Sunday, June 21, 2009

ಅಪ್ಪನಿಗೊಂದು ನೆನಪಿನ ಶ್ರದ್ಧಾಂಜಲಿ

ನನ್ನ ತಂದೆ ರೈಲ್ವೆ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದರು. ಮನೆಯಲ್ಲಿ ಹದಿನೈದು ಜನ. (ಅಜ್ಜಿ, ತಾತ, ಅಮ್ಮ, ಚಿಕ್ಕಪ್ಪ, ಅತ್ತೆ, ಅಣ್ಣಂದಿರು,ಅಕ್ಕ, ತಂಗಿ ಇತ್ಯಾದಿ...) ದುಡಿವ ಕೈ ಅಪ್ಪನದೊಂದೆ.ಅಪ್ಪನ ಕೈಕೆಳಗೆ ಸುಮಾರು ಮುನ್ನೂರು ಜನ ಗ್ಯಾಂಗ್ಮನ್ ಗಳು. ತಂಗಿಯನ್ನು ಬಿಟ್ಟರೆ ನಾನೇ ಮನೆಯಲ್ಲಿ ಚಿಕ್ಕವಳು.ಈಗ ನೆನೆಸಿಕೊಂಡರೆ ಇಷ್ಟು ದೊಡ್ಡ ಸಂಸಾರದಲ್ಲಿ ನನ್ನ ಅಪ್ಪನ ಜೊತೆ ಬಾಲ್ಯದಲ್ಲಿ ನನಗಿದ್ದ ನೇರ ಸಂಪರ್ಕ ತುಂಬಾ ಕಡಿಮೆ ಎಂಬುದು ಗಮನಕ್ಕೆ ಬರುತ್ತದೆ.. ಶಿಸ್ತು, ಸದಾ ಚಟುವಟಿಕೆ, ಕೋಪ, ಸ್ವಾಭಿಮಾನ ಅಪ್ಪನ ವ್ಯಕ್ತಿತ್ವದ ಕೆಲವು ಎಳೆಗಳು. ಆದರೂ ಅವರು ಮಕ್ಕಳನ್ನು ಹುರಿದುಂಬಿಸುತ್ತಿದ್ದ ರೀತಿ ವಿಶಿಷ್ಟವಾಗಿತ್ತು. . ಮಕ್ಕಳಿಗೆಲ್ಲಾ ( ನಾವು 7 ಜನ )ಸಂಗೀತ, ಹಿಂದಿ, ಟೈಲರಿಂಗ್, ಟೈಪಿಂಗ್ .. ಎಲ್ಲವನ್ನೂ ಕಲಿಸಿದ್ದರು. " ವಿದ್ಯೆಯೇ ನಾನು ನಿಮಗೆ ಕೊಡುವ ಆಸ್ತಿ " ಎಂದು ಹೇಳಿ ಎಲ್ಲರಿಗೂ ಒಳ್ಲೆಯ ವಿದ್ಯಾಭ್ಯಾಸ ಕೊಡಿಸಿದ ಅಪ್ಪ , ಕಡೆಯವರೆಗೂ ಅವರು ಒಂದು ಮನೆಯನ್ನೂ ಮಾಡಿಕೊಳ್ಳಲಿಲ್ಲ. ಅಪ್ಪನಿಗೆ ಎಲ್ಲ ಕೆಲಸಗಳೂ ಅಚ್ಚುಕಟ್ಟಾಗಿ ಆಗಬೇಕಿತ್ತು.ಕಾಟಾಚಾರದ ಕೆಲಸವೆಂದರೆ ಅವರಿಗಾಗುತ್ತಿರಲಿಲ್ಲ..ಅದಕ್ಕೆ ನಮಗೆ ಸೈಕಲ್ ಕಲಿಸಿದ ಪ್ರಸಂಗ ಒಂದು ನಿದರ್ಶನ. ಈ ಕೆಲಸಕ್ಕಾಗಿಯೇ ಸುಬ್ಬಣ್ಣ ಎಂಬುವವನನ್ನು ನೇಮಿಸಿದ್ದರು.ಅವನಿಗೆ ಸೈಕಲ್ ಸುಬ್ಬಣ್ಣ ಎಂಬುದೇ ಅಡ್ಡ ಹೆಸರಾಗಿತ್ತು. ಸೈಕಲ್ ಕಲಿಯುವುದು ಒಂದು ರೀತಿಯ ಕೋರ್ಸ್ ತರಹ ಇತ್ತು.ಅನೇಕರು ಕಲಿಯುವ ಹಾಗೆ ಸೈಕಲ್ ಬಾರ್ ನಿಂದ ಅತ್ತೊಂದು ಕಾಲು, ಇತ್ತೊಂದು ಕಾಲು ಹಾಕಿ ಕಲಿಯುವುದು ಅವರ ಪ್ರಕಾರ ಅಡ್ಡನಾಡಿ ವಿದ್ಯೆ. ಬರೀ ಪೆಡಲ್ ಮಾಡುವುದಕ್ಕೇ ನಾವು ಅಂದರೆ ನನ್ನ ಅಣ್ಣ , ನಾನು, ನನ್ನ ತಂಗಿ ತೆಗೆದುಕೊಂಡ ಸಮಯ ಒಂದು ತಿಂಗಳು !

