Friday, September 4, 2009

ಶಿಕ್ಷಕರ ದಿನಾಚರಣೆಯಂದು ನನ್ನ ಶಿಕ್ಷಕರನ್ನು ಸ್ಮರಿಸುತ್ತಾ....



ಶಿಕ್ಷಕರ ದಿನಾಚರಣೆಯಂದು ನನ್ನ ಶಿಕ್ಷಕರನ್ನು ಸ್ಮರಿಸುತ್ತಾ....


ಬದುಕಿನ ಅರ್ಧಶತಮಾನ ಪೂರೈಸಿದ ಸಂದರ್ಭದಲ್ಲಿ ನನ್ನ ಬಾಲ್ಯದ ದಿನಗಳನ್ನು ಒಮ್ಮೆ ಹಿಂದಿರುಗಿನೋಡಿದರೆ ಅಲ್ಲಿ ನನಗೆ ಸಂತೋಷ ಕೊಡುವುದು ನನ್ನ ಶಾಲಾದಿನಗಳೆ. ನನ್ನ ಮಾಧ್ಯಮಿಕ ಹಾಗೂ ಪ್ರೌಢಶಾಲಾದಿನಗಳು ಮತ್ತೆ ಮರಳಿ ಬಾರವೇ ಎಂಬ ವಿಷಾದವೂ ಮನಸ್ಸನ್ನು ತುಂಬುತ್ತದೆ. ಸಾಮಾನ್ಯವಾಗಿ ಎಲ್ಲರೂ ಕಾಲೇಜಿನ ದಿನಗಳನ್ನು ಬಂಗಾರದ ದಿನಗಳು ಎನ್ನುತ್ತಾರೆ. ನನಗೆ ಮಾತ್ರ ನನ್ನ ಹೈಸ್ಕೂಲ್ ದಿನಗಳೆ ಬಂಗಾರದ ದಿನಗಳು. ಒಬ್ಬ ಶಿಕ್ಷಕಿಯ ಮಾತಿನಿಂದ ಟೀಚರ್ ಅಗಲೇ ಬಾರದೆಂದು ನಿರ್ಧರಿಸಿದ್ದ ನಾನು ಅದೇ ಶಾಲೆಯ ಮತ್ತೊಬ್ಬ ಶಿಕ್ಷಕರ ಪಾಠದಿಂದ ಶಿಕ್ಷಕ ವೃತ್ತಿಯನ್ನು ಮನದಾಳದಲ್ಲೇ ಇಷ್ಟಪಟ್ಟಿದ್ದೆನೇನೋ. ಆದರೆ ಅದು ನನಗೆ ಅರ್ಥವಾಗಿದ್ದು ಎಷ್ಟೋ ವರ್ಷಗಳ ನಂತರ.

ನನ್ನ ಶಿಕ್ಷಕರನ್ನು ನೆನೆದುಕೊಳ್ಳುವಾಗ ಮೊದಲು ಹೇಳಬೇಕಾದ ಹೆಸರು ದಾವಣಗೆರೆಯ ಸೆಂಟ್ ಪಾಲ್ಸ್ ಕಾನ್ವೆಂಟಿನ ಕನ್ನಡ ಪಾಠ ಮಾಡುತ್ತಿದ್ದ ಕನ್ನಡ ಪಂಡಿತರು. ಅವರ ಹೆಸರು ನಂಜಪ್ಪ ಮಾಸ್ತರು. ನಾನು ಕನ್ನಡ ಆನರ್ಸ್ ಓದಿ ಎಂ.ಎ. ಮುಗಿಸಿ ಕನ್ನಡ ಉಪನ್ಯಾಸಕಿ ಆಗಲು ಅವರೇ ಪರೋಕ್ಷ ಕಾರಣ ಎಂದು ಈಗ ಅನಿಸುತ್ತದೆ. ಅವರು ಪಾಠ ಮಾಡುತ್ತಿದ್ದ ರೀತಿ ಅನನ್ಯ.ಅವರು ಪಾಠ ಮಾಡಿದ " ಜಾಬಾಲಿ ಋಷಿ ಹೇಳಿದ ಕತೆ " ಮತ್ತು " ಚಂದನದಾಸನ ಕತೆ "ಈಗಲೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಹಾಗೆ ಉಳಿದಿರುವುದಕ್ಕೆ ಕಾರಣ ಆ ಮಾಸ್ತರೇ.

ನಾಗವರ್ಮನ ಕಾದಂಬರಿ ಕಾವ್ಯದಿಂದ ಆರಿಸಿದ " ಜಾಬಾಲಿ ಋಷಿ ಹೇಳಿದ ಕತೆ" ನಮ್ಮ ಪಠ್ಯಪುಸ್ತಕದಲ್ಲಿತ್ತು. ಜಾಬಾಲಿ ಋಷಿಗಳ ಆಶ್ರಮಕ್ಕೆ ಅವರ ಶಿಷ್ಯರಿಬ್ಬರು ಒಮ್ಮೆ ಒಂದು ಪುಟ್ಟಗಿಳಿಯನ್ನು ತರುತ್ತಾರೆ. ಆಗ ಜಾಬಾಲಿ ಹೇಳಿದ್ದು " ಈ ಗಿಳಿ ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದೆ". ಶಿಷ್ಯರು " ಗುರುಗಳೇ ಈ ಗಿಳಿಯ ಕತೆ ಹೇಳಿ ? ಎನ್ನುತ್ತಾರೆ. ಆಗ ಆ ಋಷಿ "ನಾಳೆ ಕತೆ ಹೇಳುತ್ತೇನೆ."ಎನ್ನುತ್ತಾನೆ. ಕುತೂಹಲದಿಂದ ಪಾಠ ಕೇಳುತ್ತಿದ್ದ ನಮಗೆ ಪಾತಾಳಕ್ಕೆ ತಳ್ಳಿದಂತಾಯಿತು. ಕಾರಣ ನಮ್ಮ ಪಾಠದಲ್ಲಿ ಅದೇ ಕಡೆಯ ವಾಕ್ಯವಾಗಿತ್ತು!! ನಾವೆಲ್ಲಾ ನಮ್ಮ ಮಾಸ್ತರರನ್ನು ಆ ಗಿಳಿಯ ಕತೆ ಏನು? ಎಂದು ಪೀಡಿಸಿದಾಗ ಅವರು ನಮಗೆ ಇಡೀ ಕಾದಂಬರಿ ಕಾವ್ಯದ ಕತೆಯನ್ನು ಸರಳವಾಗಿ ಸಂಕ್ಷಿಪ್ತವಾಗಿ ಹೇಳಿ ಮನತಣಿಸಿದ್ದರು.

