದ ಮಾಪಿಳ್ಳೆ ರಾಮಾಯಣದ ಪರಿಚಯ ಮಾಡಿಸಿದ್ದಕ್ಕೆ ತುಂಬಾ ಧನ್ಯವಾದ, ಇದರ ಬಗ್ಗೆ ತಿಳಿದಿರಲಿಲ್ಲ.

    ಇನ್ನು ರಾಮಾಯಣ ನಿಜವಾಗಿಯೂ ಇಂದು ನಾವು ಭಾರತ ಎಂದು ಕರೆಯುತ್ತಿರುವ ದೇಶದ ನಿಜವಾದ ಸಂಸ್ಕೃತಿಯ ಚಿತ್ರಣವೇ? ರಾಮಾಯಣದ ಕಥೆಯಂತೆ ಉತ್ತರದವರು ದೇವತೆಗಳು, ದಕ್ಷಿಣ ಭಾಗದವರು ಆ ದೇವತೆಗಳ ಸೇವಕರಾದ ಕಪಿಗಳು, ಇನ್ನು ಅದಕ್ಕೂ ದಕ್ಷಿಣಕ್ಕೆ ಹೋದರೆ ಸಿಗುವವರು ದೇವತೆಗಳನ್ನು ಹಿಂಸಿಸುವ ರಾಕ್ಷಸ ಗುಣದವರು. ದಕ್ಷಿಣ ಭಾಗದವರೇ ಬರೆದ ರಾಮಾಯಣಗಳಲ್ಲಿ (ನೀವು ಮೇಲೆ ತಿಳಿಸಿದ ಮಾಪಿಳ್ಳೆ, ತಮಿಳು ರಾಮಾಯಣಗಳಲ್ಲಿ) ರಾಮ ಎಲ್ಲಿಯವನು?

    ನನಗೆ ಇದು ಒಳಿತು ಕೆಡುಕಿನ ಕಥೆಯಂತೆ ಕಾಣಿಸದೆ, ಅಂದಿನ ಮಾನವನ ಭಿನ್ನ ಮನೋಭಾವ ಪರಿಚಯ ಮಾಡಿಸುವಂತೆ ಕಾಣಿಸುತ್ತದೆ. ಇವಿಷ್ಟು ಕೇವಲ ನನ್ನನಿಸಿಕೆ ಮಾತ್ರ!

    ReplyDelete
  14. ಚ೦ದ್ರಕಾ೦ತಾ ಅವರೇ...

    ರಾಮಾಯಣದ ಬಗೆಗಿನ ಮಾಹಿತಿ ಪೂರ್ಣವಾದ ಬರಹ ಕ೦ಡು ಸ೦ತೋಷವಾಯಿತು. ರಾಮಾಯಣದ ಬಗ್ಗೆ ಇಷ್ಟೊ೦ದು ಕೃತಿಗಳು ಬ೦ದಿದೆ ಎ೦ಬುದು ತಿಳಿದಿರಲಿಲ್ಲ...

    "ತೊರವೆ ರಾಮಾಯಣ" ಅ೦ತ ಎಲ್ಲೋ ಓದಿದ ನೆನಪಿದೆ... ನಿಮಗೇನಾದರೂ ಅದರ ಬಗ್ಗೆ ಮಾಹಿತಿ ತಿಳಿದಿದೆಯೆ?

    ಮು೦ದಿನ ಭಾಗಕ್ಕೆ ಕಾಯುತ್ತಿದ್ದೇನೆ...

    ReplyDelete