ಪ್ರತಿದಿನ ಬೆಳಿಗ್ಗೆ ಏಳು ಗಂಟೆಗೆ ಬಾಡಿಗೆ ಸೈಕಲ್ ಅಂಗಡಿಗೆ ಹೋಗಿ ಹೊಚ್ಚ ಹೊಸ ಮೂರು ಸೈಕಲ್ ಗಳನ್ನು ಬಾಡಿಗೆಗೆ ತೆಗೆದುಕೊಂಡು ಮೈದಾನದ ಬಳಿ ಹೋಗಿ ಒಂದು ಗಂಟೆ ಅಭ್ಯಾಸ ಮಾಡುತ್ತಿದ್ದೆವು.ವಾರಕ್ಕೊಮ್ಮೆ ನಮ್ಮ ಪಾಠದ ಪ್ರಗತಿಯನ್ನು ಸುಬ್ಬಣ್ಣನ ಬಳಿ ವಿಚಾರಿಸುತ್ತಿದ್ದರು. ಅಂತೂ ಎರಡು ತಿಂಗಳಿಗೆ ನಮಗೆ ಈ ಸೈಕಲ್ ಸವಾರಿ ವಿದ್ಯೆ ಪೂರ್ಣ ಕರಗತವಾಗಿದೆಯೆಂದು ಸುಬ್ಬಣ್ಣ ರಿಪೋರ್ಟ್ ಕೊಟ್ಟ ಮೇಲೆ ಒಂದು ಶುಭ ಭಾನುವಾರ ನಮಗೆ ಪರೀಕ್ಷೆ ಇತ್ತು.! ನಮ್ಮ ಮನೆಯ ಹಿರಿಯರೆಲ್ಲಾ ಅಪ್ಪನ ನೇತೃತ್ವದಲ್ಲಿ ಮೈದಾನಕ್ಕೆ ಬಂದರು. ಅಲ್ಲಿ ಒಂದು ಕಲ್ಲು ಬೆಂಚಿನ ಮೇಲೆ ಅವರೆಲ್ಲಾ ಸುಖಾಸೀನರಾದಮೇಲೆ ನಮ್ಮ ಪರೀಕ್ಷೆ ಪ್ರಾರಂಭವಾಯಿತು. ಅಪ್ಪ ಹೇಳಿದ್ದನ್ನು ನಾವು ಮಾಡಿ ತೋರಿಸಬೇಕಿತ್ತು. ಪೆಡ್ಲಿಂಗ್ ಎಂದರೆ ಅವರು ಹೇಳುವಷ್ಟು ಹೊತ್ತೂ ನಿಧಾನವಾಗಿ ಪೆಡಲ್ ಮಾಡುವುದು, ಎಡಕ್ಕೆ ತಿರುಗಿ ಎಂದರೆ ಎಡಕ್ಕೆ, ಬಲಕ್ಕೆ ಎಂದರೆ ಬಲಕ್ಕೆ, ಹೀಗೆ ಅವರು ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೆ ಮಾಡಿದೆವು. ನಮಗಿಂತ ಸುಬ್ಬಣ್ಣನಿಗೇ ಟೆನ್ಶನ್ ಜಾಸ್ತಿ ಇತ್ತು. ಅಂತೂ ಒಂದು, ಒಂದೂವರೆ ಗಂಟೆಯಲ್ಲಿ ಪರೀಕ್ಷಿಸಿ, ಕಾತರದಿಂದ ನೋಡುತ್ತಿದ್ದ ಸುಬ್ಬಣ್ಣನಿಗೆ ಅಪ್ಪ ಒಳ್ಳೆಯ ಮೇಷ್ಟ್ರು ಎಂದು ಶಹಬ್ಬಾಸ್ಗಿರಿ ಕೊಟ್ಟರು.ಅದು ಅವನ ಪಾಲಿಗೆ ಚಿನ್ನದ ಪದಕ ಪಡೆದ ಸಂಭ್ರಮ ಕೊಟ್ಟಿತು. ಮಹಾಭಾರತದಲ್ಲಿ ಪಾಂಡವ ಕೌರವರ ಶಸ್ತ್ರಾಭ್ಯಾಸ ಕೌಶಲವನ್ನು ಭೀಷ್ಮರು ಹೀಗೇ ಪರೀಕ್ಷಿಸಿದ್ದರೇನೋ? ಆಗ ದ್ರೋಣರಿಗೂ ಇಂತಹುದೇ ಸಂತೋಷ ಸಿಕ್ಕಿರಬಹುದು.!!