ಅದೇ ರೀತಿ " ಚಂದನದಾಸನ ಕತೆ" ಹೇಳುವಾಗ ಚಾಣಕ್ಯ ಮತ್ತು ಚಂದ್ರಗುಪ್ತರ ಇಡೀ ಕತೆಯನ್ನು ಹೇಳಿ ಸ್ನೇಹಿತರೆಂದರೆ ಹೀಗಿರಬೇಕು ಎಂದಿದ್ದರು. ಇರುವಷ್ಟು ಮಾತ್ರ ಹೇಳದೆ ನಾಗವರ್ಮನ ಕಾದಂಬರಿ ಕಾವ್ಯದ ಕತೆಯನ್ನು, ಮತ್ತು " ಮುದ್ರಾರಾಕ್ಷಸ "ನ ಕತೆಯನ್ನು ಸರಳವಾಗಿ ಆದರೆ ಮನಮುಟ್ಟುವಂತೆ ಹೇಳಿದ್ದು ಆಗ ವಿಶೇಷ ಅನ್ನಿಸಲಿಲ್ಲ. ಆದರೆ ದೊಡ್ಡವರಾಗುತ್ತಾ ಅವರ ಪಾಠದ ವಿಶೇಷತೆಯ ಅರಿವು ನನಗಾಯಿತು.

ಈ ಮಾಸ್ತರರ ಜೊತೆ ಸ್ಮರಿಸಲೇ ಬೇಕಾದವರು ನಮ್ಮ ಲೆಕ್ಕದ ಸುಶೀಲಾ ಮೇಡಮ್ ಮತ್ತು ಇತಿಹಾಸ ಬೋಧಿಸುತ್ತಿದ್ದ ಬಾಲಾಮಣಿ ಮೇಡಮ್.ಆದರೆ ಬೇರೆ ಬೇರೆ ಕಾರಣಗಳಿಗಾಗಿ. ಸುಶೀಲಾ ಮೇಡಮ್ ದಾವಣಗೆರೆಯಲ್ಲಿ ಬಹುಮಟ್ಟಿಗೆ ಎಲ್ಲರಿಗೂ ಅತ್ಯಂತ ಮೃದು ಹೃದಯಿ ಎಂದೇ ಚಿರಪರಿಚಿತರು.ಕೇವಲ ಪಾಠ ಮಾಡುವುದಲ್ಲದೆ ಎಲ್ಲ ವಿದ್ಯಾರ್ಥಿಗಳಿಗೂ ತಾಯಿಯ ಸ್ಥಾನದಲ್ಲಿ ಇದ್ದವರು.ಆದರೆ ಬಾಲಾಮಣಿ ಮೇಡಮ್ ಬಗ್ಗೆ ಹಾಗೆ ಹೇಳಲಾಗದು.ಶಾಲೆಯ ಎಲ್ಲ ವಿದ್ಯಾರ್ಥಿಗಳೂ ಅವರ ಹೆಸರು ಕೇಳಿದರೂ ಹೆದರುತ್ತಿದ್ದರು.ಆ ಹೆದರಿಕೆಯನ್ನು ಮೀರಿ ಕೆಲವೊಮ್ಮೆ ಗಲಾಟೆ ಮಾಡಿದರೆ ಅವರ ಕೆಂಗಣ್ಣಿಗೆ ಗುರಿಯಾಗಬೇಕಿತ್ತು. ಒಮ್ಮೆ ಅವರು ತರಗತಿಯಿಂದ ಹೊರಗೆ ಹೋಗಿದ್ದಾಗ ಯಥಾಪ್ರಕಾರ ಮಕ್ಕಳೆಲ್ಲಾ ಬಾಲವಿಲ್ಲದ ಕಪಿಗಳಂತಾಗಿದ್ದರು.ನನ್ನ ಗ್ರಹಚಾರಕ್ಕೆ ಅವರು ಕೋಣೆಯೊಳಗೆ ಬಂದಾಗ ಗಟ್ಟಿಯಾಗಿ ಮಾತನಾಡುತ್ತಿದ್ದ ನಾನು ಅವರ ಕಣ್ಣಿಗೆ ಬಿದ್ದೆ. ಸರಿ ಎಣಿಸಿದ್ದಂತೇ ಸಹಸ್ರ ನಾಮಾರ್ಚನೆಯಾಯಿತು. ಆಗ ಅವರು ಹೇಳಿದ ಒಂದು ಮಾತು ನನ್ನನ್ನು ಅನೇಕ ದಿನಗಳವರೆಗೆ ಕಾಡಿದ್ದುಂಟು.

"ನೀನು ದೊಡ್ಡವಳಾದ ಮೇಲೆ ಟೀಚರ್ ಆಗ್ತೀಯಲ್ಲ, ಆಗ ನನ್ನನ್ನು ನೆನಸಿಕೊಳ್ಳದಿದ್ದರೆ ಕೇಳು " ಎಂದು ಗುಡುಗಿದರು.