ಶಿಸ್ತಿನ ಸಾಕಾರಮೂರ್ತಿಯಾಗಿದ್ದ ನಮ್ಮ ಅಪ್ಪ ಅತ್ಯಂತ ಸ್ವಾಭಿಮಾನಿ.ಅವರು ಕೆಲಸದಿಂದ ನಿವೃತ್ತಿ ಆದ ಮೇಲೆ ಯಾವ ಮಕ್ಕಳ ಮನೆಯಲ್ಲಿಯೂ ಇರಲು ಅವರು ಇಚ್ಛಿಸಲಿಲ್ಲ.ನನ್ನ ಅಪ್ಪ ಅವರು ನಿವೃತ್ತಿಯಾಗುವಷ್ಟರಲ್ಲಿ ಏಳು ಮಕ್ಕಳ ವಿವಾಹವನ್ನೂ ಮಾಡಿ ಮುಗಿಸಿದ್ದರು. ಮಕ್ಕಳಿಗೆ ತೊಂದರೆ ಕೊಡಬಾರದೆಂಬುದೇ ಅವರ ಮುಖ್ಯ ಉದ್ದೇಶವಾಗಿತ್ತು. ಹೀಗಾಗಿ ನಮ್ಮ ಅಪ್ಪ ಅಮ್ಮ ಇಬ್ಬರೇ ಒಂದು ಬಾಡಿಗೆ ಮನೆಯಲ್ಲಿದ್ದರು. ಹೆಣ್ಣುಮಕ್ಕಳು ಮನೆಗೆ ಬಂದಾಗ ಅವರಿಗೆ ಪೂರ್ಣ ಸ್ವಾತಂತ್ರ್ಯವಿರಬೇಕೆಂಬ ಭಾವನೆಯೂ ಇದರ ಹಿಂದೆ ಅಡಗಿತ್ತು. ಅಂತೂ ಅರವತ್ತನೆಯ ವಯಸ್ಸಿನಿಂದ ಸುಮಾರುಎಪ್ಪತ್ತೈದನೆಯ ವಯಸ್ಸಿನವರೆಗೂ ಅಪ್ಪ ಅಮ್ಮ ಇಬ್ಬರೇ ಮನೆ ಮಾಡಿಕೊಂಡಿದ್ದರು.ನಂತರ ಎಲ್ಲ ಮಕ್ಕಳ ಒತ್ತಾಯದ ಮೇರೆಗೆ ಮಕ್ಕಳ ಮನೆಯಲ್ಲಿ ಇರಲಾರಂಭಿಸಿದರು.

ಇಂತಹ ಅಪ್ಪ ಸಹ ಬದಲಾದ ಕಾಲಕ್ಕನುಗುಣವಾಗಿ ತಮ್ಮ ಆಲೋಚನೆಗಳನ್ನೂ ಬದಲಿಸಿಕೊಂಡಿದ್ದರು.ಹೆಣ್ಣು ಮಕ್ಕಳೂ ಗಂಡುಮಕ್ಕಳಂತೆ ದುಡಿಯಬೇಕು, ಕಲಿತ ವಿದ್ಯೆ ವ್ಯರ್ಥವಾಗಬಾರದೆಂದು ಬಾಲ್ಯದಿಂದಲೂ ನಮಗೆ ತಿಳಿಹೇಳಿದವರು.ವರದಕ್ಷಿಣೆಯ ಬಗ್ಗೆ ಅವರ ನಿಲುವು ವಿಶಿಷ್ಟವಾದದ್ದು. ಗಂಡುಮಕ್ಕಳಿಗೆ ವರದಕ್ಷಿಣೆ ತೆಗೆದುಕೊಳ್ಳದೆ, ಹೆಣ್ಣುಮಕ್ಕಳಿಗೆ ಕೊಡದೆ ಏಳು ಜನರ ಮದುವೆ ಮಾಡಿ ಇತರರು ಬೆರಗಾಗುವಂತೆ ಮಾಡಿದವರು. ಎಂಬತ್ತನೆಯ ವಯಸ್ಸಿನಲ್ಲಿಯೂ ' ವಯಸ್ಸಾದವರು' ಎಂದು ಯಾರಾದರೂ ಹೇಳಿದರೆ ರೇಗುತ್ತಿದ್ದರು.ಅವರು ವಯಸ್ಸಾದವರ ಹಾಗಿರಲಿಲ್ಲ ಬಿಡಿ.ಬಾಲ್ಯದಲ್ಲಿ ಅವರೊಡನಾಟ ಅಷ್ಟಾಗಿ ಇಲ್ಲದಿದ್ದರೂ ಅವರು ನಿವೃತ್ತಿ ಹೊಂದಿದ ಮೇಲೆ, ನಾವು ವಿವಾಹವಾದ ಮೇಲೆ ನಮ್ಮ ನಡುವೆ ಅತ್ಯಂತ ಅನ್ಯೋನ್ಯತಾ ಭಾವವಿತ್ತು.ಅವರಿಗೆ ಆಸಕ್ತಿ ಇಲ್ಲದ ಕ್ಷೇತ್ರವೇ ಇರಲಿಲ್ಲ. ಇನ್ನೊಬ್ಬರಿಗೆ ತೊಂದರೆ ಕೊಡಬಾರದೆಂಬುದು ಅವರ ಮೂಲ ಮಂತ್ರವಾಗಿತ್ತು. ಅದಕ್ಕಾಗಿಯೇ ಮಕ್ಕಳ ಮನೆಯಲ್ಲಿ ಇರಲಾರಂಭಿಸಿದ ಮೇಲೆ ಸಾಕಷ್ಟು compromise ಮಾಡಿಕೊಂಡರು.