ಕೆಲವು ದಿನಗಳ ಹಿಂದೆ ನಡೆದ ಭಾಷಣ ಸ್ಪರ್ಧೆಗೆ ಬಾಲಾಮಣಿ ಮೇಡಮ್ ಜಡ್ಜ್ ಆಗಿದ್ದರು ಹಾಗು ನಾನೆ ಪ್ರಥಮ ಬಹುಮಾನ ಪಡೆದಿದ್ದೆ. ಆ ದಿನದ ಭಾಷಣದ ವಿಷಯ "ನಾನು ಶಿಕ್ಷಕಿಯಾಗಲು ಏಕೆ ಬಯಸುವೆ? " . ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಸ್ಪರ್ಧೆ ಅದಾಗಿತ್ತು ! ಆ ಬಾಲ್ಯದ ದಿನಗಳಲ್ಲಿ ಅವರ ಬಯ್ಗಳಿಂದ ನನಗೆಷ್ಟು ಭಯವಾಗಿತ್ತೆಂದರೆ ಮುಂದೆ ಶಿಕ್ಷಕಿಯಾಗಲೇಬಾರದೆಂದು ಅಂದೇ ಗುಟ್ಟಾಗಿ ನಿರ್ಧರಿಸಿದ್ದೆ. ಆಶ್ಚರ್ಯವೆಂದರೆ ಮುಂದೆ ನಾನು ಅಧ್ಯಾಪಕಿಯಾಗಬೇಕಾಯಿತು. ಅದು ನನ್ನ ಮೆಚ್ಚಿನ ವೃತ್ತಿಯೂ ಹೌದು. ಅವರನ್ನು ಅನೇಕ ಬಾರಿ ನೆನಪಿಸಿಕೊಳ್ಳುತ್ತೇನೆ. ಅವರ ಶಾಪ ವರವಾದ ಬಗೆಯನ್ನು ಅಚ್ಚರಿಯಿಂದ ಮೆಲುಕುಹಾಕುತ್ತೇನೆ.

ಈ ಅಧ್ಯಾಪಕರೊಂದಿಗೆ ಇತರ ವಿಷಯಗಳನ್ನು ಬೋಧಿಸುತ್ತಿದ್ದ ಲೀಲಾ ಮೇಡಮ್, ಸಿಸ್ಟರ್ ಮೇರಿ ,ಸಿಸ್ಟರ್ Anne, ಸಿಸ್ಟರ್ ಜೆಸ್ಸಿಕ ಇವರೆಲ್ಲರೂ ಸ್ಮರಣೀಯರು.ನನ್ನ ತಂದೆ ಸರಕಾರಿ ನೌಕರರಾಗಿದ್ದರಿಂದ ಮುಂದೆ ಪದವಿಪೂರ್ವ ತರಗತಿ ತುಮಕೂರಿನಲ್ಲಾಯಿತು.ಕೇವಲ ಬಾಲಕಿಯರ ಪ್ರೌಢಶಾಲೆಯಲ್ಲಿ ಓದಿದ್ದ ನನಗೆ ತುಮಕೂರಿನ ಸರಕಾರಿ ಕಾಲೇಜು ಬಹಳ ಭಯ ಉಂಟುಮಾಡಿತು. ಆಗ ಅದು ಪದವಿ,ಪದವಿಪೂರ್ವ ,ವಿಜ್ಞಾನ, ಕಲಾವಿಭಾಗ ಎಲ್ಲವನ್ನೂ ಒಳಗೊಂಡ ಬಹು ದೊಡ್ಡ ಕಾಲೇಜಾಗಿತ್ತು.ಆ ಕಾಲೇಜನ್ನು ನೋಡಿಯೇ ನಾನು ಭಯ ಪಟ್ಟಿದ್ದೆ. ಅದಕ್ಕೆ ಸರಿಯಾಗಿ ನಾನು ಓದುತ್ತಿದ್ದ ವಿಜ್ಞಾನದ ವಿಭಾಗದಲ್ಲಿ ಅರವತ್ತು ಜನ ಬಾಲಕರ ತರಗತಿಯಲ್ಲಿ ನಾವು ಕೇವಲ ನಾಲ್ಕು ಹುಡುಗಿಯರಿದ್ದೆವು. ಹೆದರಿಕೆಯಿಂದ ಗುಬ್ಬಚ್ಚಿಗಳಂತೆ ಮುದುರಿಕೊಂಡಿರುತ್ತಿದ್ದ ನಮಗೆ ಇಂಗ್ಲೀಷ್ ಮತ್ತು ಕನ್ನಡ ಅಧ್ಯಾಪಕರ ಪಾಠ ಹೊಸ ಚೇತನ ಕೊಡುತ್ತಿತ್ತು. ಇಂಗ್ಲೀಷ್ ಅಧ್ಯಾಪಕರಾದ ಸುಭಾನ್ ಸರ್ ಅದೆಷ್ಟು ಚೆನ್ನಾಗಿ ಪಾಠ ಮಾಡುತ್ತಿದ್ದರೆಂದರೆ ಇದ್ದಕ್ಕಿದ್ದಂತೆ ನನಗೆ ಇಂಗ್ಲೀಷ್ ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ ಮೂಡಿತು. ರವೀಂದ್ರನಾಥ ಟಾಗೋರ್ ನನ್ನ ಮೆಚ್ಚಿನ ಲೇಖಕರಾಗಿದ್ದಕ್ಕೆ ಪರೋಕ್ಷ ಕಾರಣ ಆ ಮಾಸ್ತರೇ. ನಮ್ಮ ಪಠ್ಯದಲ್ಲಿದ್ದ " ಸುಭಾ" ಎಂಬ ಪಾಠವನ್ನು ಅದೆಷ್ಟು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದರೆಂದರೆ ನಾವೆಲ್ಲಾ ಆ ಸುಭಾಳ ದುಃಖದಲ್ಲಿ ಪಾಲುದಾರರಾಗಿದ್ದೆವು. ಮುಂದೆ ಪದವಿ ತರಗತಿಯಲ್ಲಿದ್ದಾಗ ಅಹೋಬಲ ಶಂಕರರ ರವೀಂದ್ರಕಥಾಮಂಜರಿಯ ಮೂರು ಭಾಗಗಳನ್ನೂ ಓದಿ ಮುಗಿಸಿದೆ. ಬಂಗಾಳ ಭಾಷೆಗೆ ಬಹು ಹತ್ತಿರವಾದ ಅನುವಾದಗಳಿವು. ಅದರಲ್ಲಿ ಸುಭಾಷಿಣಿಯ ಕತೆ ಓದಿದಾಗ ತಿಳಿಯಿತು , ಇದರ ಮುಂದೆ ಇಂಗ್ಲೀಷ್ ಅನುವಾದದ ಆ ಕಥೆ ಎಷ್ಟು ಸಪ್ಪೆಯಾಗಿತ್ತೆಂದು. ಅಂತಹ ಸಪ್ಪೆ ಪಾಠವನ್ನೇ ಆ ಮಾಸ್ತರು ರಸಭರಿತ ಕಥೆಯನ್ನಾಗಿಸಿದ್ದರು.ಅದೇ ರೀತಿ ಕನ್ನಡ ವಿಭಾಗದ ಮಾಸ್ತರುಗಳೂ ಮರೆಯಲಾಗದ ಪಾಠಗಳನ್ನು ಮಾಡಿದ್ದರು.

ಬಹುಶಃ ನನಗೇ ಅರಿವಿಲ್ಲದಂತೆ ಬಾಲ್ಯದಿಂದ ನನಗೆ ಸಾಹಿತ್ಯ ಮೆಚ್ಚುಗೆಯ ವಿಷಯವಾಗಿತ್ತೆನಿಸುತ್ತದೆ. ಹತ್ತನೆಯ ತರಗತಿಯಲ್ಲಿ ಒಳ್ಳೆಯ ಅಂಕಗಳು ಬಂದಿತ್ತೆಂದು ಮುಂದೆ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡೆ. ಆದರೆ ಈಗ ಅದರ ಒಂದು ಪಾಠವೂ ನೆನಪಿಲ್ಲ. ಮುಂದೆ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳನ್ನು ಓದುವಾಗ ರಂ.ಶ್ರೀ. ಮುಗಳಿ, ಡಾ. ಜಿ.ಎಸ್.ಶಿವರುದ್ರಪ್ಪ , ಚಂದ್ರಶೇಖರ ಕಂಬಾರ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು, ಚಿದಾನಂದಮೂರ್ತಿ, ಮುಂತಾದವರ ಪಾಠ ಕೇಳುವ ಅವಕಾಶ ಒದಗಿತು.

ನನ್ನ ಎಲ್ಲ ಶಿಕ್ಷಕರಿಗೂ ಈ ಮೂಲಕ ಕೃತಜ್ಞತೆಗಳನ್ನು ಮತ್ತು ಶಿಕ್ಷಕರ ದಿನದ ಶುಭಾಶಯಗಳನ್ನು ಅರ್ಪಿಸುವೆ. ಇವರೆಲ್ಲರ ಜೊತೆ ಮತ್ತೊಬ್ಬರನ್ನು ನಾನು ನೆನೆಯಲೇ ಬೇಕು. ಕವನ ಓದುವುದು ಹೇಗೆ? ಅದನ್ನು ವಿಶ್ಲೇಷಿಸುವುದು ಹೇಗೆ? ಮುಂತಾದ ಅನೇಕ ಸೂಕ್ಷ್ಮಗಳನ್ನು ನನಗೆ ಮನದಟ್ಟು ಮಾಡಿ ನಾನು ಅಧ್ಯಾಪಕಿಯಾಗಲೊಲ್ಲೆ ಎಂದಾಗ ಅದು ನನ್ನಿಂದ ಸಾಧ್ಯ ಎಂಬ ಆತ್ಮವಿಶ್ವಾಸ ಮೂಡಿಸಿದ , ಕನ್ನಡ ಪ್ರಾಧ್ಯಾಪಕರಾದ ನನ್ನವರಿಗೆ ಈ ಶಿಕ್ಷಕರ ದಿನದಂದು ಶುಭ ಹಾರೈಕೆ.






27 comments:

  1. ಚಂದ್ರಕ್ಕಾ,
    ಟೀಚರ್ ಆಗುತ್ತೇನೆ ಎಂದು ಚಿಕ್ಕವರಿದ್ದಾಗ ಸಾಧಾರಣವಾಗಿ ಎಲ್ಲ ಮಕ್ಕಳೂ ಕನಸು ಕಾಣುತ್ತಾರೆ. ಆ ವಯಸ್ಸಿನಲ್ಲಿ ಶಿಕ್ಷಕರೆಂದರೆ ಎಲ್ಲವೂ ತಿಳಿದವರು , ತುಂಬಾ ಪ್ರಭಾವ ಶಾಲಿಗಳು ( ಏಕೆಂದರೆ , ನಮ್ಮ ಅಪ್ಪ ಅಮ್ಮಂದಿರ ಮೇಲೆ ' ಪ್ರಭಾವ ' ಬೀರಿ ನಮಗೇ ಬಯ್ಗುಳ - ಹೊಡೆತ ಬೀಳುವಂತೆ ಮಾಡುತ್ತಾರೆ ಎಂಬುದು ಮುಖ್ಯ ಕಾರಣ ) ಯಾರನ್ನು ಬೇಕಾದರೂ ಹೆದರಿಸ ಬಲ್ಲರು ಎಂಬ ನಂಬಿಕೆ . ಆದರೆ ದೊಡ್ಡವರಾದ ಮೇಲೆ ಆ ಕನಸನ್ನು ನನಸು ಮಾಡಿಕೊಳ್ಳುವವರು ಬಹಳ ಕಮ್ಮಿ . ನೀವು ಆಗುವುದಿಲ್ಲ ಎಂದುಕೊಂಡೆ ಶಿಕ್ಷಕಿಯಾಗಿಬಿಟ್ಟಿದ್ದೀರಿ ! ನಾನೂ ಒಬ್ಬ ಶಿಕ್ಷಕರ ಮಗಳು ಹಾಗೂ ಇನ್ನೊಬ್ಬ ಶಿಕ್ಷಕರ ಸೊಸೆ . ಹಾಗಾಗಿ ಈ ವೃತ್ತಿಯ ಕಷ್ಟ ಸುಖ ಎರಡನ್ನೂ ಬಲ್ಲೆ ! ಈ ವೃತ್ತಿ ಎಷ್ಟೋ ಸಲ ಜನ ಸಾಮಾನ್ಯರ ಕಣ್ಣಿಗೆ ಅತೀ ಸಾಧಾರಣವಾಗಿ ಕಂಡರೂ ಶಿಕ್ಷಕರಿಗಿರುವ ಗೌರವವನ್ನು ಅಳೆಯಲಾಗದು ! ತಮ್ಮ ಯಾವುದೋ ಒಂದು ಸಣ್ಣ ಮಾತಿನಿಂದಲೂ ವಿದ್ಯಾರ್ಥಿಗಳ ಜೀವನದಲ್ಲಿ ದೊಡ್ಡ ತಿರುವನ್ನು ಕೊಡುವ ಸಾಮರ್ಥ್ಯ ಇವರಿಗಿದೆ ಎಂದೇ ನನ್ನ ಭಾವನೆ !