ಮೊಮ್ಮಕ್ಕಳು ಅಂತರ್ಜಾತಿ ವಿವಾಹವಾದಾಗ ವಿರೋಧಿಸಿದ ಆ ಮಕ್ಕಳ ಅಮ್ಮ ಅಪ್ಪಂದಿರಿಗೆ ಬುದ್ಧಿ ಹೇಳಿದವರು ನಮ್ಮ ಅಪ್ಪನೇ. ಕಡೆಗೆ ಸಾವಿನ ಸಂದರ್ಭದಲ್ಲಿಯೂ ಅಪ್ಪ ತಮ್ಮ ಕ್ರಾಂತಿಕಾರಿ ಸ್ವಭಾವ ಮೆರೆದವರು. ಇದ್ದಕ್ಕಿದ್ದಂತೆ ಒಂದು ದಿನ ಎಲ್ಲ ಮಕ್ಕಳನ್ನೂ ಕರೆದು ತಾವು ಸತ್ತ ನಂತರ ಕಣ್ಣುಗಳನ್ನು ಮಾತ್ರವಲ್ಲದೆ ಇಡೀ ದೇಹವನ್ನೇ -ತಮಗೆ ಅನೇಕ ದಶಕಗಳ ಕಾಲ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಗೆ - ದಾನನೀಡುವುದಾಗಿ ತಿಳಿಸಿ ಎಲ್ಲ ಸಿದ್ಧತೆಗಳನ್ನೂ ಮಾಡಿ ಪತ್ರ ಬರೆದು ಅದು ಎಲ್ಲರಿಗೂ ಸಿಗುವಂತೆ ಇಟ್ಟಿದ್ದರು!! ಅದು ಕಳೆದು ಹೋದರೆ ಹುಡುಕಲು ಅವರಿರುವುದಿಲ್ಲವಲ್ಲ! . ಇದಾದ ವರ್ಷದಲ್ಲಿ ನಮ್ಮನ್ನಗಲಿದರು. ನನ್ನ ಅಮ್ಮ ಅತ್ಯಂತ ಮುಗ್ಧೆ . ಸರಳತೆ ಅವಳ ಪ್ರಧಾನ ಗುಣ. ಅವರಿಬ್ಬರ ಸ್ವಭಾವ ಅಜಗಜಾಂತರವಾಗಿದ್ದರೂ ಅವರಿಬ್ಬರಲ್ಲಿ ಅಪಾರ ಹೊಂದಾಣಿಕೆ. ತಂದೆಯ ಎಲ್ಲ ಗುಣಗಳಿಗೂ ಅಮ್ಮನ ಒಪ್ಪಿಗೆ. ಸದಾಕಾಲ ಇಬ್ಬರೂ ಜೊತೆಯಾಗಿರುತ್ತಿದ್ದುದು ಕೆಲವರಿಗಾದರೂ ಅಸಹನೆಯ ಭಾವ ಮೂಡಿಸುತ್ತಿತ್ತು. ಈಗ ಅಪ್ಪ ನಮ್ಮನ್ನಗಲಿ ಮೂರು ವರ್ಷಗಳಾಗಿವೆ.ಅವರು ನಮ್ಮನ್ನಗಲಿದಾಗ ನಮ್ಮ ಸಂಬಂಧಿಗಳು ಅಷ್ಟೇಕೆ ನನ್ನ ಅಣ್ಣ ಅಕ್ಕ ಚಿಕ್ಕಪ್ಪಂದಿರೇ ಅವರ ದೇಹವನ್ನು ಆಸ್ಪತ್ರೆಗೆ ದಾನ ನೀಡುವುದನ್ನು ವಿರೋಧಿಸಿದಾಗ ಅತ್ಯಂತ ಸೌಮ್ಯ ಸ್ವಭಾವದ ನಮ್ಮಮ್ಮ ಧೃಡವಾಗಿ ನಿಂತು ಅಪ್ಪನ ಕಡೆಯ ಆಸೆಯನ್ನು ನೆರವೇರಿಸಿದರು. ಸುಮಾರು ಐವತ್ತು ವರ್ಷಗಳ ಕಾಲ ಅವರೊಡನೆ ಇದ್ದ ನಾನು ಅವರಿಂದ ಅನೇಕ ಗುಣಗಳನ್ನು ಕಲಿತಿದ್ದೇನೆ. ಅಂತಹ ಅಪ್ಪನಿಗೆ ಒಂದು ಈ ಅಪ್ಪಂದಿರ ದಿನದಂದು ಒಂದು ಶ್ರದ್ಧಾಂಜಲಿ. ಅಪ್ಪನಿಗೊಂದು ನೆನಪಿನ ಶ್ರದ್ಧಾಂಜಲಿ

21 comments:

  1. ಚಂದ್ರಕಾಂತರವರೆ....