    ReplyDelete
  2. ಚಂದ್ರಕಾಂತ ಮೇಡಾಮ್,

    ನನಗೂ ಒಮ್ಮೆ ಮೇಷ್ಟ್ರು ಆಗಬೇಕೆನ್ನುವ ಆಸೆಯಿತ್ತು. ದಿನಕಳೆದಂತೆ ನನ್ನ ಚಟುವಟಿಕೆ ವಲಯ ಯಾವ ಕಡೆಗೆ ಸೆಳೆಯುತ್ತದೋ ಅದಾಗಬೇಕೆಂದು ಬಯಸುತ್ತಿದ್ದೆ. ಎಲ್ಲವೂ ಕೆಲವು ತಿಂಗಳುಗಳ ಗುರಿಗಳು. ಈಗೇನು ಆಗಿದ್ದೇನೋ ಅದು ನನಗೆ ಅರಿಯದೆ ಆಗಿದ್ದು. ಬಾಲ್ಯದ ದಿನಗಳಲ್ಲಿ ನಮ್ಮ ಕಲ್ಪನೆಗಳು ಎಷ್ಟು ಚೆನ್ನಾ ಅಲ್ವಾ ಮೇಡಾಮ್, ಈಗಲೂ ನನಗನ್ನಿಸುವುದು ಶಿಕ್ಷಕ ವೃತ್ತ್ತಿಯೇ ಅತ್ಯುನ್ನತವಾದುದು ಅಂತ.

    ನೀವು ಒಬ್ಬ ಉಪನ್ಯಾಸಕಿಯಾಗಿರುವುದರಿಂದ...ಶಿಕ್ಷಕ ದಿನಾಚರಣೆಯ ಶುಭಾಶಯಗಳು.

    ReplyDelete
  3. ಚಿತ್ರಾ

    ನೀವು ಶಿಕ್ಷಕರ ಮಗಳು ಹಾಗೂ ಸೊಸೆ ಎಂದು ಕೇಳಿ ಸಂತಸವಾಯಿತು. ನಿಮ್ಮ ಮಕ್ಕಳಿಗೆ ಒಳ್ಳೆಯ ಬಾಲ್ಯ ಸಿಗುತ್ತದೆ.

    ನಾನು ಶಿಕ್ಷಕಿಯಾಗಿದ್ದೇ ಒಂದು ರೋಚಕ ಕತೆ. ಅದನ್ನು ಮುಂದೊಮ್ಮೆ ಬರೆಯುವೆ.

    ನೀವು ಹೇಳಿದ ಒಂದು ಮಾತಂತೂ ಸತ್ಯ. ಶಿಕ್ಷಕರು ತಾಯಿ-ತಂದೆಗಳ ಮೇಲೇ ಪ್ರಭಾವ ಬೀರುವ ಸಾಮರ್ಥ್ಯ ಇರುವವರು.

    ReplyDelete
  4. ಚಿತ್ರಾ

    ನೀವು ಹೇಳುವಂತೆ ಮೇಲ್ನೋಟಕ್ಕೆ ಇದು ಸಾಮಾನ್ಯ ವೃತ್ತಿಯಾಗಿ ಕಾಣಬಹುದು. ಆದರೆ ಇದರ ವಿಶೇಷವೇನೆಂದರೆ ಪ್ರತಿಯೊಬ್ಬ ವ್ಯಕ್ತಿಯೂ ಅವನು ಯಾವುದೇ ಹುದ್ದೆಯಲ್ಲಿರಲಿ , ತನ್ನ ಶಿಕ್ಷಕರನ್ನು ನೆನೆದೇ ನೆನೆಯುತ್ತಾನೆ.
    ನಮ್ಮ ವೃತ್ತಿಯ ಇನ್ನೊಂದು ವಿಶೇಷವೆಂದರೆ ನಾವು ಸದಾಕಾಲ ಯುವಜನತೆಯ ನಡುವೆಯೇ ಇರುವುದರಿಂದ ನಮ್ಮ ಮನಸ್ಸುಗಳೂ ಉಲ್ಲಸಿತವಾಗಿರುತ್ತವೆ.ಶಿಕ್ಷಕರ ಮಾತುಗಳು ವಿದ್ಯಾರ್ಥಿಗಳ ಮೇಲೆ ಬೀರುವ ಪ್ರಭಾವ ಅಪಾರವಾದದ್ದು. ನಾವು ಯಾವ ವಿದ್ಯಾರ್ಥಿಯನ್ನು ಹೆಚ್ಚಿಗೆ ಬೈದಿರುತ್ತೇವೋ ಅವರೇ ಮುಂದೆ ನಮ್ಮನ್ನು ಆತ್ಮೀಯವಾಗಿ ಮಾತನಾಡಿಸಿಕೊಂಡು ಬರುತ್ತಾರೆ.

    ReplyDelete
  5. ಶಿವೂ

    ಚಿಕ್ಕ ವಯಸ್ಸಿನಲ್ಲಿ ನಮ್ಮ ಗುರಿಗಳು ಬದಲಾಗುತ್ತಾ ಹೋಗುವುದು ಸಹಜವೇ! ನಾನೂ ಸಹ ಉಪನ್ಯಾಸಕಿ ಆಗಬೇಕೆಂದುಕೊಂಡಿರಲಿಲ್ಲ. ಅದು ಆದ ರೀತಿಯೂ ವಿಶೇಷವಾದದ್ದೆ. ನೀವು ಹೇಳುವಂತೆ ಶಿಕ್ಷಕ ವೃತ್ತಿ ಶ್ರೇಷ್ಟವಾದದ್ದೇ. ಆದರೆ ಶಿಕ್ಷಕರಾಗುವವರು ತಾಳ್ಮೆ,ಉತ್ತಮ ಸಂವಹನ ಕೌಶಲ ಹೊಂದಿರುವುದಲ್ಲದೆ ಮಕ್ಕಳನ್ನು ಅರಿತುಕೊಳ್ಳುವ ವಿಶಾಲ ಮನಸ್ಸುಳ್ಳವರಾಗಿರಬೇಕು. ಇಷ್ಟಪಟ್ಟು ಈ ವೃತ್ತಿಗೆ ಬರಬೇಕೇ ಹೊರತು ಅನುಕೂಲಕ್ಕಾಗಿ ಅಲ್ಲ.

    ಶಿಕ್ಷಕರ ದಿನದಂದು ಶುಭ ಕೋರಿದ ನಿಮಗೆ ಧನ್ಯವಾದಗಳು.

    ReplyDelete
  6. ಚಂದ್ರಕಾಂತಾ,
    ನಿಮಗೆ ಹಾಗು ನಿಮ್ಮ ಮನೆಯವರಿಗೆ ಶಿಕ್ಷಕರ ದಿನದ ಶುಭಾಶಯಗಳು. ನಿಮ್ಮನ್ನು ಪ್ರೇರೇಪಿಸಿದ ಶಿಕ್ಷಕರ ಬಗೆಗೆ ಬಹಳ ಚೆನ್ನಾಗಿ ಬರೆದಿರುವಿರಿ.

    ReplyDelete
  7. maa'm, nimage shikshakara dinacharaneya shubhashayagaLu. nenne message maadakke aaglilla, adakke sorry.

    ReplyDelete
  8. ಸುನಾಥ್ ಸರ್

    ನಿಮ್ಮ ಶುಭಾಶಯಗಳಿಗೆ ನಮ್ಮಿಬ್ಬರ ಕಡೆಯಿಂದ ಧನ್ಯವಾದಗಳು.
    ಬಾಲ್ಯಕಾಲದ ಶಿಕ್ಷಕರ ನೆನಪು ಮನದಲ್ಲಿ ಅಚ್ಚಳಿಯದೆ ಉಳಿದಿರುವಂತೆ ದೊಡ್ಡವರಾದ ನಂತರದ ಅಂದರೆ ಕಾಲೇಜು ದಿನಗಳ ಅಧ್ಯಾಪಕರ ಪಾಠಗಳು ಮನದಲ್ಲಿ ಸ್ಪಷ್ಟವಾಗಿ ನೆನಪಿನಲ್ಲಿ ಉಳಿದಿಲ್ಲ.ಇದು ಅಚ್ಚರಿಯಲ್ಲವೇ?

    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  9. ಲಕ್ಷ್ಮಿ
    ಧನ್ಯವಾದಗಳು.
    ನಿನಗೂ ಸಹ ಶಿಕ್ಷಕರ ದಿನದ ಶುಭಾಶಯಗಳು. ಇದು ನಿನ್ನ ಮೊದಲ ವರ್ಷದ ಅಧ್ಯಾಪನ ವೃತ್ತಿಯಾದ್ದರಿಂದ ಡಬಲ್ ಶುಭಾಶಯಗಳು.ತಡವಾದದ್ದಕ್ಕೆ ಬೇಸರ ಬೇಡ.

    ReplyDelete
  10. ನಿಮ್ಮ ಬರಹ ಸಕಾಲಿಕವಾಗಿದ್ದು, ಶಿಕ್ಷಕರ ಬಗೆಗಿನ ನನ್ನ ಅಭಿಮಾನ ನೂರ್ಮಡಿಗೊಳಿಸಿದೆ. ನನ್ನ ತ೦ದೆ ಶಿಕ್ಷಕರಾಗಿದ್ದರು. ಕನ್ನಡ-ಹಿ೦ದಿ ಪ೦ಡಿತರಾಗಿ ಜನಪ್ರಿಯರಾಗಿದ್ದರು. ನನ್ನ ಅಕ್ಕನೂ ಶಿಕ್ಷಕಿ. ಚೆಂದದ ಬರಹಕ್ಕೆ ಅಭಿನಂದನೆ.

    ReplyDelete
  11. ಚಂದ್ರಕಾಂತರವರೆ...

    ಸುನಾಥರವರ ಬ್ಲಾಗಿನಿಂದ ಮತ್ತೆ ಇಲ್ಲಿಗೆ ಬಂದೆ...
    ನೀವು ಬರೆಯುವದನ್ನು ನಿಲ್ಲಿಸಿ ಬಿಟ್ಟರೇನೋ ಅಂದು ಕೊಂಡುಬಿಟ್ಟಿದ್ದೆ...
    ನೀವು ಮತ್ತೆ ಬರೆಯುತ್ತಿರುವದು ಖುಷಿಯಾಯಿತು...
    ನಾನೇ ನೋಡಲಿಲ್ಲ..
    ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ...

    ನಿಮ್ಮನ್ನು ನನ್ನ ಗುರುಗಳೆಂದು ಒಪ್ಪಿಕೊಂಡಿರುವೆ...
    ನಿಮ್ಮ ಕಿವಿ ಮಾತುಗಳು ಸ್ವಲ್ಪ ಖಾರವಾಗಿದ್ದರೂ ನನಗಿಷ್ಟ..

    "ಶಿಕ್ಷಕರ ದಿನದ ಶುಭಾಶಯ ನಿಮಗೆ ಕೋರಲು ಖುಷಿಯಾಗುತ್ತದೆ..."