    ಬಹಳ ಆತ್ಮೀಯವಾಗಿ ಬರೆದ ಲೇಖನ....
    ದೇಹದಾನದ ಪತ್ರ ಕಣ್ಣಿಗೆ ಕಾಣುವಂತೆ ಇಟ್ಟ ನಿಮ್ಮ ತಂದೆಯವರ ಶಿಸ್ತಿನ ಜೀವನ ನಮಗೆಲ್ಲ ಒಂದು ಮಾದರಿ...
    ತಾವು ಯಾರಿಗೂ ಪರಭಾರೆಯಾಗಬಾರದೆನ್ನುವ ಅವರ ಗುಣವೂ ಇಷ್ಟವಾಯಿತು..

    ಹಾಗೆಯೇ..
    ಮುಗ್ಧ ಮನಸ್ಸಿನ ನಿಮ್ಮಮ್ಮ...
    ಅವರ ಕೊನೆಯ ಆಸೆ ನೆರವೇರಿಸಿದ್ದು...

    ಆತ್ಮವಿಶ್ವಾಸದ ಪ್ರತೀಕ ಅಪ್ಪ...
    ಮಮತೆವಾತ್ಸಲ್ಯದ ಪ್ರತಿರೂಪ ಅಮ್ಮ...

    ನೀವೇ ಧನ್ಯರು...

    ReplyDelete
  2. ಚಂದ್ರಕಾಂತ ಮೇಡಮ್,

    ನಿಮ್ಮ ತಂದೆ ನಿಮಗೆ ಸೈಕಲ್ ಕಲಿಸಿದ್ದು ಅದರ ಪರೀಕ್ಷೆ ನಡೆಸಿದ್ದು ಎಲ್ಲಾ ಓದುತ್ತಿದ್ದರೇ ನನಗೇ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಪರೀಕ್ಷೆಯಲ್ಲಿ ಅಲ್ಲಿನ ಇನ್ಸ್‌ಪೆಕ್ಟರ್ ನೆನಪಿಗೆ ಬಂತು. ವಿದ್ಯೆ ಕಲಿಸುವ ಬಗೆಗಿನ ವಿಚಾರದಲ್ಲಿ ಅವರ ಪರಿಪೂರ್ಣ ಕಾಳಜಿ ನನಗಿಷ್ಟವಾಯಿತು. ಇಂಥ ಅಪ್ಪ ಮತ್ತು ಅವರಿಗೆ ಹೊಂದಿಕೊಂಡಂತ ಅಮ್ಮನನ್ನು ಪಡೆದ ನೀವೆ ಧನ್ಯರು. ಕೊನೆಯಲ್ಲಿ ತಮ್ಮ ದೇಹವನ್ನು ಪೂರ್ತಿ ಆಸ್ಪತ್ರೆಗೆ ದಾನಮಾಡಲು ಬರೆದ ಪತ್ರ ಇಂದಿನ ಪೀಳಿಗೆಗೆ ಅನುಕರಣೀಯ....

    ನಿಮ್ಮ ಬಾಲ್ಯದ ವಿಚಾರ, ಅವಿಭಕ್ತ ಕುಟುಂಬ ಅದರಲ್ಲಿ ನಿಮ್ಮ ತಂದೆಯವರ ಜವಾಬ್ದಾರಿ...ಎಲ್ಲವನ್ನೂ ಮನಮುಟ್ಟುವಂತೆ ಬರೆದಿದ್ದೀರಿ...
    ಧನ್ಯವಾದಗಳು.

    ReplyDelete
  3. ಚಂದ್ರಕಾಂತಾ,
    ನಿಮ್ಮ ತಂದೆಯ ನಿಲುವು,ಇರುವಿಕೆ ಇವನ್ನೆಲ್ಲ ಓದಿ ಬೆರಗಾದೆ. ಇಂತಹ ತಂದೆಯನ್ನು ಪಡೆದ ನೀವು ಭಾಗ್ಯವಂತರು.

    ReplyDelete
  4. ಪ್ರಕಾಶ್

    ನಿಜವಾಗಿಯೂ ನನ್ನ ತಂದೆ ಶಿಸ್ತಿನ ಸಾಕಾರ ಮುರ್ತಿ. ಆದರೆ ಕಡೆಗಾಲದಲ್ಲಿ ಅವರು ಪರಿಸ್ಥಿತಿಗನಗುಣವಾಗಿ ಬಹಳಷ್ಟು ವಿಷಯಗಳಲ್ಲಿ compromise ಮಾಡಿಕೊಳ್ಳಬೇಕಾಯಿತು.

    ಅವರು ತಮ್ಮ ದೇಹ ದಾನ ಮಾಡುವ ಪತ್ರವನ್ನು ಎಲ್ಲರಿಗೂ ಕಾಣುವಂತೆ ಇಟ್ಟಿದ್ದು ಮಾತ್ರ ನಮಗೆಲ್ಲಾ ಅಚ್ಚರಿ ಉಂಟು ಮಾಡಿತ್ತು.ಅವರು ದೇಹದಾನ ಮಾಡಿದ್ದೆಂದರೆ ದೇಹದ ಅಂಗಾಂಗಗಳನ್ನು ದಾನ ಮಾಡಲಿಲ್ಲ( ಕಣ್ಣೊಂದನ್ನುಳಿದು) ಬದಲಿಗೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲಿಯುವುದಕ್ಕಾಗಿ ದೇಹ ದಾನ ಮಾಡಿದರು. ಅದು ನನಗೆ ಬಹಳ great ಅನ್ನಿಸಿತು.

    ನಿಮ್ಮ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete
  5. ಪ್ರಕಾಶ್

    ‘ಮೂರ್ತಿ’ ಎಂದುಕೊಂಡು ಓದಿ

    ReplyDelete
  6. ಶಿವು

    ಬಹಳ ಚೆನ್ನಾಗಿ ನನ್ನ ಬರಹವನ್ನು ವಿಶ್ಲೇಷಿಸಿರುವಿರಿ.ನಿಜ, ಅವರ ಕೆಲಸ ನೀವು ಹೋಲಿಸಿದಂತೆ DL ಕೊಡುವ ಇನ್ಸ್ಪೆಕ್ಟರ್ ಹಾಗೇ ಇತ್ತು. ಎಷ್ಟಾದರೂ ಅವರು ಇನ್ಸ್ಪೆಕ್ಟರ್ ಅಲ್ಲವೇ!?:))

    ReplyDelete
  7. ಸುನಾಥ್ ಸರ್
    ನಿಜವಾಗಿಯೂ ನನ್ನ ಅಪ್ಪನಂತ ಅಪ್ಪ ನನಗೆ ಸಿಕ್ಕಿದ್ದು ನನ್ನ ಪುಣ್ಯವೇ ಸರಿ. ಅವರ ಬಗ್ಗೆ ಹೇಳುತ್ತಾ ಹೊದರೆ ಅದಕ್ಕೆ ಅಂತ್ಯವೇ ಇಲ್ಲ.

    ReplyDelete
  8. ಮೇಡಂ,
    ಸಕ್ಕತ್ ಬರಹ, ನಿಮ್ಮ ತಂದೆಯ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರ. ನನಗೆ ನಿಮ್ಮ ಡಾಕ್ಯುಮೆಂಟರಿ ಬರಹಕ್ಕಿಂತ ನಿಮ್ಮನುಭವದ ಬರಹ ತುಂಬಾ ಆಪ್ತವಾಗಿ ಕಾಣಿಸುತ್ತೆ. ನಿಮ್ಮ ತಾಯಿ ಕೊನೇಗಳಿಗೆಯಲ್ಲಿ ತೋರಿಸಿದ ನಿಲುವು, ಅವರಿಬ್ಬರ ದಾಂಪತ್ಯ ಎಷ್ಟು ಅನ್ಯೋನ್ಯವಾಗಿತ್ತೆಂಬುದಕ್ಕೆ ಹಿಡಿದ ಕನ್ನಡಿ.

    ReplyDelete
  9. ನಿಮ್ಮ ತ೦ದೆಯವರನ್ನು ನೆನಪಿಸಿ ಬರೆದ ಲೇಖನ ಚೆನ್ನಾಗಿದೆ. ನೀವು ನಿಜಕ್ಕೂ ಧನ್ಯರು. ತಡವಾಗಿ ಓದಿದೆ.

    ReplyDelete
  10. ಪಾಲ ಅವರೆ.

    ಅನುಭವದ ಬರಹ ಯಾರದೇ ಆಗಿರಲಿ ಅದರಲ್ಲಿ ಜಿವಂತಿಕೆ ಹಾಗು ಸ್ವಂತಿಕೆ ಇರುವುದರಿಂದ ಚೆನ್ನಾಗಿರುತ್ತದೆ ಅಲ್ಲವೇ ?.