    ನಿಮ್ಮ ನೆನಪುಗಳು..
    ಈ ಲೇಖನ ತುಂಬಾ ಚೆನ್ನಾಗಿದೆ...
    ಅಭಿನಂದನೆಗಳು...

    ReplyDelete
  12. ಪರಾಂಜಪೆಯವರೆ

    ನಿಜಕ್ಕೂ ಭಾಷಾ ಶಿಕ್ಷಕರೆಂದರೆ ನನಗೂ ಬಹಳ ಗೌರವ. ಅವರಿಗಿರುವ ಜೀವನಾನುಭವ , ಪರಿಪಕ್ವತೆ ಬೇರೆ ಯಾವ ವಿಷಯದ ಶಿಕ್ಷಕರಿಗೂ ಅವರಷ್ಟಿರುವುದಿಲ್ಲವೇನೋ ? ಆದರೆ ಎಷ್ಟೋ ಜನ ವಿಜ್ಞಾನಿಗಳು, ಇತರ ವಿಷಯದ ಶಿಕ್ಷಕರೂ ಸಾಹಿತ್ಯಕ್ಕೆ ಮಾರುಹೋಗಿ ಉತ್ತಮ ಬರಹಗಳನ್ನು ಬರೆದಿರುವುದನ್ನೂ ನೋಡುತ್ತೇವೆ.

    ನಿಮ್ಮ ಅಕ್ಕನೂ ಶಿಕ್ಷಕಿ ಎಂದು ಕೇಳಿ ಸಂತಸವಾಯಿತು. ಅವರಿಗೆ ಶಿಕ್ಷಕರ ದಿನದ ಶುಭ ಹಾರೈಕೆಗಳನ್ನು ತಿಳಿಸಿ.

    ReplyDelete
  13. ಪ್ರಕಾಶ್

    ನೀವು ತಡವಾಯಿತೆಂದು ಕ್ಷಮೆ ಕೇಳುವುದೇ ಬೇಡ. ಹಾಗೆ ನೋಡಿದರೆ ನಿಮ್ಮ ಎಷ್ಟೋ ಬರಹಗಳನ್ನು ಓದಿದರೂ ಪ್ರತಿಕ್ರಿಯಿಸಲಾಗಲಿಲ್ಲ. ಎಲ್ಲಿ ಕಿವಿಹಿಂಡುವ ಮಾತಾಗುತ್ತದೋ ಎಂಬ ಭಯ!!!

    ನಿಮ್ಮ ಶುಭಾಷಯಗಳಿಗೆ ಧನ್ಯವಾದಗಳು

    ReplyDelete
  14. ಚಂದ್ರಕಾಂತರವರೆ...

    ಗುರುಗಳು ಶಿಷ್ಯರ ಕಿವಿ ಹಿಂಡುವ ಅಧಿಕಾರ ಇದೆ...
    ಹಾಗೆ ಮಾಡಿದರೆ ಶಿಷ್ಯರು "ಸುಧಾರಿಸಲು" ಸಾಧ್ಯ...

    ದಯವಿಟ್ಟು ಬನ್ನಿ... ಓದಿ...
    ಕಿವಿ ಹಿಡಿದು.. ಬುದ್ಧಿ ಹೇಳಿ.......

    ReplyDelete
  15. ಅರ್ಧ ಶತಕಕ್ಕೆ, ಶಿಕ್ಷಕರ ದಿನಕ್ಕೆ ಶುಭಾಷಯಗಳು ಮೇಡಂ.. ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಕಾರಣವಾದ ಶಿಕ್ಷಕರನ್ನು ನೆನೆಸಿಕೊಂಡಿದ್ದು ನೋಡಿ ಖುಷಿಯಾಯ್ತು :)

    ReplyDelete
  16. ಪ್ರಕಾಶ್

    ತಮಾಷೆಗೆ ಹಾಗೆ ಹೇಳಿದೆ.
    ಸಮಯ ಸಿಕ್ಕಾಗ ಓದಿ ಬರೆಯುವೆ.

    ReplyDelete
  17. ಪಾಲ ಅವರೆ

    ನನ್ನ ಮನದಲ್ಲಿಯೇ ಅನೇಕ ದಿನಗಳಿಂದ ನನ್ನ ಶಿಕ್ಷಕರ ಬಗ್ಗೆ ಅನೇಕ ಭಾವನೆಗಳು ಮೂಡುತ್ತಿತ್ತು. ಅದಕ್ಕೆ ಭಾಷೆಯ ರೂಪ ಕೊಡಲು ಶಿಕ್ಷಕರ ದಿನವನ್ನು ನೆಪ ಮಾಡಿಕೊಂಡೆ ಅಷ್ಟೆ.

    ಹಾ, ನಾನು ಅರ್ಧ ಶತಕ ಪೂರೈಸಿ ಕೆಲವು ವರ್ಷಗಳೇ ಕಳೆದಿವೆ!ಆದರೂ ಶುಭಾಶಯಗಳನ್ನು ಸ್ವೀಕರಿಸುವೆ:))

    ReplyDelete
  18. ಚಂದ್ರಕಾಂತ ಅವರೆ,

    ನಿಮ್ಮ ಸುಂದರ ಲೇಖನವನ್ನೋದಿ ನನಗೆ ನನ್ನ ಬಾಲ್ಯದ ದಿನಗಳ.....ಶಾಲಾ ದಿನಗಳ ನೆನಪಾಯಿತು. ನನಗೂ ಶಾಲಾ ದಿನಗಳೇ ಬಂಗಾರದ ದಿನಗಳೆಂದು ಅನಿಸುತ್ತವೆ. ಇಂದಿನ ನನ್ನ ಮನೋವಿಕಾಸಕ್ಕೆ, ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳುವುದಕ್ಕೆ ಎಂಟು, ಒಂಭತ್ತು ಹಾಗೂ ಹತ್ತನೆಯ ತರಗತಿಯಲ್ಲಿ ನನಗೆ ಕನ್ನಡ ಪ್ರಾಧ್ಯಾಪಕರಾಗಿ ಕಲಿಸಿದ ಶ್ರೀ ಸುಮುಖಾನಂದರಿಗೆ ನಾನು ಸದಾ ಋಣಿ. ವಿದ್ಯಾರ್ಥಿಯನ್ನು ತಮ್ಮ ಮಕ್ಕಳಂತೇ ನೋಡಿ, ಅವರ ಶ್ರೇಯೋಭಿಲಾಷಿಯಾಗಿ, ಅವರ ಏಳಿಗಾಗಿ ಶ್ರಮಿಸುವ ಎಲ್ಲಾ ಶಿಕ್ಷಕರಿಗೂ ನನ್ನ ಸಾವಿರ ನಮನಗಳು.