    ನೀವು ಗುರುತಿಸಿದಂತೆ ನಮ್ಮ ಅಪ್ಪ ಅಮ್ಮನದು ಅನುರೂಪ ಅನ್ಯೊನ್ಯ ದಾಂಪತ್ಯ. ನಮ್ಮ ತಂದೆ ತಮ್ಮ ಮದುವೆಯ ನಂತರ ನಮ್ಮ ಅಮ್ಮನಿಗೆ ಅಕ್ಷರಾಭ್ಯಾಸ ಮಾಡಿಸಿ ಬರೆಯುವುದನ್ನು ಹೇಳಿಕೊಟ್ಟಿದ್ದೆಂದು ಎಲ್ಲರೂ ಹೇಳುತ್ತಾರೆ.ಅವರು ಬರೆದ ಪತ್ರಗಳನ್ನು ನಮ್ಮಮ್ಮನೇ ಓದಬೇಕೆಂದು ಹಾಗೆ ಹೇಳಿಕೊಟ್ಟರಂತೆ. ಅಷ್ಟೇ ಅಲ್ಲ ನನ್ನ ಹಿರಿಯತ್ತಿಗೆ ಒಂದನೇ ತರಗತಿಗೇ ಶಾಲೆಗೆ ಬೆನ್ನು ಮಾಡಿದವರು- ಅವರಿಗೂ ಮದುವೆಯ ನಂತರ ಅಕ್ಷರಾಭ್ಯಾಸ ಮಾಡಿಸಿದರು.

    ReplyDelete
  11. ಪರಾಂಜಪೆಯವರೆ

    ತಡವಾಗಿ ಬಂದದ್ದಕ್ಕೆ ಬೇಸರಿಸಬೇಡಿ. ಅನೇಕ ದಿನಗಳ ನಂತರ ಬರುವ ಒಂದೊಂದು ಪ್ರತಿಕ್ರಿಯೆಯೂ ನನಗೆ ಖುಷಿ ತರುತ್ತದೆ.

    ಬ್ಲಾಗ್ ಗಳಲ್ಲಿ ಅನೇಕರು ಬರೆದ ಅಪ್ಪನ ಬಗೆಗಿನ ಬರಹಗಳನ್ನು ಓದಿದಾಗ ನಾನೆಷ್ಟು ಧನ್ಯೆ ಎಂದು ಅರ್ಥವಾಯಿತು. ಈಗ ನಮ್ಮಪ್ಪ ಇದ್ದಿದ್ದರೆ ಬ್ಲಾಗ್ ಗಳ ಬಗ್ಗೆಯೆಲ್ಲಾ ಕುತೂಹಲ ತೋರಿಸಿ ತಿಳಿದುಕೊಳ್ಳುತ್ತಿದ್ದರು. ಹೊಸ ವಿಷಯಗಳ ಬಗ್ಗೆ ಅಷ್ಟೊಂದು ಇಷ್ಟ ಅವರಿಗೆ.

    ReplyDelete
  12. hello madam,
    You had a Great Father...rather i must say .. you 'Have a Great Father' for such a person will always live through his wonderful thoughts and brave acts....

    ReplyDelete
  13. ಚ೦ದ್ರಕಾ೦ತಾ ಅವರೇ...

    ನಿಮ್ಮ ತ೦ದೆಯ ಬಗ್ಗೆ ಗೌರವ ಮೂಡಿತು ಲೇಖನ ಓದಿ ಮುಗಿಸಿದ ಮೇಲೆ... ಅ೦ತಹ ಅಪ್ಪನನ್ನು ಪಡೆದ ನೀವು ಅದೃಷ್ಟಶಾಲಿ....ಮನಸು ಮುಟ್ಟಿತು ಈ ಲೇಖನ....

    ReplyDelete
  14. (ನೀವು ತಡವಾಗಿ ಬಂದದ್ದಕ್ಕೆ ಬೇಸರಿಸಿಕೊಳ್ಳಬೇಡಿ ಎಂದು ಮೇಲೆ ಬರೆದಿರುವುದನ್ನು ನಾನೂ ಅನ್ವಯಿಸಿಕೊಂಡುಬಿಟ್ಟುದ್ದೇನೆ!)

    ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ. ಹಿಂದೆ ನೀವು ನಿಮ್ಮ ತಾಯಿಯ ಬಗೆಗೆ ಬರೆದಿದ್ದಿರಿ. ಆಗಲೂ ನನಗೆ ಏನು ಬರೆಯಬೇಕೆಂದು ತೋಚಲಿಲ್ಲ, ಈಗಲೂ ಅಷ್ಟೆ. ಒಟ್ಟಿನಲ್ಲಿ ಎರಡು ಲೇಖನಗಳೂ ಬಹಳ ಭಾವನಾತ್ಮಕವಾಗಿದೆ. ನಾವು ಯಾರೇ ಆಗಲೀ, ತಂದೆ ತಾಯಿಯೊಂದಿಗಿನ ಬೆರೆಯುವ ಪ್ರಸಂಗಗಳು ಬೇರೆಯಾದರೂ ಅನುಭವ ಒಂದೇ ಆಗಿರುತ್ತದೆಯಲ್ಲವೇ?