    ReplyDelete
  19. ತೇಜಸ್ವಿನಿ

    ನಿಮಗೂ ನನ್ನಂತೆ ಶಾಲಾದಿನಗಳೇ ಬಂಗಾರದ ದಿನಗಳೆಂದು ಅನಿಸಿದ್ದು ಖುಷಿಯಾಯಿತು. ಬಹುಶಃ ಒಳ್ಳೆಯ ಅಧ್ಯಾಪಕರಿದ್ದುದರಿಂದ ಹಾಗನ್ನಿಸುತ್ತೇನೋ? ನಿಮ್ಮ ಗುತುಗಳನ್ನು ನೀವು ನೆನಸಿಕೊಂಡಿದ್ದು ನನಗೆ ಸಂತಸ ತಂದಿತು

    ReplyDelete
  20. ಮಕ್ಕಳ ಭವಿಷ್ಯ ನಿರ್ಧಾರವಾಗುವುದು ತಂದೆ-ತಾಯಿಯರನ್ನು ಬಿಟ್ಟರೆ ಅವರ ನೆಚ್ಚಿನ ಶಿಕ್ಷಕರಿಂದಲೇ ‌ಸರಿ. ಎಲ್ಲ ಶಿಕ್ಷಕರೂ ಎಲ್ಲ ವಿದ್ಯಾರ್ಥಿಗಳಿಗೂ ಇಷ್ಟವಾಗುವುದಿಲ್ಲ. ಆದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮಗಿಷ್ಟವಾದ ಶಿಕ್ಷಕರನ್ನು ಎಂದಿಗೂ ಮರೆಯುವುದಿಲ್ಲ.

    ReplyDelete
  21. ಹರೀಶ್

    ನೀವು ಹೇಳಿದ ಮಾತು ನೂರಕ್ಕೆ ನೂರು ಸತ್ಯ.

    ReplyDelete
  22. ಯಾಕೋ ತುಂಬಾ ದಿನವಾಯ್ತು ನೀವು ಏನೂ ಬರೀದೆ? ಬೇಗ ಬರೀರಿ ಪ್ಲೀಸ್.

    ReplyDelete
  23. ಮೇಡಂ ...ಬಹಳಾ...ಬಹಳಾ...ತಡವಾಗಿ (ಅದು ಪೂರ್ತಿ ೨ ತಿಂಗಳು!!) ...ನಿಮಗೆ ಮತ್ತು ಸರ್ ಗೆ ಶಿಕ್ಷಕರ ದಿನದ ಶುಭಾಶಯಗಳು.
    ನಿಮ್ಮ ಲೇಖನ ಓದಿ ನನಗೂ ನಮ್ಮ ಟೀಚರ್ಗಳ ನೆನಪಾಯ್ತು. ನೀವು ಹೇಳಿದ "ಸುಭ" ಪಾಠ ನಮಗೂ ಹೈಸ್ಕೂಲ್ ಇಂಗ್ಲೀಶ್ ಪುಸ್ತಕದಲ್ಲಿತ್ತು.

    ReplyDelete
  24. ಭಾರ್ಗವಿ
    ಕಾಲೇಜಿನಲ್ಲಿ ಕೆಲಸದ ಒತ್ತಡ ಹೆಚ್ಚಿದ್ದಿದ್ದರಿಂದ ಬ್ಲಾಗ್ ಕಡೆ ಕಣ್ಣು ಹಾಯಿಸಲೂ ಸಮಯ ಇರಲಿಲ್ಲ, ಆದರೂ ತುಳಸಿ ಹಬ್ಬದ ಚಿತ್ರ ಮಾತ್ರ ನೋಡಿದ್ದೆ.

    ಬರೆಯಲು ಇನ್ನೂ ಸ್ವಲ್ಪ ಸಮಯ ಬೇಕು!!

    ReplyDelete
  25. ಗೀತಾ

    ತಡಮಾಡುವುದರಲ್ಲಿ ನಾನೇನು ಕಡಿಮೆಯಿಲ್ಲ ಅನ್ನುವ ಹಾಗೆ ಬಹಳ ತಡವಾಗಿ ನಿನ್ನ ಪ್ರತಿಕ್ರಿಯೆಗೆ ಉತ್ತರಿಸುತ್ತಿರುವೆ.

    ನೀನೂ ಸಹ ಸುಭಾ ಪಾಠ ಓದಿರುವುದು ಕೇಳಿ ಖುಶಿಯಾಯಿತು. ಆದರೆ ಆ ಪಾಠ ನಿನ್ನ ಮೇಲೆ ಯಾವ ಪ್ರಭಾವ ಬೀರಿತ್ತೆಂದು ನೀನು ತಿಳಿಸಿಲ್ಲ!ಸಾಧ್ಯವಾದರೆ ರವೀಂದ್ರರ ಕಥೆಯ ಕನ್ನಡ ಅನುವಾದ ( ಅಹೋಬಲ ಶಂಕರ ಅವರದು)ಓದು.ತುಂಬಾ ಚೆನ್ನಾಗಿದೆ.

    ReplyDelete
  26. ತುಂಬಾ... ದಿನ ಆಯ್ತು :) ಮಾತಾಡಿಸ್ಕೊಂಡು ಹೋಗೋಣ ಅಂತ

    ReplyDelete
  27. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

    ReplyDelete