    ReplyDelete
  15. ಚಂದ್ರಕಾಂತ ಮೇಡಂ,
    ಅಮ್ಮ- ಜನ್ಮದಾತೆ..ಆಕೆ ಕಣ್ಣಿಗೆ ಕಾಣುವ ದೇವರು..ಇದು ಎಲ್ಲರೂ ಒಪ್ಪುವ ಮಾತು...ಆ ದೇವರಿಗೆ ದೇವರು...ಪತಿದೇವರು ಅಂದರೆ ತಂದೆ ನಮಗೆ...ಎಂತಹ ಸುಮುಧುರ ಬಂಧಗಳ ಬಾಂಧವ್ಯವಿದು..??!!! ಅಲ್ಲವೇ..?? ತಾಯಿ ತಕ್ಷಣ ಮಿಡಿವ ಸಹೃದಯಿಯಾದರೆ ತಂದೆ ತಿದ್ದಿ ಬುದ್ದಿ ಹೇಳುವ ಸಿದ್ಧಿಯಿರುವಾತ...ತಂದೆಗೆ ನಿಮ್ಮ ಶ್ರದ್ಧಾಂಜಲಿ ನಿಜಕ್ಕೂ ಅಭಿನಂದನಾರ್ಹ.
    ಚನ್ನಾಗಿದೆ ನಿಮ್ಮ ಲೇಖನ.

    ReplyDelete
  16. ಮೇಡಂ,
    ನಿಮ್ಮ ತಂದೆ ನಿಜಕ್ಕೂ ಗ್ರೇಟ್. ಅಂತಹ ತಂದೆ ಪಡೆದ ನೀವೂ ಧನ್ಯರು. ಮನೆ ಮಾಡದಿದ್ದರೇನಂತೆ ಅಷ್ಟು ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಬೆಳೆಸುವುದು ಸುಮ್ಮನೆ ಮಾತಲ್ಲ. ಇರುವ ಒಬ್ಬೊಬ್ಬ ಮಕ್ಕಳನ್ನು ಬೆಳೆಸಲೇ ಒದ್ದಾಡುವ ದಿನಗಳಿವು! ನಿಮ್ಮ ತಂದೆ ಬಗ್ಗೆ ಓದಿ ಖುಷಿಯಾಯಿತು.

    ReplyDelete
  17. ಈ ಬೆಂಗಳೂರಿನಲ್ಲಿ ಹೇಗೆ ಹುಡುಕುವದು ನಿಮ್ಮನ್ನು....

    ಏನಾದರೂ ಬರೆಯಿರಿ....
    ಪ್ಲೀಸ್...

    ReplyDelete
  18. ಮೆಡಂ,
    ತಂದೆಯ ಬಗ್ಗೆ ಬರೆದ "ಅಪ್ಪನಿಗೊಂದು ನೆನಪಿನ ಶ್ರದ್ದಾಂಜಲಿ" ತುಂಬಾ ಚನ್ನಾಗಿದೆ,
    ಅಭಿನಂದನೆಗಳು

    ** ಮಂಜುನಾಥ ತಳ್ಳಿಹಾಳ

    ReplyDelete
  19. ಮಲ್ಲಿಕಾರ್ಜುನ ಅವರೆ

    ಅನೇಕ ದಿನಗಳಿಂದ ಬ್ಲಾಗ್ ಲೋಕದ ಕಡೆ ಕಣ್ಣುಹಾಯಿಸದೆ ಇದ್ದುದರಿಂದ ಈಗ ಪ್ರತಿಕ್ರಿಯಿಸುತ್ತಿರುವೆ.ನೀವು ಹೇಳಿದ ಮಾತು ಅಕ್ಷರಶಃ ನಿಜ. ಮನೆ ಮಾಡುವುದಕ್ಕಿಂತ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿಸುವುದು ಕಷ್ಟದ ಕೆಲಸ.ಕೈತುಂಬಾ ಸಂಪಾದನೆ ಇರುವ ತಾಯ್ತಂದೆಗಳಿಗಂತೂ ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳಸುವುದು ಒಂದು ಸವಾಲೇ ಸರಿ.

    ReplyDelete
  20. ಪ್ರಕಾಶ್

    ಏಕೋ ಇತ್ತೀಚೆಗೆ ಬ್ಲಾಗ್ ಪ್ರಪಂಚದೆಡೆ ಕಣ್ಣುಹಾಯಿಸಲೇ ಮನಸ್ಸು ಬರಲಿಲ್ಲ. ಆದ್ದರಿಂದ ಸ್ವಲ್ಪ ಬಿಡುವು ಕೊಟ್ಟುಕೊಂಡಿದ್ದೆ.
    ಕಳಕಳಿಗೆ ಧನ್ಯವಾದ.

    ReplyDelete
  21. ಮಂಜುನಾಥ

    ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದ

    ReplyDelete